ಯಲ್ಲಾಪುರ ಕ್ಷೇತ್ರದಲ್ಲಿ ಸದ್ಯ ವಿಲಿ ವಿಲ ಒದ್ದಾಡುತ್ತಿರೋ ಕೈ ಪಾಳಯಕ್ಕೆ ಆಕ್ಸಿಜನ್ ಒದಗಿಸಬಲ್ಲ ವಿದ್ಯಮಾನಗಳು ಒಳಗೊಳಗೆ ಜಾರಿಯಲ್ಲಿವೆ. ಬಿಜೆಪಿಯ ಮಾಜಿ ಶಾಸಕ ಹಾಲಿ ವಾಯುವ್ಯ KSRTC ಅಧ್ಯಕ್ಷ ವಿ.ಎಸ್ ಪಾಟೀಲ್ ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಆಗಿರೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಆದ್ರೆ, ಚಾಣಾಕ್ಷ ವಿ.ಎಸ್. ಪಾಟೀಲ್ ಸುಮ್ಮ ಸುಮ್ಮನೇ ಕಾಂಗ್ರೆಸ್ ಸೇರ್ತಿಲ್ಲ, ಬದಲಾಗಿ ಅದಕ್ಕೊಂದು ಬಲಿಷ್ಟ “ಕಣ” ಕಾರ್ಯತಂತ್ರ ರೂಪಿಸಿಕೊಂಡೇ ಕೈ ಪಡೆಗೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ.
ಪ್ರಶಾಂತ್ ಯಡವಟ್ಟು..?
ನಿಜ, ಸದ್ಯ ಯಲ್ಲಾಪುರ ಕಾಂಗ್ರೆಸ್ ಪರಿಸ್ಥಿತಿ ಚಿಂತಾಜನಕವಾಗಿದೆ. ಪ್ರಶಾಂತ್ ದೇಶಪಾಂಡೆಯವರ ಯಡವಟ್ಟು ನಿರ್ಧಾರಗಳಿಂದ ಈಗಷ್ಟೇ ಬಲಿಷ್ಟವಾಗುತ್ತಿದ್ದ “ಕೈ” ಬಲ ಕಳೆದುಕೊಂಡಿದೆ. ಪಕ್ಷಕ್ಕಾಗಿ ಹಗಲು ರಾತ್ರಿ ಬೆವರು ಹರಿಸಿದ್ದವರನ್ನು ಒಂದೇ ಏಟಿನಲ್ಲಿ ಚಿಮ್ಮಿ ಹಾಕಿದ್ದಾರೆ ಪ್ರಶಾಂತಣ್ಣ. ಹಾಗಂತ, ಇಲ್ಲಿ ನಾವು ಈ ಮಾತು ಹೇಳ್ತಿಲ್ಲ. ಬದಲಾಗಿ, ನೊಂದ ಕಾರ್ಯಕರ್ತರೇ ಬಾಯಿ ಬಾಯಿ ಬಡಕೊತಿದಾರೆ. ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಕ್ಷರಶಃ ಎರಡು ಹೋಳಾಗಿದೆ. ಪ್ರಶಾಂತ್ ದೇಶಪಾಂಡೆ ಮುಂದಿನ ಚುನಾವಣೆಗೆ ಅಭ್ಯರ್ಥಿ ಆದ್ರೆ ನಾವು ಖಂಡಿತ ಒಪ್ಪೋದಿಲ್ಲ ಅಂತಾ ಖುದ್ದು ಡಿ.ಕೆ.ಶಿವಕುಮಾರ್ ಬಳಿ ನೊಂದವರು ಉದ್ದೂದ್ದ ಅಳಲು ತೋಡಿಕೊಂಡು ಬಂದಿದ್ದಾರೆ. ಅದರ ಜೊತೆ ವಿ.ಎಸ್.ಪಾಟೀಲರನ್ನ ಪಕ್ಷಕ್ಕೆ ಕರೆದು ತರೋಕೆ ಅವತ್ತೇ ಮೂಹೂರ್ತ ಕೂಡ ಫಿಕ್ಸ್ ಮಾಡಿಕೊಂಡಿದ್ದಾರೆ. ಹೀಗಾಗಿ, ವಿಎಸ್ಪಿ “ಹಸ್ತ” ಲಾಘವ ಬಹುತೇಕ್ ಫಿಕ್ಸ್ ಆಗಿದೆ. ಆದ್ರೆ ಒಂದಿಷ್ಟು ಕಂಡೀಶನ್ಸ್ ಮುಂದಿಟ್ಟುಕೊಂಡು ಕೂತಿರೋ ಪಾಟೀಲರು, ಅವನ್ನೇಲ್ಲ ಈಡೇರಿಸಿ ನಾನು “ಕೈ” ಹಿಡಿತಿನಿ ಅಂದಿದ್ದಾರಂತೆ.
