ಮುಂಡಗೋಡ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಗೊತ್ತಿಲ್ಲ. ಇಲ್ಲಿನ ಅರಣ್ಯ ಸಂಪತ್ತು ಹಾಡಹಗಲೇ ಲೂಟಿಯಾಗ್ತಿದೆ. ಅದ್ರಲ್ಲೂ ಕಾತೂರ ಭಾಗದಲ್ಲಿ ನಿತ್ಯವೂ ನೂರಾರು ಮರಗಳು ಉಸಿರು ಚೆಲ್ಲುತ್ತಿವೆ. ಅಸಲು, ಇದೇಲ್ಲ ಖುದ್ದು ಅರಣ್ಯ ಇಲಾಖೆಯ ಕೆಲ ಬ್ರಷ್ಟ ಕಾರಬಾರಿಗಳ ನೆರಳಲ್ಲೇ ನಡೀತಿದೆ ಅನ್ನೋದು ಬಹುದೊಡ್ಡ ದುರಂತ.
ಸಾಲು ಸಾಲು ಮಾರಣಹೋಮ..!
ನಿಜ ಅಂದ್ರೆ ಕಾತೂರು ಅರಣ್ಯ ವ್ಯಾಪ್ತಿಯ ಹಲವು ಕಡೆಗಳಲ್ಲಿ ಹಾಡಹಗಲೇ ಅಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆಯಲಾಗ್ತಿದೆ. ಕೋಡಂಬಿ ಸಮೀಪದ ಕಾಡುಗಳಲ್ಲಿ ನಿತ್ಯವೂ ಅರಣ್ಯಗಳ್ಳರು ಬೆಲೆಬಾಳುವ ಅಮೂಲ್ಯ ಮರಗಳನ್ನು ಕಡಿದೊಯ್ತಿದಾರೆ. ಇಷ್ಟೇಲ್ಲ ಆದ್ರೂ ಇಲಾಖೆಯ ಯಾವೊಬ್ಬ ಅಧಿಕಾರಿಗೂ ಕಣ್ಣಿಗೆ ಕಾಣೋದೇ ಇಲ್ಲ. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಆ ಭಾಗದ ಕೆಲವು ಗ್ರಾಮಗಳ ಪರಿಸರ ಪ್ರಿಯರು ಮಾಹಿತಿ ನೀಡಿದ್ರು. ಈ ಕಾರಣಕ್ಕಾಗಿ ರಿಯಾಲಿಟಿ ಚೆಕ್ ಗೆ ತೆರಳಿದ್ದಾಗ ಅಲ್ಲಿನ ಅರಣ್ಯದ ಮಾರಣಹೋಮದ ಇಂಚಿಂಚು ಕತೆಗಳು ಬೆಳಕಿಗೆ ಬಂತು.
ಇಲಾಖೆಯಲ್ಲೇ ಕಳ್ಳರು..!
ಈಗ್ಗೆ ವಾರದ ಹಿಂದೆ ಕೋಡಂಬಿಯಲ್ಲಿ ಒಂದು ದಾಳಿ ನಡೆದಿತ್ತು. ಖುದ್ದು ಮುಂಡಗೋಡ ಎಸಿಎಫ್ ವಾಲಿಯವರ ನೇತೃತ್ವದಲ್ಲಿ ಅದೊಂದು ಅಡ್ಡೆಯ ಮೇಲೆ ಏಕಾಏಕಿ ದಾಳಿ ಮಾಡಲಾಗಿತ್ತು. ಈ ವೇಳೆ ಅಲ್ಲಿ ಸಿಕ್ಕಿದ್ದ ಲಕ್ಷ ಲಕ್ಷ ಬೆಲೆಯ ಮಾಲು ವಶಕ್ಕೆ ಪಡೆದು ಇಬ್ಬರ ಮೇಲೆ ಕೇಸೂ ದಾಖಲಿಸಲಾಗಿತ್ತು. ಆದ್ರೆ, ಹಾಗೆ ಕೇಸು ಜಡಿಸಿಕೊಂಡವರೇ ಅಸಲಿ ಆರೋಪಿಗಳಾ..? ಅವರ ಬೆನ್ನ ಹಿಂದೆ ಬೇರೆ ಯಾರೂ ಇಲ್ವಾ..? ಇದೇಲ್ಲವನ್ನು ಕೂಲಂಕುಶವಾಗಿ ತನಿಖೆ ಮಾಡಬೇಕಿದ್ದ ಇಲಾಖೆಯ ಮೇಧಾವಿಗಳು ಅದ್ಯಾಕೋ ಏನೋ ಅಷ್ಟಕ್ಕೇ ಕೈ ತೊಳೆದುಕೊಂಡ್ರಾ ಅನ್ನೊ ಅನುಮಾನ ಶುರುವಾಗಿದೆ. ಯಾಕಂದ್ರೆ, ಆ ಪ್ರಕರಣದಲ್ಲಿ ಅವನೊಬ್ಬನ ಖಾಯಂ ಕೈವಾಡ ಇಲಾಖೆಯ ಅಧಿಕಾರಿಗಳಿಗೂ ಗೊತ್ತಿದೆ. ಅರಣ್ಯ ದೇವತೆಯ ಪೂಜೆ ಮಾಡ್ಕೊಂಡು ಇರಪ್ಪ ಅಂತಾ ಬಿಟ್ಟಿದ್ದ ಅದೇ ಇಲಾಖೆಯ ಅನ್ನ ಉಣ್ಣುವ ಆ ದೇವಿಯ “ಪೂಜಾರಿ” ಯೊಬ್ಬ ಬಾರಾ ಬಾನಗಡಿ ಮಾಡಿಕೊಂಡಿದ್ದ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ, ಅವನ ಮೇಲೆ ಈ ಕ್ಷಣಕ್ಕೂ ಯಾವುದೇ ಕ್ರಮವಾಗಿಲ್ಲದಿರೋದು ಅನುಮಾನ ಹುಟ್ಟಿಸಿದೆ.
ಅಸಲು, ಕೋಡಂಬಿ ಭಾಗದ ಜನ ಮಾತಾಡಿಕೊಳ್ಳುವ ಸಂಗತಿಯೇ ವಿಚಿತ್ರವಾಗಿದೆ. ಅವತ್ತು, ಅರಣ್ಯ ಅಧಿಕಾರಿಗಳ ದಾಳಿಯಲ್ಲಿ ತಗಲಾಕ್ಕೊಂಡಿದ್ದ ಆ ಹುಡುಗರ ಜೊತೆ ಜೊತೆಗೆ ನೆರಳಾಗಿ ನಿಂತಿದ್ದವನು ಅದೇ ಅರಣ್ಯ ಇಲಾಖೆಯ ಅವನೊಬ್ಬ ಬಕಾಸುರ ಬಗಬಂಡಿಯಂತೆ. ಅಸಲು ಆತ ಅರಣ್ಯ ರಕ್ಷಣೆಗಾಗಿ ಸರ್ಕಾರದಿಂದ ಜೇಬು ತುಂಬ ಪಗಾರ ಇಳಿಸಿಕೊಳ್ಳುವವ, ಆದ್ರೆ, ಆತನೇ ಆ ಭಾಗದಲ್ಲಿ ಅರಣ್ಯ ಭಕ್ಷಕನಾಗಿದ್ದ ಅನ್ನೋದು ಆ ಭಾಗದಲ್ಲಿ ಪುಟ್ಟ ಪುಟ್ಟ ಮಕ್ಕಳೂ ಮಾತಾಡಿಕೊಳ್ತಿದಾರೆ.
ಅವಳೊಬ್ಬಳು ಮಾಯಾಂಗನೆ..!
