ಮುಂಡಗೋಡ ಬಿಜೆಪಿಯಲ್ಲೀಗ “ರಾಜೀ”ನಾಮೆ ಪರ್ವ; ಅಷ್ಟಕ್ಕೂ, ಬದಲಾವಣೆಯ ಆಟದಲ್ಲಿ ಗೆಲ್ಲೋರು ಯಾರು..?

ಮುಂಡಗೋಡ: ಬಿಜೆಪಿಯಲ್ಲಿ ಬದಲಾವಣೆ ಪರ್ವ ಶುರುವಾಗಿದೆಯಾ..? ಒಳ ಒಪ್ಪಂದಗಳನ್ನು ಮೀರಿ, ಬಹುತೇಕ ಪಕ್ಷದ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ರಾಜೀನಾಮೆ ಮಸಲತ್ತುಗಳಿಗೆ ಬಿಜೆಪಿ ಪಕ್ಷದ ಕೋರ್ ಕಮೀಟಿ ಮೂಗುದಾಣ ಹಾಕಲು ಸನ್ನದ್ಧವಾಗಿದೆ ಅನ್ನೊ ಖಚಿತ ಮಾಹಿತಿ ಲಭ್ಯವಾಗಿದೆ.


15-15 ರ ಒಪ್ಪಂದ..!
ಅಂದಹಾಗೆ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹಲವು ಕಡೆ ಭರ್ಜರಿ ಜಯ ದಾಖಲಿಸಿದ್ದರು. ಹೀಗಾಗಿ, ಬಿಜೆಪಿ ಬೆಂಬಲಿತರಿಗೆ ಅಧಿಕಾರದ ಚುಕ್ಕಾಣಿ ಸಿಕ್ಕಿದ್ದ ಹಲವು ಗ್ರಾಪಂ ಗಳಲ್ಲಿ ಅವತ್ತು, ಅಧಿಕಾರದ ಹಂಚಿಕೆಯಲ್ಲಿ ಒಳ ಒಪ್ಪಂದಗಳಾಗಿದ್ದವು. ಅದ್ರಂತೆ ಬಹುತೇಕ 15-15 ರ ಮಾತುಕತೆ ಆಗಿದ್ದವು. ಆದ್ರೆ, ಹಾಗೆ ಒಪ್ಪಂದಗಳಿಗೆ ಒಳಪಟ್ಟು ಅಧ್ಯಕ್ಷ ಪದವಿಗೆ ಏರಿದ್ದ ಅಧ್ಯಕ್ಷರುಗಳು 15 ತಿಂಗಳು ಕಳೆದು ಹಳೇ ಮಾತಾದ್ರೂ, ಅಧಿಕಾರ ಹಸ್ತಾಂತರಿಸುವ ಗೋಜಿಗೇ ಹೋಗಿರಲಿಲ್ಲ. ಹೀಗಾಗಿ, ಆಯಾ ಗ್ರಾಮ ಪಂಚಾಯತಿಗಳಲ್ಲಿ ಪಟ್ಟಕ್ಕೇರಿದ್ದ ಬಿಜೆಪಿ ಬೆಂಬಲಿತರಲ್ಲೇ ಕಚ್ಚಾಟಗಳು ಹಾದಿ ಬೀದಿಗೆ ಬಂದಿದ್ದವು. ಕೆಲವು ಕಡೆ ಕೋರ್ಟ್ ಅಂಗಳಕ್ಕೂ ಹೋಗಿ ತಡೆಯಾಜ್ಞೆ, ತೆರವು ಆಜ್ಞೆ ಅಂತೇಲ್ಲ ರಂಪಾಟಗಳಿಗೆ ಕಾರಣವಾಗಿದ್ದವು. ಇದ್ರಿಂದ ತಾಲೂಕಿನ ಬಿಜೆಪಿ ಪಕ್ಷಕ್ಕೆ ಇನ್ನಿಲ್ಲದ ಮುಜುಗರವಾಗಿತ್ತು.

