ಪಾಟೀಲರಿಂದ ಕಿತ್ತುಕೊಂಡ ಅಧ್ಯಕ್ಷಗಿರಿ ಯಾರ ಪಾಲು..? ಮರಾಠಾ‌ ಮುಖಂಡನಿಗೆ ಒಲಿಯತ್ತಾ ಪಟ್ಟ..? ಐರ್ಲ್ಯಾಂಡನಲ್ಲೇ ರೆಡಿಯಾಯ್ತಾ ಪ್ಲ್ಯಾನ್..?

ಯಲ್ಲಾಪುರ ಕ್ಷೇತ್ರದ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಗುದುಮುರುಗಿ ಬಿದ್ದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಿ.ಎಸ್.ಪಾಟೀಲರನ್ನು ಅನಾಮತ್ತಾಗಿ ಕಿತ್ತು ಹಾಕಿದ ನಂತರ, ಕ್ಷೇತ್ರದ ಬಿಜೆಪಿ ಅಂಗಳದಲ್ಲಿ ಭಾರೀ ಲೆಕ್ಕಾಚಾರಗಳು ಗರಿಗೆದರಿವೆ. ಪಾಟೀಲರ ಅಷ್ಟೂ ಮಜಕೂರಗಳಿಂದ ಕ್ಷೇತ್ರದ ಬಿಜೆಪಿಗೆ ಆಗಿರೋ, ಆಗಲಿರೋ ಡ್ಯಾಮೇಜ್ ಕಂಟ್ರೋಲ್ ಗೆ ಅದೊಂದು ಪ್ಲ್ಯಾನ್ ಸಾಗರದಾಚೆಗಿನ ಐರ್ಲೆಂಡ್ ನಲ್ಲಿಯೇ ರೆಡಿಯಾಗ್ತಿದೆಯಾ..? ಹೌದು ಅಂತಿದೆ ಅದೊಂದು ಮೂಲ..!

ಅದೊಂದು ಫ್ಯಾಕ್ಟರ್..?
ನಿಮಗೆ, 2018 ರ ವಿಧಾನಸಭಾ ಚುನಾವಣೆಯ ಒಂದಿಷ್ಟು ರಣರೋಚಕ ಸಂಗತಿ ಹೇಳಲೇಬೇಕಿದೆ. ಅವತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್ ಹೆಬ್ಬಾರ್ ವಿರುದ್ಧ ಕೂದಲೆಳೆ ಅಂತರದಿಂದ ಸೋತು ಮನೆ ಹಿಡಿಯುವಂತಾಗಿತ್ತು. ಅಸಲಿಗೆ, ಅವತ್ತು ವಿ.ಎಸ್.ಪಾಟೀಲರ ಸೋಲಿನ ಹಿಂದೆ ಅದೊಂದು ಫ್ಯಾಕ್ಟರ್ ಇನ್ನಿಲ್ಲದಂತೆ ಕೆಲಸ ಮಾಡಿತ್ತು ಅನ್ನೋದು ಖುದ್ದು ಪಾಟೀಲರಿಗೂ ಅರ್ಥವಾಗಿತ್ತು. ಆ ಹೊತ್ತಲ್ಲಿ ಅದೊಂದು ಪ್ರಬಲ ಸಮುದಾಯ ಬಿಜೆಪಿಗೆ ಇನ್ನಿಲ್ಲದಂತೆ ಗುದ್ದು ಕೊಟ್ಟಿತ್ತು. ಯಡಿಯೂರಪ್ಪನವರ ಅದ್ಯಾವುದೋ ಒಂದು ಮಾತು ಆ ಸಮುದಾಯದ ವಿರುದ್ಧವಾಗಿತ್ತು ಅನ್ನುವ ಪ್ರಚಾರ, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ತುತ್ತ ತುದಿಗೆ ಬಂದು ಸೋಲಿನ ಕಹಿ ಉಣಿಸಿತ್ತು. ಅವತ್ತು ಆ ಸಮುದಾಯದ ಮತ ಸೆಳೆಯುವಲ್ಲಿ ಅಕ್ಷರಶಃ ಯಶಸ್ವಿಯಾಗಿದ್ದವರು ಶಿವರಾಮ್ ಹೆಬ್ಬಾರ್. ಗೆಲುವಿನ ಅಂತರ ಕಡಿಮೆಯಾಗಿದ್ದರೂ ಬಂದೊದಗಬಹುದಾಗಿದ್ದ ಸೋಲನ್ನು ಚಾಣಾಕ್ಷತನದಿಂದ ಸೈಡಿಗೆ ಸರಿಸಿದ್ದರು. ಹೀಗಾಗಿ, ಈಗ ಮತ್ತದೇ ಫ್ಯಾಕ್ಟರ್ ಗೆ ಜೋತು ಬೀಳೋ ಸಾಧ್ಯತೆ ನಿಚ್ಚಳವಾಗ್ತಿದೆ ಅನ್ನೊ ಮಾತುಗಳು ಕೇಳಿ ಬರ್ತಿವೆ. ಯಲ್ಲಾಪುರ ಕ್ಷೇತ್ರದಲ್ಲಿ ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ವಿ.ಎಸ್. ಪಾಟೀಲರಿಂದ ಪಕ್ಷಕ್ಕೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಗೆ ಮತ್ತದೇ ಪ್ಯಾಕ್ಟರ್ ಒಂದೇ ದಾರಿ ಅನ್ನುತ್ತಿದೆ ಆ ಟೀಂ..!

