“ನಾನ್ ಇನ್ವೇಸ್ಟ್ ಮಾಡುವವನು, ನಾನೇನ್ ಹೇಳ್ತಿನೋ ಅದನ್ನ ಕೇಳಕೊಂಡು ಬೆಪ್ಪಗೆ ಇರಬೇಕು ಅಷ್ಟೆ” ಇದು ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ್ ದೇಶಪಾಂಡೆ ಸಾಹೇಬ್ರ ಪಾಲಿಟಿಕಲ್ ಸ್ಟೈಲ್ ಅಂತೆ. ಹಾಗಂತ, ಮುಂಡಗೋಡಿನ ಕೆಲವು ಕಾಂಗ್ರೆಸ್ ಮುಖಂಡರಿಗೆ ಖಡಕ್ಕಾಗಿ ಹೇಳಿಬಿಟ್ಟಿದ್ರಂತೆ… ಹೀಗಾಗಿನೇ, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನೋದು ಅಧಃ ಪತನವಾಗ್ತಿದೆ ಅಂತಿದಾರೆ ಖುದ್ದು ಅದೇ ಪಕ್ಷದ ಕಾರ್ಯಕರ್ತರು.
ಬೆವರಿನ ಹನಿಗೂ ಬೆಲೆಯಿಲ್ವಾ..?
ಮುಂಡಗೋಡ ತಾಲೂಕಿನ ಮಟ್ಟಿಗೆ ಹೇಳುವುದಾದರೆ, ಇಲ್ಲಿನ ಹಲವರು ಕಾಂಗ್ರೆಸ್ ಗಾಗಿ ಹಗಲು ರಾತ್ರಿ ದುಡಿದು ಒಂದು ಹಂತಕ್ಕೆ ತಂದು ನಿಲ್ಲಿಸಿದ್ರು. ಯಾವಾಗ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪಿಂಗ್ ಮಾಡಿದ್ರೊ ಆ ಹೊತ್ತಲ್ಲಿ ಅವ್ರ ಜೊತೆ ಹೆಜ್ಜೆ ಹಾಕದೇ ಪಕ್ಷ ನಿಷ್ಟೆ ತೋರಿದವರಲ್ಲಿ ಬಹುತೇಕರು ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡಿ ಪಕ್ಷದ ಸಂಘಟನೆ ಮಾಡಿದ್ರು. ಪರಿಣಾಮವಾಗಿ ಹೀನಾಯವಾಗಿದ್ದ ಕಾಂಗ್ರೆಸ್ ಗೆ ಮತ್ತೆ ಜೀವ ಬಂದಿತ್ತು. ಅದರ ರಿಸಲ್ಟು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲೇ ಸಿಕ್ಕಾಗಿತ್ತು. ಹೀಗಿದ್ದಾಗಲೇ, ಆರ್.ವಿ.ದೇಶಪಾಂಡೆಯವರ ಒತ್ತಾಸೆಯಿಂದ ಪ್ರಶಾಂತ್ ದೇಶಪಾಂಡೆಯವ್ರನ್ನ ಅನಾಮತ್ತಾಗಿ ಯಲ್ಲಾಪುರ ಕ್ಷೇತ್ರದಲ್ಲಿ ಅಘೋಷಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಂಬಿಸಲಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಒಂದಿಷ್ಟು ಓಡಾಡಿಕೊಂಡಿದ್ರು ಪ್ರಶಾಂತ್. ಆ ಹೊತ್ತಲ್ಲಿ ಬಲಿಷ್ಟ ಬೆಂಬಲವೂ ಸಿಕ್ಕಾಗಿತ್ತು. ಮುಂಡಗೋಡಿನ ಅದೇಷ್ಟೋ ಬಿಜೆಪಿ “ಮುನಿಸು” ವೀರರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಾಗಿತ್ತು. ಆ ಕುರಿತು ಹಲವು ಮಾತುಕತೆಗಳೂ ನಡೆದು ಆಗಿತ್ತು. ಆದ್ರೆ ಯಾವಾಗ ಪ್ರಶಾಂತಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗಿರಿಯ ಬದಲಾವಣೆಯ ಬೆನ್ನಿಗೆ ಬಿದ್ರೋ ಅಲ್ಲಿಗೆ ಕಾಂಗ್ರೆಸ್ ಖೇಲ್ ಖತಂ ಆದಂತಾಯ್ತು ಅಂತಿದಾರೆ ಅದರೊಳಗಿನ ಬಹುತೇಕ ಮಂದಿ.
