ರಾಷ್ಟ್ರ ಮಟ್ಟದಲ್ಲಿ ಕೈ ಪಡೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಹೊಸತನಗಳ ಅನ್ವೇಷಣೆಗೆ ಹೊರಟಿದೆ‌. ಉದಯಪುರದಲ್ಲಿ ಸದ್ಯ ನಡೆಯುತ್ತಿರೊ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಹೊಸತನಗಳಿಗೆ ಒಗ್ಗಬೇಕಾದ ಅನಿವಾರ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಕಾಂಗ್ರೆಸ್. ಕುಟುಂಬ ರಾಜಕಾರಣಕ್ಕೆ ತೀಲಾಂಜಲಿ ಇಟ್ಟು, ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ಚಿಂತನಾ ಶಿಬಿರದಲ್ಲಿ ಗಂಭೀರ ಚಿಂತನೆ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ಕೊಡಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿಬಿಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗ್ತಿದೆ. ಹೀಗಾಗಿ, ರಾಜ್ಯದಲ್ಲಿ ತಮ್ಮ ಕುಟುಂಬದ ಕುಡಿಗಳಿಗೆ ಪಟ್ಟಾಭಿಷೇಕ ಮಾಡುವ ಮಹದಾಸೆ ಹೊತ್ತ ಕೈ ಪಡೆಯ ಸಾಲು ಸಾಲು ನಾಯಕರಿಗೆ ನಿರಾಶೆ ಕಾದಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

ದೇಶಪಾಂಡೆ ಕನಸು..?
ದೂರದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ‌ನ ತೀರ್ಮಾನಗಳು ಕರ್ನಾಟಕದ ಉಳಿದ ಕ್ಷೇತ್ರಗಳಲ್ಲಿ ಅದ್ಯಾವ ಮಟ್ಟಿಗೆ ಪರಿಣಾಮ ಬೀರತ್ತೋ ಗೊತ್ತಿಲ್ಲ. ಆದ್ರೆ ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಕ್ಕೆ ಮಾತ್ರ ಬಹುತೇಕ ಗೇಮ್ ಪ್ಲ್ಯಾನ್ ಉಲ್ಟಾ ಪಲ್ಟಾ ಮಾಡುವ ಎಲ್ಲಾ ಸಾಧ್ಯತೆ ಸ್ಪಷ್ಟವಾಗ್ತಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರನ ಪಟ್ಟಾಭಿಷೇಕಕ್ಕೆ ಅಣಿಯಾಗಿದ್ದ ಆರ್.ವಿ.ದೇಶಪಾಂಡೆಯವ್ರಿಗೆ ಕೈ ಪಡೆಯ ಇಂತಹ ತೀರ್ಮಾನಗಳು ಬಹುತೇಕ ಕನಸು ಭಗ್ನ ಗೊಳಿಸಬಹುದಾದ ಸಾಧ್ಯತೆ ಹೆಚ್ಚಿದೆ.