ಅಸಲು, ಅರಣ್ಯ ರಕ್ಷಕನ ಭಕ್ಷಕ ಪುರಾಣಗಳು ಒಂದೇರಡಲ್ಲ. ಆ ಭಾಗದ ಅರಣ್ಯ ಸಂಪತ್ತಿಗೆ ಕಾವಲಿರಬೇಕಾದ ಈತನೇ ಅಕ್ಷರಶಃ ಐನಾತಿಯಾಗಿದ್ದನಂತೆ. ಅಂದಹಾಗೆ,
ಆ ಅರಣ್ಯ ಅಧಿಕಾರಿಗೆ ಅವಳೊಬ್ಬಳು ಮಾಯಾಂಗನೆಯ ನೆರಳು ಬಿದ್ದಿತ್ತು. ಹೀಗಾಗಿ, ಆ ಭಾಗದಲ್ಲಿ ಆಕೆಯ ಮನೆಯ ಸುತ್ತ ಮುತ್ತಲೇ ಅದೇಷ್ಟೋ ಮರಗಳ ನರಳುವ ಸದ್ದು ಕೇಳಿಸಿತ್ತು. ಆ ಭಾಗದಲ್ಲಿ ನಿತ್ಯವೂ ಕಾಡು ದೋಚುವ ಅದೊಂದು ಕಳ್ಳರ ಪಡೆಯನ್ನೇ ಸಾಕಿಕೊಂಡಿದ್ದರಂತೆ ಖದೀಮರು. ಹೀಗಾಗಿ ಲೋಡುಗಟ್ಟಲೇ ಸಂಪತ್ತು ಲೂಟಿಯಾಗಿದೆ ಅನ್ನೋದು, ಆ ಭಾಗದ ಜನರೇ ಆಡಿಕೊಳ್ಳುವ ಮಾತು. ಅದ್ರ ಜೊತೆ ಈ ಕ್ಷಣಕ್ಕೂ ಆ ಮಾಯಾಂಗನೆಯ ಮನೆಯ ಸುತ್ತ ಮುತ್ತಲಿನ ಭೂಮಿಯಲ್ಲೇ ಅದೇಷ್ಟೋ ಮರಗಳ ಹೆಣಗಳು ಸಮಾಧಿಯಾಗಿವೆ. ಆ ಮರಗಳನ್ನು ಜೆಸಿಬಿ ಮೂಲಕ ಗುಂಡಿ ತೋಡಿ ಇಡಲಾಗಿದೆಯಂತೆ. ಅಲ್ಲೇನಾದ್ರೂ ನಮ್ಮಖಡಕ್ ಎಸಿಎಫ್ ವಾಲಿ ಸಾಹೇಬ್ರು ತಲಾಶ್ ನಡೆಸಿದ್ರೆ ಅದರ ಕತೆಯೇ ಬೇರೆಯಾಗತ್ತೆ ಅಂತಿದಾರೆ ಅಲ್ಲಿನ ಮಂದಿ.
ನಿರಂತರ ದಂಧೆ..!
ಅಸಲು, ಆ ಯಪ್ಪ ಆ ಭಾಗದಲ್ಲಿ ಕಾಲಿಟ್ಟ ಗಳಿಗೆಯಿಂದಲೇ ಅಲ್ಲಿನ ಅರಣ್ಯ ತಾಯಿ ಕಣ್ಣೀರಾಗಿದ್ದಳು. ರಕ್ಷಕನ ವೇಷ ತೊಟ್ಟವನೇ ತುತ್ತು ಕೊಟ್ಟ ತಾಯಿಯನ್ನು ಬಗೆದು ಬಗೆದು ತಿಂದಿದ್ದನಂತೆ. ಹೀಗಾಗಿ, ಡಜನ್ನುಗಟ್ಟಲೇ ದೂರುಗಳು ಬಂದ್ರೂ ಅವನ ರಕ್ಷಣೆಗಾಗಿ ಮತ್ತೊಬ್ಬ ಹಿರಿಯ ಅಧಿಕಾರಿ ನಿದ್ದೆಗೆಟ್ಟು ನಿಂತಿದ್ದ. ಆದ್ರೆ, ಅವನೀಗ ಎತ್ತಂಗಡಿಯಾಗಿ ಮಾರಿಕಾಂಬೆಯ ಸನ್ನಿದಿ ಸೇರಿಕೊಂಡಿದ್ದಾನೆ. ಆತ ಮಾಡಿದ ಯಡವಟ್ಟಿನಿಂದ ಇವತ್ತು ಇಡೀ ಕಾತೂರು ಭಾಗದ ಅರಣ್ಯ ಖಾಲಿ ಖಾಲಿಯಾಗಿದೆ. ಹಾಗಂತ, ಇಡೀ ಅರಣ್ಯ ಇಲಾಖೆಯ ದಕ್ಷ ಮನಸ್ಸುಗಳು ಆಡಿಕೊಳ್ತಿವೆ.