ಅಡ್ಡಡ್ಡ ಮಲಗಿಸಿಬಿಟ್ರು..!
ಅಷ್ಟಕ್ಕೂ, ಮಕಾಡೆ ಮಲಗಿದ್ದ ಪಕ್ಷವನ್ನು ಹಗಲು ರಾತ್ರಿ ಹಳ್ಳಿ ಹಳ್ಳಿಗಳಿಗೆ ತಿರುಗಾಡಿ ಮತ್ತೆ ಎದ್ದು ನಿಲ್ಲುವಂತೆ ಮಾಡಿದ್ದವರಲ್ಲಿ ಬೆರಳೆಣಿಕೆಯ ಜನ ಮಾತ್ರ. ಅದ್ರಲ್ಲಿ, ಕೃಷ್ಣ ಹಿರೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದ ಕೆಲಸ ನಿಜಕ್ಕೂ ಕಾಂಗ್ರೆಸ್ ಉಸಿರು ಗಟ್ಟಿಗೊಳಿಸಿತ್ತು. ಅವ್ರ ಜೊತೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್, ಮಹ್ಮದ್ ಗೌಸ್ ಮಖಾನದಾರ್, ಎಂ.ಎನ್.ದುಂಢಸಿ, ಧರ್ಮರಾಜ್ ನಡಗೇರಿ ಸೇರಿ ಹಲವ್ರು ಹೆಗಲು ಕೊಟ್ಟಿದ್ರು. ಆದ್ರೆ, ಹಾಗೆ ಕಾಂಗ್ರೆಸ್ ಬಲಿಷ್ಟಗೊಳಿಸಲು ಹೆಣಗಾಡಿದ್ದವರನ್ನ ಒಂದೇ ಏಟಿಗೆ ಅಡ್ಡಡ್ಡ ಮಲಗಿಸಿಬಿಟ್ರಂತೆ ಪ್ರಶಾಂತಣ್ಣ.
ರಾಜೀನಾಮೆ ಕೊಟ್ಟು ಬಿಡಿ..!
ಅದು ಜನೇವರಿ ತಿಂಗಳು, ಮುಂಡಗೋಡಿನ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪ್ರಶಾಂತಣ್ಣ ಕುಳಿತಿದ್ರು. ಆ ಹೊತ್ತಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೃಷ್ಣ ಹಿರೇಹಳ್ಳಿಯವ್ರಿಗೆ ಬುಲಾವ್ ಕೊಡ್ತಾರೆ ಪ್ರಶಾಂತಣ್ಣ, ತಕ್ಷಣವೇ ಹಾಜರಾಗಿದ್ರು ಕೃಷ್ಣ ಹಿರೇಹಳ್ಳಿ. ಅವತ್ತು ದೇಶಪಾಂಡೆಯವರ ಈ ಸುಪುತ್ರ, ಏಕಾಏಕಿ “ಕೃಷ್ಣಾ ಹಿರೇಹಳ್ಳಿಯವರೇ ನೀವು ರಾಜೀನಾಮೆ ಕೊಟ್ಟು ಬಿಡಿ ನನ್ನ ಭವಿಷ್ಯದ ಪ್ರಶ್ನೆಯಿದೆ ಅಂದುಬಿಟ್ರಂತೆ. ಆ ಕ್ಷಣವೇ ಹಿರೇಹಳ್ಳಿಯವರಿಗೆ ಪಿತ್ತ ನೆತ್ತಿಗೇರಿದೆ. ಯಾಕೆ ರಾಜೀನಾಮೆ ಕೊಡಬೇಕು..? ನಾನು ಮಾಡಿರೋ ತಪ್ಪಾದ್ರೂ ಏನು..? ಅಷ್ಕಕ್ಕೂ ನನಗೆ ಅಧ್ಯಕ್ಷಗಿರಿ ಕೊಟ್ಟಿದ್ದು ತಾಲೂಕಿನ ನಿಷ್ಟಾವಂತ ಕಾರ್ಯಕರ್ತರು ಹೊರತು ನೀವಲ್ಲ. ಹೀಗಾಗಿ, ನಾನು ರಾಜೀನಾಮೆ ಕೊಡಲ್ಲ, ಬೇಕಾದ್ರೆ ನೀವೇ ನನ್ನನ್ನ ಆ ಸ್ಥಾನದಿಂದ ಕಿತ್ತಾಕಿ ಅಂತಾ ಖಡಾಖಂಡಿತ ಮಾತು ಆಡಿ ಎದ್ದು ನಡೆದಿದ್ರಂತೆ ಹಿರೇಹಳ್ಳಿ. ಅಷ್ಟೇ.. ಮುಗೀತು. ಮುಂದೆ ಬೇರೋಬ್ಬರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಪಟ್ಟಾಭಿಷೇಕ ಮಾಡಿಬಿಟ್ಟರು ಪ್ರಶಾಂತಣ್ಣ.
