ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆಯಾಗಿದೆ. ನಿನ್ನೆ ರಾತ್ರಿ 9.30 ರ ಸಮಯದಲ್ಲೇ ಬಂದು, ಸೆಕ್ಯುರಿಟಿ ಗಾರ್ಡ್ ನನ್ನು ಕಟ್ಟಿಹಾಕಿ, ರಾತ್ರಿಯಿಡೀ ಅಲ್ಲೇ ಬೀಡು ಬಿಟ್ಟು, ಯಾರದ್ದೂ ಭಯವಿಲ್ಲದೇ ದರೋಡೆಕೋರರ ಗ್ಯಾಂಗ್ ಸಹಕಾರಿ ಸಂಘದಲ್ಲಿ ದರೋಡೆ ಮಾಡಿಕೊಂಡು ಹೋಗಿದೆ.
ಗಾರ್ಡಿಗೆ ಕಟ್ಟಿ ಹಾಕಿ..!
ಅಂದಹಾಗೆ, ನಿನ್ನೆ ರಾತ್ರಿ ಎಲ್ಲರೂ ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದರೆ, ದರೋಡೆಕೋರ ಗ್ಯಾಂಗ್ ಮಾತ್ರ ಕಳ್ಳತನದ ಪ್ಲ್ಯಾನ್ ಹಾಕಿದೆ. ಹೀಗಾಗಿ, ಇನ್ನೂ ಯಾರೂ ಮಲಗದ ವೇಳೆಯೇ ಮಳಗಿ ಸೇವಾ ಸಹಕಾರಿ ಸಂಘದ ಅಂಗಳಕ್ಕೆ ಬಂದಿದೆ. ಸಂಘದಲ್ಲಿ ರಾತ್ರಿ ಕಾಯಲು ಇದ್ದ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ ದರೋಡೆಕೋರರು.
ನಿನ್ನ ತಲೆದಿಂಬಿನ ಹತ್ತಿರವೇ ಬಾಂಬ್ ಇಟ್ಟಿದ್ದೇವೆ ನೀನೇನಾದ್ರೂ ಬಾಲ ಬಿಚ್ಚಿದ್ರೆ ರಿಮೋಟ್ ಮೂಲಕ ಉಡಾಯಿಸಿ ಬಿಡ್ತಿವಿ ಅಂತಾ ಭಯಗೊಳಿಸಿ ಒಳನುಗ್ಗಿದ್ದಾರಂತೆ. ಹೀಗಾಗಿ, ಏನೂ ಮಾಡಲಾಗದ ಸ್ಥಿತಿಯಲ್ಲಿ ಪರದಾಡಿದ್ದಾನೆ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪ.
ಕಟ್ಟರ್ ಮಶಿನ್ ತಂದ್ರು..!
ಹೀಗೆ, ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನನ್ನು ಕಟ್ಟಿ ಹಾಕಿ ದೋಚಲು ಇಳಿದ ಆಗಂತುಕರು, ಸಹಕಾರಿ ಸಂಘದ ಬಾಗಿಲು ಕೊರೆಯಲು ಕಟ್ಟರ್ ಮಶಿನ್ ತಂದಿದ್ದರಂತೆ. ಮಶಿನ್ ಮೂಲಕವೇ ಬಾಗಿಲು ಕೊರೆದು ಒಳ ನುಗ್ಗಿರೋ ಖದೀಮರು ರಾತ್ರಿಯಿಡೀ ಒಳಗೆಯೇ ಇದ್ದು ಏನೇಲ್ಲ ದೋಚಬೇಕೋ ದೋಚಿದ್ದಾರಂತೆ. ಆದ್ರೆ, ಖದೀಮರು ದೋಚಿರೋದು ಏನೇನು, ಎಷ್ಟು ಮೊತ್ತದ್ದು ಅನ್ನೊ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಆರು ಜನರ ಗ್ಯಾಂಗ್..?
ಅಸಲು, ಸೆಕ್ಯರಿಟಿ ಗಾರ್ಡ್ ನೀಡಿರೋ ಮಾಹಿತಿ ಪ್ರಕಾರ 6 ಜನರ ಗ್ಯಾಂಗ್ ಈ ದರೋಡೆ ಕೇಸ್ ನಲ್ಲಿ ಭಾಗಿಯಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ, ಖಚಿತತೆ ಇನ್ನೂ ಸಿಕ್ಕಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನೇನು ಬೆರಳಚ್ಚು ತಜ್ಞರ ತಂಡ ಬರಲಿದೆಯಂತೆ. ಪೊಲೀಸರ ಮುಂದಿನ ಕ್ರಮ ಜಾರಿಯಲ್ಲಿದೆ.