ಬೋಟ್ ನಲ್ಲಿ ನದಿ ದಾಟುತ್ತಿದ್ದ ವೇಳೆ ನದಿಯಲ್ಲೇ ಸಿಲುಕಿದ ಐವರ ರಕ್ಷಣೆ..!

ಕಾರವಾರ: ಗ್ರಾಮದಿಂದ ಗ್ರಾಮಕ್ಕೆ ನದಿಯಲ್ಲಿ ಬೋಟ್ ಮೂಲಕ ದಾಟುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಬೋಟು ಕೆಟ್ಟು ಐವರು ಗ್ರಾಮಸ್ಥರು ಗಂಗಾವಳಿ ನದಿಯ ಮಧ್ಯೆ ಸಿಲುಕಿಕೊಂಡಿದ್ದ ಘಟನೆ ನಡೆದಿದೆ.

ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತಿ ವ್ಯಾಪ್ತಿಯ ರಾಮನಗುಳಿಯಿಂದ ಡೋಂಗ್ರಿಗೆ ಸಂಪರ್ಕಿಸುವ ತೂಗುಸೇತುವೆ ಕಳೆದ ಎರಡು ವರ್ಷಗಳ ಹಿಂದೆ ಗಂಗಾವಳಿಯ ನೆರೆಗೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸದ್ಯ ಇಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿತ್ತು. ಆದ್ರೆ, ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಈ ತಾತ್ಕಾಲಿಕ ಸೇತುವೆಯ ಮೇಲೂ ನೀರು ಹರಿದು ರಾಮನಗುಳಿಯಿಂದ ಡೋಂಗ್ರಿಗೆ ಸಂಪರ್ಕ ಕಡಿತಗೊಂಡಿದ್ದು, ಹತ್ತಾರು ಹಳ್ಳಿಗಳ ಜನತೆ ನಡುಗಡ್ಡೆಯಲ್ಲಿ ಜೀವನ ನಡೆಸುವಂತಾಗಿದೆ.

ಈ ಎರಡೂ ಗ್ರಾಮಗಳ ನಡುವೆ ಓಡಾಟಕ್ಕೆ ಸದ್ಯ ಬೋಟನ್ನು ಬಳಸಲಾಗುತ್ತಿದ್ದು, ಹೀಗೆ ಗುಳ್ಳಾಪುರದಿಂದ ಡೋಂಗ್ರಿಗೆ ಬೋಟಿನಲ್ಲಿ ತೆರಳುತ್ತಿದ್ದ ಐವರು ರಭಸದ ಗಂಗಾವಳಿ ನದಿಯ ನಡುವೆ ಸಿಲುಕಿದ್ದಾರೆ. ಈ ಬೋಟು ಈ ಮೊದಲು ಹಾಳಾಗಿತ್ತು. ನಿನ್ನೆಯಷ್ಟೆ ದುರಸ್ತಿ ಮಾಡಿ ನದಿಗೆ ಇಳಿಸಲಾಗಿತ್ತು ಎನ್ನಲಾಗಿದೆ.

ನದಿಯ ಸೆಳೆತಕ್ಕೆ ಆಫ್ ಆದ ಮೋಟರ್ ಪುನಃ ಆರಂಭವಾಗದೇ ಸ್ಥಗಿತಗೊಂಡಿದ್ದು, ಹಳೆಯ ತಾತ್ಕಾಲಿಕ ಸೇತುವೆಗೆ ಸಿಲುಕಿ ಬೋಟ್ ನದಿಯಲ್ಲಿ ನಿಂತಿದೆ. ಒಂದು ತಾಸಿನಿಂದ ಬೋಟಿನಲ್ಲೇ ಐವರು ಅತಂತ್ರ ಸ್ಥಿತಿಯಲ್ಲಿದ್ದರು. ನಾಲ್ವರು ಲೈಫ್ ಜಾಕೆಟ್ ಧರಿಸಿದ್ದು, ಓರ್ವ ಧರಿಸಿರಲಿಲ್ಲ. ಹೀಗಾಗಿ, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಮುಂದಾದರೂ ಸಹ ಸಾಧ್ಯವಾಗಿರಲಿಲ್ಲ. ಆದ್ರೆ ಆ ನಂತರದಲ್ಲಿ ರಕ್ಷಣಾ ಕಾರ್ಯ ನಡೆಸಿ ಐವರನ್ನೂ ರಕ್ಷಣೆ ಮಾಡಲಾಗಿದೆ.

error: Content is protected !!