ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಹಿಂದೆ ಮುಂಡಗೋಡ ತಾಲೂಕಿನ ಲಿಂಕ್ ಇದೆಯಾ..? ಹೌದು ಅಂತಿದೆ ಮೂಲಗಳು. ನಿನ್ನೆ ರಾತ್ರಿ ಹುಲಗೂರಿನ ತನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದ ಮಹಿಳೆ ಸಲ್ಮಾಬಾನು ಮೇಲೆ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ ಮೇಲೆ ಬಂದು ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ರು. ಅದೃಷ್ಟವಶಾತ್ ಮಹಿಳೆಗೆ ಗುಂಡು ತಗುಲಿಲ್ಲ. ಅದ್ರೆ, ಸಿಡಿದ ಗುಂಡಿನ ರಭಸಕ್ಕೆ ಗೋಡೆ ಸೀಳಿ ಒಳ ನುಗ್ಗಿವೆ ಗುಂಡುಗಳು.

ಪಕ್ಕಾ ಸುಳಿವು..?
ಆದ್ರೆ, ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಬಚಾವಾಗಿದ್ದ ಸಲ್ಮಾಬಾನು ಈಗ ಪೊಲೀಸರ ಎದುರು ಒಂದಿಷ್ಟು ಇಂಟರ್ನಲ್ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ. ತನ್ನ ಪತಿಯೇ ನನ್ನ ಮೇಲೆ ಅಟ್ಯಾಕ್ ಮಾಡಿರಬಹುದು ಅನ್ನೋ ಶಂಕೆ ವ್ಯಕ್ತ ಪಡಿಸಿದ್ದಾಳೆ ಅನ್ನೊ ಬಾತ್ಮಿ ಬಂದಿದೆ. ಹೀಗಾಗಿ, ಸದ್ಯ ಶಿಗ್ಗಾವಿ ಪೋಲೀಸ್ರು ಆಕೆಯ ಪತಿಗಾಗಿ ನಿನ್ನೆ ರಾತ್ರಿಯಿಂದಲೇ ತಲಾಶ್ ಶುರುವಿಟ್ಟಿದ್ದಾರೆ.


ಹೌದು, ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಅದೃಷ್ಟದಾಟದಲ್ಲಿ ಬಚಾವ್ ಆಗಿದ್ದ ಸಲ್ಮಾಬಾನು ಈಗ, ತನ್ನ ಮೇಲಿನ ಅಟ್ಯಾಕ್ ನಲ್ಲಿ ಗಂಡನೇ ಇರಬಹುದು ಅಂತಾ ಸುಳಿವು ನೀಡಿರೋ ಬೆನ್ನಲ್ಲೇ ಶಿಗ್ಗಾವಿ ಪೊಲೀಸರು ಅಲರ್ಟ್ ಆಗಿದ್ದಾರೆ. ಹೀಗಾಗಿ, ಶಿಗ್ಗಾವಿಯ ಪೊಲೀಸ್ರು ಆ ಪತಿ ಮಹಾರಾಯ‌ನ ಹುಡುಕಾಟದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟೆಗೆ ಬಂದಿಳಿದಿದ್ದಾರೆ. ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ಅಬ್ದುಲ್ ಖಾದರ್ ಮುಲ್ಲಾನವರ್ ಎಂಬ ಸಲ್ಮಾಬಾನು ಪತಿಗಾಗಿ ಕಾದು ಕುಳಿತಿದ್ದಾರೆ.

ಅಷ್ಟಕ್ಕೂ ಯಾರೀತ..?
ಅಸಲು,ಶಿಗ್ಗಾವಿ ತಾಲೂಕಿನ ಹುಲಗೂರಿನ ಅಜಾದ್ ಗಲ್ಲಿಯ ಮಾಬೂಸಾಬ್ ಹುಸೇನ್ ಸಾಬ್ ಗುಡಿಗೇರಿ ಎಂಬುವವರ ಮೂವರು ಮಕ್ಕಳ ಪೈಕಿ ಓರ್ವಳು ಸಲ್ಮಾಬಾನು, ಹೀಗಿರೋ ಈಕೆಯನ್ನು ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿಯ ಅಬ್ದುಲ್ ಖಾದರ್ ಮುಲ್ಲಾನವರ್ ಎಂಬುವವನಿಗೆ ಕಳೆದ ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತಂತೆ. ನಂತ್ರ ಇವ್ರಿಬ್ಬರ ದಾಂಪತ್ಯಕ್ಕೆ ಎರಡು ಹೆಣ್ಣು, ಒಂದು ಗಂಡು ಹೀಗೆ ಮೂವರು ಮಕ್ಕಳಾಗಿವೆ. ಆದ್ರೆ ಕಳೆದ ಎರಡು ವರ್ಷಗಳಿಂದ ಅಬ್ದುಲ್ ಖಾದರ್, ಸಲ್ಮಾಬಾನುಗೆ ವಿಪರೀತ ಕಿರುಕುಳ ನೀಡ್ತಿದ್ದನಂತೆ, ಹೀಗಾಗಿ ಸಲ್ಮಾಬಾನು ನಿನ್ನ ಸಹವಾಸವೇ ಬೇಡ ಅಂತಾ ಪತಿಯನ್ನ ಬಿಟ್ಟು ತವರು ಮನೆ ಬಂದು ಸೇರಿಕೊಂಡಿದ್ದಾಳೆ. ಅಲ್ದೆ ಕಳೆದ 5 ತಿಂಗಳ ಹಿಂದೆ, ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಕಾರಣಕ್ಕಾಗಿಯೇ ಪತಿ ಅಬ್ದುಲ್ ಖಾದರ್ ಸಲ್ಮಾಬಾನು ಮೇಲೆ ಹಗೆ ತೀರಿಸಿಕೊಳ್ಳೊಕೆ ಯತ್ನಿಸಿದ್ನಾ..? ಇಂತಹದ್ದೊಂದು ಅನುಮಾನ ಸದ್ಯ ಶಿಗ್ಗಾವಿ ಪೊಲೀಸರಿಗೆ ಬಂದಿದೆ.

