ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯ ಪೊಲೀಸಪ್ಪ ಮಾಡಿರೋ ಅದೊಂದು ರಗಳೆ ,ರಾದ್ದಾಂತ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸುತ್ತಿದೆ.
ತಾನೇ ಪೊಲೀಸ್ ವರಿಷ್ಠಾಧಿಕಾರಿ ಅಂತಾ ಪೋಸು ಕೊಡುವ ಹುಂಬತನಕ್ಕೆ ಈಗ ಅದೇ ಇಲಾಖೆಯ ಹಿರಿಯರು ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ.

ಆಗಿದ್ದೇ‌ನು..?
ಅದು ಪಾಳಾ ಗ್ರಾಮ, ಮುಂಡಗೋಡ ತಾಲೂಕಿನ ಮಟ್ಟಿಗೆ ಒಂದಿಷ್ಟು ಸೂಕ್ಷ್ಮ ಪ್ರದೇಶ. ಇಲ್ಲಿ ದಶಕಗಳ ಹಿ‌ಂದಿನಿಂದಲೂ ಕೋಮು ದಳ್ಳುರಿ ಒಳಗೊಳಗೆ ಹೊಗೆಯಾಡಿ, ಕೆಲವು ಬಾರಿ ಹೊತ್ತಿಕೊಂಡೂ ಉರಿದ ಘಟನೆಗಳಾಗಿತ್ತು. ಆದ್ರೆ ಇತ್ತೀಚೆಗೆ ಇಲ್ಲಿ ಅಕ್ಷರಶಃ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಸಹಬಾಳ್ವೆ ನಡೆಸ್ತಿದಾರೆ. ಆದ್ರೆ, ಅವನೊಬ್ಬ ಖಾಕಿತೊಟ್ಟ ಹುಂಬನ ಕಿತಾಪತಿ ಈಗ ಮತ್ತೆ ಹಲವು ಮನಸ್ಸುಗಳನ್ನು ಕೆರಳಿಸಿದೆ.

ಅವತ್ತು ಮೇ 13.. ಇದು ಈಗ್ಗೆ ಎರಡು ದಿನಗಳ ಹಿಂದಿನ ಮಾತು. ಪಾಳಾ ಸಮೀಪ ಅದೊಬ್ಬ ಮಾವಿನ ಹಣ್ಣಿನ ವ್ಯಾಪಾರಿ ಭಗವಾಧ್ವಜ ಹಾಕೊಂಡು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡ್ತಾ ಇರ್ತಾನೆ. ಆತನ ಹೆಸ್ರು ಅನಿಲ್. ಅಂದಹಾಗೆ ಈ ಹುಡುಗ ಮಾವು ಬೆಳೆಗಾರ, ವ್ಯಾಪಾರಿಯಲ್ಲ‌. ಸೀಜನ್ ನಲ್ಲಿ ಮಾತ್ರ ತನ್ನ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನ ಪ್ರತೀ ವರ್ಷವೂ ಮಾರಾಟ ಮಾಡಲು ರಸ್ತೆ ಪಕ್ಕ ನಿಂತಿರ್ತಾನೆ. ಅಷ್ಟಕ್ಕೂ ಇಲ್ಲಿ ಇವನೊಬ್ಬನೇ ಅಲ್ಲ. ಪಾಳಾದಿಂದ ಮಳಗಿವರೆಗೆ ಶಿರಸಿ ರಸ್ತೆಯ ಅಕ್ಕಪಕ್ಕದಲ್ಲಿ ಹತ್ತಾರು ರೈತರು ಹೀಗೆ ನಿತ್ಯವೂ ಮಾವಿನ ಹಣ್ಣು ಮಾರಾಟ ಮಾಡಲು ನಿಂತಿರ್ತಾರೆ. ಈತನೂ ಕೂಡ ಕಳೆದ ಹತ್ತಾರು ದಿನದಿಂದ ವ್ಯಾಪಾರಕ್ಕಿಳಿದಿದ್ದ. ಆದ್ರೆ ಅದ್ಯಾಕೊ ಗೊತ್ತಿಲ್ಲ ಅವತ್ತು ಭಗವಾಧ್ವಜ ತನ್ನ ಪುಟ್ಟ ವ್ಯಾಪಾರದ ಸ್ಥಳದಲ್ಲಿ ನೆಟ್ಟುಕೊಂಡಿದ್ದ. ಹೀಗಾಗಿ, ಆ ಭಗವಾಧ್ವಜ ಅನ್ನೋದು ಆ ಪೊಲೀಸಪ್ಪನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ, ತಾನೇ ಖುದ್ದು ಎಸ್ಪಿ ಸಾಹೇಬನ ಹಾಗೆ ವರ್ತಿಸಿದ್ದಾನೆ ಪುಣ್ಯಾತ್ಮ. ಆ ಹುಡುಗನ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿದ್ದಾನೆ ಅಂತಾ ಆರೋಪ ಕೇಳಿ ಬಂದಿದೆ.