ಕೊರ್ ಕಮಿಟಿ ಸಭೆ..!
ಈ ಕಾರಣಕ್ಕಾಗೇ, ಮುಂಡಗೋಡ ಬಿಜೆಪಿಯಲ್ಲಿ ತಳಮಳಗಳಿಗೆ ಕಾರಣವಾಗಿದ್ದ ಅಧಿಕಾರ ಹಸ್ತಾಂತರದ ಕಚ್ಚಾಟಗಳಿಗೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿತ್ತು. ಇದನ್ನ ಹೀಗೇ ಬಿಟ್ರೆ, ಪಕ್ಷ ಸಂಘಟನೆಗೆ ಭಾರೀ ಕುತ್ತು ತರುವ ಸಾಧ್ಯತೆ ಅರಿತ ಹಲವರು, ಕೋರ್ ಕಮೀಟಿ ಸಭೆ ನಡೆಸಿ ಚರ್ಚಿಸಿದ್ರು. ಮುಖಂಡರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ನಾಗಭೂಷಣ ಹಾವಣಗಿ, ದೇವು ಪಾಟೀಲ್, ಉಮೇಶ್ ಬಿಜಾಪುರ ಸೇರಿದಂತೆ ಹಲವರು ವಿವೇಕ್ ಹೆಬ್ಬಾರ್ ಸಮ್ಮುಖದಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು ಅಂತಾ ತೀರ್ಮಾನಿಸಿದ್ರು. ಪರಿಣಾಮ ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರ ಮಾಡಲೇ ಬೇಕು ಅಂತಾ ನಿರ್ಣಯ ಪಾಸ್ ಮಾಡಿದ್ರು. ಹೀಗಾಗಿ, ಈಗ ರಾಜೀನಾಮೆಗಳ ಪರ್ವವೇ ಶುರುವಾಗಿದೆ.

ಚೌಡಳ್ಳಿ ಚಮತ್ಕಾರ..!
ಹಸ್ತಾಂತರದ ಒಳ ಒಪ್ಪಂದದಂತೆ ಚೌಡಳ್ಳಿ ಗ್ರಾಮ‌ ಪಂಚಾಯತಿ ಆದ್ಯಕ್ಷ ಪಟ್ಟಕ್ಕೆ ಏರಿದ್ದ ನೇತ್ರಾವತಿ ಬಿಸವಣ್ಣವರ್, ರಾಜೀನಾಮೆ ಕೊಡುವ ಸಂದರ್ಭ ಬಂದಾಗ ತಗಾದೆ ತೆಗೆದಿದ್ದರು. ಹೀಗಾಗಿ, ಅದೇ ಪಂಚಾಯತಿಯಲ್ಲಿ ಅಧ್ಯಕ್ಷ ಪದವಿಗೆ ಏರಲು ಬಿಳಿ ಶರ್ಟು ಹೊಲಿಸಿ ಇಟ್ಟಿದ್ದ ಮಂಜುನಾಥ್ ಕಟಗಿ ಸಿಡಿದೆದ್ದಿದ್ದರು. ಇಲ್ಲಿ, ಬಹುತೇಕ ಬಿಜೆಪಿಯಲ್ಲೇ ಎರಡೆರಡು ಬಣಗಳಾಗಿ, ಪರಸ್ಪರ ಕಚ್ಚಾಟ ಶುರುವಿಟ್ಟಿದ್ದರು. ಕೋರ್ಟ್ ಅಂಗಳಕ್ಕೂ ಹೋಗಿ ಬಂದಿದ್ದರು. ಹೀಗಾಗಿ, ಇದೊಂದು ಕೇಸ್ ತಾಲೂಕಾ ಬಿಜೆಪಿ ಬಳಗಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಆದ್ರೆ, ಕೋರ್ ಕಮಿಟಿ ಸಭೆಯಲ್ಲಿನ ನಿರ್ಧಾರಕ್ಕೆ ಒಪ್ಪಿ ನೇತ್ರಾವತಿ ಮೇಡಂ ನಿ‌ನ್ನೆಯಷ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದ್ರಂತೆ, ಇವತ್ತು ಚೌಡಳ್ಳಿ, ಮಲವಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪರಶುರಾಮ್ ತಹಶೀಲ್ದಾರ್ ಹಾಗೂ ಉಪಾಧ್ಯಕ್ಷ ನಿಂಗಪ್ಪ ಭದ್ರಾಪುರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಪಂ ಪೀಕಲಾಟಕ್ಕೂ “ರಾಜೀ”..!
ಅದ್ರಂತೆ, ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷರ ಬದಲಾವಣೆ ಗೊಂದಲಕ್ಕೂ ಕೋರ್ ಕಮಿಟಿ ಸಭೆಯಲ್ಲಿ “ರಾಜೀ” ಪಂಚಾಯ್ತಿ ನಡೆದಿದೆಯಂತೆ. ರೇಣುಕಾ ರವಿ ಹಾವೇರಿಯವರು ಇನ್ನೇನು ರಾಜೀನಾಮೆ ನೀಡೋದು ಬಹುತೇಕ ಫಿಕ್ಸ್ ಆಗಿದೆಯಂತೆ. ಹೀಗಾಗಿ, ಜಯಸುಧಾ ಬೋವಿವಡ್ಡರ ಮೇಡಂ ಬೀಸಿದ್ದ ರಾಜೀನಾಮೆ ಬಾಣ ಗುರಿ ಮುಟ್ಟಿದಂತಾಗಿದೆ. ಇನ್ನೇನು ಮುಂಡಗೋಡ ಪಟ್ಟಣ ಪಂಚಾಯತಿಗೆ ಜಯಸುಧಾ ಬೋವಿವಡ್ಡರ್
ಅಧ್ಯಕ್ಷರಾಗಿ ಪಟ್ಟಕ್ಕೇರೋದು ಬಹುತೇಕ ಪಕ್ಕಾ ಎನ್ನುವಂತಾಗಿದೆ.