ಅದು ಮೂಲಗದ್ದೆ ಕ್ರಾಸ್..!
ಪ್ರಿಯ ಓದುಗ ದೊರೆಗಳೇ, ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್, ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ನಿತ್ಯವೂ ನಡೀತಿರೋ ಅರಣ್ಯ ಕಳ್ಳತನದ ಬಾತ್ಮಿ ಸಿಕ್ಕ ಕ್ಷಣವೇ ಹಾಗೆ ಒಂದು ರೌಂಡು ಹಾಕಿ ಬರೋಣ ಅಂತಾ ಹೊರಟ್ವಿ. ಅದು, ಜೋಡಿಕಟ್ಟಾದಿಂದ ಅಟಬೈಲಿಗೆ ಹೋಗುವ ಮಾರ್ಗ, ರಸ್ತೆಯೆನೋ ಜಬರ್ಧಸ್ಥಾಗಿದೆ. ಆದ್ರೆ ಅಲ್ಲಿ ವಾಹನ ಸಂಚಾರಗಳೇ ವಿರಳ. ಜೋಡಿಕಟ್ಟಾದಿಂದ ನೀವು ಹೆಚ್ಚೂ ಕಡಿಮೆ ಎರಡು ಕೀ.ಮೀ. ದೂರ ಅಟಬೈಲು ಮಾರ್ಗಕ್ಕೆ ಚಲಿಸಿದ್ರೆ ಅಲ್ಲಿ ಸಿಗೋದು ಮೂಲಗದ್ದೆ ಕ್ರಾಸ್. ಅಸಲು, ಈ ಮೂಲಗದ್ದೆ ಕ್ರಾಸಿನಲ್ಲೇ ಅರಣ್ಯ ರಕ್ಷಕರಿಗೆ ಕಾವಲು ಕೂರಲೆಂದೇ ಒಂದು ಜೋಪಡಿ ಇದೆ. ಆದ್ರೆ, ಅದೇ ಜೋಪಡಿಯ ಹಿಂದಿನ ಅರಣ್ಯದಲ್ಲಿ ನೀವು ಕಾಲಿಟ್ಟರೆ ಹೆಜ್ಜೆಗೊಂದು ಮರ ಕಡಿದು ಸಾಗಿಸಿರೋ ಬುಡುಚಿಗಳು ಸಿಗತ್ತೆ. ನಿಜ ಅಂದ್ರೆ, ನಾವು ಅಲ್ಲಿನ ದಟ್ಟ ಅರಣ್ಯದಲ್ಲಿ ಕೇವಲ ನಾಲ್ಕೈದು ಗುಂಟೆಯ ಜಾಗ ಸುತ್ತಿರಬಹುದು. ಅಷ್ಟರಲ್ಲೇ ನಮಗೆ ಸಿಕ್ಕ ಬುಡುಚಿಗಳ ಸಂಖ್ಯೆ ನೂರರ ಗಡಿ ದಾಟಿತ್ತು. ಅವೇಲ್ಲ ಬೆಲೆಬಾಳುವ ಸಾಗವಾನಿ,ಸೀಸಂ ಮರಗಳ ಅವಶೇಷಗಳೇ. ನಿಜ ಅಂದ್ರೆ, ಆ ಬುಡುಚಿಗಳು ಹಳೆಯದ್ದಲ್ಲ. ಬದಲಾಗಿ ವಾರದಿಂದಿಚೆಗಷ್ಟೆ ಕದ್ದು ಒಯ್ದಿರೋ ಕುರುಹುಗಳು.
ಭಯವಾಯ್ತು..!
