ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ.
ದಾಳಿ ನಂಬರ್-1
ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಇವನ ಜೊತೆ ಮಟ್ಕಾ ದಂಧೆಯಲ್ಲಿ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಆರೋಪದ ಮೇಲೆ, ಪಾಳಾ ಗ್ರಾಮದ ಮೌಲಾಲಿ, ಹಾಗೂ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಅತಾವುಲ್ಲಾ ಎಂಬುವವನ ಮೇಲೂ ಕೇಸು ಜಡಿಯಲಾಗಿದೆ. ಇದೇ ವೇಳೆ 910 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ.
ದಾಳಿ ನಂಬರ್-2
ಮುಂಡಗೋಡ ಪಟ್ಟಣದ ಬಂಕಾಪೂರ ರಸ್ತೆಯ ಪಕ್ಕದ ಚಿಕನ್ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು, ಗಣೇಶಪುರದ ಗಜೇಂದ್ರ ಬಸವರಾಜ ಪೂಜಾರ ಎಂಬುವವನ ಮೇಲೆ ಕೇಸ್ ದಾಖಲಿಸಿದ್ದಾರೆ. ಹೀಗೆ ಮಟ್ಕಾ ದಂಧೆಯಿಂದ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಆರೋಪದ ಮೇಲೆ ಮುಂಡಗೋಡ ಪಟ್ಟಣದ ಚಂದ್ರಶೇಖರ್ ಶಂಕ್ರಪ್ಪ ಲಮಾಣಿ ಎಂಬುವವನ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಇದೊಂದೇ ಕೇಸ್ ನಲ್ಲಿ ಬರೋಬ್ಬರಿ 9,027 ರೂ. ಹಣ ವಶಕ್ಕೆ ಪಡೆಯಲಾಗಿದೆ.
ದಾಳಿ ನಂಬರ್-3
ಮುಂಡಗೋಡ ತಾಲೂಕಿನ ಕಾತೂರಿನಲ್ಲೂ ಮಟ್ಕಾ ಅಡ್ಡೆಯ ಮೇಲೆ ದಾಳಿಯಾಗಿದೆ. ಗ್ರಾಮದ ಮಟನ್ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮೂಡಸಾಲಿ ಗ್ರಾಮದ ಶ್ರೀಕಾಂತ್ ದುರ್ಗಪ್ಪ ಲಕ್ಕಾಪೂರ ಎಂಬುವವನ ಮೇಲೆ ಕೇಸು ದಾಖಲಿಸಿದ್ದಾರೆ. ಆರೋಪಿ ನೀಡಿದ ಮಾಹಿತಿ ಆಧಾರದಲ್ಲಿ ಮಟ್ಕಾದಿಂದ ಸಂಗ್ರಹವಾದ ಹಣವನ್ನು ಹಾವೇರಿ ಜಿಲ್ಲೆಯ ಹಾನಗಲ್ಲಿನ ಗುರು ಗೊಲ್ಲರ್ ಎಂಬುವವನಿಗೆ ನೀಡುತ್ತಿದ್ದು, ಆತನ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಜೊತೆಗೆ, 450 ರೂ. ನಗದು ವಶಪಡಿಸಿಕೊಳ್ಳಲಾಗಿದೆ.