ಪಾಳಾದ ದೊಡ್ಡಕೆರೆ ಒಡೆಯುವ ಆತಂಕ, ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ, ತೀವ್ರ ತರಾಟೆಗೆ ಪಡೆದ ಅನ್ನದಾತರು..!


ಮುಂಡಗೋಡ ತಾಲೂಕಿನ ಪಾಳಾ ದೊಡ್ಡಕೇರಿ ಸಂಪೂರ್ಣ ಭರ್ತಿಯಾಗಿದೆ‌. ನಿರಂತರ ಮಳೆಯಿಂದ ತಾಲೂಕಿನಲ್ಲೇ ಅತಿದೊಡ್ಡ ಕೆರೆಯ ಸ್ಥಾನ ಪಡೆದಿರೊ ದೊಡ್ಡಕೆರೆ ಭರ್ತಿಯಾಗಿದ್ದು, ಜೊತೆಗೆ ಈ ಭಾಗದ ಜ‌ನರಿಗೆ, ರೈತರಿಗೆ ಆತಂಕವೂ ಶುರುವಾಗಿದೆ. ಯಾಕಂದ್ರೆ, ಚಿಕ್ಕ ನೀರಾವರಿ ಇಲಾಖೆಯ ಬಹು ದೊಡ್ಡ ಬೇಜವಾಬ್ದಾರಿಗೆ ಇಡೀ ಕೆರೆಯೇ ಒಡೆದು ಹೋಗುವ ಆತಂಕದಲ್ಲಿದೆ‌. ಇನ್ನೇರಡು ದಿನ ಹೀಗೆ ಮಳೆ ಸುರಿದ್ರೆ ಇಡೀ ಕೆರೆಯೇ ಒಡೆದು ಹೋಗುವ ಹಂತಕ್ಕೆ ಬಂದಿದೆ. ಹೀಗಾಗಿ, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ದಿಗ್ಬಂಧನ ಹಾಕಿ ಕೂಡಿಸಿದ್ದಾರೆ.

ಏನಿದು ಆತಂಕ..!
ಬರೋಬ್ಬರಿ 33 ಎಕರೆ 32 ಗುಂಟೆ ವಿಸ್ತೀರ್ಣದಲ್ಲಿ ಪಾಳಾದ ದೊಡ್ಡ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಆದ್ರೆ ಹಾಗೆ ಭರ್ತಿಯಾಗಿರೋ ಕೆರೆಯ ಕೋಡಿ ಬಿದ್ದ ನೀರು ಹೊರಹೋಗಲು ಯಾವುದೇ ಮಾರ್ಗಗಳೇ ಇಲ್ಲ. ಎಡದಂಡೆ ಹಾಗೂ ಬಲದಂಡೆ ಅಂತಾ ಎರಡು ಕಡೆ ಕೋಡಿ ವಿದ್ದ ನೀರು ಹರಿದು ಹೋಗಲು ಕಾಮಗಾರಿ ಮಾಡಲಾಗಿದೆ. ಆದ್ರೆ, ಚಿಕ್ಕ ನೀರಾವರಿ ಇಲಾಖೆಯ ನಿರ್ಲಕ್ಷದಿಂದ ಆ ಕಾಮಗಾರಿ ನೀರಲ್ಲಿ ಹೋಮ ಹಾಕಿದಂತಾಗಿದೆ. ಯಾಕಂದ್ರೆ, ಆ ಕೋಡಿ ನೀರು ಹರಿದು ಹೋಗಲು ಮಾಡಿರೋ ಕಾಮಗಾರಿ ಅಕ್ಷರಶಃ ಅವೈಜ್ಞಾನಿಕವಾಗಿದೆ.

