ಮತ್ತೆ ಕೋಮಾ ಸ್ಥಿತಿಗೆ ತಲುಪೇ ಬಿಡ್ತಾ ಮುಂಡಗೋಡ ಕಾಂಗ್ರೆಸ್..? ಅಷ್ಟಕ್ಕೂ ಎಲ್ಲಿದ್ದಾರೆ ಪ್ರಶಾಂತಣ್ಣ..?

ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಅನ್ನೋದು ಕೋಮಾ ಸ್ಥಿತಿಗೆ ತಲಪೇ ಬಿಡ್ತಾ..? ಸದ್ಯದ ಪರಿಸ್ಥಿತಿ ನೋಡಿದ್ರೆ ಹಾಗೇ ಅನ್ನಿಸ್ತಿದೆ. ತಾಲೂಕಿನಲ್ಲಿ ಒಂದೊಳ್ಳೆ ಅವಕಾಶ ಹೊಂದಿದ್ದ ಕೈ ಪಡೆಗೆ, ಸಿಕ್ಕ ಅವಕಾಶ ಬಳಸಿಕೊಳ್ಳುವ ಯಾವೊಂದೂ ಕಾರ್ಯಗಳೂ ಜಾರಿಯಾಗಲೇ ಇಲ್ಲ ಅನ್ನೋದು ಖುದ್ದು ಅದೇ ಪಕ್ಷದ ನಿಷ್ಟಾವಂತರನ್ನು ಚಿಂತೆಗೀಡು ಮಾಡಿದೆ. ಇನ್ನು, ನಾನೇ ಅಭ್ಯರ್ಥಿ ಅಂತಾ ಗುಂಗು ಹಿಡಿಸಿ, ಅದೇಲ್ಲೋ ಕುಳಿತು ರಿಮೋಟ್ ಒತ್ತುವ ಪ್ರಶಾಂತಣ್ಣ, ಅದೇಷ್ಟೋ ದಿನಗಳಿಂದ ಕ್ಷೇತ್ರದಲ್ಲಿ ಮುಖ ತೋರಿಸಿಲ್ಲ‌. ಹೀಗಾಗಿ, ಪಕ್ಷ ಕ್ಷೇತ್ರದಲ್ಲಿ ವಿಲ ವಿಲ ಅಂತಿದೆ.

ಗಟ್ಟಿತನ..!
ಅಸಲು, ಮುಂಡಗೋಡ ತಾಲೂಕಿನಲ್ಲಿ ಹಲವರ ಶ್ರಮದಿಂದ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಲೂಕಿನ ಒಟ್ಟೂ 16 ಗ್ರಾಮ ಪಂಚಾಯತಿಗಳ‌ ಪೈಕಿ ಬರೋಬ್ಬರಿ 7 ರಲ್ಲಿ ಕಾಂಗ್ರೆಸ್ ಬಾವುಟ ಹಾರಿತ್ತು. ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಸತ್ಯ ಅಂದ್ರೆ ಇದೇಲ್ಲ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಹೋದ ನಂತ್ರ, ಇನ್ನೇನು ಕಾಂಗ್ರೆಸ್ ಕತೆ ಮುಗಿದೇ ಹೋಗಿದೆ ಅನ್ನೋ ಸಂದರ್ಭದಲ್ಲೇ ಬಂದಿದ್ದ ಫಲಿತಾಂಶವಾಗಿತ್ತು. ತಾಲೂಕಿನಲ್ಲಿ ಕೈ ಪಡೆ ಅಂತಹದ್ದೊಂದು ಗಟ್ಟಿತನ ಬಿಟ್ಟುಕೊಟ್ಟಿರಲೇ ಇಲ್ಲ. ಆದ್ರೆ ಆ ನಂತರದಲ್ಲಿ ಬಂದ ಪ್ರಶಾಂತಣ್ಣ ಇಂತಹ ಮೈದಾನವನ್ನು ಬಳಸಿಕೊಳ್ಳುವದರಲ್ಲಿ ಎಡವಿಬಿಟ್ರಾ..?

 

