ಕಾರವಾರ: ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದೆ. ಅಮೆರಿಕದ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ನೌಕಾ ಸಿಬ್ಬಂದಿಗಳ ಕುಟುಂಬದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಕಡಲು ನೌಕಾದಳದಿಂದಾಗಿ ಸುರಕ್ಷಿತವಾಗಿದೆ. ದೇಶದ ಗಡಿಗಳು ಸುರಕ್ಷಿತವಾಗಿವೆ. ಇದರಲ್ಲಿ, ದೇಶದ ರಕ್ಷಣೆಯಲ್ಲಿ ತೊಡಗಿರುವ ಮೂರೂ ಪಡೆಗಳ ಕೊಡುಗೆಯಿದೆ. ಹಾಗಾಗಿ ಪ್ರಜೆಗಳಲ್ಲಿ ನಿಮ್ಮೆಲ್ಲರ ಬಗ್ಗೆ ಇರುವ ಗೌರವ ಮತ್ತು ಹೆಮ್ಮೆಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೀವು ದೇಶದ ಯುವಕರಿಗೆ ಪ್ರೇರಣೆ ನೀಡುತ್ತಿದ್ದೀರಿ ಎಂದು ಶ್ಲಾಘಿಸಿದರು.
ವೃತ್ತಿಗಾಗಿ ಸಮುದ್ರದಲ್ಲಿ ಒಮ್ಮೆ ಹೊರಟರೆ ತಿಂಗಳುಗಟ್ಟಲೆ ಭೂಮಿಯನ್ನೇ ನೀವು ನೋಡುವುದಿಲ್ಲ. ಯಾರ ಜೊತೆಯಾದರೂ ಮಾತನಾಡುವುದಿದ್ದರೆ ಸಮುದ್ರದ ಜೊತೆಯೇ ಮಾತನಾಡಬೇಕು. ನೀರಿನ ಹೊರತಾಗಿ ಮತ್ತೇನೂ ಶಬ್ದವೂ ಕೇಳಿಸುವುದಿಲ್ಲ. ನಿಮ್ಮಂಥ ಮಕ್ಕಳನ್ನು ದೇಶ ಸೇವೆಗೆ ಕೊಡುಗೆಯಾಗಿ ನೀಡಿದ ಮಾತಾ ಪಿತರನ್ನು, ನಿಮ್ಮ ಪತ್ನಿಯರಿಗೆ ನಮಸ್ಕರಿಸುತ್ತೇನೆ ಎಂದರು.
ಇಂದಿನ ಕಾರ್ಯಕ್ರಮ..
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಾರವಾರದ ಕದಂಬ ನೌಕಾನೆಲೆಯ ವಿವಿಧ ಕಾರ್ಯಕ್ರಮದಲ್ಲಿ ಇಂದೂ ಕೂಡ ಭಾಗಿಯಾಗಲಿದ್ದಾರೆ. ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆಯಲ್ಲಿ,
ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯ ಜಲಾಂತರರ್ಗಾಮಿ ಸಮುದ್ರಯಾನದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ನಿನ್ನೆ ಸಂಜೆ ಕಾರವಾರದ ನೌಕಾನೆಲೆಗೆ ಆಗಮಿಸಿದ ಸಚಿವರು, ನೌಕಾಪಡೆ ಸಿಬ್ಬಂದಿ ಜೊತೆ ಔತಣಕೂಟದಲ್ಲಿ ಭಾಗಿಯಾಗಿ ಅಲ್ಲೆ ವಾಸ್ತವ್ಯ ಹೂಡಿದ್ದರು.