ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ‌ ಮಿಸ್ಟರ್ ಚೀಫ್ ಆಫೀಸರ್ರೇ.!


ಮುಂಡಗೋಡಿನಲ್ಲಿ ಮತ್ತೆ ಭಾರೀ ಮಳೆಯಾಗಿದೆ. ಬಂಕಾಪುರ ರಸ್ತೆಯಲ್ಲಿ ಮತ್ತದೇ ಗೋಳು ಎದುರಾಗಿದೆ. ಶನಿವಾರದಂತೆ ಇವತ್ತೂ ಕೂಡ ಇಲ್ಲಿ‌ನ ನಿವಾಸಿಗಳು “ಶಿವ”ರಾತ್ರಿ ಜಾಗರಣೆ ಮಾಡುವಂತಾಗಿದೆ. ಹೀಗೆ ಭಜನೆ‌ ಮಾಡಿದ ಮೇಲಾದ್ರೂ “ಜನಪ್ರತಿನಿಧಿ” ಸಾಹೇಬ್ರುಗಳು ಈ ನಿವಾಸಿಗಳ ಗೋಳು ಕೇಳ್ತಾರಾ ಅನ್ನೋದೊಂದೇ ಸದ್ಯದ ಪ್ರಶ್ನೆಯಾಗಿದೆ.

ಶನಿವಾರದಂತೆ..!
ಅಸಲು, ಶನಿವಾರ ಇಂತದ್ದೇ ಮಳೆ ಧುತ್ತನೇ ಸುರಿದು ಹೋದಾಗ, ಪಾಪ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾತ್ರೋ ರಾತ್ರಿ ಎದ್ನೊ ಬಿದ್ನೊ ಅಂತಾ ಬಂದಿದ್ರಂತೆ. ಪಾಪ ಅದೇಲ್ಲಿ ಬೆಚ್ಚಗೆ ಮಲಗಿದ್ರೋ ಏನೋ ಮಾದ್ಯಮಗಳು ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದವು. ಅಲ್ಲದೇ ಇಲ್ಲಿನ ಬಡ ನಿವಾಸಿಗಳು ಉಗಿದು ಉಪ್ಪಿನಕಾಯಿ ಹಾಕಿದ್ರು. ಆ ಕಾರಣಕ್ಕಾಗಿ ಪಾಪ ದಡಬಡನೇ ಬಂದಿದ್ದ “ಸ್ವಾಮಿಗಳು” ಕತ್ತಲಲ್ಲೇ ಬಂದು ಅದೇನೋ ಮುಂದಿನ “ಕಠಿಣ” ವ್ಯವಸ್ಥೆಯ ಕ್ರಮಕ್ಕೆ ಮುಂದಾಗಿದ್ದಾರಂತೆ. ಪಾಪ, ಈ ಯಪ್ಪನಿಗೆ ಶನಿವಾರ ರಾತ್ರಿಯೇ ಜ್ಞಾನೋದಯವಾಗಿದ್ದು ಸಮಸ್ಯೆಯ ಪರಿಹಾರಕ್ಕಾಗಿ ರೆಡಿಯಾಗಿದ್ರಂತೆ. ಆದ್ರೆ, ಮುಹೂರ್ತಕ್ಕಾಗಿ ಜ್ಯೋತಿಷ್ಯರ ಹುಡುಕಾಟದಲ್ಲಿದ್ದಾರಂತೆ.

ಇದೇಲ್ಲ  ನಂಬೋದಾ..?
ಅಸಲು, ಇದೇಲ್ಲ ಬರೀ ಕಣ್ಣೊರೆಸುವ ತಂತ್ರ ಅಂತಿದ್ದಾರೆ ಇಲ್ಲಿನ ನಿವಾಸಿಗಳು. ಈ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದಿದ್ರೆ ಕಳೆದ ತಿಂಗಳಷ್ಟೇ ಮಳೆ ಬಂದು ಇಂತದ್ದೇ ಪರಿಸ್ಥಿತಿ ಎದುರಾಗಿದ್ದಾಗಲೇ ಇವ್ರೇಲ್ಲ ಕಣ್ಣೆತ್ತಿ ನೋಡಬೇಕಿತ್ತು. ಆದ್ರೆ, ಇವ್ರಿಗೇ ಅದ್ಯಾವುದರ ಬಗ್ಗೆ ಕಾಳಜಿ ಅನ್ನೋದು ಇಲ್ಲವೇ ಇಲ್ಲ. ಹೀಗಾಗಿ, ಅಂತಹ ಅಧಿಕಾರಿಗಳಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಅಂತಿದಾರೆ ಇಲ್ಲಿನ ಜನ. ಹೋಗ್ಲಿ, ಸಚಿವರ ಎದುರು ತಮ್ಮ‌ ಸಮಸ್ಯೆ ಹೇಳಿಕೊಳ್ಳೋಣ ಅಂದ್ರೆ ಸಚಿವರೂ ಕೂಡ ಈಗ ದೇಶದಲ್ಲೇ ಇಲ್ಲ, ಐರ್ಲ್ಯಾಂಡಿನಲ್ಲಿದ್ದಾರೆ. ಇಲ್ಲಿ ಅವ್ರ ಮತದಾರರು ಮಾತ್ರ ನೀರಲ್ಲಿದ್ದಾರೆ‌.

ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ..!
ಮುಂಡಗೋಡಿನ ಬಂಕಾಪುರ ರಸ್ತೆಯ ನಿವಾಸಿಗಳ ಮಳೆಗಾಲದ ಈ ಸಮಸ್ಯೆ ಬಗ್ಗೆ, ಸಮಸ್ಯೆಯ ದಿನವಷ್ಟೇ ಮಾತನಾಡುವ ಅಧಿಕಾರಿಗಳು ಮಾರನೇ ದಿನವೇ ಅದನ್ನೇಲ್ಲ ಸೈಡಿಗೆ ಇಟ್ಟಿರ್ತಾರೆ. ಹೀಗಾಗಿ, ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ನಿಜ ಅಂದ್ರೆ ಇಲ್ಲಿನ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆಯುವ ಹಂತದಲ್ಲಿದೆ. ಹಾಗೇನಾದ್ರೂ ಇಲ್ಲಿನವರ ಸಾತ್ವಿಕ ಕೋಪದ ಕಟ್ಟೆ ಒಡೆದ್ರೆ, ಎಸಿ ರೂಮಲ್ಲಿ ಶ್ವೇಟರ್ ಹಾಕ್ಕೊಂಡು ಬೆಚ್ಚಗೆ ಕೂರೋ ಅಧಿಕಾರಿಗಳ ಛಳಿ ಬಿಡಿಸೋದ್ರಲ್ಲಿ ಅನುಮಾನವೇ ಇಲ್ಲ. ಈಗಲಾದ್ರೂ ಎಚ್ಚೆತ್ತುಕೊಳ್ಳಿ ಮಿಸ್ಟರ್ ಚೀಫ್ ಆಫೀಸರ್ರೇ..!

error: Content is protected !!