ಹುಬ್ಬಳ್ಳಿ: ವರೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಘಟನೆ ನಡೆದಿದೆ.
ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟವರು. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಾಗಿದೆ.
ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ರಾತ್ರಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಘಟನೆ ನಡೆದಿದೆ.
ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸೊಹೇಲ್ ಸ್ಥಳದಲ್ಲೆ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಚಾಲಕ ಮತ್ತು ಮಹಿಳೆ ಕಿಮ್ಸ್ ಗೆ ದಾಖಿಲಿಸಿದ ಸ್ವಲ್ಪ ಸಮಯದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.