ಮುಂಡಗೋಡ; ತಾಲೂಕಿನಲ್ಲಿ ಚಿರತೆಯ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಚಿರತೆ, ಹುಲಿಗಳ ಬಗೆಗಿನ ಬಗೆ ಬಗೆಯ ವದಂತಿಗಳು ಎಲ್ಲೆಡೆ ಹರಡುತ್ತಿವೆ. ಹೀಗಾಗಿ, ಜನ್ರು ಹೊಲ ಗದ್ದೆಗಳಿಗೆ ಹೋಗಲು ಭಯ ಪಡುವಂತಾಗಿದೆ. ಮಜ್ಜಿಗೇರಿಯಲ್ಲಿ ಶುಕ್ರವಾರ ಚಿರತೆ ಕುರಿ ತಿಂದು ಹಾಕಿದ ಘಟನೆ ಬೆಳಕಿಗೆ ಬಂದ ನಂತರವಂತೂ ಈ ಭಾಗದ ಜನರ ಭಯ ಮತ್ತಷ್ಟು ದುಪ್ಪಟ್ಟಾಗಿದೆ. ಹೊರಗೆ ಹೋಗಲೂ ಕೂಡ ಭಯ ಪಡುವಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳು ಭಯ ಪಡೋದು ಬೇಡ, ಎಚ್ಚರಿಕೆ ಇಂದ ಇರಿ ಅಂತಾ ಜನ್ರಿಗೆ ಮನವಿ ಮಾಡಿದ್ದಾರೆ. ಹಾಗೇನಾದ್ರೂ ನಿಮಗೆ ಅಂತಹ ಕಾಡು ಪ್ರಾಣಿಗಳು ಕಂಡ್ರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ ಅಂದಿದ್ದಾರೆ.
ಸುಳ್ಳು ವದಂತಿಗಳು..!
ಮಜ್ಜಿಗೇರಿಯಲ್ಲಿ ಶುಕ್ರವಾರ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ಹಾಗೆ ಘಟನೆ ನಡೆದ ನಂತರವಂತೂ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಬಗೆ ಬಗೆಯ ವದಂತಿಗಳು ಹರಿದಾಡತೊಡಗಿವೆ. ಅಲ್ಲಿ ಬಂತು, ಇಲ್ಲಿ ಕಾಣ್ತು ಅಂತಾ ಅದ್ಯಾವುದೊ ಬೇರೆ ಬೇರೆ ಕಡೆ ನಡೆದಿರೊ ಘಟನೆಗಳ ಪೋಟೋಗಳನ್ನು ಶೇರ್ ಮಾಡಲಾಗ್ತಿದೆ. ಮಜ್ಜಿಗೇರಿ, ಅರಶೀಣಗೇರಿ, ಬಾಚಣಕಿ, ನ್ಯಾಸರ್ಗಿ, ಅತ್ತಿವೇರಿ, ವಡಗಟ್ಟಾ ಭಾಗಗಳಲ್ಲಿ ಚಿರತೆ ಕಂಡಿದೆ ಅನ್ನೋ ವದಂತಿಗಳು ಹರಿದಾಡ್ತಿವೆ.
ಅತ್ತ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಡಿಭಾಗದ ಕೋಣನಕೇರಿ, ಶ್ಯಾಬಾಳ ಗ್ರಾಮಗಳ ಕಾಡುಗಳಲ್ಲಿ ಹುಲಿ ಹಾಗೂ ಚಿರತೆ ಬಂದಿದೆ ಅನ್ನೋ ವಾಟ್ಸಾಪ್ ಮೆಸೇಜ್ಗಳು ಹರಿದಾಡ್ತಿವೆ. ಅಲ್ದೆ ನಾಲ್ಕೈದು ಜನರ ಮೇಲೆ ದಾಳಿ ಮಾಡಿದೆ ಅಂತೇಲ್ಲ ಅಂತೆ, ಕಂತೆಗಳನ್ನು ಪೋಟೋ ಸಮೇತ ಶೇರ್ ಮಾಡಲಾಗ್ತಿದೆ.
ಹೀಗಾಗಿ, ಇತ್ತ ಮುಂಡಗೋಡ ತಾಲೂಕಿನ ಹಲವು ಗ್ರಾಮಗಳ ರೈತರು ತಮ್ಮ ಗದ್ದೆಗಳಿಗೆ ತೆರಳಲೂ ಕೂಡ ಭಯ ಪಡುವಂತಾಗಿದೆ.
