ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ.
9 ತಿಂಗಳ ಹಿಂದೆ..
ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9 ತಿಂಗಳ ಹಿಂದೆ, ಅಂದ್ರೆ, 2021 ರ ಸೆಪ್ಟೆಂಬರ್ ತಿಂಗಳಲ್ಲಿ ಶವ ಸಿಕ್ಕಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸರು ಅವತ್ತೇ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಆದ್ರೆ ಇದುವರೆಗೂ ಆ ಶವ ಯಾರದ್ದು ಅನ್ನೋ ಸಣ್ಣದೊಂದು ಸುಳಿವೂ ಸಿಕ್ಕಿಲ್ಲ.
ರಾಜ್ಯ ತಡಕಾಡಿದ್ರು..
ಅಂದಹಾಗೆ, ಹಾಗೆ ನದಿಯ ದಡದಲ್ಲಿ ಶವ ಸಿಕ್ಕ ಗಳಿಗೆಯಿಂದ ಇಲ್ಲಿಯವರೆಗೂ ಪೊಲೀಸರೇನು ಸುಮ್ಮನೆ ಕುಳಿತಿಲ್ಲ. ಮೊಟ್ಟ ಮೊದಲು ಆ ಶವ ಯಾರದ್ದು ಅನ್ನೋ ಪ್ರಾಥಮಿಕ ಮಾಹಿತಿಗಾಗಿ ತನಿಖೆಗಿಳಿದಿರೋ ಪೊಲೀಸರಿಗೆ ಈ ಕ್ಷಣದವರೆಗೂ ಗೊತ್ತಾಗಿಲ್ಲ. ಹಾಗೆ ಕೊಲೆಯಾದ ಆ ವ್ಯಕ್ತಿ ಯಾರು, ಆತ ಎಲ್ಲಿಯವನು, ಆತನ ಹಿನ್ನೆಲೆ ಏನು..? ಇದ್ಯಾವುದೂ ಒಂಬತ್ತು ತಿಂಗಳಾದ್ರೂ ಪೊಲೀಸರಿಗೆ ಮಾಹಿತಿ ಬಂದಿಲ್ಲ. ರಾಜ್ಯದ ಯಾವುದಾದ್ರೂ ಠಾಣೆಯಲ್ಲಿ ಯಾವುದಾದ್ರೂ ಕಾಣೆಯಾದ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆಯಾ ಅಂತಾ ತಡಕಾಡಿದ್ದಾರೆ ಪೊಲೀಸ್ರು. ಆದ್ರೂ ಇದುವರೆಗೂ ಈ ವ್ಯಕ್ತಿಯ ಜಾತಕ ಸಿಕ್ಕೇ ಇಲ್ಲ. ಹೀಗಾಗಿ, ಮತ್ತೊಂದು ಹಂತದಲ್ಲಿ ತನಿಖೆಗಿಳಿದಿದ್ದಾರೆ ಪೊಲೀಸ್ರು.
ಕೆಲಸಕ್ಕೆ ಹೋದವನ ಕೊಲೆಯಾಯ್ತಾ..?
ಈ ಕೊಲೆ ಪ್ರಕರಣವನ್ನು ಪೊಲೀಸರು ಹಲವು ಮಗ್ಗಲುಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ಅಂದಾಜಿನಂತೆ, ಬಹುಶಃ ಆತ ಕೆಲಸಕ್ಕೆ ಅಂತಾ ಮನೆಯಿಂದ ದೂರ ಇದ್ದ ವ್ತಕ್ತಿ ಆಗಿರಬಹುದು. ಹಾಗೆ ಬಂದಿರೋ ವ್ಯಕ್ತಿಯ ಕೊಲೆಯಾಗಿರಬಹುದು. ಆದ್ರೆ ಈ ವಿಷಯ ಮನೆಯವರಿಗೆ ಗೊತ್ತಾಗದೇ ಕೆಲಸಕ್ಕೆ ಹೋಗಿದ್ದಾರೆ ಅಂತಾ ಸುಮ್ಮನಾಗಿರಬಹುದು ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ, ರಾಜ್ಯದ ಎಲ್ಲಾ ಠಾಣೆಗಳಲ್ಲೂ ಈ ವ್ಯಕ್ತಿಯ ಭಾವಚಿತ್ರ ಅಂಟಿಸಿ ಯಾರೀತ ಅಂತಾ ತಡಕಾಡಿದ್ರೂ ಇದುವರೆಗೂ ಯಾವುದೇ ಸುಳಿವು ಸಿಕ್ಕದೇ ಇರೋದು ಪೊಲೀಸರಿಗೆ ತಲೆನೋವಾಗಿದೆ.
