ಮುಂಡಗೋಡ: ಮಳಗಿ ಧರ್ಮಾ ಜಲಾಶಯದ ಒಡಲಿನಲ್ಲಿ ಕ್ರೌರ್ಯಗಳೂ ನಡಿತಿವೆಯಾ..? ನಿಜಕ್ಕೂ ಆ ಒಂದು ಸಾವು, ಸಾವಿನಾಚೆಗಿನ ಬಿಡಿಸಲಾಗದ ಸತ್ಯಗಳು ಎಂತವರನ್ನೂ ಒಂದುಕ್ಷಣ ತಲ್ಲಣಗೊಳಿಸ್ತಿವೆ.
ಭಟ್ಕಳದಿಂದ ಶಿರಸಿ ಮಾರಿ ಜಾತ್ರೆಗೆ ಬಂದಿದ್ದ ಯುವಕ ನೀರುಪಾಲಾಗಿದ್ದರ ಹಿಂದೆ, ಬರೀ ಅನುಮಾನಗಳೇ ಹಾಸು ಹೊಕ್ಕಾಗಿವೆ. ಮಗನನ್ನ ಕಳೆದುಕೊಂಡ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ.

ಅವತ್ತು ಮಾ.22
ಭಟ್ಕಳದ ಶಿರಾಲಿ ಮೂಲದ ವಿನಾಯಕ ಜನ್ನು ಎನ್ನುವ ಯುವಕ ಮಾರ್ಚ್ 22ರಂದು ಇದೇ ಮಳಗಿಯ ಧರ್ಮಾ ಜಲಾಶಯದಲ್ಲಿ ಹೆಣವಾಗಿ ಸಿಕ್ಕಿದ್ದ. ತನ್ನ ಗೆಳೆಯರೊಂದಿಗೆ ಶಿರಸಿ ಜಾತ್ರೆಗೆ ಅಂತಾ ಬಂದಿದ್ದವನು ಧರ್ಮಾ ಜಲಾಶಯದಲ್ಲಿ ಸ್ನಾನ ಮಾಡಲು ಇಳಿದು, ಅನಾಮತ್ತಾಗಿ ನೀರಲ್ಲಿ ಮುಳುಗಿ ಹೆಣವಾಗಿದ್ದ. ಹೀಗಾಗಿ, ಮುಂಡಗೋಡ ಪೊಲೀಸರು ಆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನೂ ಶುರು ಮಾಡಿದ್ರು.

ಸಾಲು ಸಾಲು ಅನುಮಾನ..!
ಹಾಗೆ, ಶಿರಸಿ ಜಾತ್ರೆಗೆ ಬಂದವನು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಸಿಕ್ಕ ಗಳಿಗೆಯಿಂದಲೇ, ಆತನ ಕುಟುಂಬ ವಿಲ ವಿಲ ಒದ್ದಾಡುತ್ತಿದೆ. ನೀರನ್ನು ಕಂಡ್ರೇ ಮಾರುದ್ದ ಹಾಯುವ ವ್ಯಕ್ತಿ ಅದು ಹೇಗೆ ನೀರಲ್ಲಿ ಇಳಿದು ಜೀವ ಕಳೆದುಕೊಂಡ ಅಂತಾ ಆತನ ಕುಟುಂಬ ನಿತ್ಯವೂ ಸಾಲು ಸಾಲು ಅನುಮಾನಗಳ‌ನ್ನು ಹೊತ್ತು ಪೊಲೀಸ್ ಠಾಣೆಯ ಬಾಗಿಲು ಬಡೆದಿದೆ. ಹಾಗಂತ, ಪೊಲೀಸರೇನು ಸುಮ್ನೆ ಕೂತಿಲ್ಲ, ಬದಲಾಗಿ, ಆ ಸಾವಿನ ಅಷ್ಟೂ‌ ಮಜಕೂರಗಳ ಬೆನ್ನತ್ತಿ ಅಸಲೀ ಕಾರಣವೇನು ಅನ್ನೋ ಸತ್ಯ ಹೊರಹಾಕಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಇಲ್ಲಿ, ಖುದ್ದು ಪಿಎಸ್ಐ ಬಸವರಾಜ್ ಮಬನೂರು ಈ ಕೇಸಿನ ಪೈಲು ಹಿಡಿದು ಜನ್ಮ ಜಾಲಾಡುತ್ತಿದ್ದಾರೆ. ಸತ್ಯ ಬಲುಬೇಗ ಹೊರಗೆ ಬರುವ ಎಲ್ಲಾ ಸಾಧ್ಯತೆ ಇದ್ದೇ ಇದೆ. ಆದ್ರೆ, ಅದರಾಚೆಗಿನ ಕುಟುಂಬಸ್ಥರ ತೊಳಲಾಟಗಳು, ಆತಂಕಗಳು ಬೆಂಬಿಡದೇ ಕಾಡ್ತಿವೆ. ಕುಟುಂಬಸ್ಥರು ಮುಂಡಗೋಡ ಪೊಲೀಸರ ವಿರುದ್ಧವೂ ಸಹಜವಾಗೇ ಸಾತ್ವಿಕ ಕೋಪ ತೋರಿಸ್ತಿದಾರೆ.