ಹಾಗಾದ್ರೆ ಏನದು ಕಂಡೀಶನ್ಸ್..?
ಕಂಡೀಶನ್ ನಂಬರ್- 1
ಪ್ರಶಾಂತಣ್ಣನ ಯಡವಟ್ಟುಗಳಿಂದ ಅಕ್ಷರಶಃ ಕಂಗಾಲಾಗಿ ಮನೆ ಹಿಡಿದು ಕೂತಿರೋ ಅಷ್ಟೂ ಮುಖಂಡರನ್ನು, ಕಾರ್ಯಕರ್ತರನ್ನು ಮತ್ತೆ ಮುನ್ನಲೆಗೆ ತರಬೇಕು. ಇಬ್ಬಾಗವಾಗಿರೋ “ಕೈ” ಗಳನ್ನು ಒಂದು ಮಾಡಬೇಕು. ಇದರ ಜವಾಬ್ದಾರಿ ರಾಜ್ಯ ನಾಯಕರೇ ತಕೊಬೇಕು. ಇದು ಪಾಟೀಲರ ಮೊದಲ ಕಂಡೀಶನ್..
ಕಂಡೀಶನ್ ನಂಬರ್- 2
ದೇಶಪಾಂಡೆ ಸಾಹೇಬ್ರು ತಮ್ಮ ಸುಪುತ್ರಗೆ ಟಿಕೆಟ್ ಕೈ ತಪ್ಪಿದ್ರೆ ಆ ಬೇಜಾರಲ್ಲಿ “ಕಿಡ್ಡಿ” ಮಾಡೋ ಹಾಗಿಲ್ಲ. ಅವ್ರೇ ಖುದ್ದಾಗಿ ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಪ್ರಚಾರ ಮಾಡಬೇಕು.
ಕಂಡೀಶನ್ ನಂಬರ್- 3
ಬಹುಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಮುಖಂಡರು ತನು,ಮನ,ಧನ ದೊಂದಿಗೆ ನನಗೆ ಸಹಕಾರ ನೀಡಬೇಕು ಅನ್ನೋದು ವಿ.ಎಸ್.ಪಾಟೀಲ ಬಹುದೊಡ್ಡ ಕಂಡೀಶನ್.
ಇಷ್ಟೇಲ್ಲ ಕಂಡೀಶನ್ನುಗಳ ಜೊತೆಗೆ ಕಾಂಗ್ರೆಸ್ ರಾಜ್ಯ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿರೋ ವಿ.ಎಸ್. ಪಾಟೀಲರಿಗೆ ಕಾಂಗ್ರೆಸ್ ಬಹುತೇಕ ರತ್ನಗಂಬಳಿ ಹಾಸುವ ಎಲ್ಲಾ ಸಾಧ್ಯತೆ ನಿಚ್ಚಳವಾಗ್ತಿದೆ. ಮುಂದಿನ ತಿಂಗಳು ಶಿರಸಿಯಲ್ಲಿ ನಡೆಯುತ್ತಿರೋ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ಅವತ್ತು ಮತ್ತೊಂದು ಸುತ್ತಿನ ಬಹುಮುಖ್ಯ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬಿಜೆಪಿ “ಹುಲಿ” ಬೆಂಬಲ..?
