ನಮಗೆ ಬಸ್ ಬೇಕೇ ಬೇಕು..!  ಇಂದೂರಿನಲ್ಲಿ ವಿದ್ಯಾರ್ಥಿಗಳಿಂದ ಮಳೆಯಲ್ಲೇ ಬಸ್ ತಡೆದು ಪ್ರತಿಭಟನೆ..!


ಮುಂಡಗೋಡ: ತಾಲೂಕಿನ ಇಂದೂರು ಪ್ರೌಢಶಾಲೆ ಹತ್ತಿರ ಸುರಿವ ಮಳೆಯಲ್ಲೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ರು. ಅಸಲು, ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಇವ್ರ ಗೋಳು ಹೇಳತೀರದ್ದಾಗಿದೆ. ಹೀಗಾಗಿ, ಇವತ್ತು ನಂದಿಕಟ್ಟಾ ಕೆಂದಲಗೇರಿ, ಹುಲಿಹೊಂಡ, ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಬಸ್ ತಡೆ ನಡೆಸಿ ಪ್ರತಿಭಟಿಸಿದ್ದಾರೆ.


ಇಂದೂರುಹೈಸ್ಕೂಲ್ ಹತ್ತಿರ..
ಅಂದಹಾಗೆ, ಇಂದು ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಸುಮಾರು 40 ವಿದ್ಯಾರ್ಥಿಗಳು ಬಸ್ ಹತ್ತಲು ರೆಡಿಯಾಗಿದ್ದಾರೆ. ಆದ್ರೆ, ಆದಾಗಲೇ ಬಸ್ ಸಂಪೂರ್ಣ ಭರ್ತಿಯಾಗಿತ್ತು. ಹೀಗಾಗಿ, ಬಸ್ ನಲ್ಲಿ ಜಾಗವಿಲ್ಲ ಅಂತಾ ನಿರ್ವಾಹಕ ಹೇಳಿದ್ದಾನೆ. ಸುರಿವ ಮಳೆಯಲ್ಲಿ ವಿದ್ಯಾರ್ಥಿಗಳು ಮನೆಗೆ ಹೋಗುವುದಾದರೂ ಹೇಗೆ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣವೇ ಬಸ್ ತಡೆದು ಪ್ರತಿಭಟನೆಗಿಳಿದಿದ್ದಾರೆ‌.

ಮಳೆಯಲ್ಲೇ ಪ್ರತಿಭಟನೆ..!
ನೂರಾರು ವಿದ್ಯಾರ್ಥಿಗಳು ಬಸ್ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ನಿಜ ಅಂದ್ರೆ ಪುಟ್ಟ ಪುಟ್ಟ ಮಕ್ಕಳು ಮಳೆಯಲ್ಲೇ ಪ್ರತಿಭಟನೆ ಕೈಗೊಂಡಿದ್ದಾರೆ‌. ರಾತ್ರಿ ಎಂಟು ಗಂಟೆಯಾದರೂ ಸಾರಿಗೆ ಇಲಾಖೆಯವರು ಪರ್ಯಾಯ ವ್ಯವಸ್ಥೆ ಮಾಡದೇ ವಿದ್ಯಾರ್ಥಿಗಳ ಬಗ್ಗೆ ಗಮನ ನೀಡಲೇ ಇಲ್ಲ. ಹೀಗಾಗಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲರ ತವರು ಕ್ಷೇತ್ರದ ವಿದ್ಯಾರ್ಥಿಗಳ ಗೋಳು ಖುದ್ದು ಪಾಟೀಲರಿಗೂ ಕೇಳುತ್ತಿಲ್ಲ‌.

150 ವಿದ್ಯಾರ್ಥಿಗಳು..!
ಅಂದಹಾಗೆ ನಂದಿಕಟ್ಟಾ, ಹುಲಿಹೊಂಡ, ಕೆಂದಲಗೇರಿ, ಬಸಾಪುರ ಗ್ರಾಮಗಳಿಂದ ಮುಂಡಗೋಡಿಗೆ ಹಾಗೂ ಇಂದೂರು ಪ್ರೌಢಶಾಲೆಗೆ ಪ್ರತಿದಿನ 150 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ.
ಹಾಗೆ ತೆರಳುವ ಮಕ್ಕಳಿಗೆ ನಿತ್ಯವೂ ಸರಿಯಾದ ಸಮಯಕ್ಕೆ ಬಸ್ ಬರೋದೇ ಇಲ್ಲ. ಈ ಕಾರಣಕ್ಕಾಗಿ ಅದೇಷ್ಟೋ ಬಾರಿ ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಈ ಸಮಸ್ಯೆಯ ಕುರಿತು ಹಲವು ಬಾರಿ ಯಲ್ಲಾಪುರ ಡೀಪೋ ಮ್ಯಾನೇಜರ್ ಗಮನಕ್ಕೆ ತರಲಾಗಿದೆ. ಅಲ್ಲದೇ, ಅಧ್ಯಕ್ಷ ವಿ.ಎಸ್.ಪಾಟೀಲರಿಗೂ ಮನವಿ ನೀಡಲಾಗಿದೆ. ಆದ್ರೆ, ಇದ್ಯಾವುದಕ್ಕೂ ಅವರು ಕ್ಯಾರೇ ಅಂದಿಲ್ಲ. ಹೀಗಾಗಿ, ಸದ್ಯ ವಿದ್ಯಾರ್ಥಿಗಳು ಮತ್ತೆ ಆಕ್ರೋಶಗೊಂಡಿದ್ದಾರೆ. ಬಸ್ ತಡೆದು ಪ್ರತಿಭಟಿಸಿದ್ದಾರೆ.

ರಾತ್ರಿಯಾದರೂ ಪ್ರತಿಭಟನೆ..!
ಸಂಜೆ 4.30 ಯಿಂದ ಪ್ರಾರಂಭವಾಗಿರೋ ವಿದ್ಯಾರ್ಥಿಗಳ ಪ್ರತಿಭಟನೆ ರಾತ್ರಿಯಾದರೂ ನಿಂತಿಲ್ಲ. ಬಸ್ ತಡೆದು ಪ್ರತಿಭಟನೆ ಮಾಡುತ್ತಿರೋ ಕಾರಣಕ್ಕೆ ಉಳಿದ ಪ್ರಯಾಣಿಕರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

error: Content is protected !!