ಹಳಿಯಾಳದಲ್ಲಿ…!
ಒಂದರ್ಥದಲ್ಲಿ, ಹಳಿಯಾಳಕ್ಕೆ ನನಗೆ, ಯಲ್ಲಾಪುರಕ್ಕೆ ನನ್ನ ಸುಪುತ್ರಗೆ ಟಿಕೆಟ್ ನೀಡಿ ಅಂತಾ ಈಗಾಗಲೇ ಕಾಂಗ್ರೆಸ್ ಹೈಕಮಾಂಡಿನ ಟೇಬಲ್ ಮೇಲೆ ಅರ್ಜಿ ಹಾಕಿ ಕೂತಿದ್ದಾರೆ ದೇಶಪಾಂಡೆ ಸಾಹೇಬ್ರು. ಹೀಗಾಗಿ, ಇಡೀ ಕೈ ಪಡೆಯ ಅಂಗಳದಲ್ಲಿ ಈ ಟಿಕೆಟ್ ಫೈಟ್ ತೀವ್ರ ಗುದುಮುರುಗಿಗೆ ಕಾರಣವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಅದು ಹೇಗೆ ಒಂದೇ ಕುಟುಂಬದ ಕೈಗೆ ಟಿಕೆಟ್ ನೀಡೋದು ಅಂತಾ ಸಾಕಷ್ಟು ಪ್ರಶ್ನೆಗಳು, ವಿರೋಧಗಳು ಎದ್ದಿವೆ. ಅದ್ರಲ್ಲೂ ಹಳಿಯಾಳ ಕ್ಷೇತ್ರದ ಮೇಲೆ ಕಣ್ಣಿಟ್ಟು ಬಕ ಪಕ್ಷಿಯಂತೆ ಕಾದು ಕುಳಿತಿರೋ ಎಸ್.ಎಲ್.ಘೋಟ್ನೇಕರ್ ಈ ಸಾರಿ ನಂಗೇ ಟಿಕೆಟ್ ಬೇಕೇ ಬೇಕು ಅಂತಾ ಟವೆಲ್ ಹಾಕಿ ಕೂತಿದ್ದಾರೆ. ಅದ್ರೊಟ್ಟಿಗೆ ಹಳಿಯಾಳ ಕ್ಷೇತ್ರದಲ್ಲಿ ತಮ್ಮದೇ ಆದ ಪಡೆಯೊಂದನ್ನು ಕಟ್ಟಿಕೊಂಡು ದೇಶಪಾಂಡೆ ಸಾಹೇಬ್ರಿಗೆ ಠಕ್ಕರ್ ಕೊಡಲೇ ಬೇಕು ಅಂತಾ ಜಿದ್ದಿಗೆ ಬಿದ್ದಿದ್ದಾರೆ. ಇದೂ ಕೂಡ ಕೈಪಡೆಗೆ ಒಂದರ್ಥದಲ್ಲಿ ಬಿಸಿತುಪ್ಪವಾಗಿದೆ. ಅದ್ರ ಜೊತೆ ಜೊತೆಗೆ ಹಾಗೇನಾದ್ರೂ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ರೆ ಬೇರೆ ಬೇರೆ ದಾರಿಗಳ ಮೂಲಕ ದೇಶಪಾಂಡೆ ಸಾಹೇಬ್ರಿಗೆ ಮಗ್ಗಲು ಮುಳ್ಳಾಗುವ ಎಲ್ಲಾ ತಯಾರಿ ಶುರುವಿಟ್ಟಿದ್ದಾರೆ ಘೋಟ್ನೇಕರ್..! ಇದರ ಭಾಗವಾಗೇ ಸದ್ಯ ಜೆಡಿಎಸ್ ಅಂಗಳದಲ್ಲೂ ಘೋಟ್ನೇಕರ್ ಗೆ ರೆಡ್ ಕಾರ್ಪೆಟ್ ರೆಡಿಯಾಗ್ತಿದೆ. ಕಾಂಗ್ರೆಸ್ ಅದೇನು ಡಿಸೈಡ್ ಮಾಡತ್ತೋ ನೋಡಿಕೊಂಡು ಮುಂದಿನ ತೀರ್ಮಾನಕ್ಕೆ ಬರೋಣ ಅಂತಾ ಖುದ್ದು ಕುಮಾರಣ್ಣನ ಜೊತೆ ಈಗಾಗಲೇ ಮಾತುಕತೆ ಆಗಿದೆ ಅನ್ನೋ ಪಕ್ಕಾ ಮಾಹಿತಿ ಇದೆ.