ಅಳಿಯ ಮಾವನ ಮೇಲೆ ಎಗರಾಟ..! ಅಷ್ಟಕ್ಕೂ, ಭಗವಾಧ್ವಜ ಹಾಕೊಂಡು ವ್ಯಾಪಾರ ಮಾಡ್ತಿದ್ದ ಆ ರೈತ ಹುಡುಗನಿಗೆ ಉದ್ದುದ್ದ ಕಾನೂನಿನ ಭಾಷಣ ಬಿಗಿದು ಒದರಾಡಿ ಹೋಗಿದ್ದ ಪೊಲೀಸಪ್ಪ, ಆ ನಂತರದಲ್ಲಿ ಬಂದು ಆ ಹುಡುಗನ ಮಾವ ಅಪ್ಪಣ್ಣ ಮಲ್ಲಿಗಾರ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ ಅಂತಾ ಆರೋಪಿಸಲಾಗಿದೆ. ಹೀಗಾಗಿನೇ ಇಲ್ಲಿನ ಜನ ಅವತ್ತೇ ಮುಂಡಗೋಡ ಠಾಣೆಗೆ ಬಂದು ದೂರು ನೀಡಿದ್ರು. ಆದ್ರೆ ಮುಂಡಗೋಡಿನ ಪಿಐ ಸಾಹೇಬ್ರು ಅದನ್ನ ನಾವೇಲ್ಲ ಅವನಿಗೆ ಬುದ್ದಿ ಹೇಳ್ತಿವಿ, ಸರಿ ಮಾಡ್ತಿವಿ ಅಂತಾ ಪಾಳಾದ ಜನರನ್ನ ವಾಪಸ್ ಕಳಿಸಿದ್ರಂತೆ‌. ಆದ್ರೆ ಅದು ಅಷ್ಟಕ್ಕೆ ಮುಗಿದೇ ಇಲ್ಲ. ಪಾಳಾದಲ್ಲಿ ನಡೆದಿದ್ದ ಅದೊಂದು ಘಟನೆ ಈಗ ಮುಂಡಗೋಡ ಪಟ್ಟಣದ ಸಮಸ್ತ ಹಿ‌ಂದು ಸಂಘಟನೆಗಳ‌ ಕಾರ್ಯಕರ್ತರನ್ನ ಕೆರಳಿಸಿದೆ.

