ಮುಂಡಗೋಡ: ಟಿಬೇಟಿಯನ್ ಕಾಲೋನಿಯಲ್ಲಿ ಸ್ವಾತಂತ್ರೋತ್ಸವದ 75 ನೇ ಅಮೃತ ಮಹೋತ್ಸವದ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ರು. ಅವತ್ತು ಬರೋಬ್ಬರಿ 84 ಸಾವಿರ ಮೌಲ್ಯದ 6 ಕೆಜಿ ತೂಗುವ ಹಸಿ ಹಸಿ ಗಾಂಜಾ ವಶಕ್ಕೆ ಪಡೆದಿದ್ರು. ಅಸಲು, ಅವತ್ತು ಹಾಗೆ ಗಾಂಜಾದೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದವನು ಟಿಬೇಟಿಗನಾಗಿದ್ದ. ನಶೆಯ ಜಗತ್ತಿನ ಎಜೆಂಟ್ ಆಗಿದ್ದ. ಇದ್ರೊಂದಿಗೆ, ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಶೆಯ ಗುಂಗು ಹಿಡಿಸುವವನಾಗಿದ್ದ.
ನಿಜ ಅಂದ್ರೆ….
ಟಿಬೇಟಿಯನ್ ಕಾಲೋನಿಯ ಗಲ್ಲಿಗಳಲ್ಲಿ ಕಾಲಿಟ್ರೆ ಆಮ್ಲಜನಕ ಅದೇಷ್ಟು ಸಿಗತ್ತೋ ಗೊತ್ತಿಲ್ಲ. ಆದ್ರೆ, ಸಿಗರೇಟಿನ ಘಮ್ಮು ವಾಸನೆ ಗಬ್ಬೆಬ್ಬಿಸಿರತ್ತೆ. ಇಲ್ಲಿ ಹೈಸ್ಕೂಲಿಗೆ ಹೋಗುವ ಕೆಲವು ವಿದ್ಯಾರ್ಥಿಗಳೂ ಕೂಡ ಮಾದಕ ಜಗತ್ತಿನ ದಾಸರಾಗಿರ್ತಾರೆ ಅನ್ನೋದು ದುರಂತ. ಅಸಲಿಗೆ, ಟಿಬೇಟಿಗರಲ್ಲಿ ಹಿರಿಯರು ಶ್ರಮ ಜೀವಿಗಳಾಗಿರ್ತಾರೆ. ಬೆಳಗಾಯಿತೆಂದ್ರೆ ಕೆಲಸ ಕೆಲಸ ಅಂತಾ ಬೆವರು ಹರಿಸೋರೂ ಇರ್ತಾರೆ. ಆದ್ರೆ, ಇಲ್ಲಿನ ಕೆಲ ಯುವ ಪಡೆ ಮಾತ್ರ ನಶೆಯ ಗುಂಗಿನಲ್ಲೇ ತೇಲಾಡುವ ಚಟ ಹಚ್ಚಿಕೊಂಡಿದೆ ಎನ್ನುವ ಮಾತುಗಳಿವೆ. ಈ ಕಾರಣಕ್ಕಾಗೇ, ಅಂದ್ರೆ ಈ ಟಿಬೇಟಿಯನ್ ಕಾಲೋನಿಯ ಅಂಗಳದಲ್ಲಿ ಗಾಂಜಾ ಅನ್ನೋದು ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡು ವರ್ಷಗಳೇ ಕಳೆದಿದೆ. ಈ ದಂಧೆಯನ್ನೇ ಬದುಕನ್ನಾಗಿಸಿಕೊಂಡಿರೋ ಅದೇಷ್ಟೋ ಯುವಕರು ತಮಗರಿವಿಲ್ಲದಂತೆ ಬರ್ಬಾದಾಗುತ್ತಿದ್ದಾರೆ. ಹಾಗಂತ, ಇದೇಲ್ಲ ಪೊಲೀಸರಿಗೆ ಗೊತ್ತಿಲ್ಲವೆಂದೇನಿಲ್ಲ. ಕೆಲವು ಆಸೆಬುರುಕರ ಕೈಗೆ ಹತ್ತೋ ಇಪ್ಪತ್ತೋ ಇಟ್ರೆ ಮುಗೀತು ಅವೇಲ್ಲ ಅಲ್ಲೇ ಗಪ್ ಚುಪ್ ಆಗಿ ಬಿಡುತ್ತಿವೆ ಅನ್ನೋ ಆರೋಪಗಳಿವೆ. ಇದೇಲ್ಲ, ಮುಂಡಗೋಡ ಠಾಣೆಯ ಅಧಿಕಾರಿಗಳ ಗಮನಕ್ಕೆ ಬಂದು ಮುಟ್ಟೋದೇ ಇಲ್ಲವಂತೆ.
ಗಾಂಜಾ ದಂಧೆ..!
