ಇಂದೂರಿನ ಈ ಬಡ ಕುಟುಂಬದ ಕೂಗು ಯಾರಿಗೂ ಕೇಳುತ್ತಿಲ್ಲವಾ..? ಗ್ರಾಪಂ ನಿರ್ಲಕ್ಷಕ್ಕೆ ಬಡವರ ಬದುಕೇ ತತ್ತರ..!


ಇಂದೂರು ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಇಂದೂರಿನ ಅದೊಂದು ಬಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಕಳೆದ‌ ಮೂರು ವರ್ಷಗಳಿಂದ ಜೀವ ಅಂಗೈಯಲ್ಲಿ ಹಿಡಿದು ಬದುಕುತ್ತಿದೆ. ಆಗಲೋ ಈಗಲೋ ಬೀಳುವ ಮನೆಯಲ್ಲಿ ಬದುಕು ನಡೆಸುತ್ತಿದೆ. ನಿನ್ನೆ ರಾತ್ರಿಯೂ ಮಳೆಯಿಂದ ಅರ್ಧಕ್ಕರ್ದ ಗೋಡೆ ಕುಸಿದು ಬಿದ್ದಿದ್ದು ಮತ್ತಷ್ಟು ಆತಂಕದಲ್ಲಿ ಬಾಳುವಂತಾಗಿದೆ.

ಹೌದು, ಇಂದೂರಿನ ಪ್ಲಾಟ್ ಏರಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಮನೆಯಿಲ್ಲದೇ ಮುರುಕು ಮನೆಯಲ್ಲಿ ವಾಸಿಸುತ್ತಿರೋ ಈ ಕುಟುಂಬ, ಈಗ ಅಕ್ಷರಶಃ ಆತಂಕದಲ್ಲಿದೆ. ಕಲ್ಪನಾ ಕಲಿವೀರ್ ಕಟ್ಟಿಮನಿ ಎಂಬುವ ಬಡ ಕುಟುಂಬದ ವ್ಯಥೆ ಹೇಳತೀರದ್ದಾಗಿದೆ. ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರೋ ಮಳೆ ಈ ಕುಟುಂಬಕ್ಕೆ ಮತ್ತಷ್ಟು ಜೀವ ಹಿಂಡಿದೆ. ನಿನ್ನೆ ರಾತ್ರಿ ಮಳೆರಾಯನ ಅರ್ಭಟ ಗಾಯದ ಮೇಲೆ ಬರೆ ಎಳೆದಿದೆ. ಹಾಗೋ ಹೀಗೋ ಬದುಕುತ್ತಿದ್ದ ಮನೆ ಮತ್ತೆ ಮುರಿದು ಬಿದ್ದಿದೆ.

ಮನೆ ಕೊಡಲಿಲ್ಲ..!
ಕಳೆದ ಮೂರು ವರ್ಷಗಳಿಂದ ಇಲ್ಲಿನ ಗ್ರಾಮ ಪಂಚಾಯತಿಗೆ ಮನೆ ಕೊಡಿ, ಮನೆ ಕೊಡಿ ಅಂತಾ ಎಡತಾಕುತ್ತಿರೊ ಈ ಕುಟುಂಬಕ್ಕೆ ಯಾರೂ ಕ್ಯಾರೇ ಅಂದಿಲ್ಲವಂತೆ. ನಾವು ಅದೇಷ್ಟೇ ಬೇಡಿಕೊಂಡ್ರೂ ನಮಗೆ ಮನೆ ಕೊಟ್ಟಿಲ್ಲ, ಮನೆ ಕೊಟ್ಟಿದ್ದೇವೆ ಅಂದ್ರು, ಆಮೇಲೆ ಅದು ಬ್ಲಾಕ್ ಆಗಿದೆ ಅಂತಾ ಹೇಳಿ ಕಳಿಸಿದ್ದಾರೆ. ಹೀಗಾಗಿ, ಸಾಲ ಸೋಲ ಮಾಡಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದ ಈ ಕುಟುಂಬಕ್ಕೆ ಈಗ ಮತ್ತದೇ ಆತಂಕದ ಛಾಯೆ ಆಕ್ರಮಿಸಿಕೊಂಡಿದೆ.