ಯಲ್ಲಾಪುರ ಕ್ಷೇತ್ರಕ್ಕೂ ಕೊಕ್ಕೆ..?
ಇನ್ನು ಯಲ್ಲಾಪುರ ಕ್ಷೇತ್ರಕ್ಕೆ ಬರುವುದಾದ್ರೆ, ಇಲ್ಲೂ ಕೂಡ ಇನ್ನೇನು ಪ್ರಶಾಂತ್ ದೇಶಪಾಂಡೆಯವರಿಗೆ ಟಿಕೆಟ್ ಖಾತ್ರಿ, ಅವ್ರೇ ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಅಂತಾ ಖುದ್ದು ಆರ್ವಿಡಿ ಸಾಹೇಬ್ರು ಪ್ರೊಜೆಕ್ಟ್ ಮಾಡಿಯಾಗಿತ್ತು. ಆದ್ರೆ, ಅವರು ಅಂದುಕೊಂಡಂತೆ ಯಲ್ಲಾಪುರ ಕ್ಷೇತ್ರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಪ್ರಶಾಂತಣ್ಣ ಯಶಸ್ಸು ಕಾಣಲೇ ಇಲ್ಲ. ಕೆಲವು, ಹುಂಬ ನಿರ್ಧಾರಗಳಿಂದ ಇಡೀ ಕಾಂಗ್ರೆಸ್ ಪಕ್ಷವನ್ನೇ ಇಬ್ಬಾಗ ಮಾಡಿಬಿಟ್ರು ಅಂತಿದಾರೆ ಜನ. ಹೀಗಾಗಿ, ಇಲ್ಲಿ ಈಗಾಗಲೇ ಬಿಜೆಪಿಯ ಮಾಜಿ ಶಾಸಕ ವಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು “ಆಂತರಿಕ” ಪಡೆ ಗಟ್ಟಿ ನಿರ್ಧಾರ ಮಾಡಿದೆ. ಅದಕ್ಕೆ ಬೇಕಾದ ಎಲ್ಲಾ ಕಾರ್ಯತಂತ್ರಗಳೂ ಜಾರಿಯಲ್ಲಿವೆ. ರಾಜ್ಯದ ಪ್ರಮುಖ ಸಮುದಾಯದ “ಶ್ರೀ”ಗಳೊಬ್ಬರ ಮೂಲಕ ಈಗಾಗಲೇ ಕೈ ಪಡೆಯ ಅಂಗಳಕ್ಕೆ ಬಂದು ನಿಂತಿದ್ದಾರೆ ಪಾಟೀಲರು. ಇಡೀ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಗೆ ಪ್ರಬಲ ಲಿಂಗಾಯತ ಲೀಡರ್ ಆಗಿ ವಿ.ಎಸ್.ಪಾಟೀಲರನ್ನೇ ಮುನ್ನಲೆಗೆ ತರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಯಲ್ಲಾಪುರ ಕ್ಷೇತ್ರದಲ್ಲೂ ದೇಶಪಾಂಡೆಯವರ ಕನಸು ವರ್ಕೌಟ್ ಆಗುವ ಯಾವ ಸೂಚನೆಗಳೂ ಸದ್ಯಕ್ಕೆ ಸಿಗ್ತಿಲ್ಲ.

ಇದೇಲ್ಲದರ ನಡುವೆ..
ಇನ್ನು ತಮ್ಮದೇ ಪಾರುಪತ್ಯದ ಎರಡೂ ಕ್ಷೇತ್ರಗಳಲ್ಲೂ ದೇಶಪಾಂಡೆ ಸಾಹೇಬ್ರಿಗೆ ಈಗಾಗಲೆ ಆಂತರಿಕ ಬೇಗುದಿ ಭಾರೀ ತಳಮಳ ಹುಟ್ಟಿಸಿದೆ. ಇದರ ನಡುವೆ ಉದಯಪುರದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿನ ಚಿಂತನೆಗಳು ಮತ್ತಷ್ಟು ಚಿಂತೆಗೀಡು ಮಾಡ್ತಿದೆ‌. ಅದ್ಯಾಕೋ ಏನೋ ಪುತ್ರನ ಪಟ್ಟಾಭಿಷೇಕಕ್ಕೇ ಅಂತಹದ್ದೊಂದು ಪೂರಕ ವಾತಾವರಣ ಕೂಡಿ ಬರುತ್ತಲೇ ಇಲ್ಲ ಅಂತಾ ಒಳಗೊಳಗೆ ತಳಮಳಗೊಂಡಿದ್ದಾರಂತೆ ದೇಶಪಾಂಡೆ ಸಾಹೇಬ್ರು. ಮುಂದೇನಾಗತ್ತೋ ಕಾಯಬೇಕಿದೆ ಅಷ್ಟೆ..!

error: Content is protected !!