ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಪಹರಣವಾಗಿದೆ ಅಂತಾ ಸುಳ್ಳು ಕತೆ ಕಟ್ಟಿದ್ದ ಚಾಲಾಕಿ ಹೃದಯಹೀನ ತಾಯಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನದ ಡ್ರಾಮಾ..?
ಕಳೆದ ಸೋಮವಾರ ಕಿಮ್ಸ್ ನಲ್ಲಿ ಮಗುವಿನ ಕಳ್ಳತನವಾಗಿದೆ, ಯಾರೋ ಮಗುವನ್ನು ನನ್ನ ಕೈಯಿಂದ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ ಅಂತಾ ದೂರು ನೀಡಿದ್ದಳು ಮಗುವಿನ ತಾಯಿ. ಹೀಗಾಗಿ, ಪ್ರಕರಣ ಭಾರೀ ಸದ್ದು ಮಾಡಿತ್ತು. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ವಿದ್ಯಾನಗರ ಠಾಣೆಯ ಪೊಲೀಸರಿಗೆ, ಮಗು ಕಾಣೆಯಾದ ಮರುದಿನವೇ ಅಂದ್ರೆ ಮಂಗಳವಾರ ಮುಂಜಾನೆ ಕಿಮ್ಸ್ ಹಿಂಬಾಗದಲ್ಲಿ ಕಂದಮ್ಮ ಪತ್ತೆಯಾಗಿತ್ತು. ಹೀಗಾಗಿ, ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿ ಎದುರಾಗಿತ್ತು.
ಹೆತ್ತಮ್ಮನದ್ದೇ ಹೇಯ ಕೃತ್ಯ..!
ಇನ್ನು, ಹಾಗೆ ಕಿಮ್ಸ್ ಹಿಂಬಾಗ ಸಿಕ್ಕ ಮಗುವಿನ ಬಗ್ಗೆ ಅದು ಹೇಗೆ ಬಂತು, ಹಿಂದಿನ ಅಸಲೀಯತ್ತು ಏನು ಅಂತಾ ತನಿಖೆಗೆ ಇಳಿದ ಪೊಲೀಸರಿಗೆ, ಸಿಸಿಟಿವಿ ದೃಷ್ಯಗಳು ಕಿರಾತಕಿಯ ಅಸಲೀಯತ್ತು ಬಯಲು ಮಾಡಿತ್ತು. ಶೌಚಕ್ಕೆ ಹೋಗುವ ನೆಪದಲ್ಲಿ ತಾನೇ ಹೆತ್ತ 40 ದಿನದ ಪುಟ್ಟ ಕಂದಮ್ಮನನ್ನು ತಾನೇ ಕಿಟಕಿಯಿಂದ ಹೊರಗಡೆ ಎಸೆದು, ಅಪಹರಣವಾಗಿದೆ ಅಂತಾ ಡ್ರಾಮಾ ಮಾಡಿದ್ದಳು ಮಗುವಿನ ತಾಯಿ ಸಲ್ಮಾ ಶೇಖ್..
ಹಾಗೆ ಹೆತ್ತ ಮಗುವನ್ನೇ ಯಾಕಮ್ಮ ನೀನು ಕೊಲ್ಲುವ ಪ್ರಯತ್ನ ಮಾಡಿದೆ..? ಅಂತಾ ಪೊಲೀಸರು ನಡೆಸಿದ ತನಿಖೆ ವೇಳೆ ಆ ನೀಚ ತಾಯಿ ಹೇಳಿದ್ದೇನು ಗೊತ್ತಾ..? ಆ ಮಗುವಿನ ತಲೆ ದೊಡ್ಡದಾಗಿತ್ತಂತೆ. ಆನಾರೋಗ್ಯಪೀಡಿತ ಮಗುವಾಗಿತ್ತು ಅನ್ನೋ ಕಾರಣಕ್ಕೆ ಹಾಗೆ ಮಾಡಿದೆ ಅಂದ್ಲಂತೆ ರಾಕ್ಷಸಿ.
ಬದುಕಿತು ಕಂದಮ್ಮ..!
ಅಸಲು, ಅದೃಷ್ಟ ಅನ್ನೋದು ನೆಟ್ಟಗೆ ಇದ್ರೆ, ಅದೇಂತದ್ದೇ ಭಯಾನಕ ಸಂದರ್ಭ ಬಂದ್ರೂ ಬಚಾವ್ ಆಗಬಹುದಲ್ವಾ..? ಈ ಮಾತು ಮಗುವಿನ ವಿಚಾರದಲ್ಲಿ ಸತ್ಯವಾಗಿದೆ. ಯಾಕಂದ್ರೆ, ಹಾಗೆ ಕಿಟಕಿಯಿಂದ ಎಸೆಯಲಾಗಿದ್ದ 40 ದಿನದ ಪುಟ್ಟ ಕಂದಮ್ಮ ಬಚಾವ್ ಆಗಿದೆ. ಅದೃಷ್ಟವಶಾತ್ ಹುಲ್ಲಿನ ಮೇಲೆ ಬಿದ್ದಿದ್ದ ಕಂದಮ್ಮನಿಗೆ ಪ್ರಾಣಕ್ಕೆ ಕುತ್ತು ಬರುವಂತಹ ಯಾವುದೇ ಅಪಾಯವಾಗಿಲ್ಲ. ಹೀಗಾಗಿ, ಸದ್ಯ ರಕ್ಕಸಿ ತಾಯಿ ವಿರುದ್ಧ ಪ್ರಕರಣ ದಾಖಲಿಸಿರೋ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.