ಬೈಲಹೊಂಗಲ: ಇದು ನಿಜಕ್ಕೂ ದುರಂತದ ಸಂಗತಿ. ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಮುರುಘಾ ಶ್ರೀಗಳ ಕೇಸ್ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋದಲ್ಲಿ ಇವರ ಹೆಸರನ್ನು ಬಳಸಿಕೊಂಡು ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದು ವೈರಲ್ ಅಗಿದ್ದರಿಂದ ಮನ ನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ನಿನ್ನೆ ತಡರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಈ ಘಟನೆಯಿಂದ ಜೀವಂತ ಇರಬಾರದು ಎಂದೆನಿಸಿದೆ ಎಂದು ಹೇಳಿದ್ದರಂತೆ.
ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಮಠದ ಆವರಣದಲ್ಲಿ ಭಕ್ತರು ಜಮಾವಣೆಗೊಂಡಿದ್ದಾರೆ. ಪಿಐ ಉಳವಪ್ಪ ಸಾತೆನಹಳ್ಳಿ, ಡಿಎಸ್ಪಿ ಕಟಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.