ಕುರಿ ಬಲಿ ಪಡೆದದ್ದು ಚಿರತೆನಾ..?
ಅಸಲು, ಮಜ್ಜಿಗೇರಿಯ ಕಾಡಿನಲ್ಲಿ ಕುರಿಗಳು ಸಾವು ಕಂಡ ಪ್ರಕರಣದಲ್ಲಿ, ಹಾಗೆ ಕುರಿಗಳನ್ನು ಬಲಿ ಪಡೆದದ್ದು ನಿಜಕ್ಕೂ ಚಿರತೆನಾ..? ಅಷ್ಟಕ್ಕೂ, ಬರೋಬ್ಬರಿ 12 ಕುರಿಗಳ ಪೈಕಿ 6 ಕುರಿಗಳ ಮೃತದೇಹಗಳು ಪತ್ತೆಯಾಗಿವೆ. ಹೆಚ್ಚೂ ಕಡಿಮೆ 6 ಕುರಿಗಳು ನಾಪತ್ತೆಯಾಗಿವೆ. ಹೀಗಾಗಿ, ಮೇಲ್ನೋಟಕ್ಕೆ ಇದೊಂದು ಯಾವುದೋ ಪ್ರಾಣಿಗಳು ಗುಂಪಾಗಿ ಮಾಡಿರೊ ದಾಳಿಯ ಹಾಗೆ ಕಾಣ್ತಿದೆ. ತಜ್ಞರ ಪ್ರಕಾರ ಚಿರತೆ ತನ್ನ ಹೊಟ್ಟೆ ಪಾಡಿಗಾಗಿ, ಏಕಕಾಲಕ್ಕೆ ಹಿಂಡು ಹಿಂಡು ಪ್ರಾಣಿಗಳನ್ನ ಬೇಟೆಯಾಡಲ್ಲ. ತನ್ನ ಹಸಿವಿಗೆ ತಕ್ಕಂತೆ ಒಂದೋ ಅಥವಾ ಎರಡೋ ಕುರಿಗಳನ್ನು ಬೇಟೆಯಾಡಿ ತಿನ್ನುವ ಸಾಧ್ಯತೆ ಅಷ್ಟೆ ಇರತ್ತೆ. ಆದ್ರೆ, ಮಜ್ಜಿಗೇರಿಯಲ್ಲಿ ಬಲಿಯಾಗಿದ್ದು ಬರೋಬ್ಬರಿ 12 ಕುರಿಗಳು. ಹಾಗಾದ್ರೆ, ಅಲ್ಲಿ ಚಿರತೆಯೇ ದಾಳಿ ಮಾಡಿದೆಯಾ ಅನ್ನೋ ಬಗ್ಗೆ ಅನುಮಾನ ಶುರುವಾಗಿದೆ.
ಮರಣೋತ್ತರ ಪರೀಕ್ಷೆ..!
ಅಂದಹಾಗೆ, ಸದ್ಯ ಹಾಗೆ ಸತ್ತು ಬಿದ್ದಿರೋ ಕುರಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಶು ವೈದ್ಯರು ಇನ್ನೇನು ಮರಣೋತ್ತರ ಪರೀಕ್ಷೆಯ ವರದಿ ನೀಡ್ತಾರೆ. ಆ ವರದಿಯಲ್ಲಿ ಕುರಿಗಳ ಸಾವಿನ ಅಸಲೀಯತ್ತು ಬಹುತೇಕ ಗೊತ್ತಾಗಲಿದೆ.
ಒಟ್ನಲ್ಲಿ, ಬಾಚಣಕಿ, ಮಜ್ಜಿಗೇರಿ, ಅರಶಿಣಗೇರಿ, ಜೇನುಮುರಿ, ವಡಗಟ್ಟಾ, ಅತ್ತಿವೇರಿ ಭಾಗದಲ್ಲಿ ಸದ್ಯ ಆತಂಕದಲ್ಲಿರೋ ಜನ್ರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದೈರ್ಯ ತುಂಬಿದ್ದಾರೆ. ಹಾಗೇನಾದ್ರೂ ಒಂದುವೇಳೆ ಚಿರತೆ, ಹುಲಿಗಳಂತಹ ಕಾಡು ಪ್ರಾಣಿಗಳು ಕಣ್ಣಿಗೆ ಬಿದ್ರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಂತಾ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಮನವಿ ಮಾಡಿದ್ದಾರೆ.