ಇನ್ನು, ವಿ.ಎಸ್.ಪಾಟೀಲರು ತಮ್ಮ ಸ್ವಂತ ಮನೆಯಂತಿದ್ದ ಕಮಲ ಪಾಳಯವನ್ನು ತೊರೆಯುವ ಬಹುದೊಡ್ಡ ತೀರ್ಮಾನದ ಹಿಂದೆ ಸಾಕಷ್ಟು ಬಲಿಷ್ಟ ಕೈಗಳ ಕೊಡುಗೆ ಇದೆ. ಅದ್ರಲ್ಲೂ ಬಿಜೆಪಿಯೊಳಗಿನ “ಹೆಬ್ಬಾರ್ ವಿರೋಧಿ” ಮನಸ್ಸುಗಳು ಪಾಟೀಲರ ಬೆನ್ನಿಗೆ ನಿಂತಿವೆ ಅನ್ನೋ ಒಳಗೊಳಗಿನ ಮಾಹಿತಿ ಇದೆ. ಅದ್ರಲ್ಲೂ ಆ ಬಿಜೆಪಿ “ಹುಲಿ” ಪಾಟೀಲರೊಂದಿಗೆ ಒಳಗೊಳಗೇ ಬೆನ್ನಿಗೆ ನಿಂತಿರೋದು, “ನೀವು ಮೊದಲು ಹೆಜ್ಜೆ ಇಡಿ, ನಾನೇಲ್ಲ ನೋಡ್ಕೊತಿನಿ” ಅನ್ನೋ ಇಂಟರ್ನಲ್ ಬೆಂಬಲ ನೀಡಿದ್ದಾರಂತೆ ಆ ಹುಲಿ. ಹೀಗಾಗಿ, ಪಾಟೀಲರಿಗೆ ಇದು ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೇ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದ್ರಲ್ಲೂ ಯಲ್ಲಾಪುರ ತಾಲೂಕಿನಲ್ಲಿ ಪಾಟೀಲರಿಗೆ ಅವ್ರದ್ದೇ ಆದ ಬಳಗ ಇನ್ನೂ ಆ್ಯಕ್ಟಿವ್ ಆಗಿದೆ. ಇಲ್ಲಿ ಪಕ್ಷ ಅನ್ನೋದಕ್ಕಿಂತ ವ್ಯಕ್ತಿಗಾಗಿ ಅನ್ನೋ ಶ್ಲೋಗನ್ನು ವರ್ಕೌಟ್ ಆಗುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದೆ.
ಅದರೊಟ್ಟಿಗೆ, ಜಾತಿ ಬಲ ಕೂಡ ಬೆನ್ನಿಗಿದೆ.
ಹಳಿಯಾಳದಲ್ಲಿ ಜಾತೀ ಲೆಕ್ಕ..!
