ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ತಾಲೂಕಿನ ಬಡ್ಡಿಗೇರಿ ಗ್ರಾಮದ 22 ವರ್ಷ ವಯಸ್ಸಿನ ಸಕ್ಕುಬಾಯಿ ಸಿದ್ದು ತೋರವತ್ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಬಡ್ಡಿಗೇರಿ ಕ್ರಾಸ್ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು.
108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರ್, ಚಾಲಕ ಕೆಂಚೇಶ್ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸದ್ಯ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.