ಮುಂಡಗೋಡಿನ ಬಂದೂಕಾ..?
ನಿಜ ಅಂದ್ರೆ, ಕೃತ್ಯದಲ್ಲಿ ಉದ್ದನೆಯ ಬಂದೂಕು ಬಳಸಲಾಗಿದೆ ಅನ್ನೊ ಮಾಹಿತಿ ಆಧಾರದ ಮೇಲೆ, ಬಹುಶಃ SBBL ಬಂದೂಕು ಆಗಿರಬಹುದು ಅಂತಾ ಪೊಲೀಸರು ಅನುಮಾನಗೊಂಡಿದ್ದಾರೆ. ಹಾಗಿದ್ರೆ ಆ ಬಂದೂಕು ಯಾರದ್ದು..? ಎಲ್ಲಿಂದ ತರಲಾಗಿತ್ತು ಅನ್ನೊ ಸೂಕ್ಷ್ಮ ಮಾಹಿತಿ ಹೆಕ್ಕಿ ತೆಗೆಯಲು ನಿಂತ ಪೊಲೀಸರಿಗೆ
ಸಲ್ಮಾಬಾನು ನೀಡಿರೋ ಸಣ್ಣದೊಂದು ಸುಳಿವು, ಬಹುಶಃ ಮುಂಡಗೋಡಿನವರೆಗೂ ಬರುವಂತೆ ಮಾಡಿದೆ ಅನ್ನೊ ಮಾಹಿತಿ ಇದೆ. ಮುಂಡಗೋಡ ಸಮೀಪದ ಗ್ರಾಮವೊಂದರಲ್ಲಿ ಪತಿಯ ಸಂಬಂಧಿಕರದ್ದು ಬಂದೂಕು ಇದೆ ಅಂತಾ ಸಲ್ಮಾಬಾನು ಹೇಳಿರುವ ಮಾಹಿತಿ ಆಧರಿಸಿ ಮುಂಡಗೋಡಿಗೆ ಬಂದಿಳಿದಿದೆ ಒಂದು ಪೊಲೀಸ್ ತಂಡ. ಆದ್ರೆ, ಆ SBBL ಬಂದೂಕು ಮುಂಡಗೋಡ ತಾಲೂಕಿನದ್ದಾ..? ತನಿಖೆಯ ನಂತರ ಬಯಲಾಗಲಿದೆ. ಮುಂಡಗೋಡಿನಲ್ಲಿ ಸದ್ಯ ಶಿಗ್ಗಾವಿ ಪೊಲೀಸರು ತನಿಖೆಗಿಳಿದಿದ್ದಾರೆ.

ಮತ್ತೊಬ್ಬ ಆರೋಪಿ ಯಾರು..?
ಅಸಲು, ಮನೆಯ ಜಗುಲಿಯ ಮೇಲೆ ಕುಳಿತಿದ್ದ ಸಲ್ಮಾಬಾನು ಮೇಲೆ, ಅಣತಿ ದೂರದಿಂದಲೇ ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಬೈಕ್ ಮೇಲೆ ಬಂದಿದ್ದ ಆ ಇಬ್ಬರು ಆಗಂತುಕರು ಮುಸುಕುಧಾರಿಗಳಾಗಿದ್ರು. ಇಲ್ಲಿ ಓರ್ವ ಆಕೆಯ ಪತಿಯಿರಬಹುದು ಅಂತಾ ಅನುಮಾನಿಸಲಾಗಿದೆ. ಹಾಗಿದ್ರೆ ಮತ್ತೋರ್ವ ಯಾರು..? ಆತ ಆ ಬಂದೂಕಿನ ಆಳ ಅಗಲ ತಿಳಿದುಕೊಂಡಿದ್ದವನಾ..? ಹಾಗಿದ್ರೆ, ಆತ ಮುಂಡಗೋಡ ತಾಲೂಕಿನವನಾ..? ಇಂತಹದ್ದೊಂದು ಅನುಮಾನ ಪೊಲೀಸರಿಗೆ ಸದ್ಯ ಶುರುವಾಗಿದೆ. ದಕ್ಷ ಪೊಲೀಸ್ ಟೀಂ ಫಿಲ್ಡಿಗಿಳಿದಿದೆ. ಇನ್ನೇ‌ನು ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅದೇಲ್ಲೇ ಅಡಗಿದ್ರೂ ಎಳೆದು ತರೋದು ಪಕ್ಕಾ ಅಂತಿದೆ ‌ಮೂಲಗಳು.

error: Content is protected !!