ಹೆಬ್ಬಾರ್ ಪ್ಯಾಕೇಜ್..?
ನಿಜ ಅಂದ್ರೆ ಕೃಷ್ಣ ಹಿರೇಹಳ್ಳಿಯವರನ್ನ ಏಕಾಏಕಿ ಹೀಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗಿರಿಯಿಂದ ಅನಾಮತ್ತಾಗಿ ಕಿತ್ತು ಹಾಕಿದ್ದರ ಹಿಂದೆ ಅದೊಂದು ಮಾತು ಪ್ರಶಾಂತಣ್ಣನಿಗೆ ಗುದುಮುರುಗಿ ಹಚ್ಚಿತ್ತಂತೆ.
ಹೆಬ್ಬಾರ್ ಸಾಹೇಬ್ರು ಹಿರೇಹಳ್ಳಿಯವ್ರಿಗೆ ಕೋಟಿ ಕೋಟಿ ಕಾಮಗಾರಿಗಳ ಪ್ಯಾಕೇಜ್ ಕೊಟ್ಟು ಒಳಗೊಳಗೇ ಅಡ್ಜೆಸ್ಟ್ ಆಗಿದ್ಧಾರೆ ಅಂತಾ ಅಲ್ಲಿರೋ ಕೆಲವು “ಚಾಡಿಜನ” ಕಿವಿ ಕಚ್ಚಿದ್ರಂತೆ. ಹೀಗಾಗಿನೇ ಪ್ರಶಾಂತಣ್ಣ ಹಠಕ್ಕೆ ಬಿದ್ದು ಅಷ್ಟೇಲ್ಲ ತೀರ್ಮಾನ ತಕ್ಕೊಂಡ್ರು ಅಂತಾ ಇತ್ತೀಚೆಗೆ ತಾಲೂಕಿನಲ್ಲಿ ಚರ್ಚೆಯಾಗ್ತಿದೆ. ಆದ್ರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಹಾಗೆ ನೋಡಿದ್ರೆ, ಈ ಹಿಂದೆ ಇದೇ ಕೃಷ್ಣ ಹಿರೇಹಳ್ಳಿ ಮಾಡಿ ಮುಗಿಸಿದ್ದ ಇಲಾಖೆಯೊಂದರ ಕಾಮಗಾರಿ ಬಿಲ್ ಅದ್ಯಾರೋ “ಯುವ” ನಾಯಕನ ಫೊನ್ ಕಾಲ್ ತಡೆ ಹಿಡಿಸಿತ್ತಂತೆ. ಬರೋಬ್ಬರಿ ಒಂದು ಕೋಟಿಗಳ ಕಾಮಗಾರಿ ಬಿಲ್ ವರ್ಷವಾದ್ರೂ ಪಾವತಿಯಾಗದಂತ ನೋಡಿಕೊಂಡಿದ್ರಂತೆ ಆ “ಯುವ” ನಾಯಕ. ಆದ್ರೆ, ಅವತ್ತು ಕೃಷ್ಣ ಹಿರೇಹಳ್ಳಿಗೆ ಕ್ಷೇತ್ರದ ಮಾಜಿ ಶಾಸಕರೇ ಮುಂದೆ ನಿಂತು, ಅದ್ಯಾವನು ತಡೆ ಹಿಡಿತಾನೆ ನಾನು ಒಂದು ಕೈ ನೋಡೇ ಬಿಡ್ತಿನಿ ಅಂತಾ, ಆ ಕಾಮಗಾರಿಯ ಅಷ್ಟೂ ಬಿಲ್ ಪಾವತಿ ಆಗುವಂತೆ ನೋಡಿಕೊಂಡಿದ್ರಂತೆ. ಹೀಗಿದ್ದಾಗ, ಯಾವ ಆ್ಯಂಗಲ್ ನಿಂದ ನೋಡಿದ್ರು “ಕಾಮಗಾರಿ ಪ್ಯಾಕೇಜ್” ಅನ್ನೋ ಕಾನ್ಸೆಪ್ಟೇ ಅರ್ಥ ಹೀನ ಅನಿಸ್ತಿದೆ. ಅಲ್ವಾ..? ಹಾಗೊಂದುವೇಳೆ ಕೃಷ್ಣ ಹಿರೇಹಳ್ಳಿ ಕಾಮಗಾರಿಗಳ ಆಸೆಗೆ ಬಿದ್ದಿದ್ರೆ ಆಡಳಿತಾರೂಢ ಪಕ್ಷಕ್ಕೆ ಬಹಿರಂಗವಾಗೇ ಜೋತು ಬೀಳ್ತಿದ್ರು ಅಲ್ವಾ..? ಇದು ಅವ್ರ ಹಿಂಬಾಲಕರ ಪ್ರಶ್ನೆ.
