ಯಲ್ಲಾಪುರ ಪೊಲೀಸರಿಗೆ ಅಕ್ಷರಶಃ ಸವಾಲಾಗಿದ್ದ SBI ಬ್ಯಾಂಕ್ ಕಳ್ಳತನ ಪ್ರಕರಣ ಕೊನೆಗೂ ಬಟಾಬಯಲಾಗಿದೆ. ಯಲ್ಲಾಪುರದ ಹೃದಯಭಾಗದಲ್ಲಿದ್ದ ಬ್ಯಾಂಕ್ ನಲ್ಲಿ ಅನಾಮತ್ತಾಗಿ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ಅಂದಹಾಗೆ, ಯಲ್ಲಾಪುರದ ಸಂಭ್ರಮ ಕ್ರಾಸ್ ಹತ್ತಿರದ ಬಹುತೇಕ ಪಟ್ಟಣದ ಹೃದಯಭಾಗದಲ್ಲಿದ್ದ SBI ಬ್ಯಾಂಕ್ ದರೋಡೆ ಯತ್ನ ಕೇಸ್, ಇಡೀ ಯಲ್ಲಾಪುರದ ಮಂದಿಗೆ ಒಂದರ್ಥದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಯಾಕಂದ್ರೆ, ಈ ಬ್ಯಾಂಕ್ ನಲ್ಲಿ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನೂ ಅಳವಡಿಸಲಾಗಿತ್ತು. ಸಿಸಿಟಿವಿ ಇತ್ತು, ಸೈರನ್ ಇತ್ತು, ಒಂದು ಇರುವೆ ಕೂಡ ಒಳ ನುಗ್ಗಿದ್ರೂ ಅದು ಅಷ್ಟು ಸುಲಭದಲ್ಲಿ ಬಚಾವ್ ಆಗುವ ಯಾವ ಸಣ್ಣದೊಂದೂ ಚಾನ್ಸೂ ಇಲ್ಲ ಅನ್ನುವಷ್ಟು ಖಚಿತತೆ ಇತ್ತು. ಇದರ ಮೇಲೆ ಇನ್ನು ಕಳ್ಳಕಾಕರು ಬರೋಕೆ ಹೇಗೆ ಸಾಧ್ಯ..?

ಅದ್ರಲ್ಲೂ ಬಹುತೇಕ ಪಟ್ಟಣದ ಹೃದಯ ಭಾಗವಾಗಿದ್ದ ಕಾರಣ ಅದೇಂತದ್ದೇ ಕತ್ತಲ ರಾತ್ರಿ ಇದ್ರೂ ಯಾರ ಕಣ್ಣೂ ತಪ್ಪಿಸೋಕೆ ಸಾಧ್ಯವೇ ಇಲ್ಲ ಅನ್ನುವಷ್ಟು ಗ್ಯಾರಂಟಿ ಇತ್ತು. ಆದ್ರೂ ಅವತ್ತು ಮೇ 11 ರ ರಾತ್ರಿ ಆ ಬ್ಯಾಂಕ್ ಗೆ ಕನ್ನ ಹಾಕಲಾಗಿತ್ತು ಅಂದ್ರೆ ಅದೇಂತಹ ಚಾಣಾಕ್ಷ, ಚಾಲಾಕಿ ಕಳ್ಳನಿರಬಹುದು ಅಂತಾ ಹುಬ್ಬೇರಿಸಿದ್ರು ಜನ.

ಸವಾಲಾಗಿತ್ತು..!
ಅಸಲು, ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಯಲ್ಲಾಪುರ ಪೊಲೀಸರಿಗೆ ನಿಜಕ್ಕೂ ಈ ಕೇಸು ಸವಾಲಾಗಿತ್ತು. ಅದಕ್ಕೂ ಮಿಗಿಲಾಗಿ ಇಡೀ ಯಲ್ಲಾಪುರ ಮಂದಿಯ ದೃಷ್ಟಿಯಲ್ಲಿ ಪೊಲೀಸರು ಎದೆಯುಬ್ಬಿಸಿ ನಡೆಯದಂತೆ ಮಾಡಿತ್ತು ಈ ಪ್ರಕರಣ. ಯಾಕಂದ್ರೆ ಬಹುತೇಕ ಯಲ್ಲಾಪುರದ ಹೃದಯ ಭಾಗದಲ್ಲಿ ಹಾಗೆ ದೊಡ್ಡದೊಂದು ಬ್ಯಾಂಕ್ ಗೆ ಕನ್ನ ಹಾಕಲಾಗತ್ತೆ ಅಂದ್ರೆ ಅಲ್ಲಿನ ಪೊಲೀಸರು ಅದೇನು ಕಡೆದು ಗುಡ್ಡೆ ಹಾಕ್ತಾರೆ..? ರಾತ್ರಿ ಮನೆಲಿ ಸಕತ್ ಗೊರಕೆ ಹೊಡಿತಾರಾ..? ಅಂತೇಲ್ಲ ಪುಕಾರುಗಳು ಪೊಲೀಸರ ವಿರುದ್ದ ಎದ್ದಿದ್ದವು. ಹೀಗಾಗಿ, ಮೈಕೊಡವಿ ಎದ್ದಿದ್ದರು ಪಿಐ ಸುರೇಶ್ ಯಳ್ಳೂರ್ ಸಾಹೇಬ್ರು‌.