ಕಾಲಿಡಲು ಆಗದ ಸ್ಥಿತಿ..!
ಇನ್ನು, ಕಳೆದ ಒಂದು ವಾರದಿಂದ ಸುರಿಯುತ್ತಿರೋ ಮಹಾಮಳೆಗೆ ಈ ಕುಟುಂಬದ ಪುಟ್ಟ ಮನೆಯಲ್ಲಿ ಈಗ ಕಾಲಿಡಲೂ ಆಗುತ್ತಿಲ್ಲ. ಮನೆಯ ತುಂಬಾ ನೀರೇ ನೀರು, ಕೆಸರು, ವಿಷ ಜಂತುಗಳೇ ತುಂಬಿಕೊಳ್ಳುತ್ತಿವೆ. ಅಸಲು, ರಾತ್ರಿ ಮಲಗಲೂ ಇವ್ರಿಗೆ ಜಾಗವಿಲ್ಲ. ಅಡುಗೆ ಮಾಡಿ ಊಟ ಮಾಡೋಣವೆಂದ್ರೂ ಆಗುತ್ತಿಲ್ಲವಂತೆ. ಹೀಗಾಗಿ, ಕುಟುಂಬಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎಲೆಕ್ಷನ್ ಹೊತ್ತಲ್ಲಿ ಬಂದು ಕಾಲು ಬಿದ್ದು ಮತ ಕೇಳುವ ರಾಜಕಾರಣಿಗಳೇ ಎಲ್ಲಿದ್ದಿರಿ ಅಂತಾ ಪ್ರಶ್ನಿಸ್ತಿದಾರೆ.

ಆ ಪಿಡಿಓ ಛೇ..!
ಅದ್ರಲ್ಲೂ ಈ ಹಿಂದೆ ಇಲ್ಲಿ ಕಾರ್ಯ ನಿರ್ವಹಿಸಿದ್ದ ಪಿಡಿಓ ಸಾಹೇಬ್ರಿಗೆ ಪಾಪ, ತನ್ನ ಗ್ರಾಮದ ಬಡವರ ಕಷ್ಟ ಯಾವತ್ತೂ ಕಂಡಿರಲೇ ಇಲ್ಲ ಬಿಡಿ, ಈಗ ಆ ಪಿಡಿಓ ಇಲ್ಲಿಂದ ಬೇರೆಡೆಗೆ ಎತ್ತಂಗಡಿಯಾಗಿದ್ದಾರೆ. ಹೀಗಾಗಿ, ಇಲ್ಲಿನ ಅದೇಷ್ಟೋ ಬಡ ಕುಟುಂಬಗಳು ಈಗಲಾದ್ರೂ ನಮಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗಬಹುದು ಅನ್ನೋ ಆಶಯದಲ್ಲಿವೆ. ಈಗ ನೂತನವಾಗಿ ಬಂದಿರೋ ಪಿಡಿಓ ಗಮನಿಸಬೇಕಿದೆ.

ಹೆಬ್ಬಾರ್ ಸಾಹೇಬ್ರಿಗೂ ಮನವಿ..!
ಅಂದಹಾಗೆ, ಇಂದು ಸಚಿವ ಹೆಬ್ಬಾರ್ ಸಾಹೇಬ್ರು ತಮ್ಮ ದಂಡಿನೊಂದಿಗೆ ಇಂದೂರಿಗೆ ಆಗಮಿಸಿದ್ರು. ಆ ವೇಳೆ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದ್ರೆ, ಸಾಹೇಬ್ರು ಮಾತ್ರ ಆಯ್ತಮ್ಮ ನಾನು ನೋಡ್ತಿನಿ ಅಂತಾ ಹೇಳಿ ಭರವಸೆ ನೀಡಿ ಕಳಿಸಿದ್ದಾರಂತೆ. ಆದ್ರೆ, ಹಾಗೆ ನೀಡಿರೋ ಭರವಸೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗತ್ತೋ ಗೊತ್ತಿಲ್ಲ. ಕುಟುಂಬ ಮಾತ್ರ ಮತ್ತದೇ ಭರವಸೆಯಲ್ಲಿಯೇ ಅದೇ‌ ಮನೆಯಲ್ಲಿ ಬದುಕುತ್ತಿದೆ. ಹೀಗಿದ್ದಾಗ, ಏನಾದ್ರೂ ಹೆಚ್ಚೂ ಕಡಿಮೆಯಾದ್ರೆ ಯಾರು ಹೊಣೆ..?

error: Content is protected !!