ಯಲ್ಲಾಪುರ ಕ್ಷೇತ್ರದಲ್ಲಿ ಅಕ್ಷರಶಃ ಮಕಾಡೆ ಮಲಗಿದ್ದ ಜೆಡಿಎಸ್ ನ ತೆನೆ ಹೊತ್ತ ಮಹಿಳೆ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಸೂಚನೆಗಳು ಸಿಕ್ಕಿವೆ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲದ ಹಾಗಿದ್ದ ಪಕ್ಷಕ್ಕೆ ಹುರುಪಿನಿಂದಲೇ ಯುವ ಪಡೆಯೊಂದು ದಾಂಗುಡಿ ಇಟ್ಟಿದೆ. ಇನ್ನೇನು ಕುಮಾರಣ್ಣನ ಇಶಾರೆಗಾಗಿ ಕಾದು ಕುಳಿತಿರೊ ಅದೊಂದು ಟೀಂ ಯಲ್ಲಾಪುರ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗುತ್ತಿದೆ.

ಅವ್ರು ಸಂತೋಷ್..!
ಅವ್ರ ಹೆಸ್ರು ಸಂತೋಷ ರಾಯ್ಕರ್, ಮಳಗಿ ಗ್ರಾಮದವರು. ನಿಮಗೆ ನೆನಪಿರಬಹುದು, ಅದು 2014 ರ ಲೋಕಸಭಾ ಚುನಾವಣೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿಯ ದಿ. ಸುರೇಶ್ ಅಂಗಡಿಯವರ ವಿರುದ್ಧ ಸ್ಪರ್ಧಿಸಿದ್ದವರು ಇದೇ ಸಂತೋಷ್,
ನಂತ್ರ, 2018 ರ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆ ಹಂತದಲ್ಲಿ ಕುಮಾರಣ್ಣನ ಇಶಾರೆಯಿಂದ ಕಣದಿಂದ ಹಿಂದೆ ಸರಿದಿದ್ದ ಇವ್ರು ಆ ನಂತರದಲ್ಲಿ ಕುಮಾರಣ್ಣನ ತೀರ್ಮಾನದಿಂದ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಆದ್ರೆ, ತಮ್ಮ ರಾಜಕೀಯದ ಕಾರ್ಯಗಳನ್ನು ಮಾತ್ರ ಕೈಬಿಟ್ಟಿರಲಿಲ್ಲ. ಬಿಜೆಪಿಯೊಂದಿಗೆ ಗುರುತಿಸಿಕೊಂಡು ಮಳಗಿ ಭಾಗದಲ್ಲಿ ತಮ್ಮದೇ ಆದ ಪಡೆಯೊಂದನ್ನು ಸಕ್ರೀಯಗೊಳಿಸಿದ್ದರು. ಆದ್ರೆ ಈಗ ಮತ್ತೆ ಜೆಡಿಎಸ್ ನಿಂದ ಅಂತಹದ್ದೊಂದು ಅವಕಾಶ ಒದಗಿ ಬಂದ ಹಿನ್ನೆಲೆ ಮತ್ತೇ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.

ಮೇ 13 ಕ್ಕೆ ಫೈನಲ್..?
ಅಂದಹಾಗೆ, ನಾಡಿದ್ದು ಮೇ 13 ಕ್ಕೆ ಬೆಂಗಳೂರಿನಲ್ಲಿ ಕುಮಾರಣ್ಣ ಸಭೆಯೊಂದನ್ನ ಮಾಡ್ತಿದಾರೆ. ಆ ಸಭೆಯಲ್ಲಿ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಸಂತೋಷ ರಾಯ್ಕರ್ ಭಾಗಿಯಾಗಲಿದ್ದು ಆ ಹೊತ್ತಿನಿಂದಲೇ ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ ಅನ್ನೋ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಯಲ್ಲಾಪುರ ಕ್ಷೇತ್ರದಲ್ಲಿ ಈಗ ಜೆಡಿಎಸ್ ತನ್ನ ಅಭ್ಯರ್ಥಿಯ ಘೋಷಣೆ ಮಾಡಿ ಇನ್ನೇನು ರಣಕಹಳೆ ಮೊಳಗಿಸಲು ರೆಡಿಯಾಗಿದ್ದಾರಂತೆ.