ಫುಲ್ ಪ್ಯಾಕ್ ಆಗಿದ್ದ ಚಾಲಾಕಿ..!
ಕಳ್ಳನ ಸೆರೆ ಹಿಡಿಯಲು ಫಿಲ್ಡಿಗೆ ಇಳಿದಿದ್ದ ಪೊಲೀಸರಿಗೆ ಬ್ಯಾಂಕಿನ ಸಿಸಿಟಿವಿಯಲ್ಲಿ ಆ ಕಳ್ಳನ ಕರಾಮತ್ತುಗಳು ಕಂಡಿದ್ದವು. ನಿಜ ಅಂದ್ರೆ, ಈ ಬ್ಯಾಂಕ್ ನ ಅಷ್ಟೂ ಅಸಲೀಯತ್ತುಗಳನ್ನು ಸ್ಟಡಿ ಮಾಡಿಯೇ ಫಿಲ್ಡಿಗೆ ಇಳಿದಿದ್ದ ಚಾಲಾಕಿ ಕಳ್ಳ, ಸಿಸಿಟಿವಿ ಕಣ್ಣು ತಪ್ಪಿಸಲು ತನ್ನೀಡಿ ದೇಹವನ್ನು ಹೆಣಕ್ಕೆ ಬಟ್ಟೆ ಸುತ್ತೋ ಹಾಗೆ ಪ್ಯಾಕ್ ಮಾಡಿಕೊಂಡಿದ್ದ. ಆತನ ದೇಹದ ಒಂದು ಕೂದಲೂ ಸಹ ಹೊರಗಡೆ ಕಾಣದ ಹಾಗೆ ಮುಚ್ಚಿಕೊಂಡಿದ್ದ. ಹೀಗಾಗಿ, ಈತ ಯಾರಪ್ಪಾ ಕಿಲಾಡಿ ಅಂತಾ ಪೊಲೀಸರು ತಲೆ ಕೆರೆದುಕೊಂಡಿದ್ರು. ಆದ್ರೆ, ಆ ಕಳ್ಳ ಅದೇಷ್ಟೇ ಚಾಲಾಕಿತನ ತೋರಿಸಿದ್ರೂ ಅದನ್ನೇಲ್ಲ ಬೇಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಲೋಕಲ್ ಕಳ್ಳ..!
ನಿರ್ಧಿಷ್ಟ, ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಯಲ್ಲಾಪುರ ಪೊಲೀಸರಿಗೆ ಆರೋಪಿಯ ಸುಳಿವು ಸಿಗತ್ತೆ. ಹೀಗಾಗಿ, ಯಲ್ಲಾಪುರ ಕಾಳಮ್ಮನಗರದ, ಆಶ್ರಯ ಕಾಲೋನಿಯ ಉಮೇಶ್ ಗೋವಿಂದಪ್ಪ ಹಾನಗಲ್ ಎಂಬುವವನನ್ನು ಎಳೆದು ತಂದು ವಿಚಾರಣೆ ಮಾಡ್ತಾರೆ. ಪೊಲೀಸ್ ಭಾಷೆಯಲ್ಲೇ ಆರತಿ ಎತ್ತಿದಾಗ ಕಳ್ಳತನ ಮಾಡಿದ್ದ ಅಷ್ಟೂ ಮಜಕೂರಗಳನ್ನು ಬಾಯಿ ಬಿಟ್ಟಿದ್ದಾನೆ ಆರೋಪಿ. ಹೀಗಾಗಿ, ನಿಟ್ಟುಸಿರು ಬಿಟ್ಟಿದ್ದಾರೆ ಪೊಲೀಸರು‌. ಇನ್ನು, ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್, ಒಂದು ಕಾರ್ ಮತ್ತು ಒಂದು ಮೋಟಾರ ಸೈಕಲ್‌ನ್ನು ಜಪ್ತುಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಎಸ್ಪಿ ಡಾ.ಸುಮನ್ ಡಿ.ಫೆನ್ನೇಕರ್

ಉತ್ತರ ಕನ್ನಡ ಎಸ್ಪಿ ಡಾ. ಸುಮನಾ ಪೆನ್ನೇಕರ,
ಹೆಚ್ಚುವರಿ ಪೊಲೀಸ ಅಧೀಕ್ಷಕ, ಎಸ್. ಬದರಿನಾಥ, ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಡ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ಸುರೇಶ ಯಳ್ಳೂರ್ ನೇತ್ರತ್ವದಲ್ಲಿ ಪಿಎಸ್ಐ ಅಮೀನಸಾಬ್ ಎಮ್.ಅತ್ತಾರ, ಪಿಎಸ್ಐ ಮಂಜುನಾಥ ಗೌಡರ, ಪ್ರೋ. ಪಿಎಸ್ಐ ಶಿವಕುಮಾರ, ಹಾಗೂ ಸಿಬ್ಬಂದಿಗಳಾದ, ಬಸವರಾಜ, ಮಹ್ಮದ್ ಶಪೀ, ಗಜಾನನ, ಚಿದಾನಂದ, ಶೋಭಾ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿದ್ದರು.

error: Content is protected !!