ಉತ್ತರ ಕನ್ನಡ ಕಂಡ ದಕ್ಷ ಐಪಿಎಸ್ ಅಧಿಕಾರಿ, ಎಸ್ಪಿ ಡಾ. ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆ ಆಗೋದು ಬಹುತೇಕ ಫಿಕ್ಸ್ ಆಗಿದೆಯಂತೆ. ಇದೇ ಡಿಸೆಂಬರ್ ಅಂತ್ಯದ ಹೊತ್ತಿಗೆ ಸುಮನಾ ಮೇಡಮ್ಮಿಗೆ ಜಿಲ್ಲೆಯಿಂದ ಎತ್ತಂಗಡಿ ಮಾಡೋಕೆ ಅದೊಂದು “ಕೂಟ” ನಿದ್ದೆಗೆಟ್ಟು ಓಡಾಡ್ತಿದೆ ಅನ್ನೋದು ಸದ್ಯದ ಸುದ್ದಿ. ದಕ್ಷ, ಖಡಕ್ ಪೊಲೀಸ್ ಅಧಿಕಾರಿಣಿ ಸುಮನಾ ಪೆನ್ನೇಕರ್ ಜಾಗಕ್ಕೆ “ಉಸ್ತುವಾರಿ” ಗಳ ಖಾಸಾ ಶಿಷ್ಯರೊಬ್ಬರನ್ನು ಪ್ರತಿಷ್ಟಾಪಿಸಲು ಮುಹೂರ್ತವೂ ಪಿಕ್ಸ್ ಆಗಿದೆಯಂತೆ.

ಎಸ್ಪಿ ಡಾ.ಸುಮನ್ ಡಿ. ಪೆನ್ನೇಕರ್

“ವಿಷ್ಣು” ವರ್ಧನವಾ..?
ಈ ಮೊದಲು ಉಡುಪಿ ಜಿಲ್ಲೆಯ ಎಸ್ಪಿಯಾಗಿ‌ ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿಯನ್ನು ಉತ್ತರ ಕನ್ನಡಕ್ಕೆ ತಂದು ಕೂರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಒಳಗೊಳಗೇ ಮಾಡಿಕೊಳ್ಳಲಾಗಿದೆ ಅನ್ನೋ ಮಾಹಿತಿ ಇದೆ. ಶ್ರೀನಿವಾಸರ “ಕೋಟಾ” ದಡಿಯಲ್ಲಿ “ವಿಷ್ಣು” ವರ್ಧನೆಗೆ ಬೇಕಾದ ಎಲ್ಲಾ ಮಸಲತ್ತುಗಳೂ ಜಾರಿಯಲ್ಲಿವೆ. ಈ ಕುರಿತು ಸಿಎಂ ಎದುರೂ ಪುಂಖಾನುಪುಂಕ ವರದಿಗಳು ಖುದ್ದು ಕೆಲ ಸಚಿವರು, ಶಾಸಕರ ಅಮೃತ ಹಸ್ತದಿಂದಲೇ ಸಲ್ಲಿಕೆಯಾಗಿ ಆಗಿದೆ. ಅಲ್ಲದೇ ಸಿಎಂ ಎದುರು, ಈಗಿನ ಎಸ್ಪಿ ಮೇಡಂ ನಮ್ಮ ಮಾತೇ ಕೇಳಲ್ಲ, ಜಿಲ್ಲೆಯಲ್ಲಿ ಏನೇನೋ ಅದ್ವಾನಗಳು ಆಗ್ತಿವೆ ಹಾಗೆ, ಹೀಗೆ ಅಂತಾ ಆ ಜನಮೆಚ್ಚಿದ ಜನಪ್ರತಿನಿಧಿಗಳು ಬೊಮ್ಮಾಯಿಯವರ ಚೇಂಬರಲ್ಲಿ ಕೂತು ಡಜನ್ನುಗಟ್ಟಲೇ ದೂರು ನೀಡಿ, ಒದರಾಡಿ ಬಂದಿದ್ದಾರಂತೆ. ಹೀಗಾಗಿ, ಸಿಎಂ ಸಾಹೇಬ್ರು ಬಹುತೇಕ ಡಿಸೆಂಬರ್ ಹೊತ್ತಿಗೆ ಎಸ್ಪಿ ಮೇಡಮ್ಮರ ಎತ್ತಂಗಡಿಗೆ ಅಸ್ತು ಅಂದಿದ್ದಾರೆ ಅನ್ನೋ ಮಾಹಿತಿ ಇದೆ. ಅದ್ರ ಜೊತೆ ಅವ್ರ ಜಾಗಕ್ಕೆ ಮತ್ತದೇ “ಉಸ್ತುವಾರಿ” ಪ್ರಿಯ ಅಧಿಕಾರಿಯ ಪ್ರತಿಷ್ಟಾಪನೆಗೆ ಗ್ರೀ‌ನ್ ಸಿಗ್ನಲ್ ಕೂಡ ಸಿಕ್ಕಾಗಿದೆ ಅನ್ನೋ ಮಾತುಗಳೂ ಇದೆ.

