“ಚರ್ಮ ಸುಲಿದು ಬಿಡ್ತಿನಿ” ಅಂದ್ರಂತೆ ಮುಂಡಗೋಡ ಪಿಐ ಸಾಹೇಬ್ರು, ಅಷ್ಟಕ್ಕೇ, ಶಾಲೆ ಬಿಟ್ಟು ಮನೆಯಲ್ಲೇ ಕುಳಿತ್ಲು ಹುಲಿಹೊಂಡದ ಬಾಲಕಿ..!


ಮುಂಡಗೋಡ: ಪೊಲೀಸರೆಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ..? ಪುಟ್ಟ ಹುಡುಗರಿಗೆ “ಹೇ ಪೊಲೀಸು ಮಾಮಾ ಬಂದ” ಅಂತಾ ಒಂದು ಮಾತು ಹೇಳಿದ್ರೆ ಸಾಕು ಮಕ್ಕಳು ಗಡ ಗಡ ನಡುಗಿ ಅಡಗಿಕೊಳ್ತವೆ. ಅಂತಹದ್ದೊಂದು ಭಯ ಖಾಕಿಗಳನ್ನ ಕಂಡ್ರೆ ಬಹುತೇಕ ಮಕ್ಕಳಿಗೆ ಇದ್ದೇ ಇರತ್ತೆ. ಹೀಗಿದ್ದಾಗ, ಖುದ್ದು ಪೊಲೀಸ್ರೇ ಪುಟ್ಟ ಬಾಲಕಿಯೋರ್ವಳಿಗೆ ಧಮ್ಕಿ ಹಾಕಿದ್ರೆ ಹೇಗಾಗಬೇಡ..? ಇಂತದ್ದೇ ಒಂದು ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ.

ಆಕೆ 13 ರ ಬಾಲಕಿ..!
ಹೌದು, ಆಕೆಯ ವಯಸ್ಸು ಕೇವಲ 13 ವರ್ಷ, ಈಗಷ್ಟೇ ಹುಲಿಹೊಂಡದಲ್ಲಿ ಏಳನೇ ತರಗತಿ ಪಾಸ್ ಆಗಿ, ಎಂಟನೇ ತರಗತಿಗಾಗಿ ಮುಂಡಗೋಡಿನ ಜೂನಿಯರ್ ಕಾಲೇಜಿಗೆ ಅಡ್ಮಿಷನ್ ಮಾಡಿಸಿದ್ದಾಕೆ. ಹೀಗಿದ್ದಾಗ ಈ ಪುಟ್ಟ ಬಾಲಕಿ ಈಗ ಮನೆಯಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆ. ಯಾರೇ ಹತ್ರ ಬಂದ್ರೂ ಭಯಗೊಂಡು ಅಳುತ್ತಿದ್ದಾಳೆ. ಗಡ ಗಡ ನಡುಗುತ್ತಿದ್ದಾಳೆ. ನಾನು ಇನ್ನೇಲೆ ಮುಂಡಗೋಡಿನ ಶಾಲೆಗೆ ಹೋಗೋದೇ ಇಲ್ಲ, ಅವ್ರು ನನ್ನ ಚರ್ಮ ಸುಲಿದು ಬಿಡ್ತಾರೆ, ನನ್ನ ಹೊಡೆದು ಬಿಡ್ತಾರೆ ಅಂತಾ ಕಣ್ಣೀರು ಹಾಕುತ್ತಿದ್ದಾಳೆ‌. ಯಾರ್ ಅಂದ್ರೆ ಯಾರ್ ಮಾತೂ ಕೇಳ್ತಿಲ್ಲ. ಹೀಗಾಗಿ, ಆ ಕುಟುಂಬ ಈಗ ಅಕ್ಷರಶಃ ಆತಂಕದಲ್ಲಿದೆ‌.

ಎಸ್ಪಿಗೆ ದೂರಿನ ಪ್ರತಿ

ಆಗಿದ್ದೇನು..?
ಅಂದಹಾಗೆ, ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಆ ಬಡಕುಟುಂಬ ವಾಸ ಮಾಡ್ತಿದೆ. ಆ ಬಾಲಕಿಯ ತಂದೆ ಹೊಟ್ಟೆ ಪಾಡಿಗಾಗಿ ಗೋವಾದಲ್ಲಿ ದುಡಿಯುತ್ತಿದ್ದಾರೆ‌. ತಾಯಿ ತನ್ನ ಮೂವರು ಹೆಣ್ಣುಮಕ್ಕಳ ಜೊತೆ ಹುಲಿಹೊಂಡದಲ್ಲಿ ವಾಸ ಮಾಡ್ತಿದಾರೆ. ಅವ್ರಿಗೆ ಮೂವರು ಹೆಣ್ಣು ಮಕ್ಕಳ ಪೈಕಿ ಕೊನೆಯವಳು ಈ ಬಾಲಕಿ.. (ದಯವಿಟ್ಟು ಕ್ಷಮಿಸಿ ನಾನಿಲ್ಲಿ ಆ ಬಾಲಕಿಯ ಹೆಸರು ಪ್ರಸ್ತಾಪಿಸುತ್ತಿಲ್ಲ) ಹೀಗಿರೋ ಬಾಲಕಿಗೆ ಕಳೆದ ಮೂರು ದಿನದ ಹಿಂದೆ ಖಾಕಿಗಳ ಪವರ್ರು ಬರ್ಬಾದು ಮಾಡಿಬಿಟ್ಟಿದೆ ಅನ್ನೋ ಆರೋಪ ಕೇಳಿಬಂದಿದೆ. ಪೊಲೀಸಪ್ಪನ “ದರ್ಬಾರಿನ” ವರ್ತನೆ ಆ ಪುಟ್ಟ ಬಾಲಕಿಯ ಮುಗ್ದ ಮನಸ್ಸಿನ ಮೇಲೆ ಇನ್ನಿಲ್ಲದಂತೆ ಘಾಸಿ ಮಾಡಿದೆ ಅಂತಾ ಕುಟುಂಬಸ್ಥರ ಆರೋಪವಾಗಿದೆ.

ಇದು ಘಟನೆ..!
ಅಸಲು, ಅವತ್ತು ಶನಿವಾರ ಆರನೇ ತಾರೀಖು, ಹುಲಿಹೊಂಡದಲ್ಲಿ ಅದೇನೊ ಗದ್ದೆಗಳ ವ್ಯಾಜ್ಯದ ಸಲುವಾಗಿ ಮುಂಡಗೋಡಿನ ಪಿಐ ಸಾಹೇಬ್ರು ತಮ್ಮ ಪಡೆಯನ್ನು ಕರೆದುಕೊಂಡು ಸ್ಥಳ ಪರಿಶೀಲನೆ, ಇತ್ಯಾದಿ ಇತ್ಯಾದಿ ಮಾಡಿ, ವ್ಯಾಜ್ಯ ಬಗೆಹರಿಸಲು ಹೋಗಿದ್ರಂತೆ. ಆ ಹೊತ್ತಲ್ಲಿ, ಎರಡು ಕುಟುಂಬಗಳ ನಡುವೆ ಗದ್ದೆಯ ತಕರಾರು ತಾರಕಕ್ಕೇರಿದೆ. ಎರಡು ಕುಟುಂಬಗಳ ತಂಟೆ ತಕರಾರಿನ ನಡುವೆ ಪೊಲೀಸರೇ ಖುದ್ದಾಗಿ ನಿಂತು, ವಿವಾದಿತ ಜಮೀನಿನಲ್ಲಿ ಬೆಳೆದಿದ್ದ ಬತ್ತದ ಬೆಳೆಯನ್ನು ಟ್ರಾಕ್ಟರ್ ಮೂಲಕ ಹಾಳು‌ ಮಾಡಿಸಿದ್ದಾರೆ ಎನ್ನಲಾಗಿದೆ‌. ಅಸಲು, ಇದೇಲ್ಲ ಸಿವಿಲ್ ವಿಷಯ, ನ್ಯಾಯಕ್ಕಾಗಿ ಮಾನ್ಯ ನ್ಯಾಯಾಲಯದ ಮೊರೆ ಹೋದ್ರೆ, ಅದನ್ನೇಲ್ಲ ಕೋರ್ಟು ನೋಡಿಕೊಳ್ಳತ್ತೆ. ಅದರ ಉಸಾಬರಿಗೆ ಹೋಗಲು ನಾವ್ಯಾರು ಅಲ್ವಾ..? ಹೀಗಾಗಿ ಆ ತಂಟೆ ತಕರಾರಿನ ವಿಷಯ ನಮಗೆ ಬೇಡವೇ ಬೇಡ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು

“ಚರ್ಮ ಸುಲಿತಿನಿ” ಅಂದ್ರಂತೆ ಸಾಹೇಬಾ..!
ಆದ್ರೆ, ಆ ವೇಳೆ ತಮ್ಮ ಮಾವಂದಿರನ್ನ ಪೊಲೀಸರು ಎಳೆದಾಡಿ ಬೈಯ್ಯುತ್ತಿದ್ದರಂತೆ, ಹೀಗಾಗಿ ಬಾಲಕಿ ಅಲ್ಲೇನು ನಡಿತಿದೆ ಅಂತಾ ಆ ಸ್ಥಳದ ಹತ್ತಿರ ಹೋಗಿದ್ದಾಳೆ. ಆ ವೇಳೆ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಳು ಅನ್ನೋ ಒಂದೇ ಒ‌ಂದು ಕಾರಣಕ್ಕೆ ಪಾಪ ಆ ಮುಗ್ದ ಬಾಲಕಿಗೆ ಪಿಐ ಸಾಹೇಬ್ರು ಗದರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ‌. ಅಸಲು ಅವ್ರ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದ್ರೆ ಅವ್ರ ಗದರಿದ ದಾಟಿಗೆ ಆ ಬಾಲಕಿ ನಲುಗಿ ಹೋಗಿದ್ದಾಳೆ. “ನೀನು ಬಾಳ ಶ್ಯಾಣೆಕಿ ಇದಿಯಾ, ನಮ್ದು ವಿಡಿಯೋ ಮಾಡ್ತಿಯಾ..? ಮುಂಡಗೋಡಿಗೆ ಬಾ ನಿನ್ನ ಚರ್ಮ ಸುಲಿತಿನಿ, ನಾಳೆ ನೀವೇಲ್ಲರೂ ಪೊಲೀಸ್ ಠಾಣೆಗೆ ಬರ್ರಿ ಅಂತಾ ಅವಾಜ್ ಹಾಕಿದ್ರಂತೆ.. ಅಲ್ದೇ ಆ ಬಾಲಕಿಯ ಕೈಯಲ್ಲಿ ಇದ್ದ ಮೊಬೈಲ್ ಕಸಿದುಕೊಂಡು ಹೋಗಿದ್ದಾರಂತೆ. ಹಾಗಂತ ಖುದ್ದು ಆ ಬಾಲಕಿಯೇ ನಡುಗುವ ದನಿಯಲ್ಲಿ, ಭಯಬೀತಗೊಂಡು ಹೇಳುತ್ತಿದೆ‌.
ಹಾಗೆ ಹೇಳಿದ ಕ್ಷಣದಿಂದ ಆ ಬಾಲಕಿ ಶಾಲೆಗೆ ಹೋಗುವುದಿರಲಿ, ಮನೆ ಬಿಟ್ಟು ಹೊರಗಡೆಯೇ ಬಂದಿಲ್ಲ. ಸರಿಯಾಗಿ ಊಟ ಮಾಡಿಲ್ಲ, ನಿದ್ದೆ ಮಾಡಿಲ್ಲ, ಆ “ಅವಾಜ್” ಗೆ ಬೆದರಿದ ಹುಡುಗಿಗೆ ಅವತ್ತು ರಾತ್ರಿ ಛಳಿ ಜ್ವರ ಬಂದು ಮಲಗಿಬಿಟ್ಟಿದೆ.

ಎಸ್ಪಿಗೆ ದೂರು..!
ಘಟನೆ ನಡೆದು ಇಷ್ಟೇಲ್ಲ ಆದಮೇಲೆ ಬಾಲಕಿಯ ಪೋಷಕರು ನೇರವಾಗಿ ಕಾರವಾರದ ಎಸ್ಪಿ ಕಚೇರಿಗೆ ಹೋಗಿದ್ದಾರೆ. ಅವತ್ತು ಎಸ್ಪಿ ಡಾ.ಸುಮನಾ ಪೆನ್ನೇಕರ್ ಮೇಡಂ ಎದುರು ತಮ್ಮ ಅಳಲು ತೋಡಿಕೊಂಡು ನಮಗೆ ನ್ಯಾಯ ಕೊಡಿಸಿ ಅಂದಿದ್ದಾರೆ. ಅಲ್ಲದೇ ಆ ಬಾಲಕಿಯ ತಾಯಿ ಆ ಪೊಲೀಸ್ ಅಧಿಕಾರಿ ವಿರುದ್ದ ದೂರು ನೀಡಿ ಬಂದಿದ್ದಾರೆ‌. ನಂತ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೂ ದೂರು ನೀಡಿದ್ದಾರೆ‌. ಜೊತೆಗೆ ಶಿರಸಿ ಡಿವೈಎಸ್ಪಿ ಸಾಹೇಬ್ರಿಗೂ ದೂರು ನೀಡಿ ಬಂದಿದ್ದಾರೆ‌. ಖಂಡಿತ ಕ್ರಮ ಕೈಗೊಳ್ತಿವಿ ಅಂತಾ ಎಸ್ಪಿ ಮೇಡಂ ಪೋಷಕರನ್ನು ಸಮಾಧಾನ ಪಡಿಸಿ ಕಳಿಸಿದ್ದಾರಂತೆ.

ಪಿಐ ಏನಂದ್ರು ಗೊತ್ತಾ..?
ಈ ಕುರಿತು ಪಬ್ಲಿಕ್ ಫಸ್ಟ್ ನ್ಯೂಸ್, ಸಾಹೇಬ್ರೆ ಏನ್ರಿ ಇದು ಘಟನೆ..? ಅಂತಾ ಮುಂಡಗೋಡ ಪಿಐ ಸಾಹೇಬ್ರಿಗೆ ಅವ್ರ ವರ್ಶನ್ ಏನು ಅಂತಾ ಕೇಳಿದ್ರೆ ಸಾಹೇಬ್ರು ಹೇಳಿದ್ದೇನು ಗೊತ್ತಾ..? “ಏನಿಲ್ರಿ ಬ್ರದರ್ ಅದೇಲ್ಲ ಸುಳ್ಳು, ಅದೊಂದು ಡ್ರಾಮಾ ಕಂಪನಿ” ಅಂತಾ ಹೇಳಿ ಪೋನ್ ಕಟ್ ಮಾಡಿದ್ರು. ಬೇರೆ ಏನಂದ್ರೆ, ಏನೂ ಉತ್ತರಿಸಲೇ ಇಲ್ಲ.

ಬಿಇಓ ಸಿಬ್ಬಂದಿ ಭೇಟಿ..!
ಇನ್ನು ಘಟನೆಯ ಸುದ್ದಿ ತಿಳಿದು ಭಯದಿಂದ ಶಾಲೆಗೇ ಹೋಗದೇ ಮನೆಯಲ್ಲೇ ನಡುಗುತ್ತ ಕುಳಿತಿರೋ ಬಾಲಕಿಯ ಮನೆಗೆ ಬಿಇಓ ಸಿಬ್ಬಂದಿ ಭೇಟಿ ನೀಡಿದ್ದಾರೆ‌. ಘಟನೆಯ ಸಂಪೂರ್ಣ ವೃತ್ತಾಂತವನ್ನು ಖುದ್ದು ಬಾಲಕಿಯ ಬಾಯಲ್ಲೇ ಕೇಳಿ ಬಾಲಕಿಗೆ ದೈರ್ಯ ತುಂಬಿದ್ದಾರೆ. ಆದ್ರೆ ಬಾಲಕಿ ಮಾತ್ರ ಜಪ್ಪಯ್ಯ ಅಂದ್ರೂ “ನಾನು ಶಾಲೆಗೆ ಹೋಗಲ್ಲ, ಅವ್ರು ನನ್ನ ಚರ್ಮ ಸುಲಿದು ಬಿಡ್ತಾರೆ” ಅಂತಾ ಭಯದಿಂದ ಅಳುತ್ತಲೇ ಹೇಳ್ತಿದಾಳೆ‌. ಹೀಗಾಗಿ, ಮುಂದೇನು ಅನ್ನೋ ಚಿಂತೆಯಲ್ಲಿ ಕುಟುಂಬಸ್ಥರಿದ್ದಾರೆ. ಪಾಪ, ಆ ಕುಟುಂಬಕ್ಕೆ ಸಾಂತ್ವನ ಹೇಳೋರಾದ್ರೂ ಯಾರು..?

error: Content is protected !!