ಏನಿದೆ ಲೆಕ್ಕಾಚಾರ..?
ಹಾಗೆನೋಡಿದ್ರೆ, ಮಳಗಿ ಭಾಗದಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿ ತಮ್ಮದೇ ಆದ ಪಡೆಯೊಂದನ್ನ ಕಟ್ಟಿಕೊಂಡಿದ್ದ ಸಂತೋಷ ರಾಯ್ಕರ್, ಈ ಭಾಗದಲ್ಲಿ ಅದೇನೇ ಕಾರ್ಯಕ್ರಮಗಳು ನಡೆದ್ರೂ, ಅಥವಾ ಅದೇನೇ ಸಮಸ್ಯೆಗಳು ಎದುರು ಬಂದು ನಿಂತಿದ್ರೂ ಅಲ್ಲಿನ ಜನರೊಟ್ಟಿಗೆ ಹೆಗಲು ಕೊಟ್ಟವರು. ಹೀಗಾಗಿನೇ ಆ ಭಾಗದಲ್ಲಿ ಈ ಕ್ಷಣಕ್ಕೂ ಅವ್ರ ಸಲುವಾಗಿ ಹಿಂಡು ಹಿಂಡು ಯುವಕರು ಬೆನ್ನಿಗೆ ನಿಲ್ತಾರೆ. ಅಲ್ದೆ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯದ ರಾಜಕೀಯ ಸ್ಥಿತ್ಯಂತರಗಳಿಂದ ಬಳಲಿ ರೋಸಿ ಹೋಗಿರೋ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಅದೇಷ್ಟೋ “ನೊಂದ” ಬಳಗ, ಪರ್ಯಾಯ ನೆಲೆಯೊಂದರ ತಲಾಶ್ ನಲ್ಲಿದ್ದಾರೆ‌. ಹೀಗಾಗಿ ಈ ಸಂದರ್ಭದಲ್ಲಿ ಇದನ್ನೇಲ್ಲ ಬಳಸಿಕೊಂಡು ಜೆಡಿಎಸ್ ಪಕ್ಷ ಅನ್ನೋದಕ್ಕಿಂತ, ಸಂತೋಷ ರಾಯ್ಕರ್ ಅನ್ನೋ ವ್ಯಕ್ತಿ ಪ್ರಾಬಲ್ಯ ತೋರುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದೆ. ಇಲ್ಲಿ ಗೆಲುವು ಯಾರಿಗೆ ಅನ್ನೋದಕ್ಕಿಂತ ಕ್ಷೇತ್ರದಲ್ಲಿ ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ, ಸದ್ಯ ಇರೋ ರಾಜಕೀಯ ಲೆಕ್ಕಾಚಾರಗಳೇ “ಮಗ್ಗಲು” ಬದಲಿಸೋ ಎಲ್ಲಾ ಸಾಧ್ಯತೆಗಳೂ ಸ್ಪಷ್ಟವಾಗಿದೆ.

ಯಾರಿಗೆ ಲಾಭ..?
ಹಾಗೆ ನೋಡಿದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯ ರಾಜಕೀಯ ಅನ್ನೋದು ಅಕ್ಷರಶಃ ಗೊಂದಲದಲ್ಲಿದೆ. ಇಲ್ಲಿ ಬಿಜೆಪಿಯೊಳಗಿನ “ಮೂಲ” ಕುದಿ ಇಡೀ ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ. ನಿಜ ಅಂದ್ರೆ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಮಲ ಪಡೆಗೆ ಒಂದಿಷ್ಟು ಆಶಾಭಾವನೆ ತೋರಿದ್ದು ಮುಂಡಗೋಡ ತಾಲೂಕಿನ ಭಾಗ, ಹಾಗಂತ ಖುದ್ದು ಬಿಜೆಪಿ ಮೂರು ಸಲ ನಡೆಸಿರೋ ಆಂತರಿಕ‌ ಸಮೀಕ್ಷೆಯಲ್ಲೇ ಖಾತ್ರಿಯಾಗಿದೆ. ಇನ್ನುಳಿದಂತೆ ಯಲ್ಲಾಪುರ ತಾಲೂಕಿನಲ್ಲಿ ಬಿಜೆಪಿಯ ಒಳಗುದಿ ಇನ್ನೂ ತಣ್ಣಗಾಗಿಲ್ಲ. ಯಲ್ಲಾಪುರದ ಮುನಿಸಿನ ಜ್ವಾಲೆ ಇನ್ನೂ ಒಳಗೊಳಗೇ ಪುಟಗೊಳ್ಳುತ್ತಲೇ ಇದೆ. ಈ ಕಾರಣಕ್ಕಾಗೇ ಅಲ್ಲಿನ ಆ ಓರ್ವ ಭಟ್ಟರು “ಧಾತ್ರಿ” ಅನ್ನುತ್ತಲೇ ಈಗಾಗಲೇ ನನಗೇ ಬಿಜೆಪಿ ಟಿಕೆಟ್ ಕೊಡಿ ಅಂತಾ ಅರ್ಜಿ ಹಾಕಿಟ್ಟಿದ್ದಾರೆ. ಇನ್ನು ಬನವಾಸಿ ಭಾಗದಲ್ಲೂ ಸದ್ಯದ ಚಿತ್ರಣ ನೋಡೋದಾದ್ರೆ ಬಿಜೆಪಿಗೆ ಹೇಳಿಕೊಳ್ಳುವಷ್ಟು ಯಾವ ಪೂರಕ ಸ್ಥಿತಿಯೂ ಉಳಿದಿಲ್ಲ. ಹಾಗಂತ, ಬಿಜೆಪಿ ದೊಡ್ಡ ಪಡೆ ನಡೆಸಿರೋ ಆಂತರಿಕ ಸಮೀಕ್ಷೆಯಲ್ಲಿಯೇ ಮನದಟ್ಟಾಗಿದೆಯಂತೆ.

