ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ವಿದ್ಯುತ್ ಅವಘಡವಾಗಿದೆ. ನಿರಂತರ ಮಳೆಯಿಂದ, ರಾತ್ರಿ ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಪರಿಣಾಮ ವಿದ್ಯತ್ ತಂತಿ ಸ್ಪರ್ಶಿಸಿ ಎರಡು ನಾಯಿಗಳು ಸ್ಥಳದಲ್ಲೇ ದಾರುಣ ಸಾವು ಕಂಡಿವೆ.
ತಪ್ಪಿದ ಭಾರೀ ಅನಾಹುತ..!
ಬಹುತೇಕ ಪುಟ್ಟ ಪುಟ್ಟ ಮಕ್ಕಳು ಓಡಾಡುವ ಸ್ಥಳ ಇದಾಗಿದೆ. ಅಲ್ಲದೇ ಮನೆಯ ಎದುರಿಗೆ ಇಂತಹದ್ದೊಂದು ಘಟನೆ ನಡೆದಿದೆ. ವಿದ್ಯುತ್ ತಂತಿ ಮರಕ್ಕೆ ತಾಗಿಕೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ತಂತಿ ತುಂಡಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಜನರ ಜೀವ ಹಾನಿಯಾಗಿಲ್ಲ. ರಾತ್ರಿವೇಳೆ ಜನರು ತಂತಿಯನ್ನು ತುಳಿದಿದ್ರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದ್ರೆ, ಮುಗ್ದ ಎರಡು ಶ್ವಾನಗಳು ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿವೆ.
ಹೆಸ್ಕಾಂ ನಿರ್ಲಕ್ಷ..?
ನಿಜ ಅಂದ್ರೆ, ನ್ಯಾಸರ್ಗಿ ಗ್ರಾಮದ ಈ ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ತಂತಿ ಜೋತುಬಿದ್ದು ವರ್ಷಗಳೇ ಕಳೆದಿವೆ. ಆದ್ರೆ, ಹೆಸ್ಕಾಂ ಇಲಾಖೆಯಿಂದ ಯಾವುದೇ ಸಮರ್ಪಕ ನಿರ್ವಹಣೆ ಆಗಿಲ್ಲ ಅಂತಾರೆ ಗ್ರಾಮಸ್ಥರು, ಇನ್ನು 2 ವರ್ಷದ ಹಿಂದೆ ವಿದ್ಯುತ್ ಕಂಬಗಳನ್ನ ತಂದು ಇಡಲಾಗಿದೆ. ಆದ್ರೆ ಅದನ್ನ ಕೂರಿಸಿ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮಾತ್ರ ಹೆಸ್ಕಾಂನವರು ಮನಸ್ಸು ಮಾಡ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಹಾಗಿದ್ರೆ, ಇಂತಹ ಸಂದರ್ಭದಲ್ಲಿ ಏನಾದ್ರೂ ಹೆಚ್ಚೂ ಕಡಿಮೆ ಆಗಿದ್ದಿದ್ರೆ ಯಾರು ಹೊಣೆ..? ಹಾಗಂತಾ ಸ್ಥಳೀಯರು ಪ್ರಶ್ನಿಸಿದ್ದಾರೆ.