ಯಾವ ತಪ್ಪಿಗೆ ವರ್ಗಾವಣೆ..?
ಅಷ್ಟಕ್ಕೂ, ಉತ್ತರ ಕನ್ನಡಕ್ಕೆ ಎಸ್ಪಿಯಾಗಿ ಬಂದಿರೋ ಡಾ.ಸುಮನಾ ಪೆನ್ನೇಕರ್ ಮೇಡಂ, ಬಂದು ವರ್ಷದ ಒಳಗೇ ಹೀಗೆ ಎತ್ತಂಗಡಿ ಆಗ್ತಿರೋದಾದ್ರೂ ಯಾವ ಕಾರಣಕ್ಕೆ..? ಅವ್ರು ಮಾಡಿರೋ ತಪ್ಪಾದ್ರೂ ಏನು..? ಇಡೀ ಜಿಲ್ಲೆಯಲ್ಲಿ ನಡೀತಿದ್ದ ಅಕ್ರಮಗಳಿಗೇಲ್ಲ ತಪರಾಕಿ ಕೊಟ್ಟಿದ್ದೇ ತಪ್ಪಾಯ್ತಾ..? ಇಡೀ ಜಿಲ್ಲೆಯಲ್ಲಿ ಹಾಸು ಹೊಕ್ಕಾಗಿದ್ದ ಅಕ್ರಮ ದಂಧೆಗಳನ್ನು ಮಟ್ಟ ಹಾಕಿದ್ದೇ ತಪ್ಪಾಯ್ತಾ..? ಮಟ್ಕಾ ಅಡ್ಡೆಗಳನ್ನು ಹುಡುಕಿ ಹುಡುಕಿ, ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದೇ ತಪ್ಪಾಯ್ತಾ..? ಇಡೀ ಜಿಲ್ಲೆಯಲ್ಲಿ ಇಸ್ಪೀಟು ಅಡ್ಡೆಗಳನ್ನೇಲ್ಲ ಹುಡಿಕಿ ಅಡ್ಡಡ್ಡ ಮಲಗಿಸಿದ್ದೇ ತಪ್ಪಾಯ್ತಾ..? ಅಕ್ರಮ ಮರಳು ದಂಧೆಯನ್ನ ಮುಲಾಜಿಲ್ಲದೇ ಮಟ್ಟ ಹಾಕಿದ್ದೇ ತಪ್ಪಾಯ್ತಾ..? ಆ ಜನಪ್ರತಿನಿಧಿಗಳಿಗೆ ಯಾಕೆ ಎಸ್ಪಿ ಮೇಡಂ ಮೇಲೆ ಕೋಪ..? ಹಾಗಿದ್ರೆ ಈ ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಿದ್ದು ರಾಜಕೀಯ ಪಿತೂರಿಗಾರರಿಗೆ ಸಹ್ಯವಾಗ್ತಿಲ್ಲವಾ..? ಈ ಪ್ರಶ್ನೆಯನ್ನು ಇಡೀ ಉತ್ತರ ಕನ್ನಡದ ಜನ ಕೇಳ್ತಿದಾರೆ.

