ಮುಂಡಗೋಡ: ತಾಲೂಕಿನ ನಾಗನೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರ ಹಾವು ಏಣಿ ಆಟ ಮುಂದುವರೆದಿದೆ. ಅಧ್ಯಕ್ಷ ಸುನಿಲ್ ವಾಗು ಸಳಕೆ ಜುಲೈ 16 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಈ ಮೂಲಕ ಮತ್ತೊಂದು ಆಟ ಶುರುವಿಟ್ಟು ಸೆಡ್ಡು ಹೊಡೆದಿದ್ದಾರೆ.
ಮದ್ಯಂತರ ಆದೇಶ..!
ಅಂದಹಾಗೆ, ನಾಗನೂರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ ಕೆಲವು ಸದಸ್ಯರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗದ ಸಹಾಯಕ್ ಆಯುಕ್ತರು ಜುಲೈ 25 ರಂದು ಸಭೆ ನಡೆಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 16 ರಂದು ಸುನಿಲ್ ಸಳಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿದೆ.
ಕೋರ್ಟ್ ಹೇಳಿದ್ದೇನು..?
ನಾಗನೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸುನೀಲ ವಾಗು ಸಳಕೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್ ಧಾರವಾಡ ಪೀಠವು ಮಧ್ಯಂತರ ಆದೇಶ ಮಾಡಿದೆ. ಮಧ್ಯಂತರ ಆದೇಶದಲ್ಲಿ 25/07/2022 ರ ಸಭೆಗೆ ಅನುಮತಿ ನೀಡಿದ್ದು, ಸದರಿ ಅವಿಶ್ವಾಸ ಗೊತ್ತುವಳಿ ಮಂಡನೆ ಪಲಿತಾಂಶವು ಹೈಕೋರ್ಟಿನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿ ಆರ್.ದೇವದಾಸ್ ತೀರ್ಪು ಪ್ರಕಟಿಸಿದ್ದಾರೆ. ಹಾಗೆಯೇ, ಶಿರಸಿ ವಿಭಾಗದ ಸಹಾಯಕ ಆಯುಕ್ತರು ಇವರಿಗೆ 25/07/2022 ರಂದು ನಡೆಯುವ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಯ ಪಲಿತಾಂಶವನ್ನು ಘೋಷಣೆ ಮಾಡಬಾರದು ಮತ್ತು ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಯ ಠರಾವು ಅನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ ಮುಂದೆ ಹಾಜರು ಪಡಿಸಲು ಸೂಚಿಸಿದ್ದಾರೆ. ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಚೇತನ್ ಲಿಂಬಿಕಾಯಿ ವಾದ ಮಂಡಿಸಿದ್ದರು.
ಹೈಕೋರ್ಟ್ ಮಧ್ಯಂತರ ಆದೇಶದಿಂದಾಗಿ, ಅಧ್ಯಕ್ಷ ಸುನಿಲ್ ಸಳಕೆ, ಜುಲೈ 16 ರಂದು ನೀಡಿದ್ದ ರಾಜೀನಾಮೆ ಪತ್ರವನ್ನು ವಾಪಸ್ ಪಡೆದು, ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.