ಅವನೊಬ್ಬ ಬ್ಯುಸಿನೆಸ್ ಪಾರ್ಟನರ್..!
ಅಂದಹಾಗೆ, ಹಾಗೆ ಧರ್ಮ ಜಲಾಶಯದಲ್ಲಿ ಹೆಣವಾಗಿ ಸಿಕ್ಕ ವಿನಾಯಕ್ ಜನ್ನು, ತನ್ನ ಬ್ಯುಸಿನೆಸ್ ಪಾರ್ಟನರ್ ಪ್ರದೀಪ್ ಹಾಗೂ ಪ್ರದೀಪ್‌ನ‌ ಗೆಳೆಯರ ಜೊತೆ ಶಿರಸಿ ಜಾತ್ರೆಗೆ ಬಂದಿದ್ದ. ಅದೇ ದಿನ ರಾತ್ರಿ ಅವರೆಲ್ಲರೂ ಪಾಳಾದಲ್ಲಿ ವಸತಿ ಇದ್ರು.. ಮರುದಿನ ವಿನಾಯಕ ಹಾಗೂ ಆತನ ಗೆಳೆಯರು ದಾವಣಗೆರೆಗೆ ವಾಪಸ್ ಹೊರಟಿದ್ದರಂತೆ. ಮಾರ್ಗಮಧ್ಯದಲ್ಲಿ ಪ್ರದೀಪ್ ಎನ್ನುವವನು ಊಟ ಮಾಡಿ ಧರ್ಮಾ ನದಿಯ ಸ್ನಾನ ಮಾಡೋಣ ಎಂದು‌ ಹೇಳಿದ್ದನಂತೆ, ಬಳಿಕ ಎಲ್ಲರೂ ಧರ್ಮಾ ನದಿ‌ಗೆ ತೆರಳಿದ್ರು. ಆದ್ರೆ, ಹಾಗೆ ಜಲಾಶಯದ ಅಂಗಳಕ್ಕೆ ತೆರಳಿದ್ದವರಲ್ಲಿ ವಿನಾಯಕ ಜನ್ನು ಮಾತ್ರ ಹೆಣವಾಗಿ ಸಿಕ್ಕಿದ್ದ.