ಅಸಲು, ಇದೇ ಟಿಬೇಟಿಯನ್ ಕಾಲೋನಿಯಲ್ಲಿ ಭರ್ಜರಿಯಾಗಿ ದುಡ್ಡು ಮಾಡಲು ಕೆಲವು ಅಕ್ರಮಿಗಳು ಇಳಿದು ಬಿಟ್ಟಿದ್ದಾರೆ. ಕಾಲೋನಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಗಾಂಜಾ , ಮದ್ಯ ಮಾರಾಟ ಮಾಡಲೇಂದೇ ಕೆಲವು ದುಖಾನುಗಳು ಬಾಯ್ತೆರೆದಿವೆ. ಹೀಗಾಗಿ, ನಿತ್ಯವೂ ಇಲ್ಲಿ ಗಾಂಜಾ ಘಮಲು ನಿಲ್ಲೋಕೆ ಛಾನ್ಸೇ ಇಲ್ಲವೆನೋ ಅನ್ನುವಂತಾಗಿದೆ. ಟಿಬೇಟಿಯನ್ ಕಾಲೋನಿ ಕ್ಯಾಂಪ್ ನಂಬರ್ 4 ರ ಹೊರಭಾಗದಲ್ಲಿ ಈ ದಂಧೆ ಮಾಡಲೇಂದೆ ನಿತ್ಯವೂ ಒಂದಿಷ್ಟು ಜನ ಫಿಲ್ಡಿನಲ್ಲಿ ಇರ್ತಾರೆ. ಇನ್ನು ಇದೇ ಟಿಬೇಟಿಯನ್ ಕಾಲೋನಿಯ ಅದೊಂದು ಮೈದಾನದಲ್ಲಿ ಸಂಜೆಯಾಗುತ್ತಲೇ ಗಪ್ ಚುಪ್ ಆಗಿ ಗಾಂಜಾ ಮಾರಾಟದ ಕುಳಗಳು ಫಿಲ್ಡಿಗಿಳಿದಿರುತ್ತವೆ.. ಹುಬ್ಬಳ್ಳಿ, ಕಲಘಟಗಿ ಕಡೆಗಳಿಂದ ಗಾಂಜಾ ದಂಧೆಕೋರರು ದಿನಂಪ್ರತಿ ಬಂದು ವ್ಯಾಪಾರ ಮಾಡಿಕೊಂಡು ಹೋಗ್ತಾರೆ.
ಅದಷ್ಟೇ ಅಲ್ಲ ಕಣ್ರಿ..
ಅಂದಹಾಗೆ, ಟಿಬೇಟಿಯನ್ ಕಾಲೋನಿಯಲ್ಲಿ ಇವತ್ತು ಟಿಬೇಟಿಗರ ವಿದ್ಯಾರ್ಥಿಗಳನ್ನೇ ಬಂಡವಾಳ ಮಾಡಿಕೊಂಡು ಕೆಲವು ಮಾದಕ ದಂಧೆಗಳು ಚಾಲ್ತಿಯಲ್ಲಿವೆ. ನಿಮಗೆ ಗೊತ್ತಿರಲಿ, ಟಿಬೇಟಿಯನ್ ಯುವ ಪಡೆ ನಶೆಯ ಜಗತ್ತಲ್ಲಿ ತೇಲಾಡಬೇಕೆಂದ್ರೆ ಗಾಂಜಾ, ಸರಾಯಿ ಅಷ್ಟೇ ಅಲ್ಲ ಬದಲಾಗಿ ಇನ್ನೂ ಏನೇನೋ ವಸ್ತುಗಳು ಬಳಕೆಯಾಗ್ತಿವೆ. ಹಾಗೇ ಮಾದಕತೆಗೆಗಾಗೇ ಸ್ಪಾಸ್ಮೊ ಪ್ರಾಕ್ಸಿವೋನ್ (Spasmo proxyvon) ಅನ್ನೋ ಮಾತ್ರೆಗಳೂ ಇಲ್ಲಿ ಬಳಕೆಯಾಗ್ತಿವೆ. ಅಸಲು ಈ ಮಾತ್ರೆಗಳನ್ನು ಹೊಟ್ಟೆ ನೋವಿಗಾಗಿ ಬಳಸಲಾಗತ್ತೆ. ಇದ್ರಲ್ಲಿ ಒಂದಿಷ್ಟು ನಶೆ ತರಿಸೋ ಅಂಶಗಳಿವೆಯಂತೆ. ಹೀಗಾಗಿ ಇಂತಹ ಡಜನ್ನುಗಟ್ಟಲೇ ಮಾತ್ರೆಗಳನ್ನು ಏಕಕಾಲಕ್ಕೆ ನುಂಗಿ ನೀರು ಕುಡಿಯುವ ಕೆಲವು ಯುವಕರು, ನಶೆಯ ಗುಂಗಲ್ಲಿ ತೇಲಾಡುತ್ತಾರೆ. ಈ ಮಾತ್ರೆಗಳನ್ನು ಮೊದಲೇಲ್ಲ ಮುಂಡಗೋಡಿನ ಕೆಲವು ಮೆಡಿಕಲ್ ಶಾಪ್ ಗಳು ಬಾಕ್ಸು