ಇಂದೂರು ಗ್ರಾಪಂ ಅಧ್ಯಕ್ಷರ ಬದಲಾವಣೆ ಪೀಕಲಾಟ, ಸಚಿವ ಹೆಬ್ಬಾರ್ ಭೇಟಿಗೆ ಹೋದ್ರು ಅಸಮಾಧಾನಿತರು..!

ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರ “ರಾಜೀ”ನಾಮೆ ಕೊಡಿಸುವ ವಿಚಾರ, ಲೊಕಲ್ ಬಿಜೆಪಿಗರಿಗೆ ಭಾರೀ ಪೀಕಲಾಟ ತಂದಿಟ್ಟಿದೆ. ನಾನು ರಾಜೀನಾಮೆ ಕೊಡಲ್ಲ ಅಂತಾ ಕಡ್ಡಿ‌ಮುರಿದಂತೆ ಹೇಳಿರೋ ಅಧ್ಯಕ್ಷೆ ಅನ್ನಪೂರ್ಣಾ ಬೆಣ್ಣಿ ಮೇಡಂ, ಇಂದೂರಿನ ಬಿಜೆಪಿಗರಿಗೆ ಬಿಸಿ ತುಪ್ಪವಾಗಿದ್ದಾರಾ..? ಹೇಗಾದ್ರೂ ಸರಿ ಮಾತು ಕೊಟ್ಟಂತೆ ನಡೆದುಕೊಳ್ಳಲೇ ಬೇಕು ಅಂತಾ ಜಿದ್ದಿಗೆ ಬಿದ್ದಿರೋ ಅಸಮಾಧಾನಿತ ಇ‌ಂದೂರಿನ ಸದಸ್ಯರಿಗೆ, ಅದ್ಯಾಕೋ ಏನೋ ಅಂದುಕೊಂಡಂತೆ ಆಗುತ್ತಲೇ ಇಲ್ಲ.

ಮಾತು ಬದಲಿಸಿದ್ರಾ ಉಪಾಧ್ಯಕ್ಷ..?
ಅಂದಹಾಗೆ, ಅಧ್ಯಕ್ಷರ ಬದಲಾವಣೆಗೆ ಪಣತೊಟ್ಟು ನಿಂತಿರೊ ಇಂದೂರಿನ ಬಿಜೆಪಿ ಬಳಗ, ಈಗಾಗಲೇ ಸಭೆ ಮೇಲೆ ಸಭೆ ಮಾಡುತ್ತಿದೆ. ಒಟ್ಟೂ 12 ಬಿಜೆಪಿ ಬೆಂಬಲಿತರ ಸದಸ್ಯರಿರೋ ಇಂದೂರು ಗ್ರಾಮ ಪಂಚಾಯತಿಯಲ್ಲಿ ಸದ್ಯ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ, ಹಾಗೂ ಉಪಾಧ್ಯಕ್ಷ ಸಿಖಂದರ್ ಬಂಕಾಪುರ ಹೊರತುಪಡಿಸಿ ಕೇವಲ 10 ಸದಸ್ಯರ ಒಂದೆಡೆ ಇದ್ದಾರೆ. ಇದುವರೆಗೂ ನಾನು ರಾಜೀನಾಮೆ ನೀಡೋಕೆ ರೆಡಿ ಅಂತಾ ಹೇಳಿಕೊಂಡಿದ್ದ ಉಪಾಧ್ಯಕ್ಷ ಸಿಖಂದರ ಬಂಕಾಪುರ, ಈಗ ಅದ್ಯಾಕೋ ಏನೋ ಮಾತು ಬದಲಿಸಿದ್ದಾರಂತೆ. ಅಲ್ದೆ ಮೊನ್ನೆ ಸಭೆಯ ಬಳಿಕ ಅವ್ರು ಯಾರ ಕೈಗೂ ಸಿಗುತ್ತಿಲ್ಲ. ಹೀಗಾಗಿ, ಉಳಿದ ಬಿಜೆಪಿ ಬೆಂಬಲಿತ ಸದಸ್ಯರ ಪೀಕಲಾಟ ಮತ್ತಷ್ಟು ಹೆಚ್ಚಾಗಿದೆ.

ಎಲ್.ಟಿ.ಪಾಟೀಲ್ ಅಭಯ..!
ಇನ್ನು, ಇಂದೂರು ಗ್ರಾಪಂ ನಲ್ಲಿ ಅಧ್ಯಕ್ಷರ ಬದಲಾವಣೆ ಹಕೀಕತ್ತಿನ ವಿಷಯ ಬಿಜೆಪಿ ಮುಖಂಡ ಎಲ್.ಟಿ.ಪಾಟೀಲರ ಅಂಗಳಕ್ಕೆ ಹೋಗಿ ನಿಂತಿತ್ತು ಎನ್ನಲಾಗಿದೆ. ಈ ವೇಳೆ ಅಧ್ಯಕ್ಷರು ಮತ್ತೊಂದು ವರಸೆ ಶುರುಮಾಡಿದ್ದು, ಜುಲೈ 20 ರ ನಂತರ ನಾನು ರಾಜೀನಾಮೆ ನೀಡ್ತಿನಿ ಅಂದಿದ್ದಾರಂತೆ. ಹೀಗಾಗಿ, ಎಲ್. ಟಿ.ಪಾಟೀಲ್ ಸಾಹೇಬ್ರು, ಇಂದೂರಿನ ಇನ್ನುಳಿದ ಅಸಮಾಧಾನಿತ ಸದಸ್ಯರುಗಳಿಗೆ ” ಜುಲೈ 20 ರ ವರೆಗೂ ಸುಮ್ನಿರಿ ನೋಡೋಣ” ಅಂದಿದ್ದಾರಂತೆ. ಆದ್ರೆ, ಇದನ್ನೇಲ್ಲ ಕೇಳಿ ಸುಮ್ನಿರೋ ಮನಸ್ಥಿತಿಯಲ್ಲಿ ಇಂದೂರಿಗರು ಇಲ್ಲವೇ ಇಲ್ಲ.