ಕೊಲೆ ಆರೋಪ..!
ಯಾವಾಗ, ನೀರು ಕಂಡ್ರೆ ಭಯ ಬೀಳುವ ಜಾಯಮಾನದ ತನ್ನ ಮಗ ಈಜಲು ಇಳಿದು ಜೀವ ಬಿಟ್ಟ ಅನ್ನೋ ಸುದ್ದಿ ತಿಳಿದ ತಕ್ಷಣವೇ ಹೆತ್ತವರು ನೇರವಾಗಿ ಆತನ ಜೊತೆಗಿದ್ದವರ ಮೇಲೆ ಅನುಮಾನದ ಬೆರಳು ತೋರಿಸಿದ್ರು.
ಅವತ್ತು, ಆತನ ಜೊತೆಗಿದ್ದವರೇ ಕೊಲೆ ಮಾಡಿದ್ದಾರೆ ಅಂತಾ ಶಂಕೆ ವ್ತಕ್ತ ಪಡಿಸಿದ್ರು. ಆ ಬಗ್ಗೆ ಅನುಮಾನವಿರೋ ದೂರು ಕೂಡ ನಿಡಿದ್ರು.

ಕುಟುಂಬಸ್ಥರ ಅನುಮಾನಗಳೇನು..?

ಅನುಮಾನ 1
ವಿನಾಯಕ ನೀರಿಗಿಳಿಯಲು ತುಂಬಾನೇ‌ ಹೆದರುತ್ತಿದ್ದ. ಈಜಲು ಬರುತ್ತಿರಲಿಲ್ಲ. ಹೀಗಿದ್ದಾಗಲೂ ವಿನಾಯಕನ ಶವ ಜಲಾಶಯದ ನಡುಮದ್ಯ ಸಿಕ್ಕಿದೆ. ಇದು ಹೇಗೆ..? ಈಜು ಬರದೇ ಇರುವವನು ಜಲಾಶಯದ ನಟ್ಟ ನಡುವೆ ಹೋಗಿ ಹೆಣವಾಗಲು ಹೇಗೆ ಸಾಧ್ಯ..?

ಅನುಮಾನ 2
ವಿನಾಯಕನ ಮೃತದೇಹ ಪತ್ತೆಯಾದಾಗ ಆತನ ಬಾಯಿ ಹಾಗೂ ಮೂಗಿನಿಂದ ನೊರೆ ಬರುತ್ತಿತ್ತಂತೆ. ನೀರಿನಲ್ಲಿ ಮುಳುಗಿ ಸಹಜವಾಗಿ ಸಾವನ್ನಪ್ಪಿದವರಲ್ಲಿ ಈ ರೀತಿಯ ಲಕ್ಷಣ ಕಂಡುಬರುವುದಿಲ್ಲ ಅನ್ನೋದು ಕುಟುಂಬಸ್ಥರ ಅನುಮಾನದ ವಾದ.

ಅನುಮಾನ – 3
ವಿನಾಯಕ ಜನ್ನು ಗೋಲ್ಡ್ ಸ್ಮಿತ್ ಆಗಿದ್ದ. ದಾವಣಗೇರೆಯ ಕೆಲಸದ ಸ್ಥಳದಲ್ಲಿ ವಾಸವಿದ್ದ ರೂಮ‌್‌ನಲ್ಲಿ ಕಳೆದ 3 ತಿಂಗಳಿನಿಂದ ‌ವೇಸ್ಟೇಜ್ ಚಿನ್ನವನ್ನ ಭವಿಷ್ಯದ ದೃಷ್ಟಿಯಿಂದ ಸಂಗ್ರಹಿಸಿಟ್ಟಿದ್ದ. ಕಳೆದ ಸಲ ತಾನು ಭಟ್ಕಳದ ಶಿರಾಲಿಗೆ ಬಂದಿದ್ದಾಗ 50 ಗ್ರಾಂ ಚಿನ್ನವನ್ನು ಸಂಗ್ರಹಿಸಿಟ್ಟಿದ್ದಾಗಿ ಕುಟುಂಬಸ್ಥರಲ್ಲಿ ಹೇಳಿದ್ದನಂತೆ. ಆದ್ರೀಗ ವಿನಾಯಕ ಕೊಲೆಯಾದ ಬಳಿಕ ಆತನ ರೂಂ ಪರಿಶೀಲಿಸಿದ್ರೆ, ಅಲ್ಲಿದ್ದ ಚಿನ್ನ ಕಾಣಿಸುತ್ತಿಲ್ಲವಂತೆ, ಹಾಗಿದ್ದರೆ ಆ ಚಿನ್ನ ಎಲ್ಲಿ ಹೋಯ್ತು‌‌..?