ಅಂದಹಾಗೆ, ಯಲ್ಲಾಪುರ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಮತಗಳು ಪಾಟೀಲರ ಬೆನ್ನಿಗೆ ನಿಲ್ಲುವ ಲೆಕ್ಕಾಚಾರವಿದೆ. ಅದ್ರಂತೆ, ಇತ್ತಿಚೆಗೆ ಹಳಿಯಾಳದಲ್ಲಿ ವಿ.ಎಸ್.ಪಾಟೀಲರು ತಮ್ಮದೇ ಬಳಗದ ಜೊತೆ ಈ ಕುರಿತು ಚರ್ಚೆ ಮಾಡಿ ಆಗಿದೆಯಂತೆ. ಯಾವುದೇ ಪಕ್ಷದಲ್ಲಿದ್ರೂ ಪಾಟೀಲರಿಗೆ ಜಾತಿಬಲ ಸಿಗೋದು ಪಕ್ಕಾ ಅನ್ನುವಂತಾಗಿದೆ. ಮುಂದಿನ ತಿಂಗಳು ಉಳುವಿ ಕ್ಷೇತ್ರದಲ್ಲಿ ನಡೆಯುತ್ತಿರೋ ಸಮಾಜದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮತ್ತಷ್ಟು ಚರ್ಚೆಗಳಾಗೋ ಸಾಧ್ಯತೆ ಇದೆ. ಇದರ ಹೊರತಾಗಿ, ವಿ.ಎಸ್.ಪಾಟೀಲರು ಯಾವುದೇ ಪಕ್ಷದಿಂದ ಸ್ಪರ್ಧಿಸಿದ್ರೂ ಬೆನ್ನಿಗೆ ನಿಲ್ಲುವ ತೀರ್ಮಾನ ಆಗಿದೆಯಂತೆ.
ದೇಶಪಾಂಡೆಯವ್ರಿಗೂ ಪ್ಲಸ್..!
ಇನ್ನು, ಹಳಿಯಾಳದಲ್ಲಿ ದೇಶಪಾಂಡೆಯವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗೇ ಆಗತ್ತೆ ಅನ್ನೋ ಲೆಕ್ಕಾಚಾರದಲ್ಲಿರೋ ದೇಶಪಾಂಡೆಯವರ ಜಾತೀ ಸಮೀಕರಣಕ್ಕೆ, ಲಿಂಗಾಯತ ಪಂಚಮಸಾಲಿಗಳ ಮತಗಳು ವಿ.ಎಸ್.ಪಾಟೀಲರಿಂದ ಹರಿದು ಬರುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ, “ಕುಚ್ ಪಾನೇ ಕೇ ಲಿಯೇ ಕುಚ್ ಕೋನಾ ಹೀ ಪಡ್ತಾ”
ಅನ್ನೊ ಜಾಯಮಾನಕ್ಕೆ ದೇಶಪಾಂಡೆ ಸಾಹೇಬ್ರು ಬಂದು ನಿಲ್ಲೊ ಸಾಧ್ಯತೆ ಹೆಚ್ಚಿದೆ. ಇದ್ರೊಂದಿಗೆ ಮಗನಿಗೆ ಪಟ್ಟ ಕಟ್ಟುವ ಕನಸು ಸಧ್ಯಕ್ಕೆ ನನಸಾಗುವ ಯಾವ ಛಾನ್ಸೂ ಇಲ್ಲವಾಗಿದೆ.
ಒಟ್ನಲ್ಲಿ, ಚುನಾವಣೆ ಸಮೀಪಿಸುತ್ತಿದ್ದಂತೆ ವಿ.ಎಸ್.ಪಾಟೀಲರ ರಂಗ ತಾಲೀಮು ಜೋರಾಗಿದೆ. ಈಗೀಗ ಕ್ಷೇತ್ರದಲ್ಲಿ ಚುರುಕಾಗಿಯೇ ಓಡಾಡ್ತಿದಾರೆ ಪಾಟೀಲರು. ಅದೇಂತದ್ದೇ ಸಣ್ಣ ಕಾರ್ಯಕ್ರಮ ಇದ್ರೂ ಆಹ್ವಾನ ಸಿಕ್ರೆ ಸಾಕು ಹಾಜರಾಗ್ತಾರೆ. ಹಳ್ಳಿ ಹಳ್ಳಿಗಳಲ್ಲೂ ತಮ್ಮಪಡೆಯನ್ನು ಗಟ್ಟಿಗೊಳಿಸ್ತಿದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರ ಹೈ ವೋಲ್ಟೇಜ್ ಕಣವಾಗೋದ್ರಲ್ಲಿ ಎರಡು ಮಾತಿಲ್ಲ.