ವಿಜಯಪುರ: ಬಿಜೆಪಿ ಮುಖಂಡ ಪ್ರವೀಣ್ ಕೊಟ್ಟಾರು ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಖುದ್ದು ಬಿಜೆಪಿ ಪಕ್ಷದಲ್ಲಿ ತಮ್ಮದೇ ಪಕ್ಷದ ಆಡಳಿತದ ವಿರುದ್ಧ ಕಾರ್ಯಕರ್ತರು ಸಿಡಿದೇಳುತ್ತಿದ್ದಾರೆ. ಜೊತೆಗೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಪದಾಧಿಕಾರಿಗಳು ತಮ್ಮ ಒಡಲಾಳದ ಆಕ್ರೋಶ ಹೊರಹಾಕುತ್ತಿದ್ದಾರೆ.
ಹಿಂಡು ಹಿಂಡು ರಾಜೀನಾಮೆ..!
ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಹಾಗೂ ಒಂಭತ್ತು ಮಂಡಳಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಂದೀಪ ಪಾಟೀಲ್ ನೇತೃತ್ವದಲ್ಲಿ ರಾಜಿನಾಮೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳಗೆ ರಾಜಿನಾಮೆ ಸಲ್ಲಿಸಿರೋ ಪದಾಧಿಕಾರಿಗಳು ಈ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರಾಜೀನಾಮೆ ಪತ್ರದಲ್ಲೇನಿದೆ..?
ಇನ್ನು ಬಿಜೆಪಿ ಪದಾಧಿಕಾರಿಗಳು ನೀಡಿರೋ ರಾಜೀನಾಮೆ ಪತ್ರದಲ್ಲಿ “ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸವಿದೆ, ಬಲಿಷ್ಟ ಸಿದ್ದಾಂತಕ್ಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತಹದ್ದು ಇತಿಹಾಸವಾಗಿದೆ. ಆದರೆ, ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತದೆ ಹಿಂದೆಲ್ಲ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ.
ಪ್ರತೀ ಸಾರಿ ಕಾರ್ಯಕರ್ತರ ಹತ್ಯೆ ನಡೆದಾಗ
ಕಠಿಣ ಕ್ರಮ ಎನ್ನುವ ಭರವಸೆ, ಭರವಸೆಯಾಗಿಯೇ ಉಳಿದಿರುವ ಕಾರಣ ವಿಜಯಪುರ ಜಿಲ್ಲಾ ಸಮಿತಿ ಹಾಗೂ ಒಂಬತ್ತು ಮಂಡಳಗಳ ಪೂರ್ವ ಸಮಿತಿಯವರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಅಂತಾ ರಾಜೀನಾಮೆ ಪತ್ರದಲ್ಲಿ ಬರೆದಿರೋ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಿಗೆ ಪತ್ರ ಸಲ್ಲಿಸಿದ್ದಾರೆ.