ಶಿರಸಿ: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆಗಳಿಂದ ದಾಳಿಯಾಗಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್‌ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ. ಪರಿಣಾಮ, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಓರ್ವ ಎಸ್ಡಿಪಿಐ ಮುಖಂಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 3.30ರಿಂದಲೇ ಹಝೀಝ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು ಆದ್ರೆ ಬೆಳ್ಳಂ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಅಝೀಝ್ ಅಬ್ದುಲ್ ಮನೆಗೆ ಅಧಿಕಾರಿಗಳ ತಂಡ ಹೊಕ್ಕಿದೆ.
ಒಂದು ಲ್ಯಾಪ್ ಟಾಪ್, 2ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ. ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ವಾಸಿಸುತ್ತಿದ್ದ ಅಝೀಝ್ ನನ್ನು ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ಅಝೀಝ್ ಸಹೋದರ ಎಸ್‌ಡಿಪಿಐ ಪ್ರಾಂತೀಯ ಅಧ್ಯಕ್ಷನಾಗಿರುವ ಮೌಸಿನ್ ಅಬ್ದುಲ್ ಶುಕುರ್ ಹೊನ್ನಾವರ ಎಂಬಾತನನ್ನು ವಶಕ್ಕೆ ಪಡೆಯಲು ಯೋಜನೆ ಹಾಕಲಾಗಿತ್ತು. ಆದ್ರೆ, ಮೌಸಿನ್ ಮನೆಯಲ್ಲಿ ಇರದ ಕಾರಣ ಆತನ ಅಣ್ಣನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಂಧಿತನನ್ನು ಖಾಸಗಿ ಕಾರಿನಲ್ಲಿ ಅಜ್ಞಾತ ಪ್ರದೇಶಕ್ಕೆ ಕೊಂಡೊಯ್ದಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಅಝೀಝ್ ತನ್ನ ಮನೆಯ ಗೋಡೆಯಲ್ಲಿ ರಿಜೆಕ್ಟ್ ಸಿಎಎ ಹಾಗೂ ಎನ್‌ಐಎ ಎಂದು ಬರೆದುಕೊಂಡಿದ್ದ ಎನ್ನಲಾಗಿದೆ. ಸಹೋದರರಿಬ್ಬರು ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ ಕೇಂದ್ರ ತನಿಖಾ ದಳದ ಕಣ್ಣು ಬಿದ್ದಿತ್ತು ಎನ್ನಲಾಗಿದೆ.