ಇಂದೂರು ಇಕ್ಕಟ್ಟು ಶಮನ..?
ಇನ್ನು, ನೀ ಕೊಡೆ, ನಾ ಬಿಡೆ ಅಂತಾ ಜಿದ್ದಿಗೆ ಬಿದ್ದಿದ್ದ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆ ಕಚ್ಚಾಟಕ್ಕೂ ಬ್ರೇಕ್ ಬೀಳುವ ಎಲ್ಲಾ ಸಾಧ್ಯತೆ ಇದೆ. ಜುಲೈ 13 ರಂದು ಇಂದೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ಹಾಗೂ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ರಾಜೀನಾಮೆ‌ ‌ಈಡೋದು ಕನ್ಪರ್ಮ್ ಆಗಿದೆಯಂತೆ. ಹಾಗಂತ, ಕೋರ್ ಕಮಿಟಿ ಸದಸ್ಯರುಗಳಿಗೆ ಅವ್ರು ಮಾತು ಕೊಟ್ಟಿದ್ದಾರಂತೆ.

ಸಹಕಾರಿಗಳ ರಾಜೀನಾಮೆ..?
ಇನ್ನು, ಅದೇ ಕೋರ್ ಕಮಿಟಿ ಸಭೆಯಲ್ಲಿ ನಿರ್ಣವಾದಂತೆ ತಾಲೂಕಿನ ಕಾತೂರು, ಚಿಗಳ್ಳಿ ಸಹಕಾರಿ ಸಂಘಗಳ ಅಧ್ಯಕ್ಷರುಗಳ ಅಧಿಕಾರ ಹಸ್ತಾಂತರದ ಬಗ್ಗೆಯೂ ಚರ್ಚೆಯಾಗಿದೆ. ಇದ್ರಲ್ಲಿ ಕಾತೂರು ಸಹಕಾರಿ ಸಂಘದ ಅಧ್ಯಕ್ಷ ಶಿವಾಜಿ ಶಿಂಧೆ ರಾಜೀನಾಮೆ ನೀಡೋದು ಪಕ್ಕಾ ಎನ್ನಲಾಗಿದೆ. ಅದ್ರಂತೆ, ಮುಂಡಗೋಡ ಪಿಎಲ್ ಡಿ ಬ್ಯಾಂಕಿಗೆ ಅಧ್ಯಕ್ಷರಾಗಿರೋ ವೈ.ಪಿ.ಪಾಟೀಲರು ರಾಜೀನಾಮೆ ನೀಡಲಿದ್ದಾರೆ. ಅವ್ರ ಸ್ಥಾನಕ್ಕೆ ಕೊಪ್ಪದ ಕೆಂಜೋಡಿ ಗಲಬಿಯವರನ್ನ ಕೂರಿಸೋ ಮಾತುಕತೆ ಆಗಿದೆಯಂತೆ. ಅದ್ರಂತೆ, ಮುಂಡಗೋಡಿನ LSMP ಸೊಸೈಟಿಯ ಅಧ್ಯಕ್ಷ ಪದವಿಯಲ್ಲಿರೋ ಉಮೇಶ್ ಬಿಜಾಪುರ ಕೂಡ ರಾಜೀನಾಮೆ ನೀಡಿ, ಬೇರೊಬ್ಬರಿಗೆ ಅವಕಾಶ ಕೊಡಿಸೊ ಚರ್ಚೆಯೂ ಆಗಿದೆಯಂತೆ. ಆದ್ರೆ, ಅಕ್ಬೋಬರ್ 30 ರವರೆಗೆ ಅಧಿಕಾರದ ಅವಧಿ ಇರೋ ಕಾರಣಕ್ಕೆ, ಅದರ ಒಳಗಾಗಿನೇ ನಾನು ರಾಜೀನಾಮೆ ನೀಡ್ತಿನಿ ಅಂದಿದ್ದಾರಂತೆ ಉಮೇಶಣ್ಣ.