ಅಸಲು, ಅಲ್ಲಿ ಮೊದಲೇ ನೆಟ್ ವರ್ಕ್ ಸಮಸ್ಯೆ. ಗ್ರಾಮಸ್ಥರು ಹೇಳುವ ಪ್ರಕಾರ ಅದೊಂದು ವ್ಯವಸ್ಥಿತ ಕಳ್ಳರ ಪಡೆ ಅಲ್ಲಿ ಬಲಿಷ್ಠವಾಗಿದೆ. ನಾವೇನಾದ್ರೂ ಅವ್ರ ಕಣ್ಣಿಗೆ ಬಿದ್ರೆ ನಮ್ಮ ಕತೆ ಮುಗಿದಂತೆ ಅನ್ನೋ ಮಾತು ಹೇಳಿದ್ರು. ಹೀಗಾಗಿ, ನಾವು ಕ್ಯಾಮೆರಾ ತೆಗೆದು ಅಲ್ಲಿನ ಅಕ್ರಮದ ದೃಷ್ಯ ಸೆರೆಹಿಡಿಯುತ್ತಿರುವಾಗ ಕಳ್ಳರೇನಾದ್ರೂ ಬಂದ್ರೆ ಕತೆ ಅಷ್ಟೆ. ಅಲ್ದೇ ಆ ದಟ್ಟ ಕಾಡಿನಲ್ಲಿ ಅದೇನೇ ಮಾಡಿ ಬೀಸಾಕಿದ್ರೂ ಹೊರ ಜಗತ್ತಿಗೆ ಕಾಣಬೇಕು ಅಂದ್ರೆ ಏನಿಲ್ಲವೆಂದ್ರೂ ಹಲವು ಗಂಟೆಗಳೇ ಬೇಕು. ಹೀಗಾಗಿ, ಒಂದಿಷ್ಟು ಎಚ್ಚರಿಕೆಯ ಭಯದಿಂದಲೇ ನಾವು ಮರಗಳಮಾರಣ ಹೋಮದ ಕೆಲವೊಂದಿಷ್ಟು ವಿಡಿಯೋ ಚಿತ್ರಿಕರಣ ಮಾಡಿಕೊಂಡು ಅಲ್ಲಿಂದ ಹೊರ ಬಂದ್ವಿ.
ದುರಂತವಿದು..!
ನಿಮಗೆ ಗೊತ್ತಿರಲಿ, ಹಾಗೆ ಅರಣ್ಯದ ಕಳ್ಳತನ ಹಾಡಹಗಲೇ ನಡೆದ್ರೂ ಈ ಯಾವೊಬ್ಬ ಅರಣ್ಯ ಅಧಿಕಾರಿಗಳಿಗೂ ಅದರ ಪರಿವೇ ಇಲ್ಲ. ಯಾಕಂದ್ರೆ ಇವ್ರಿಗೇಲ್ಲ ಅದರ ಗೊಡವೆಯೇ ಬೇಡವೇನೊ ಗೊತ್ತಿಲ್ಲ. ಹೀಗಾಗಿ, ಅವನೊಬ್ಬ ಅದನ್ನೇ ಬಂಡವಾಳ ಮಾಡಿಕೊಂಡು ಕೋಡಂಬಿ ಭಾಗದಲ್ಲಿ ಅಮೇದ್ಯ ಮೇದಿದ್ದಾನೆ ಅನ್ನೋದು ಆ ಭಾಗದ ಜನರ ಆಕ್ರೋಶ. ಹೀಗಾಗಿ, ಅರಣ್ಯ ಇಲಾಖೆ ಹಿರಿಯರು ಈಗಲಾದ್ರೂ ಬಲಿಷ್ಟ ಕ್ರಮಕ್ಕೆ ಮುಂದಾಗ್ತಾರಾ..? ಅಷ್ಟಕ್ಕೂ ಅಲ್ಲಿನ ಮರಗಳ ಮಾರಣಹೋಮ ಕುರಿತು ಸಮಗ್ರ ತನಿಖೆ ಮಾಡ್ತಾರಾ ಕಾದು ನೋಡಬೇಕಿದೆ. ಇಲ್ಲವಾದಲ್ಲಿ ಕಾಡುದೇವಿ ಈ ಅಧಿಕಾರಿಗಳನ್ನ ಯಾವತ್ತೂ ಕ್ಷಮಿಸಲಾರಳು. ಅವಳ ಆರ್ತನಾದ ಇವ್ರಿಗೇಲ್ಲ ಶಾಪವಾಗಿ ಕಾಡೋದ್ರಲ್ಲಿ ಎರಡು ಮಾತಿಲ್ಲ.