ಇನ್ನು ಕೈ ಪಡೆಯ ಅಂಗಳಕ್ಕೆ ಬಂದ್ರೆ ಇಲ್ಲಿ ಪ್ರಶಾಂತಣ್ಣನ ವರಸೆಗಳಿಂದ ಪಕ್ಷ ಅಕ್ಷರಶಃ ನಲುಗಿ ಹೋಗಿದೆ. ಇಲ್ಲಿರುವ ಕಾಂಗ್ರೆಸ್ಸಿಗರು ಒಬ್ಬರ ಮುಖ ಮತ್ತೊಬ್ಬರು ನೋಡುವ ಸ್ಥಿತಿಯಲ್ಲಿ ಉಳಿದಿಲ್ಲ. ಹಾಗೇನಾದ್ರೂ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ “ಕೈ” ಕೊಸರಿ ಎದ್ದೇಳಬಹುದಾದ ಎಲ್ಲಾ ಸಾಧ್ಯತೆ ಇದೆ‌. ಆದ್ರೆ ಬರೀ ಹಗ್ಗ ಜಗ್ಗಾಟಗಳಲ್ಲೇ ಮುಳುಗಿರೋ ಕೈ ಪಡೆ ಇನ್ನೂ ಬುದ್ದಿ ಕಲಿತಿಲ್ಲ.

ಹೀಗಿರೋವಾಗ ಇಂತಹ ಸನ್ನಿವೇಶಗಳನ್ನ ಬಳಸಿಕೊಂಡ ಜೆಡಿಎಸ್, ಕ್ಷೇತ್ರದಲ್ಲಿ ಪರ್ಯಾಯ ಶಕ್ತಿಯಾಗಿ ಉದಯಿಸಬಹುದಾದ ಸಾಧ್ಯತೆ ಹೆಚ್ಚಿದೆ. ಹಾಗಂತ ಇಲ್ಲಿ ಜೆಡಿಎಸ್ ಗೆದ್ದು ಬೀಗತ್ತೆ ಅಂತಾ ಖಂಡಿತ ಹೇಳಲು ಸಾಧ್ಯವಿಲ್ಲ. ಆದ್ರೆ, ಎರಡೂ ರಾಜಕೀಯ ಪಕ್ಷಗಳಿಂದ ವಿಮುಖರಾದವರಿಗೆ, ತಮ್ಮನ್ನ ನಿರ್ಲಕ್ಷಿಸಿದವರಿಗೆ, ಸೇಡು ತೀರಿಸಿಕೊಳ್ಳೊಕೆ, ಒಳಗೊಳಗೇ ಮಸಲತ್ತು‌ ಮಾಡುವವರಿಗೆ ಜೆಡಿಎಸ್ ಅನ್ನೋದು ವೇದಿಕೆಯಾದ್ರೂ ಅಚ್ಚರಿಯಿಲ್ಲ. ಹೀಗಾಗಿ, ಇದು ಗೆಲುವಿನ ತುತ್ತ ತುದಿಯಲ್ಲಿ ಈಗಾಗಲೇ ನಿಂತು ಭುಸುಗುಡುತ್ತಿರೋ ನಾಯಕರುಗಳಿಗೆ ಒಂದಿಷ್ಟು ಮಗ್ಗಲ‌ ಮುಳ್ಳಾಗುವದರಲ್ಲಿ ಎರಡು ಮಾತಿಲ್ಲ.

error: Content is protected !!