ಕೂಲ್ ಆಗಿ ವರ್ತಿಸಲಿಲ್ಲ..!
ನಿಜ, ಈ ಸದ್ಯ ರಾಜ್ಯದೆಲ್ಲೆಡೆ ಸಾಕಷ್ಟು ಘಟನೆಗಳಿಂದ ಕೋಮು ಸೌಹಾರ್ಧತೆಯನ್ನೇ ಪ್ರಶ್ನಿಸುವ ಮಟ್ಟಿಗೆ ಘಟ‌ನೆಗಳು ಜಾರಿಯಲ್ಲಿವೆ. ಹೀಗಿರೊವಾಗ ಅವನೊಬ್ಬ ಏನೂ ಅರಿಯದ ಹುಡುಗ ಭಗವಾಧ್ವಜ ಕಟ್ಟಿಕೊಂಡು ವ್ಯಾಪಾರಕ್ಕಿಳಿದಿದ್ದ ಸಂಗತಿಯನ್ನ ತುಂಬಾ ಕೂಲ್ ಆಗಿಯೇ ಬಗೆಹರಿಸಿದ್ದಿದ್ರೆ ಇವತ್ತು ಆ ಘಟನೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬರುತ್ತಿರಲಿಲ್ಲವೆನೊ. ಆದ್ರೆ ಆ ಹುಂಬ ಪೊಲೀಸಪ್ಪನ ಎಕ್ಸ್ಟ್ರಾ ಬುದ್ದಿಗೆ ಅದೇಲ್ಲ ಹೊಳೆದೇ ಇಲ್ಲ. ಹೀಗಾಗಿ, ಕೂಲ್ ಆಗಿ ಬಗೆ ಹರಿಯಬೇಕಾಗಿದ್ದ ಸಮಸ್ಯೆಯೊಂದನ್ನು ಅನಾಮತ್ತಾಗಿ ಇಷ್ಟೂದ್ದ ಜಗ್ಗಿದ್ದಾನೆ. ತನ್ನ ಪವರ್ ಬಳಸಿ ಎಗರಾಡಿದ್ದಾನೆ ಅಂತಾ ಅಲ್ಲಿನ ಜನ ಆತನ ವಿರುದ್ಧ ಕೆಂಡ ಕಾರುತಿದ್ದಾರೆ.

ಹಿಂದು ಸಂಘಟನೆಗಳ ಸಭೆ..!
ಇದೇ ಕಾರಣಕ್ಕಾಗಿ ರವಿವಾರ ಮುಂಡಗೋಡಿನ ಬಸವಣ್ಣ ದೇವಸ್ಥಾನದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಸಭೆ ಮಾಡಿದ್ದಾರೆ. ಪೊಲೀಸಪ್ಪನ ಓವರ್ ಆ್ಯಕ್ಟ್ ಬಗ್ಗೆ ಖುಲ್ಲಂ ಖುಲ್ಲಾ ಚರ್ಚಿಸಿದ್ದಾರೆ. ಭಗವಾಧ್ವಜ ತೆಗೆದು ಹಾಕಲು ಅವನ್ಯಾರು..? ಅವನಿಗೆ ಆ ಅಧಿಕಾರ ಕೊಟ್ಟಿದ್ದು ಯಾರು ಅಂತಾ ಪ್ರಶ್ನಿಸಿದ್ದಾರೆ. ನಾಳೆ ಇದೇ ಘಟನೆ ಖಂಡಿಸಿ ಹಿಂದು ಜಾಗರಣ ವೇದಿಕೆ, ಭಜರಂಗದಳ, ಶ್ರೀರಾಮಸೇನೆ ಸೇರಿದಂತೆ ಹಲವು ಹಿಂದುಪರ ಸಂಘಟ‌ನೆ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಅರ್ಪಿಸಲಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಈ ಮೂಲಕ, ಆ ಪೊಲೀಸಪ್ಪನ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದಾರೆ‌.

ಪ್ಲೀಸ್..!
ಅಷ್ಟಕ್ಕೂ, ಈ ವಿಷಯವನ್ನು ಎಲ್ಲರೂ ಕುಳಿತು ತಾಳ್ಮೆಯಿಂದ ಬಗೆಹರಿಸುವ ಅವಶ್ಯಕತೆಯಿದೆ. ಈ ಮೂಲಕ ಮುಂಡಗೋಡಿನ ಸಹಬಾಳ್ವೆ ಕಾಯ್ದುಕೊಳ್ಳಬೇಕಿದೆ. ತಾಲೂಕಿನ ಹಿಂದು ಮುಸ್ಲಿಂ ಬಾಂಧವರ ಅನ್ಯೊನ್ಯತೆ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಇದು ಪಬ್ಲಿಕ್ ಫಸ್ಟ್ ನ್ಯೂಸ್ ಕಳಕಳಿ.

 

error: Content is protected !!