ಉಗ್ರ ಸ್ವರೂಪಕ್ಕಿಳಿದ ವಿದ್ಯಾರ್ಥಿಗಳ ಹೋರಾಟ, ಮುಂಡಗೋಡಿನಲ್ಲೇ ರಸ್ತೆ ತಡೆದ ನಂದಿಕಟ್ಟಾ ಗ್ರಾಮಸ್ಥರು..!


ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಸ್ಥರ ಆಕ್ರೋಶ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ವಿದ್ಯಾರ್ಥಿಗಳಿಗೆ ನಿತ್ಯವೂ ಉಂಟಾಗ್ತಿರೊ ಬಸ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲೇ ಬೇಕು. ನಮಗೆ ಬಸ್ ಬೇಕೆ ಬೇಕು ಅಂತಾ ಸತತವಾಗಿ ಪ್ರತಿಭಟನೆ ಕೈಗೊಂಡಿರೋ ನಂದಿಕಟ್ಟ ಭಾಗದ ವಿದ್ಯಾರ್ಥಿಗಳು, ಪೋಷಕರು ಇವತ್ತು ಮುಂಡಗೋಡಿನಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡ್ರು.

ನಾಲಾಯಕ ಸಾರಿಗೆ ಅಧಿಕಾರಿಗಳೇ..!
ಅಸಲು, ನಿನ್ನೆ ಸಂಜೆ 4.30 ರಿಂದ ಇಂದೂರಿನ ಸಮೀಪ ಪ್ರೌಢಶಾಲೆಯ ಹತ್ತಿರ ಬಸ್ ತಡೆದು ಪ್ರತಿಭಟಿಸಿದ್ದ ವಿದ್ಯಾರ್ಥಿಗಳಿಗೆ ಯಾರೂ ಕ್ಯಾರೇ ಅಂದಿರಲಿಲ್ಲ. ಸುರಿವ ಮಳೆಯಲ್ಲಿ ಪುಟ್ಟ ಕಂದಮ್ಮಗಳು ಬರೋಬ್ಬರಿ 6 ತಾಸು ಪ್ರತಿಭಟನೆ ಕೈಗೊಂಡಿದ್ದರು. ಬಸ್ ತಡೆದು ನಿಲ್ಲಿಸಿದ್ದರು. ಆದ್ರೆ ಕೆಎಸ್ಆರ್ಟಿಸಿ ಯ ಯಾವೊಬ್ಬ ಅಧಿಕಾರಿಯೂ ಅತ್ತ ಕಡೆ ಸುಳಿದಿರಲೇ ಇಲ್ಲ. ತಮ್ಮ ಮನೆಯ ಮಕ್ಕಳಿಗೆ ಅಂತಹ ಪರಿಸ್ಥಿತಿ ಬಂದು, ಮನೆಗೆ ಹೋಗದೇ ಮಳೆಯಲ್ಲಿ ನೆನೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದರೆ ಈ ನಾಲಾಯಕ ಅಧಿಕಾರಿಗಳು ಸುಮ್ಮನೆ ಇರ್ತಿದ್ರಾ..? ಇಂತಹ ಪ್ರಶ್ನೆ ಪೋಷಕರು ಕೇಳ್ತಿದಾರೆ.

ಹೆಚ್ಚಾಯ್ತು ಆಕ್ರೋಶ..!
ಈ ಕಾರಣಕ್ಕಾಗೇ ಇವತ್ತು ಇಡೀ ನಂದಿಕಟ್ಟಾದ ವಿದ್ಯಾರ್ಥಿಗಳು, ಪೋಷಕರು ಎರಡು ಟ್ರ್ಯಾಕ್ಟರ್ ಮೂಲಕ ಮುಂಡಗೋಡಿಗೆ ಬಂದು ಉಗ್ರ ಪ್ರತಿಭಟನೆ ಕೈಗೊಂಡಿದ್ದಾರೆ. ಶಿರಸಿ ಹುಬ್ಬಳ್ಳಿ ರಸ್ತೆ, ಹಾಗೂ ಯಲ್ಲಾಪುರ ಬಂಕಾಪುರ ರಸ್ತೆಗೆ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಅಕ್ಷರಶಃ ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ, ಎದ್ನೊ ಬಿದ್ನೋ ಅಂತಾ ಓಡೋಡಿ ಬಂದ ಸಾರಿಗೆ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಪಿಎಸ್ಐ ಬಸವರಾಜ್ ಮಬನೂರು ಪ್ರತಿಭಟನಾಕಾರರ ಜೊತೆ ಮಾತನಾಡಿ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿರೋ ನಂದಿಕಟ್ಟಾ ಗ್ರಾಮಸ್ಥರು ಅಧಿಕಾರಿಗಳ ಛಳಿ ಬಿಡಿಸಿದ್ದಾರೆ.