ಮನೆಗಳ ನಿರ್ಮಾಣ..!
ಇನ್ನು ಕೆಲವ್ರು ಈ ಕೆರೆಯ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಕೋಡಿ ಬಿದ್ದ ನೀರು ಹೋಗಲು ಅಡೆತಡೆ ನಿರ್ಮಿಸಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ. ಅಲ್ದೇ, ಸದ್ಯ ಕೋಡಿ ಬಿದ್ದ ನೀರು ಹೋಗಲು ಚಿಕ್ಕ ನೀರಾವರಿ ಇಲಾಖೆಯವರು ನಿರ್ಮಿಸಿರೋ ಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೀಗಾಗಿ ಸದ್ಯ ಭರ್ತಿಯಾಗಿರೋ ಕೆರೆಯಿಂದ ಅನವಶ್ಯಕ ನೀರು ಹೊರ ಹೋಗಲು ಯಾವುದೇ ದಾರಿಯೇ ಇಲ್ಲ. ಈ ಕಾರಣಕ್ಕೆ ಇಡೀ ಕೆರೆಯೇ ಒಡೆದು ಹೋಗುವ ಆತಂಕ ಶುರುವಾಗಿದೆ. ಒಂದು ವೇಳೆ ಇದೇ ರೀತಿ ಇನ್ನೆರಡು ದಿನ ಮಳೆಯಾದ್ರೆ ಇಡೀ ಕೆರೆಯೇ ಒಡೆದು ಭಾರೀ ಅನಾಹುತ ಸಂಭವಿಸಬಹುದು ಅನ್ನೋ ಆತಂಕ ರೈತರದ್ದಾಗಿದೆ.

ನಿರ್ಲಜ್ಜ ಅಧಿಕಾರಿಗಳು..!
ಅಸಲು, ಮುಂಡಗೋಡಿನ ಚಿಕ್ಕ ನೀರಾವರಿ ಇಲಾಖೆ ಅನ್ನೋದು ಕೆಲವು ಆಸೆಬುರುಕರ ಅಡ್ಡೆಯಾಗಿದೆ ಬಿಟ್ರೆ ಬೇರೆನೂ ಕಡೆದು ಗುಡ್ಡೆ ಹಾಕ್ತಿಲ್ಲ ಅನ್ನೋ ಆರೋಪಗಳಿವೆ. ಈ ಇಲಾಖೆಯ ವಿರುದ್ಧ ತಾಲೂಕಿನ ಇಡೀ ರೈತ ಕುಲದ ಶಾಪಗಳೇ ತುಂಬಿಕೊಂಡಿವೆಯಂತೆ. ಯಾಕಂದ್ರೆ, ತಾಲೂಕಿನಲ್ಲಿರೋ ಕೆರೆಗಳ ನಿರ್ವಹಣೆಯಲ್ಲಿ ಈ ಇಲಾಖೆಯ ಅಧಿಕಾರಿಗಳು ಯಾವತ್ತೂ ಮುತುವರ್ಜಿ ವಹಿಸಿಯೇ ಇಲ್ಲ. ಹೀಗಾಗಿ, ತಾಲೂಕಿನ ಸಾಕಷ್ಟು ಕೆರೆಗಳು ಅದೇಷ್ಟೇ ಮಳೆ ಬಂದ್ರೂ ಕೆಲವೇ ದಿನದಲ್ಲಿ ಸೊರಗಿ ಹೋಗುತ್ತಿವೆ. ಈ ಕಾರಣಕ್ಕಾಗೇ ಇಡೀ ರೈತ ಕುಲ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದೆ.