ನಿಮಗೇನಾದ್ರೂ ಈತ ಗೊತ್ತಾ..?
ಓದುಗರೇ, ಹೀಗೆ ಕೊಲೆಯಾಗಿ, ಮಲಪ್ರಭಾ ನದಿಯಲ್ಲಿ ತೇಲಿಬಂದಿರೋ ವ್ಯಕ್ತಿಯ ಬಗ್ಗೆ ನಿಮಗೇನಾದ್ರೂ ಗೊತ್ತಾ..? ಈತನ ಪರಿಚಯ ನಿಮಗೇನಾದ್ರೂ ಇದೆಯಾ..? ಈತನ ಬಗ್ಗೆ ನಿಮಗೆ ಗೊತ್ತಿದ್ರೆ ದಯವಿಟ್ಟು ನಂದಗಡ ಠಾಣೆಗೆ ಮಾಹಿತಿ ನೀಡಿ.
ಶವದ ಗುರುತು ಹೀಗಿದೆ..!
ಹಾಗೆ, ಕೊಲೆಯಾಗಿ ತೇಲಿಬಂದಿರೋ ವ್ಯಕ್ತಿಯ ವಯಸ್ಸು ಅಂದಾಜು 40 ರಿಂದ 45 ವರ್ಷ. ಹಳದಿ ಮತ್ತು ಕಪ್ಪು ಬಣ್ಣದ ಲೈನಿಂಗ ಟೀ-ಶರ್ಟ ಧರಿಸಿದ್ದಾನೆ. ಕೊರಳಲ್ಲಿ ನೀಲಿ ಬಣ್ಣದ ಕರೀ ಲೈನಿಂಗ್ ಶರ್ಟ ಹಾಕಿಕೊಂಡಿದ್ದಾನೆ. ಕೊರಳಲ್ಲಿ ಎರಡು ರುದ್ರಾಕ್ಷಿ ಸರಗಳು ಇವೆ. ಮತ್ತೊಂದು ದಾರದಲ್ಲಿ ಪೊಣಿಸಿದ ಒಂದು ರುದ್ರಾಕ್ಷಿ, ತಗಡಿನ ತಾಯತ, ಕಪ್ಪು ಬಣ್ಣದ ಲಿಂಗ ಇದೆ. ಸೊಂಟದಲ್ಲಿ ಒಂದು ಎಳೆಯ ಕೆಂಪು ಉಡದಾರ ಇದೆ. ಇನ್ನು, ಬಲಗೈಯಲ್ಲಿ ಕೇಸರಿ ಬಣ್ಣದ ಎರಡು ಎಳೆಯ ದಾರ ಕಟ್ಟಿಕೊಂಡಿದ್ದಾನೆ.
ಚಹರೆಪಟ್ಟಿ
ಅವನು ಮೈಯಿಂದ ಸದೃಡ ಇದ್ದು, ಸುಮಾರು 5 ಪೂಟ, 2 ಇಂಚ ಎತ್ತರ ಇದ್ದಾನೆ. ಮುಖದ ಮೇಲೆ ಗಡ್ಡ ಇದ್ದು ಮೀಸೆ ಇರುವುದಿಲ್ಲಾ. ಮುಖ “ಡಿ”ಕಾಂಪೋಜ ಆಗಿದ್ದರಿಂದ ಬಣ್ಣ ವಗೈರೆ ಗೊತ್ತಾಗಿಲ್ಲ.
ಈ ಪ್ರಕಾರ ಇದ್ದು ನಿಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭಾವ ಚಿತ್ರಕ್ಕೆ ಹೋಲುವ ಯಾವುದಾದರೂ ಕಾಣೆ ಅಥವಾ ಅಪಹರಣ ಪ್ರಕರಣಗಳು ವರದಿಯಾಗಿದ್ದಾರೆ ಕೂಡಲೇ ನಂದಗಡ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ಸಂಪರ್ಕಿಸಬೇಕಾದ ಸಂಖ್ಯೆಗಳು-
ಪೊಲಿಸ್ ಕಂಟ್ರೋಲ್ ರೂಂ:- 08314-2405231
ಪಿ.ಐ, ನಂದಗಡ: 9480804087.
ನಂದಗಡ ಠಾಣೆ: 08336-236633