ಪರಿಸ್ಥಿತಿ ಅರ್ಥವೇ ಆಗಲಿಲ್ವಾ..?
ಹಾಗೆ ನೋಡಿದ್ರೆ, ನಂದಿಕಟ್ಟಾ ಗ್ರಾಮಸ್ಥರ ಆಕ್ರೋಶ, ವಿದ್ಯಾರ್ಥಿಗಳ ಸಾತ್ವಿಕ ಕೋಪದ ಕಟ್ಟೆಯೊಡೆಯಲು ಬಹುಶಃ ಮಾಜಿ ಶಾಸಕ KSRTC ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ನೇರ ಕಾರಣವಾಗಿದ್ದಾರೆ. ಯಾಕಂದ್ರೆ, ಈ ಸಾರಿಗೆ ಇಲಾಖೆಯ ನಾಲಾಯಕ ಅಧಿಕಾರಿಗಳಿಗೆ ಅದೇಷ್ಟೇ ಬಾರಿ ಮನವಿ ನೀಡಿದ್ರು ಗ್ರಾಮಸ್ಥರು, ಅಲ್ಲದೇ ಖುದ್ದು ಅಧ್ಯಕ್ಷ ವಿ.ಎಸ್.ಪಾಟೀಲ ಸಾಹೇಬರಿಗೂ ಖುದ್ದಾಗಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಆದ್ರೆ, ಅವರ್ಯಾರೂ ವಿದ್ಯಾರ್ಥಿಗಳು ಗೋಳು ಕೇಳಲೇ ಇಲ್ಲ. ಹೀಗಾಗಿ ಇವತ್ತು ಇಡೀ ಗ್ರಾಮಕ್ಕೆ ಗ್ರಾಮವೇ ಮುಂಡಗೋಡಿಗೆ ಬಂದು ಪ್ರತಿಭಟಿಸುವಂತಾಗಿತ್ತು.

ಇದು ಮಾಜಿ ಶಾಸಕನ ಮಾತಾ..?
ಅಂದಹಾಗೆ, ಇವತ್ತು ಬಸ್ ಗಾಗಿ ಪ್ರತಿಭಟನೆ ನಡೆಯುತ್ತಿರೋ ವೇಳೆ, ಗ್ರಾಮಸ್ಥರು ಅಧ್ಯಕ್ಷ ವಿ.ಎಸ್.ಪಾಟೀಲ್ ರಿಗೆ ಬಸ್ ಕೊಡಿ, ನಮ್ಮ ಮಕ್ಕಳ ಪರಿಸ್ಥಿತಿ ಸ್ವಲ್ಪ ನೋಡಿ ಗಮನಿಸಿ ಅಂತಾ ಅಂಗಲಾಚಿದ್ರಂತೆ ಆದ್ರೆ, ವಿ.ಎಸ್. ಪಾಟೀಲ ಸಾಹೇಬ್ರು ಅದೇಂಥಾ ಮಾತು ಆಡಿದ್ರು ಗೊತ್ತಾ..? ನಿಮ್ಮ ಮಕ್ಕಳನ್ನು ಮುಂಡಗೋಡಿನ ಶಾಲೆಗೆ ಯಾಕೆ ಸೇರಿಸಿದ್ರಿ ಅಂತಾ ಪೋಷಕರಿಗೆ ಕೇಳಿದ್ರಂತೆ, ಹಾಗಂತ ಪೋಷಕರು ಆಕ್ರೋಶಗೊಂಡು ವಿ.ಎಸ್. ಪಾಟೀಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ‌. ಹಾಗೊಂದು ವೇಳೆ ಅಧ್ಯಕ್ಷ ಮಹಾಶಯರು ಅಂತಹ ಮಾತು ಆಡಿದ್ದಿದ್ರೆ ನಿಜಕ್ಕೂ ಅದಕ್ಕಿಂತ ದೊಡ್ಡ ನಾಚಿಗ್ಗೇಡು ಬೇರೊಂದಿಲ್ಲ ಅನಿಸತ್ತೆ.

ಪಿಎಸೈ ಪರದಾಟ..!
ಇನ್ನು, ಮುಂಡಗೋಡಿನ ಹೃದಯಭಾಗದಲ್ಲೇ ನಿಂತು ಎರಡೆರಡು ರಸ್ತೆಗಳನ್ನು ಬಂದ್ ಮಾಡಿ ಉಗ್ರ ಪ್ರತಾಪ ತೋರಿಸಿದ ಪ್ರತಿಭಟನಕಾರರನ್ನು ಮನವೊಲಿಸಲು ಪಿಎಸೈ ಬಸವರಾಜ್ ಮಬನೂರು ಪರದಾಡಬೇಕಾಯ್ತು‌. ಕೊನೆಗೂ ಸಾರಿಗೆ ಇಲಾಖೆ ಅಧಿಕಾರಿಗಳ ಭರವಸೆ ನಂತರ ಅದೇಷ್ಟೋ ಹೊತ್ತಿನ ಬಳಿಕ ಪ್ರತಿಭಟನೆ ಹಿಂಪಡಿಯಲಾಗಿದೆ‌. ಆದ್ರೆ, ಸಾರಿಗೆ ಅಧಿಕಾರಿಗಳು ಮತ್ತದೇ ಬೇಜವಾಬ್ದಾರಿ ತೋರುವ ಹೀನ ಚಾಳಿ ಮುಂದುವರೆಸಿದ್ರೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಆಕ್ರೋಶ ಅದ್ಯಾವ ದಿಕ್ಕಿಗೆ ಹೊರಳತ್ತೋ..? ಅಧ್ಯಕ್ಷ ವಿ.ಎಸ್.ಪಾಟೀಲರೇ ಸ್ವಲ್ಪ ಅರಿತು ನೋಡಿ..!

error: Content is protected !!