ಮರಾಠಾ ಬಲ..?
ಯಸ್, ಸದ್ಯ ಯಲ್ಲಾಪುರ ಕ್ಷೇತ್ರದಲ್ಲಿ ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ಹೇರಳವಾಗಿರೋ ಮರಾಠಾ ಮತಗಳ ಮೇಲೆ ಗುರಿ ಇಡಲಾಗಿದೆ ಅನ್ನೊ ಮಾತುಗಳಿವೆ. ಮುಂಡಗೋಡ ತಾಲೂಕಿನಲ್ಲಿ ಪ್ರಬಲವಾಗಿರೋ ಮರಾಠಾ ಸಮುದಾಯದ ಮತಗಳನ್ನು ಕಟ್ಟಿ ಹಾಕಿಕೊಳ್ಳಲು ರಣತಂತ್ರ ರೂಪಿಸಲಾಗ್ತಿದೆ ಅನ್ನೋ ಬಾತ್ಮಿ ಹರಿದಾಡ್ತಿದೆ. ತಾಲೂಕಿನಲ್ಲಿ ಅದೇ ಸಮುದಾಯದ ಓರ್ವ ಮುಖಂಡನಿಗೆ ಪಟ್ಟ ಕಟ್ಟಿಸಲು ಮುಹೂರ್ತ ಫಿಕ್ಸ್ ಮಾಡಲಾಗ್ತಿದೆ ಅನ್ನೋ ವದಂತಿಗಳೂ ಬಿಜೆಪಿ ಅಂಗಳದಲ್ಲಿ ತೇಲಾಡುತ್ತಿವೆ. ಇದ್ರೊಂದಿಗೆ, ಒಟ್ಟೊಟ್ಟಿಗೆ ಒಂದೇ ಕಲ್ಲಿಗೆ ಎರಡೆರಡು ಹಕ್ಕಿ ಹೊಡಿಯೋ ಪ್ಲ್ಯಾನ್ ರೆಡಿಯಾಗ್ತಿದೆಯಾ ಅನ್ನೋ ಅನುಮಾನಗಳೂ ಶುರುವಾಗಿದೆ.