ಕಿವಿ ಕಚ್ಚೇಶ್ವರರ ಮಾತು ಕೇಳಿ ಕೆಟ್ರಾ..?
ಅಷ್ಟಕ್ಕೂ ಕೃಷ್ಣ ಹಿರೇಹಳ್ಳಿ ವಿರುದ್ದ ಮನಸೊಳಗೇ ಹಲ್ಲು ಮಸೆಯುತ್ತಿದ್ದ ಕೆಲವು ಚಾಡಿಕೋರರು ಪ್ರಶಾಂತಣ್ಣನಿಂದ ದೂರ ಮಾಡಿದ್ರು ಅಂತಿದಾರೆ ಅದರೊಳಗಿನ ನೊಂದವರು. ಆದ್ರೆ ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಹಾಗೊಂದು ವೇಳೆ ಆ “ಕಿವಿ” ಕಚ್ಚೇಶ್ವರರ ಕಿತಾಪತಿಗಳಿಂದ ಪ್ರಶಾಂತಣ್ಣ ಅಂತಹ ಎಡವಟ್ಟು ನಿರ್ಧಾರ ಕೈಗೊಂಡಿದ್ದು ಸತ್ಯವೇ ಆಗಿದ್ರೆ, ಮುಂಡಗೋಡಿನ ಸದ್ಯದ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಅವ್ರೇ ಕಾರಣ ಅಂತಾಗತ್ತೆ ಅಲ್ವಾ..?
ಯುವಕರೂ ಅತಂತ್ರ..?
ಅಂದಹಾಗೆ, ಮುಂಡಗೋಡ ತಾಲೂಕಿನಲ್ಲಿ ಇದೇಲ್ಲ ಗುದುಮುರಿಗಿ ಹಿನ್ನೆಲೆ ಸಾಕಷ್ಟು ಭರವಸೆಗಳನ್ನಿಟ್ಟು ಪಕ್ಷದಲ್ಲಿ ಸಕ್ರೀಯವಾಗಿದ್ದ ಹಲವು ಯುವಕರು ಗೊಂದಲದಲ್ಲಿದ್ದಾರೆ. ಪ್ರಶಾಂತ್ ದೇಶಪಾಂಡೆಯವರನ್ನೇ ಒಪ್ಪಿ, ಅವ್ರ ಸಿದ್ದಾಂತಗಳನ್ನೇ ಅಪ್ಪಿಕೊಂಡಿರೊ ಹುಡುಗರೂ ಇದ್ದಾರೆ. ಒಂದರ್ಥದಲ್ಲಿ ಅವ್ರಿಗೆ ಇದ್ಯಾವುದೂ ಬೇಡವಾಗಿದೆ. ಕೇವಲ ಪಕ್ಷದ ಸಂಘಟನೆ ಬಲಿಷ್ಟ ಪಡಿಸೋದು ಒಂದೇ ಬೇಕಿದೆ. ಅಂತಹ ಕೆಲವು ಯುವಕರು ಈಗಾಗಲೇ ರೋಸಿ ಹೋಗಿದ್ದಾರೆ. ಅಷ್ಟಕ್ಕೂ ಇವ್ರಿಗೇಲ್ಲ ಕೃಷ್ಣ ಹಿರೇಹಳ್ಳಿಯವರ ಬಗ್ಗೆ ಗೌರವ ಇದೆ. ಆದ್ರೆ, ಆ “ಕೃಷ್ಣ” ನ ಸಾರಥ್ಯ ವಹಿಸಿರೋ ಆ ಒಬ್ಬ “ನಾಯಕ” ನ ಸಹವಾಸ ಬಿಟ್ಟು ಹೊರಬನ್ನಿ ಅಂತಾ ಬಡಕೊಂಡ್ರೂ ಅವ್ರು ನಮ್ಮ ಮಾತು ಕೇಳ್ತಿಲ್ಲ ಅಂತಿದಾರೆ ಯುವಕರು. ಹೀಗಾಗಿನೇ ಇವೇಲ್ಲ ಗೊಂದಲಗಳು ಹುಟ್ಟಿಕೊಳ್ತಿವೆ ಅಂತಾ ಪಾಪ ಆ ಯುವ ಪಡೆ ಭಾರೀ ತಾಪದಲ್ಲಿದೆಯಂತೆ.