ಪಕ್ಷಾಂತರ..!
ಯಾಕಂದ್ರೆ, ತಾಲೂಕಿನ 7 ಗ್ರಾಮ‌ ಪಂಚಾಯತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ “ಕೈ” ಬೆಂಬಲಿತರು ಈಗ ಒಬ್ಬೊಬ್ಬರಾಗಿ ಕೈ ಯಿಂದ ಕೊಸರಿಕೊಂಡು, ಕೇಸರಿ ಕಮಲ ಮುಡಿಯುತ್ತಿದ್ದಾರೆ. ಬಿಜೆಪಿ ನಡೆಸಿದ ಆಂತರಿಕ ಸರ್ವೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದ ಗಳಿಗೆಯಿಂದ ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ, ಪ್ರತೀ ಬೂತ್ ಮಟ್ಟದಲ್ಲಿ, ಪ್ರತೀ ವಾರ್ಡ್ ಮಟ್ಟದಲ್ಲೂ ತಮ್ಮ ಝಂಡಾ ಹಾರಿಸಲೇ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಬಿಜೆಪಿ, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ. ಆದ್ರೆ, ಬಿಜೆಪಿಯ ಹೊಡೆತಕ್ಕೆ ಠಕ್ಕರ್ ಕೊಡಲು ಮುಂಡಗೋಡ ತಾಲೂಕಿನ ಕಾಂಗ್ರೆಸ್ ನಲ್ಲಿ ಯಾರೂ ರೆಡಿಯಾಗಿಲ್ಲ. ಯಾಕಂದ್ರೆ, ಹಾಗೆ ಪಾಪ ಇಲ್ಲಿನ ಲೋಕಲ್ ಲೀಡರುಗಳಿಗೆ ಬೆನ್ನು ತಟ್ಟಿ “ನೀವು ಮಾಡಿ ನಾನು ನಿಮ್ಮ ಜೊತೆ ಇದ್ದೇನೆ” ಅಂತಾ ಹೇಳುವ ನಾಯಕರೇ ಈಗ ಕ್ಷೇತ್ರದಲ್ಲಿ ಇಲ್ಲವೆನೋ ಎನ್ನುವಂತಾಗಿದೆ‌.

ಬಾಚಣಕಿ ಪಂಚಾಯತಿ..!
ಅಂದಹಾಗೆ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಹುತೇಕ ಗೆದ್ದು ಬೀಗಿದ್ದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈಗ ಮಕಾಡೆ ಮಲಗಿದೆ. ಇತ್ತಿಚೆಗಷ್ಟೇ, ಬಿಜೆಪಿ ಇಂಟರ್ನಲ್ ಮಸಲತ್ತಿನ ಪರಿಣಾಮ, ಬಿಜೆಪಿ ಬೆಂಬಲಿತರ ಕೈಗೆ ಆಡಳಿತ ಸಿಕ್ಕಿದೆ. ಇಲ್ಲಿ ಜಗದೀಶ ಕುರುಬರ ಉರುಳಿಸಿದ ದಾಳಕ್ಕೆ ಕಾಂಗ್ರೆಸ್ ವಿಲ ವಿಲ ಒದ್ದಾಡಿದೆ.

ಅದ್ರಂತೆ, ಸದ್ಯ ನಾಗನೂರು ಪಂಚಾಯತಿಯಲ್ಲಿ ಇದ್ದ ಕೈ ಬೆಂಬಲಿತರ ಆಟ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಇನ್ನು ಈ ಭಾಗದ ಕಾಂಗ್ರೆಸ್ ಮುಖಂಡ ಕೃಷ್ಣ ಹಿರೇಹಳ್ಳಿಯವರು ಅವತ್ತು ತಮ್ಮ ಪ್ರಾಬಲ್ಯ ಸ್ಥಾಪಿಸಲು, ಇನ್ನಿಲ್ಲದ ಕಸರತ್ತು ನಡೆಸಿದ್ದರು. ಬಿಜೆಪಿ ಪ್ರಾಬಲ್ಯದ ನಡುವೆಯೇ “ಕೈ” ಮೇಲೇಳುವಂತೆ ಮಾಡಿದ್ದರು. ಆದ್ರೆ, ಯಾವಾಗ ಕೃಷ್ಣ ಹಿರೇಹಳ್ಳಿಯವರನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿದ್ರೋ ಅವತ್ತಿನಿಂದಲೇ ಸಂಪೂರ್ಣ ಸೈಲೆಂಟಾಗಿರೋ ಹಿರೇಹಳ್ಳಿ, “ಏನಾದ್ರೂ ಮಾಡ್ಕೊಳ್ಳಿ” ಅಂತಾ ಸುಮ್ಮನಾಗಿದ್ದಾರೆ. ಪರಿಣಾಮ, ನಾಗನೂರು ಪಂಚಾಯತಿಯ ಕಾಂಗ್ರೆಸ್ ಬೆಂಬಲಿತರೂ ಕೂಡ ಬಿಜೆಪಿ ಪಡಸಾಲೆಗೆ ಒಂದು ಕಾಲು ಇಟ್ಟಾಗಿದೆ‌. ಅಲ್ಲಿ ಬಹುತೇಕ ಬಿಜೆಪಿ ಬೆಂಬಲಿತರೇ ಚುಕ್ಕಾಣಿ ಹಿಡಿಯೋದು ಖಾತ್ರಿಯಾಗಿದೆ.

