ಭಟ್ಕಳದಲ್ಲಿ ಮಹಾಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮನೆಯಡಿ ಸಿಲುಕಿದ ನಾಲ್ವರು..!


ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಂತೆ, ಭಟ್ಕಳ ತಾಲೂಕಿನಲ್ಲಿ ಮಹಾಮಳೆ ಆತಂಕದ ಛಾಯೆ ಮೂಡಿಸಿದೆ. 

ಮಳೆಯಿಂದಾಗಿ ಹಲವು ಭಾಗಗಳಲ್ಲಿ ಅವಘಡಗಳು ಉಂಟಾಗಿದೆ‌. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಹೀಗೆ ಕುಸಿದ ಗುಡ್ಡದ ಅಡಿಯಲ್ಲಿ ಇರುವ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ. ಲಕ್ಷ್ಮೀ ನಾಯ್ಕ, ಅವರ ಮಗಳು ಲಕ್ಷ್ಮೀ, ಮಗ ಅನಂತ್ ನಾಯ್ಕ್ (32), ಇವರ ಸಹೋದರಿಯ ಮಗ ಪ್ರವೀಣ್ ನಾಯ್ಕ (20) ಈ ಮನೆಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

ತಡರಾತ್ರಿ ಸುರಿದ ಭರ್ಜರಿ ಮಳೆಯಿಂದ ಅವಘಡ ಉಂಟಾಗಿದೆ. ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಇಲ್ಲಿಗೆ ಜೆಸಿಬಿ ಕೂಡ ಆಗಮಿಸಲು ತಡವಾಯಿತು. ಸ್ಥಳೀಯರೇ ಸೇರಿ ಮನೆಯವರ ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಇದೀಗ ಸ್ಥಳಕ್ಕೆ ಜೆಸಿಬಿ ಬಂದಿದ್ದು, ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಿದೆ.

error: Content is protected !!