ಕೊನೆ ಮಾತು..!
ಅದೇನೆ ಆಗಿರಲಿ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಈಗಾಗಲೇ ಯಲ್ಲಾಪುರ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗಾಗಿ ದುರ್ಬಿನ್ ಹಾಕಿ ತಲಾಶ್ ನಡೆಸುತ್ತಿದೆ. ಈಗಾಗಲೇ ಕಳೆದ ತಿಂಗಳು ಕ್ಷೇತ್ರದಲ್ಲಿ ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸಿ ಆಗಿದೆ. ಆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇರೋದು ನಿಚ್ಚಳವಾಗಿದೆ. ಆದ್ರೆ ಅದೇ ಸಮೀಕ್ಷೆಯಲ್ಲೇ ಪ್ರಶಾಂತಣ್ಣನಿಗೆ ಟಿಕೆಟ್ ಕೊಡಬೇಕಾ, ಅಥವಾ ಬೇರೆಯವರಿಗೆ ಕೊಡಬೇಕಾ ಅನ್ನೋ ಪ್ರಶ್ನೆಗೆ ಬಹುತೇಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಇಶ್ಯೂ ಪ್ರಶಾಂತಣ್ಣನ ವಿರುದ್ಧವೇ ತಿರುಗಿ ಬಿದ್ದಿದೆ ಅಂತೆ. ಇದು ಕಾಂಗ್ರೆಸ್ ಉನ್ನತ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ. ಸತೀಶ್ ಜಾರಕೀಹೊಳಿ ಇತ್ತಿಚೆಗಷ್ಟೇ ಶಿರಸಿ ಪ್ರತಿಭಟನೆಗೆ ಬಂದಾಗ ಕಾರ್ಯಕರ್ತರ ಎದುರೇ ಸೂಕ್ಷ್ಮವಾಗಿ ಇದೇಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ಹೀಗಾಗಿ, ಇನ್ನೇನು ಒಂದು ವಾರದ ನಂತರ ಆಂತರಿಕ ಸಮೀಕ್ಷೆಯ ವರದಿ ಬಹಿರಂಗವಾಗಲಿದೆ. ಅವಾಗ ಯಲ್ಲಾಪುರ ಕ್ಷೇತ್ರದಲ್ಲಿ ಯಾರ್ಯಾರ ಹಣೆಬರಹ ಎಷ್ಟು..? ಅನ್ನೋ ಪಕ್ಕಾ ಚಿತ್ರಣ ಸಿಗಲಿದೆ. ಇದರ ಮೇಲೆಯೇ ವಿ.ಎಸ್.ಪಾಟೀಲರ ನಿರ್ಧಾರಗಳೂ ಸ್ಪಷ್ಟವಾಗಲಿವೆ ಅನ್ನೋದು ಸದ್ಯದ ಮಾಹಿತಿ. ಇದರ ಹೊರತಾಗಿ, ಕಲಘಟಗಿಯಿಂದ ಧಾರವಾಡದ “ಲಾಡೂ” ಬಂದು ಬಾಯಿಗೆ ಬಿದ್ದರೂ ಅಚ್ಚರಿಯಿಲ್ಲ.