ಹಾಗಿದ್ರೆ ಯಾವ ಪಟ್ಟ..?
ಬುಧವಾರವಷ್ಟೇ ವಿ.ಎಸ್.ಪಾಟೀಲರಿಂದ ಅನಾಮತ್ತಾಗಿ ಕಿತ್ತುಕೊಂಡಿರೋ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಪಟ್ಟ ಸದ್ಯ ಖಾಲಿಯಿದೆ. ಹೀಗಾಗಿ, ಈ ಅಧ್ಯಕ್ಷ ಪದವಿಯನ್ನೇ ಮುಂದಿಟ್ಟುಕೊಂಡು ಬರುವ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ದಾರಿ ಕ್ಲಿಯರ್ ಮಾಡಿಕೊಳ್ಳಬೇಕು. ಅಂತಹದ್ದೊಂದು ಯೋಚನೆಯಲ್ಲಿ ಇಲ್ಲಿನ ಬಿಜೆಪಿ ರಣತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಖಾಲಿಯಾಗಿರೋ NWKSRTC ಅಧ್ಯಕ್ಷ ಪಟ್ಟ ಮರಾಠಾ ಸಮುದಾಯದ ಆ ಲೀಡರ್ ಗೆ ಕೊಟ್ಟುಬಿಡೋಣ ಅನ್ನೊ ಆಂತರಿಕ ಕ್ಯಾಲ್ಕ್ಯುಲೇಶನ್ ಗಟ್ಟಿಯಾಗುವ ಹಂತಕ್ಕೆ ಬಂದಿದೆಯಂತೆ.

ಸಾಧ್ಯವಾ..?
ಹಾಗೆ ನೋಡಿದ್ರೆ ಬಿಜೆಪಿಯ ಈ ಒಳ ಲೆಕ್ಕಾಚಾರ ವರ್ಕೌಟ್ ಆಗತ್ತಾ..? ನಿಜ ಅಂದ್ರೆ, ಕ್ಷೇತ್ರದಲ್ಲಿ ಮರಾಠಾ ಸಮುದಾಯ ಬಿಜೆಪಿಯಿಂದ ಒಂದಿಷ್ಟು ಅಂತರ ಕಾಯ್ದುಕೊಂಡಿದೆ ಅನ್ನೋದು‌ ಮೇಲ್ನೋಟಕ್ಕೆ ಸಾಭೀತಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಿದ್ದ ಶ್ರೀನಿವಾಸ್ ಮಾನೆ, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರಭಾವದ ಎದುರು ಬಿಜೆಪಿಯ ಈ ಲೆಕ್ಕಾಚಾರ ವರ್ಕೌಟ್ ಆಗೋಕೆ ಸಾಧ್ಯವಾ..? ಇದೇಲ್ಲ ಪ್ರಶ್ನೆಗಳೂ ಸಹಜವಾಗೇ ಕುತೂಹಲ‌ ಮೂಡಿಸಿದೆ. ಇಲ್ಲಿ ಏನಿದ್ರೂ ಮಾನೆಯವರ “ಶ್ರೀ” ರಕ್ಷೆ, ಲಾಡ್ ರವರ “ಸಂತೋಷ”ದ ದಾರಿಯಲ್ಲೇ ಬಹುತೇಕ ನಂಬಿಕೆ ಇಟ್ಟು ಕೂತಿರೋ ಮರಾಠಾ ಮತಗಳನ್ನು, ಆ ಮಟ್ಟಿಗೆ ಬಿಜೆಪಿಯೆಡೆಗೆ ಎಳೆದು ತರಬಲ್ಲ ಸಾಮರ್ಥ್ಯ ಇರೋ ಆ ನಾಯಕನಾದರೂ ಯಾರಾಗಬಹುದು..? ಅಷ್ಟಕ್ಕೂ ಆ ಮುಖಂಡನಿಗೆ ಅಧ್ಯಕ್ಷ ಪಟ್ಟ ಕಟ್ಟಿದ್ರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗಬಹುದಾ..? ಇದೇಲ್ಲ ಪ್ರಶ್ನೆಗಳು ಎದುರಾಗಿವೆ. ಒಂದಿಷ್ಟು ಪ್ರಶ್ನೆಗಳಿಗೆ ಬಹುತೇಕ ಇನ್ನೇರಡು ದಿನದಲ್ಲಿ ಸ್ಪಷ್ಟತೆ ಸಿಗಬಹುದೇನೋ.. ಕಾಯಬೇಕಷ್ಟೆ..

error: Content is protected !!