ಇಂದೂರು ಗ್ರಾಪಂ ನಲ್ಲಿ 15-15 ರ ಹಾವು ಏಣಿಯಾಟ..! ಅಧ್ಯಕ್ಷ ಪಟ್ಟಕ್ಕಾಗಿ ಒಳಗೊಳಗೇ ಬೇಗುದಿ..?

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿಯಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡ್ತಿದೆಯಾ..? ಬಹುತೇಕ ಒಗ್ಗಟ್ಟಾಗಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಒಳಗೊಳಗೆ ಕುದಿಯುವಂತಾಗಿದೆಯಾ..? ಒಳ ಒಪ್ಪಂದದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಬದಲಾವಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವಂತಾಗಿದೆಯಾ..?
ಹೌದು ಅಂತಿದೆ ಮೂಲಗಳು.

ಬಿಜೆಪಿ ಸಾಮ್ರಾಜ್ಯ..!
ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರ ಸಾಮ್ರಾಜ್ಯವಿದೆ. ಅದೇನೇ ತಿಪ್ಪರಲಾಗ ಹಾಕಿದ್ರೂ ಇಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರ ಬಿಲ್ ಕುಲ್ ಬಿಜೆಪಿಗೇ ಇರತ್ತೆ. ಯಾಕಂದ್ರೆ, 16 ಸದಸ್ಯ ಬಲದ ಇಂದೂರು ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಬರೋಬ್ಬರಿ 12 ಸದಸ್ಯರಿದ್ದಾರೆ. ಇನ್ನು ಕಾಂಗ್ರೆಸ್ ಇಲ್ಲಿ ಕೇವಲ 4 ಬೆಂಬಲಿತ ಸದಸ್ಯರಿಗಷ್ಟೇ ಗಪ್ ಚುಪ್ ಆಗಿ ಕೂತಿದೆ. ಈ ಕಾರಣಕ್ಕಾಗಿ ಅನಾಯಾಸವಾಗಿ ಇಂದೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಆಡಳಿತದ ಚುಕ್ಕಾಣಿ ಸಿಕ್ಕಿದೆ. ಬಿಜೆಪಿ ಬಾವುಟದೊಂದಿಗೆ ಅನ್ನಪೂರ್ಣ ಬೆಣ್ಣಿ ಅಧ್ಯಕ್ಷರಾಗಿ, ಸಿಖಂದರ್ ಬಂಕಾಪುರ ಉಪಾಧ್ಯಕ್ಷರಾಗಿ ಖುರ್ಚಿಗೆ ಏರಿ ಬರೋಬ್ಬರಿ 17 ತಿಂಗಳು ಮುಗಿದಿದೆ. ನಿಜ ಅಂದ್ರೆ ಇಂದೂರಿಗರ ನಿರೀಕ್ಷೆಯಂತೆ ಒಳ್ಳೆಯ ಆಡಳಿತವೂ ಸಿಕ್ಕಿದೆ. ಅದರ ಬಗ್ಗೆ ದೂಸ್ರಾ ಮಾತೇ ಇಲ್ಲ. ಆದ್ರೆ ಕೊಟ್ಟ ಮಾತು ಏನಾಯ್ತು..? ಇದೊಂದೇ ಪ್ರಶ್ನೆ ಇಂದೂರಿನ ಬಿಜೆಪಿಗರಿಗೆ ಸದ್ಯ ತಲೆ ಕೆಡಿಸಿದೆ.

15-15 ರ ಮಾತು..!
ಅಸಲಿಗೆ, ಇಂದೂರು ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಭರ್ಜರಿ ಗೆಲುವು ಸಿಕ್ಕಾಗ, ಇಂದೂರು ಹಾಗೂ ಕೊಪ್ಪ ಗ್ರಾಮಗಳ ಮುಖಂಡರು ಒಂದಿಷ್ಟು ಆಂತರಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದರಂತೆ. ಮೊದಲ ಅವದಿಯಲ್ಲಿ 15 ತಿಂಗಳು ಅಧ್ಯಕ್ಷ ಸ್ಥಾನ ಕೊಪ್ಪ ಗ್ರಾಮದ ಸದಸ್ಯರಿಗೆ, ಉಪಾಧ್ಯಕ್ಷ ಸ್ಥಾನ ಇಂದೂರಿಗೆ ಅಂತಾ ತೀರ್ಮಾನಿಸಲಾಗಿತ್ತಂತೆ. ಹೀಗಾಗಿ ಕೊಪ್ಪದ ಅನ್ನಪೂರ್ಣ ಬೆಣ್ಣಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ರು. ಅದ್ರಂತೆ ಇಂದೂರಿನ ಸಿಖಂದರ್ ಬಂಕಾಪುರ
ಉಪಾಧ್ಯಕ್ಷ ಪದವಿ ಅಲಂಕರಿಸಿದ್ರು.