ಚಿಗಳ್ಳಿ ಸಂಘದ ಗೊಂದಲ..?
ಇನ್ನು, ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯವಾದಂತೆ, ಚಿಗಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿರೋ ಹಿರಿಯ ಮುಖಂಡ ಎಲ್.ಟಿ.ಪಾಟೀಲರೂ ತಮ್ಮ ಅಧ್ಯಕ್ಷ ಪದಚಿಗೆ ರಾಜೀನಾಮೆ ನೀಡ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಆ ಬಗ್ಗೆಯೂ ಚರ್ಚೆ ನಡೆದಿದೆ. ಆದ್ರೆ, “1983 ರಲ್ಲೇ ಚಿಗಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ರಾಜಕೀಯ ಜೀವನ ಪ್ರಾರಂಭಿಸಿರೋ ನಾನು ಅಲ್ಲಿನ ಹಿರಿಯರು ಹೇಗೆ ಹೇಳ್ತಾರೊ ಹಾಗೆ ಪಾಲಿಸ್ತಿನಿ” ಅಂತಿದಾರೆ ಪಾಟೀಲರು‌.

ಒಟ್ನಲ್ಲಿ, ಅಧಿಕಾರ ಹಸ್ತಾಂತರದ ಜಟಾಪಟಿಯಲ್ಲಿ ಸೋರಗಿ ಹೋಗಿದ್ದ ಮುಂಡಗೋಡ ಬಿಜೆಪಿಗೆ ಈಗ ಮತ್ತೆ ಆಕ್ಸಿಜನ್ ಕೊಡಿಸುವ ಎಲ್ಲಾ ಕಾರ್ಯಗಳೂ ಜಾರಿಯಲ್ಲಿವೆ. ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನವಾದಂತೆ ಆಯಾ ಭಾಗಗಳಲ್ಲಿ, ಆಯಾ ಮುಖಂಡರುಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಯಾರ್ಯಾರ ತೀರ್ಮಾನಗಳು ಹೇಗಿರ್ತಾವೋ ಅದರ ಮೇಲೆ ಮುಂದಿನ ಹಕೀಕತ್ತುಗಳು ಜಾರಿಯಾಗಲಿವೆ. ಮತ್ತೇನಾದ್ರೂ ಮಾತು ತಪ್ಪಿದ್ರೆ, ಒಳಮಸಲತ್ತುಗಳ ಆಟ ಶುರುವಾದ್ರೆ ತಾಲೂಕಿನ ಬಿಜೆಪಿಯಲ್ಲಿ ಭಾರೀ ಕೊಲಾಹಲ ಸೃಷ್ಟಿಯಾಗೋದ್ರಲ್ಲಿ ಎರಡು ಮಾತಿಲ್ಲ‌.

error: Content is protected !!