ಅಧಿಕಾರಿಗಳಿಗೆ ಕೂಡಿ ಹಾಕಿದ ರೈತರು..!
ಇನ್ನು, ಪಾಳಾದ ದೊಡ್ಡಕೆರೆ ಭರ್ತಿಯಾಗಿ ಸೂಕ್ತ ವೈಜ್ಞಾನಿಕ ವ್ಯವಸ್ಥೆ ಇಲ್ಲ. ಈ ಕಾರಣಕ್ಕೆ ಸಾಕಷ್ಟು ಬಾರಿ ಇಲ್ಲಿನ ರೈತರು ಇಲಾಖೆಯ ಅಂಗಳಕ್ಕೆ ಎಡತಾಕಿದ್ದಾರೆ. ಸರಿ ಮಾಡಿಕೊಡಿ ಅಂತಾ ಅಂಗಲಾಚಿದ್ದಾರೆ. ಆದ್ರೆ, ಇಲಾಖೆ ಅಧಿಕಾರಿಗಳು ಮಾತ್ರ ಬರಿ ಕೆಬರುವ ಕೆಲಸದಲ್ಲೇ ಬ್ಯಸಿ ಇದ್ರು ಬಿಟ್ರೆ ಪಾಳಾ ಗ್ರಾಮಸ್ಥರ ಯಾವ ಅಳಲೂ ಆಲಿಸಿಯೇ ಇಲ್ಲ. ಹೀಗಾಗಿ, ಇವತ್ತು ಅಧಿಕಾರಿಗಳು ಕೆರೆಯ ಸಮೀಪ ಬರುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆದಿದೆ. ಹೀಗಾಗಿ, ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ತರಾಟೆಗೆ ಪಡೆದಿದ್ದಾರೆ. ಅಲ್ದೆ ಆಕ್ರೋಶಗೊಂಡಿರೋ ರೈತರು ತಹಶೀಲ್ದಾರ್ ಸ್ಥಳಕ್ಕೆ ಬರುವವರೆಗೂ ಅಧಿಕಾರಿಗಳನ್ನು ಅಲ್ಲಿಂದ ಹೋಗದಂತೆ ದಿಗ್ಬಂಧನ ಹಾಕಿದ್ದಾರೆ.

ಕಾಲ್ ಪಿಕ್ ಮಾಡದ ತಹಶೀಲ್ದಾರ್..!
ಇನ್ನು, ಪಾಳಾ ಗ್ರಾಮದ ರೈತರು ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿಯವರಿಗೆ ವಿಷಯ ತಿಳಿಸಲು ಪೋನ್ ಕರೆ ಮಾಡಿದ್ರೆ ಪಾಪ, ತಹಶೀಲ್ದಾರ್ ಸಾಹೇಬ್ರು ಪೋನ್ ಕರೆ ಸ್ವೀಕರಿಸಿಯೇ ಇಲ್ವಂತೆ. ಹೀಗಾಗಿ, ನೇರವಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕರೆ ಮಾಡಿದಾಗ ಗ್ರಾಮಸ್ಥರಿಗೆ ಸ್ಪಂಧನೆ ಸಿಕ್ಕಿದೆ ಎನ್ನಲಾಗಿದೆ. ತಕ್ಷಣವೇ ಶಿರಸಿ ಸಹಾಯಕ ಕಮೀಶನರ್ ಗೆ ಸ್ಥಳಕ್ಕೆ ಭೇಟಿ ನೀಡುವಂತೆ ಡಿಸಿ ತಿಳಿಸಿದ್ದಾರಂತೆ‌.

ಒಟ್ನಲ್ಲಿ, ಪಾಳಾದ ದೊಡ್ಡ ಕೆರೆ ಈ ಭಾಗದ ರೈತರಿಗೆ ಆತಂಕ ತಂದಿಟ್ಟಿದೆ. ಸಂಪೂರ್ಣ ಭರ್ತಿಯಾಗಿರೋ ಕೆರೆ ಇನ್ನೇನು ಮತ್ತಷ್ಟು ಮಳೆಯಾದ್ರೆ, ಒಡೆದು ಹೋಗುವ ಎಲ್ಲಾ ಸಾಧ್ಯತೆಯಿದ್ದು ಸಾವಿರಾರು ರೈತರಿಗೆ ಮಾರಕವಾಗಲಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಅನ್ನೋದು ರೈತರ ಆಗ್ರಹವಾಗಿದೆ.

error: Content is protected !!