ಮರುಗಿದೆ ಮಳಗಿ..!
ಇನ್ನು ಮಳಗಿಯಲ್ಲಿಯೂ ಆಪರೇಶನ್ ಕಮಲದ ಹೊಡೆತಕ್ಕೆ ಕೈ ಬಳಗ ನಲುಗಿದೆ. ಇಲ್ಲಿಯೂ ಸಚಿವ ಶಿವರಾಮ್ ಹೆಬ್ಬಾರ್ ಅಂಗಳಕ್ಕೆ ಮೂವರು ಗ್ರಾಮ ಪಂಚಾಯತಿ ಸದಸ್ಯರು ಬಂದು ನಿಂತಿದ್ದಾರೆ. ಬಿಜೆಪಿ ಸೇರ್ಪಡೆಗೊಂಡು ಇನ್ನೇನು ಮಳಗಿಯಲ್ಲೂ ಕಾಂಗ್ರೆಸ್ ಕತೆ ಅಷ್ಟಕ್ಕಷ್ಟೇ ಎನ್ನುವಂತೆ ಮಾಡಿದ್ದಾರೆ. ದುರಂತ ಅಂದ್ರೆ ಇಲ್ಲೇಲ್ಲ ಪಾಪ ಪ್ರಶಾಂತಣ್ಣರ ರಿಮೊಟ್ ಗೆ ನೆಟವರ್ಕ್ ಸಿಗದೆ ವರ್ಕೇ ಆಗುತ್ತಿಲ್ಲ‌. ಹೀಗಾಗಿ, ಗಪ್ ಚುಪ್ ಆಗಿದ್ದಾರೆ ಪ್ರಶಾಂತಣ್ಣ.

ವಿ.ಎಸ್.ಪಾಟೀಲರ ಕತೆ..?
ಅಸಲು, ಮುಂಡಗೋಡ ಕಾಂಗ್ರೆಸ್ ನ ಪಡಸಾಲೆಯಲ್ಲಿ ಕಾರ್ಯಕರ್ತರಿಗೆ ಅದೊ‌ಂದು ಮಾತು ಮರುಭೂಮಿಯಲ್ಲಿ ಓಯಾಸಿಸ್ಸು ಸಿಕ್ಕ ಅನುಭವ ಮೂಡಿಸಿತ್ತು. ಮಾಜಿ ಸಚಿವ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾತು ಕ್ಷೇತ್ರದಲ್ಲಿ ಹರಿದಾಡಿದ ಕ್ಷಣ ಒಂದಿಷ್ಟು ಹುರುಪು ಬಂದಿತ್ತು. ಆದ್ರೆ, ಅದ್ಯಾಕೋ ಗೊತ್ತಿಲ್ಲ. ವಿ.ಎಸ್.ಪಾಟೀಲರು ಸದ್ಯ ಮೌನವಾಗಿದ್ದಾರೆ. “ನಾನು ಕಾಂಗ್ರೆಸ್ ಸೇರೋದಿಲ್ಲಪ್ಪಾ” ಅನ್ನೋ ಮಾತಾಡಿದ್ದಾರೆ. ಆದ್ರೆ, ಒಳಗೊಳಗಿನ ತಂತ್ರಗಳು ಅದೇನಿದೆಯೋ ಗೊತ್ತಿಲ್ಲ. ಆದ್ರೆ, ಸದ್ಯಕ್ಕಂತೂ ಕಾಂಗ್ರೆಸ್ ಮನೆಗೆ ನಾನು ಹೋಗಲ್ಲ ಅಂದಿದ್ದಾರೆ.

ಕಾರ್ಯಕರ್ತರ ಸ್ಥಿತಿಯೇನು..?
ಈ ಕಾರಣಕ್ಕಾಗೇ, ಮುಂಡಗೋಡ ತಾಲೂಕಿನ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಅಕ್ಷರಶಃ ಕಂಗಾಲಾಗಿದ್ದಾರೆ‌. ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗ್ರೂಪ್ ಗಳಲ್ಲಿ ನಿತ್ಯವೂ ಇದೇ ಚರ್ಚೆ ನಡೀತಿದೆ. ಮುಂದೆ ನಮ್ಮ ಗತಿಯೇನು..? ಅನ್ನೋ ಪ್ರಶ್ನೆ ಮುಂದಿಟ್ಟುಕೊಂಡು ಚರ್ಚಿಸ್ತಿದಾರೆ ಕಾರ್ಯಕರ್ತರು‌. ಆದ್ರೆ, ಇದ್ಯಾವುದೂ ನಾನೇ ಅಭ್ಯರ್ಥಿ ಅಂತಾ ಕ್ಷೇತ್ರದಲ್ಲಿ ತಿರುಗಾಡಿ ಹೋಗಿರೋ ಪ್ರಶಾಂತಣ್ಣನವರ ಗಮನಕ್ಕೆ ಬರ್ತಾನೇ ಇಲ್ವಾ..? ಇದೇ ಈಗಿರೋ ಎಲ್ಲರ ಪ್ರಶ್ನೆ.

error: Content is protected !!