ಖಾಕಿಯಲ್ಲೂ…!
ಅಸಲು, ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವಾಗ ಡಾ.ಸುಮನಾ ಪೆನ್ನೇಕರ್ ಮೆಡಮ್ಮು ಎಸ್ಪಿಯಾಗಿ ಕಾಲಿಟ್ಟರೋ ಅವತ್ತೇ ಜಿಲ್ಲೆಯ ಅಕ್ರಮಿಗಳು ಬಿಲ ಸೇರುವ ಅನಿವಾರ್ಯತೆಗೆ ಸಿಲುಕಿದ್ದರು. ಆ ನಂತರದಲ್ಲಿ ಎಸ್ಪಿ ಮೇಡಂ ತಮ್ಮದೇ ಸ್ಟೈಲಿನಲ್ಲಿ ಫಿಲ್ಡಿಗೆ ಇಳಿದ್ರಲ್ಲ..? ಆ ಕ್ಷಣದಿಂದಲೇ ಮಟ್ಕಾ ಕಿಂಗ್ ಗಳು, ಅಕ್ರಮ ಮರಳು ದಂಧೆಕೋರರು, ಪುಡಿ ರೌಡಿಗಳು ಬಾಲ‌ ಮುಚ್ಕೊಂಡು ಬಿಲ ಸೇರಿಕೊಳ್ಳುವಂತಾಗಿತ್ತು. ಇದ್ರಿಂದ ಇದನ್ನೇ ನಂಬಿ ಲಕ್ಷ ಲಕ್ಷ ಎಣಿಸಿ ಜಿಲ್ಲೆಯ ಹಲವು ಕಡೆ “ಅಮೇದ್ಯ” ಮೇಯಲು ಹೊಂಚು ಹಾಕಿ ಬಂದು ಕುಳಿತಿದ್ದ, ಅದೇಷ್ಟೋ ಖಾಕಿ ಅಧಿಕಾರಿಗಳಿಗೂ ಗೂಟ ಜಡಿದಂಗೆ ಆಗಿತ್ತು. ಹೀಗಾಗಿ, ಒಳಗೊಳಗೆ ಕುದಿಯುತ್ತಿದ್ದ ಕೆಲ ಅಧಿಕಾರಿಗಳು ನೇರವಾಗಿ ತಮ್ಮ‌ ತಮ್ಮ “ರಾಜಕೀಯ” ಪೀಕಾಸುರರ ಅಂಗಳಕ್ಕೆ ಬಂದು ನಿಂತಿದ್ದರು. ಸಾರ್, ತಮಗೇಲ್ಲ ಸೂಟಕೇಸ್ ಭರ್ತಿ ಕೊಟ್ಟಿದ್ದಿವಿ, ಆದ್ರೆ, ಮೇಡಂ ನಮಗೆ ಯಾವುದಕ್ಕೂ ಬಿಡ್ತಿಲ್ಲ, ನಮ್ಮ ಕತೆಯೇನು ಸಾರ್.. ಹೀಗೆ ಆದ್ರೆ, ನಮ್ಮ‌ಗತಿಯೇನು ಅಂತಾ ಗೋಳೋ‌ ಅಂದಿದ್ದಾರಂತೆ. ಹೀಗಾಗಿ, ಅಂತಹ ಅಧಿಕಾರಿಗಳ ರಕ್ಷಣೆಗೆ ಏನಾದ್ರೂ ಮಾಡಲೇ ಬೇಕು ಅಂತಾ ಕೆಲ ರಾಜಕಾರಣಿಗಳು ಮೇಡಂ ಎತ್ತಂಗಡಿಗಾಗಿ ಮುಹೂರ್ತ ಪಿಕ್ಸ್ ಮಾಡಿಸಿದ್ದಾರೆ ಅನ್ನೋದು ಸದ್ಯದ ಅಪಡೇಟ್.

ನಾಗರಿಕರೇ ಎದ್ದೇಳಿ..!
ಅಸಲು, ಉತ್ತರಕನ್ನಡದಲ್ಲಿ ಎಸ್ಪಿಯಾಗಿ ಸುಮನಾ ಮೇಡಂ ಕಾಲಿಟ್ಟ ಗಳಿಗೆಯಿಂದ ಇಲ್ಲಿನ ಅದೇಷ್ಟೋ ಬಡವರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಮಟ್ಕಾ, ಇಸ್ಪೀಟಿನಿಂದ ಬೀದಿಗೆ ಬಿದ್ದಿದ್ದ ಅದೇಷ್ಟೋ ಕುಟುಂಬಗಳು ಈಗ ಹೊಟ್ಟೆತುಂಬ ಊಟ ಮಾಡ್ತಿವೆ. ಅಕ್ರಮಿಗಳ ಅಡ್ನಾಡಿತನಗಳಿಗೆ ಬಸವಳಿದಿದ್ದ ಅದೇಷ್ಟೋ ಜನ ಶಾಂತ ಬದುಕು ನಡೆಸ್ತಿದಾರೆ. ಹೀಗಿರೋವಾಗ ಅವರವರ ತೆವಲಿಗೆ, ಅಕ್ರಮಿಗಳ ಒತ್ತಾಯಕ್ಕೆ ಈ ರಾಜಕೀಯದ ಆಟ ಶುರು ಮಾಡಿರೋ ಜನರಿಗೆ ಜಿಲ್ಲೆಯ ಜನ ಎದುರುತ್ತರ ನೀಡಲೇಬೇಕಿದೆ. ದಕ್ಷ ಅಧಿಕಾರಿಣಿಯನ್ನು ಇನ್ನಷ್ಟು ವರ್ಷ ಜಿಲ್ಲೆಯಲ್ಲೇ ಮುಂದುವರಿಯುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯ ಪಾಡು ಮತ್ತದೇ ಗೋಳಿಗೆ ಹೊರಳಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಎಚ್ಚೇತ್ತುಕೊಳ್ಳುವ ಸಮಯ ಬಂದಿದೆ. ಎಚ್ಚೆತ್ತುಕೊಳ್ಳಲೇಬೇಕಿದೆ. ಅಲ್ವಾ..?
ಇದು ಇಡೀ ಉತ್ತರ ಕನ್ನಡದ ಪ್ರಜ್ಞಾವಂತರ ಒಕ್ಕೊರಲು..!

error: Content is protected !!