ಅವಿಶ್ವಾಸಕ್ಕೂ ಅಸಾಧ್ಯ..!
ಅಸಲು, 16 ಸದಸ್ಯ ಬಲದ ಇಂದೂರು ಗ್ರಾಮ ಪಂಚಾಯತಿಯಲ್ಲಿ, ಬಿಜೆಪಿ ಬೆಂಬಲಿತ 12 ಸದಸ್ಯರಿದ್ದಾರೆ. ಕಾಂಗ್ರೆಸ್ ನಿಂದ ನಾಲ್ವರಿದ್ದಾರೆ. ಹೀಗಾಗಿ, ಇಲ್ಲಿ ಅಧಿಕಾರಕ್ಕೆ ಏರಿರೋ ಬಿಜೆಪಿ ಬೆಂಬಲಿತರಿಗೆ ಕಟಾನುಕಟಿ ಬಹುಮತ ಇದೆ. 12 ಸದಸ್ಯರ ಪೈಕಿ ಅಧ್ಯಕ್ಷ ಉಪಾಧ್ಯಕ್ಷರನ್ನು ಹೊರತು ಪಡಿಸಿದ್ರೆ ಅವಿಶ್ವಾಸ ಮಂಡನೆಗೆ ಸಂಖ್ಯಾಬಲ ಕೇವಲ 10 ಕ್ಕೆ ಬಂದು ನಿಂತಿದೆ‌. ಆದ್ರೂ ಕೂಡ ಒಂದು ಕೈ ನೋಡೇ ಬಿಡೋಣ ಅಂತಾ ಕಾಂಗ್ರೆಸ್ ಬೆಂಬಲಿತ ಒಂದಿಬ್ಬರು ಸದಸ್ಯರನ್ನು ಸಂಪರ್ಕಿಸಿರೋ ಅಸಮಾಧಾನಿತ ಸದಸ್ಯರಿಗೆ, ಬಿಲ್ ಕುಲ್ ಸಾಧ್ಯವಿಲ್ಲ ಅಂದಿದ್ದಾರೆ ಕಾಂಗ್ರೆಸ್ ಬೆಂಬಲಿತರು. ಹೀಗಾಗಿ, ಮತ್ತಷ್ಟು ಕುಗ್ಗಿ ಹೋಗಿರೋ ಸದಸ್ಯರಿಗೆ ಸಚಿವ ಹೆಬ್ಬಾರ್ ಮನೆ ಬಾಗಿಲಿಗೆ ಎಡತಾಕುವಂತೆ ಮಾಡಿದೆ.

ಹೆಬ್ಬಾರ್ ಭೇಟಿಗೆ ಹೊರಟ್ರು..!
ಇನ್ನು, ಹೀಗೇಲ್ಲ ನಾವು ಬೆಪ್ಪಗೆ ಕುಳಿತುಕೊಂಡ್ರೆ ಈ ಸಮಸ್ಯೆ ಬಗೆಹರಿಯಲ್ಲ ಅಂತಾ ಮೈ ಕೊಡವಿ ಎದ್ದಿರೋ ಉಳಿದ ಸದಸ್ಯರು, ಇಂದು ಬೆಳಿಗ್ಗೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿಗಾಗಿ ಯಲ್ಲಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಹೆಬ್ಬಾರ್ ಸಾಹೇಬ್ರ ಜೊತೆ ಚರ್ಚಿಸಿ, ಹೇಗೂ ಇವತ್ತು ಮುಂಡಗೋಡ ತಾಲೂಕಿನ ಪ್ರವಾಸಕ್ಕೆ ಬರುವ ಸಚಿವರಿಗೆ ಮೊದಲೇ ಮನದಟ್ಟು ಮಾಡಲು ಯೋಚಿಸಿದ್ದಾರೆ. ಕೊಪ್ಪದಲ್ಲಿ ಇಂದು ನಡೆಯಲಿರೊ ಕಾರ್ಯಕ್ರಮದ ನಂತರ ಸಚಿವರು ಅಧ್ಯಕ್ಷರನ್ನು ಕರೆದು ರಾಜೀನಾಮೆ ನೀಡುವಂತೆ ಸೂಚಿಸಬಹುದು ಅನ್ನೋ ಯೋಚನೆಯಲ್ಲಿದ್ದಾರೆ ಅಸಮಾಧಾನಿತರು.

ಒಟ್ನಲ್ಲಿ, ಇಂದೂರು ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಬದಲಾವಣೆ ಬವಣೆ, ಖುದ್ದು ಬಿಜೆಪಿ ಬೆಂಬಲಿತರು ಸಿಡಿದೇಳುವಂತೆ ಮಾಡುತ್ತಿದೆ. ಇದು ಇಷ್ಟಕ್ಕೆ ನಿಲ್ಲುವ ಯಾವುದೇ ಸೂಚನೆ ಸಿಗುತ್ತಿಲ್ಲ. “ನೀ ಕೊಡೆ, ನಾ ಬಿಡೆ” ಎನ್ನುವಂತಾಗಿದೆ ಅಸಮಾಧಾನಿತರು ಹಾಗೂ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ಪರಿಸ್ಥಿತಿ.

error: Content is protected !!