ಗಟ್ಟಲೇ ಮಾರಾಟ ಮಾಡುತ್ತಿದ್ದರು. ಆದ್ರೆ, ಇದರ ಬಗ್ಗೆ ಯಾವಾಗ ಜಗಜ್ಜಾಹೀರಾಗಲು ಶುರುವಾಯ್ತೋ ಸಂಬಂಧಪಟ್ಟ ಅಧಿಕಾರಿಗಳು ಖಡಕ್ಕಾಗಿ ಎಚ್ಚರಿಕೆ ಕೊಟ್ಟಿದ್ದರು. ಹೀಗಾಗಿ, ಅದೇಲ್ಲ ಈಗ ಹೊರಜಗತ್ತಿಗೆ ಕಾಣದೇ ನಡೆಯುತ್ತಿದೆ. ಕೆಲ ಆಸೆ ಬುರುಕ ಮೆಡಿಕಲ್ ಶಾಪಗಳು ಈ ದಂಧೆಯನ್ನ ಒಳಗೊಳಗೇ ಕದ್ದುಮುಚ್ಚಿ ಶುರು ಮಾಡುತ್ತಿದ್ದಾರೆ ಅನ್ನೋ ಮಾತುಗಳು ಇವೆ. ಅಸಲಿಗೆ, ಈ ಮಾತ್ರೆ ಮಾರಾಟ ಮಾಡಲು ವೈದ್ಯರ ಶಿಫಾರಸ್ಸು ಬೇಕೇ ಬೇಕು. ಆದ್ರೂ, ತಮ್ಮ ಖಾಯಂ ಗಿರಾಕಿಗಳನ್ನು ಹೊಂದಿರೋ ಕೆಲ ಮೆಡಿಕಲ್ ಶಾಪ್ ಗಳು ಅವ್ಯಾಹತವಾಗಿ ಸರಭರಾಜು ಮಾಡ್ತಿವೆ ಅನ್ನೋ ಆರೋಪಗಳೂ ಇವೆ. ಇದನ್ನ ಸಂಬಂಧಪಟ್ಟವರು ಕೊಂಚ ಗಮನಿಸಬೇಕಿದೆ.
ಅಕ್ರಮ ಮದ್ಯ ಮಾರಾಟ..!
ಇನ್ನು, ಟಿಬೇಟಿಗರ ಯುವ ಪಡೆಯನ್ನ ಸದಾಕಾಲ ನಶೆಯ ಜಗತ್ತಲ್ಲಿ ತೇಲಾಡಿಸಲೆಂದೇ ಇಲ್ಲಿ ತರಹೇವಾರಿ ಅಂಗಡಿಗಳು ಬಾಯ್ತೆರೆದು ಕೂತಿವೆ. ನೀವು ಮುಂಡಗೋಡಿನಿಂದ ಟಿಬೇಟಿಯನ್ ಕಾಲೋನಿಗೆ ಎಂಟ್ರಿಯಾಗಲು ರೆಡಿಯಾಗ್ತಿರಿ ಅಂದ್ರೆ, ಕ್ಯಾಂಪ್ ನಂಬರ್ ಒಂದರ ಬೃಹದಾಕಾರದ ಕಮಾನು ಇದೇಯಲ್ವಾ ಅದರ ಅಡಿಯಲ್ಲೇ ಯಲ್ಲಾಪುರ ರಸ್ತೆಗೆ ಹೊಂದಿಕೊಂಡಿರೊ ಒಂದು ಕಿರಾಣಿ ಅಂಗಡಿ ಇದೆ. ಅಸಲು ಇದು ನೋಡಲು ಕಿರಾಣಿ ಅಂಗಡಿ. ಆದ್ರೆ ಈ ಅಂಗಡಿಯೊಳಕ್ಕೆ ಬಂದ್ರೆ ಮುಗೀತು, ಪುಟ್ಟದೊಂದು ಬಾರ್ ಬಾಯ್ತೆರೆದು ಕೂತಿದೆ. ಇಲ್ಲಿ ನಿತ್ಯವೂ ನೂರಾರು ಟಿಬೇಟಿಗರು ನಶೆಯಲ್ಲಿ ತೇಲಾಡ್ತಾರೆ. ಅಷ್ಟಕ್ಕೂ ಇದೇಲ್ಲ ಬಹಿರಂಗವಾಗೇ ನಡೆಯುತ್ತಿರೋ ದಂಧೆ. ನಿಜ ಅಂದ್ರೆ, ಈ ಅಕ್ರಮ ಬಾರ್ ಗೆ ಯಾವ ಅನುಮತಿಯೂ ಇಲ್ಲ. ಬದಲಾಗಿ ಅಬಕಾರಿಗಳ “ಭಿಕ್ಷಾಟನೆಯ” ಆಸೆಗೆ ಇವೇಲ್ಲ ನಿರ್ಭಿಡೆಯಿಂದ ನಡೆಯುತ್ತಿವೆ ಅಷ್ಟೆ. ವ್ಯವಸ್ಥೆ ಅನ್ನೋದೇ ಹಾಗೆ ಅಲ್ವಾ..? ಯಾರಿಗೂ ಏನೂ ಮಾಡೋಕೆ ಸಾಧ್ಯವಿಲ್ಲ ಅನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ.