ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಯಾಕೋ ಅಸಮಾಧಾನ, ಒಳಗುದಿ, ಮುಸುಕಿನ ಗುದ್ದಾಟಗಳು ಬಗೆಹರಿಯುವ ಲಕ್ಷಣಗಳು ಇಲ್ಲವೇ ಇಲ್ಲ ಅನಿಸ್ತಿದೆ. ಇಲ್ಲಿ ಮೂಲ ಹಾಗೂ ವಲಸಿಗರ ನಡುವಿನ ಆಂತರಿಕ ಕಲಹ ಈಗ ಬಹುತೇಕ ಬಹಿರಂಗವಾಗಿಯೇ ಸಿಡಿದೇಳುವಂತೆ ಮಾಡ್ತಿದೆ. ಈಗ ಇದರ ಭಾಗವಾಗೇ ಮುಂಡಗೋಡಿನ ಬಿಜೆಪಿ ಮುಖಂಡ ಸಂತೋಷ ರಾಯ್ಕರ್ ಮಳಗಿ, ಬಿಜೆಪಿ ತೊರೆದಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸುವ ತೀರ್ಮಾನ ಮಾಡಿದ್ದಾರೆ. ಹಾಗಂತ ಅವ್ರೇ ಹೇಳಿಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪಕ್ಕಾ..!
ಅಂದಹಾಗೆ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಪಕ್ಷಕ್ಕಾಗಿ ದಶಕಗಳಿಂದಲೂ ಬೆವರು ಹರಿಸಿದವನ್ನ ಅಕ್ಷರಶಃ ಮೂಲೆಗುಂಪು ಮಾಡಲಾಗ್ತಿದೆ ಅಂತಾ ಆರೋಪಿಸಿರೋ ಸಂತೋಷ ರಾಯ್ಕರ್, ಸಚಿವ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಗಳಿಗೆಯಿಂದಲೇ ಇಲ್ಲಿನ ಬಿಜೆಪಿಯ ಮೂಲ ಕುಳಗಳಿಗೆ ಇನ್ನಿಲ್ಲದ ಬೇಸರ ಉಂಟಾಗಿದೆ. ನಮಗೆ ಉಸಿರಾಡಲೂ ಸಾಧ್ಯವಾಗಿಲ್ಲ. ಹೀಗಾಗಿ ನಾನು ಬಿಜೆಪಿ ಪಕ್ಷ ತೊರೆಯುತ್ತಿದ್ದೇನೆ, ಈ ಮೂಲಕ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಏನಿಲ್ಲವೆಂದ್ರೂ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇನೆ ಅಂತಾ ಸಂತೋಷ ರಾಯ್ಕರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ನೊಂದವರ ಅಭಯ..!
ಬಿಜೆಪಿಯಲ್ಲಿ ವಲಸಿಗರ ಕಾಟದಿಂದ ಬೇಸತ್ತಿರೋ ಹಲವು ಮುಖಂಡರು ಕಾರ್ಯಕರ್ತರು ನಂಗೆ ಬೆಂಬಲ ನೀಡಲಿದ್ದಾರೆ. ನಿರ್ಲಕ್ಷಕ್ಕೆ ಒಳಗಾಗಿರೋ ಸಮುದಾಯಗಳು ನನಗೆ ಆಶೀರ್ವಾದ ಮಾಡಲಿವೆ. ಹೀಗಾಗಿ ನಂಗೆ ಆನೆ ಬಲ ಬಂದಂತೆ ಆಗಿದ್ದು, ನನ್ನ ಗೆಲುವು ನಿಶ್ಚಿತ ಅಂತಾ ಸಂತೋಷ ರಾಯ್ಕರ್ ವಿಶ್ವಾಸದ ಮಾತು ಆಡಿದ್ದಾರೆ.
ಕುಮಾರಣ್ಣನ ಸಾಥ್..!
ಅಸಲು, ಈಗಾಗಲೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿರೋ ಸಂತೋಷ ರಾಯ್ಕರ್ ಮಳಗಿ, ಮಾಜಿ ಸಿಎಂ ಕುಮಾರಸ್ವಾಮಿ ಇತ್ತಿಚೆಗೆ ಬೆಳಗಾವಿಗೆ ಬಂದಾಗ ಚರ್ಚಿಸಿ ಆಗಿದೆಯಂತೆ. ಇನ್ನೇನು ಮುಂದಿನ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಿಸುವಾಗಲೇ ಸಂತೋಷ ರಾಯ್ಕರ್ ಹೆಸರು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಕುಮಾರಣ್ಣ ಅಭಯ ನೀಡಿದ್ದಾರೆ ಅನ್ನೋ ಮಾಹಿತಿ ಇದೆ.
ಒಟ್ನಲ್ಲಿ, ಚುನಾವಣೆ ವರ್ಷದ ಕಾವು ಯಲ್ಲಾಪುರ ಕ್ಷೇತ್ರದಲ್ಲಿ ಈಗಿಂದಲೇ ಶುರುವಾಗಿದ್ದು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅಂತಾನೇ ಅಂದುಕೊಂಡಂತಿದ್ದ ಜೆಡಿಎಸ್ ಪಕ್ಷ, ಕ್ಷೇತ್ರದಲ್ಲಿ ಬಲಗೊಳ್ಳಲು ಕಸರತ್ತು ಶುರುವಿಟ್ಟಿದೆ. ಮುಂದೆ ಏನೇನಾಗತ್ತೋ ಕಾಯಬೇಕಿದೆ.