ಅವಧಿ ಮುಗಿದಾಯ್ತು..!
ಹಾಗೆ, ಅಧಿಕಾರ ವಹಿಸಿಕೊಂಡ ನಂತರ, ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ಮೇಡಂ ಬಹುತೇಕ ಯಶಸ್ವಿ ಆಡಳಿತದ ಹಿರಿಮೆ ಪಡೆದಿದ್ದಾರೆ. ಅಭಿವೃದ್ಧಿಪರ ಚಿಂತನೆಗಳಿಂದ ಜನಪ್ರಿಯ ಅಧ್ಯಕ್ಷರಾಗಿದ್ದಾರೆ. ಅದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಅವತ್ತು ಅಧ್ಯಕ್ಷರಾಗುವ ಹೊತ್ತಲ್ಲಿ ಆಗಿದ್ದ ಒಳ ಒಪ್ಪಂದದಂತೆ 15 ತಿಂಗಳಾದ್ರೂ ಈ ಕ್ಷಣಕ್ಕೂ ಅಧಿಕಾರ ಬಿಟ್ಟು ಕೊಟ್ಟಿಲ್ಲ, ಮಾತಿನಂತೆ ಇಂದೂರಿಗರಿಗೆ ಅಧ್ಯಕ್ಷ ಸ್ಥಾನ ನೀಡುತ್ತಿಲ್ಲ ಅನ್ನೋದು ಅಸಮಾಧಾನಕ್ಕೆ ಕಾರಣವಾಗಿದೆ.

ಸಭೆಯ ಮೇಲೆ ಸಭೆ..!
ಯಾವಾಗ, 15 ತಿಂಗಳ ಅವಧಿ ಪೂರ್ಣಗೊಂಡಿತೋ ಆ ಕ್ಷಣದಿಂದಲೇ ಅಧ್ಯಕ್ಷ ಪದವಿ ಬಿಟ್ಟುಕೊಡುವಂತೆ ಇಂದೂರಿನ ಸದಸ್ಯರು ಮನವಿ ಮಾಡಲು ಶುರು‌ಮಾಡಿದ್ರು. ಆ ಕುರಿತು ಹಿರಿಯರ ಜೊತೆ ಚರ್ಚಿಸಲು ಸಾಕಷ್ಟು ಬಾರಿ ಸಭೆ ಮಾಡಲಾಯ್ತು. ಆ ಸಭೆಗಳಲ್ಲಿ ಅಧ್ಯಕ್ಷರು ರಾಜೀನಾಮೆ ನೀಡುವ ಭರವಸೆಯನ್ನೂ ನೀಡಿದ್ರಂತೆ, ಆದ್ರೆ ಇದುವರೆಗೂ ರಾಜೀನಾಮೆ ನೀಡಲೇ ಇಲ್ಲ. ಹೀಗಾಗಿ, ಇಂದೂರಿನ ಬಿಜೆಪಿಗರಿಗೆ ಒಳಗೊಳಗೆ ಅಸಮಾಧಾನ ಹೆಚ್ಚಾಗಲು ಕಾರಣವಾಗಿದೆಯಂತೆ.

ಇಂದು ರಾಜೀನಾಮೆ ಕೊಡ್ತಾರಾ..?
ಅಂದಹಾಗೆ, ಇತ್ತಿಚೆಗಷ್ಟೇ ಇದೇ ವಿಷಯ ಚರ್ಚಿಸಲು ಎರಡೂ ಗ್ರಾಮಗಳ ಮುಖಂಡರು ಸಭೆ ಸೇರಿದ್ದರು ಎನ್ನಲಾಗಿದ್ದು, ಆ ಸಭೆಯಲ್ಲಿ ಜುಲೈ ಒಂದನೇ ತಾರೀಖಿಗೆ ರಾಜೀನಾಮೆ ನೀಡುತ್ತೆನೆ ಅಂತಾ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಹೀಗಾಗಿ, ಜುಲೈ , ಅಂದ್ರೆ ಇವತ್ತು ಶುಕ್ರವಾರ ರಾಜೀನಾಮೆ ನೀಡ್ತಾರಾ ಅಧ್ಯಕ್ಷರು..? ಅನ್ನೊ ಕುತೂಹಲ ಹೆಚ್ಚಾಗಿದೆಯಂತೆ.

ಉಪಾಧ್ಯಕ್ಷರು ರೆಡಿ..!
ಇನ್ನು, ಈ ಒಳ ಒಪ್ಪಂದಕ್ಕೆ ಬಹುತೇಕ ಫಿಕ್ಸ್ ಆಗಿರೋ ಉಪಾಧ್ಯಕ್ಷ ಸಿಖಂದರ್ ಬಂಕಾಪುರ, “ನಾನು ರಾಜೀನಾಮೆ ಕೊಡಲು ರೆಡಿ” ಅಂದಿದ್ದಾರಂತೆ. ಇಂದೂರು ಹಾಗೂ ಕೊಪ್ಪ ಗ್ರಾಮದ ಮುಖಂಡು ಇವತ್ತೇ, ಈ ಕ್ಷಣದಲ್ಲೇ ಸೂಚಿಸಿದ್ರೂ ನಾನು ರಾಜೀನಾಮೆ ಕೊಡಲು ರೆಡಿ ಅಂದಿದ್ದಾರೆ. ನಾನು ಯಾವತ್ತೂ ಪಕ್ಷದ ತೀರ್ಮಾನಗಳಿಗೆ ಬದ್ಧನಾಗುರ್ತಿನಿ ಅಂತಾ ಘಂಟಾಘೋಷವಾಗಿ ಹೇಳಿ ಆಗಿದೆಯಂತೆ.
ಹೀಗಾಗಿ ಈಗ ಬಹುತೇಕ ಅಧ್ಯಕ್ಷರ ರಾಜೀನಾಮೆ ಯಾವಾಗ ಅನ್ನೊ ಪ್ರಶ್ನೆ, ಇಂದೂರಿನ ಬಿಜೆಪಿಗರ ಅಸಮಾಧಾನ ಸ್ಪೋಟಗೊಳಿಸುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.

error: Content is protected !!