ಅನುಮಾನ-4
ಇದರ ಜೊತೆಗೆ ಶಿರಾಲಿಯ‌ ಗ್ರಾಹಕರೊಬ್ಬರು‌ ನೀಡಿದ್ದ 70 ಗ್ರಾಂ ಚಿನ್ನವನ್ನು ಕೆಲಸದ ನಿಮಿತ್ತ ವಿನಾಯಕ ತನ್ನ ರೂಮಿನಲ್ಲಿ ಇಟ್ಟುಕೊಂಡಿದ್ದ. ಆದ್ರೀಗ ಆ ಚಿನ್ನದಲ್ಲಿ 63ಗ್ರಾಂ ಚಿನ್ನ ಮಾತ್ರ ವಿನಾಯಕನ ರೂಮಿನಲ್ಲಿದೆ. ಇನ್ನುಳಿದ ಚಿನ್ನ ಕಾಣ್ತಾನೇ ಇಲ್ಲವಂತೆ.

ಅನುಮಾನ-5
ವಿನಾಯಕನ ‌ಜೊತೆಗೆ ಶಿರಸಿಗೆ ತೆರಳಿದ್ದ ಪ್ರದೀಪ್ ಎಂಬಾತನಿಗೆ ವಿನಾಯಕ ಈ ಹಿಂದೆ ಸಾಕಷ್ಟು ಹಣ ನೀಡಿದ್ದನಂತೆ. ಮುಂಡಗೋಡ ಮೂಲದ ಪ್ರದೀಪ್‌ಗೆ ಧರ್ಮಾ ನದಿ ಅಪಾಯಕಾರಿ ಸ್ಥಳ ಅಂತಾ ಚೆನ್ನಾಗಿಯೇ‌ ಗೊತ್ತಿತ್ತು. ಆದ್ರೂ ಧರ್ಮಾ ನದಿಯಲ್ಲಿ ಅಪಾಯಕಾರಿ ಸ್ಥಳ ಎನ್ನುವ ಬೋರ್ಡ್ ಇದ್ದ ಕಡೆಯೇ ವಿನಾಯಕನನ್ನು ಕರೆದುಕೊಂಡು‌ ಹೋಗಿದ್ದಾದ್ರೂ ಯಾಕೆ ಅಂತಾ ಕುಟುಂಬಸ್ಥರು ಪ್ರಶ್ನಿಸ್ತಿದಾರೆ.

ಹೀಗೆ ಹಲವು ಅನುಮಾನದ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಕುಟುಂಬ ಮುಂಡಗೋಡ ಪೊಲೀಸರ ಬೆನ್ನು ಬಿದ್ದಿದೆ. ರವಿವಾರ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸುವ ಸಲುವಾಗಿ ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಹೀಗಾಗಿ, ಕುಟುಂಬಸ್ಥರು ಠಾಣೆಗೆ ಬಂದಿದ್ರು.

ಪೊಲೀಸರು ಹೇಳೋದೇನು..?
ತನಿಖೆ, ಅಕ್ಷರಶಃ ಪ್ರಗತಿಯಲ್ಲಿದೆ. ಅವ್ರು ನೀಡಿರೋ ಮಾಹಿತಿಗಳ‌ ಆಧಾರದಲ್ಲಿ ತನಿಖೆ ಮುಂದುವರೆದಿದೆ. ಕುಟುಂಬಸ್ಥರು ನೀಡಿರುವ ಮಾಹಿತಿಗಳ ಅನ್ವಯ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಅಂತಾರೆ ಪೊಲೀಸ್ರು.

ಅದೇನೇ ಆಗಿರಲಿ, ಮೊದಲು ಈ ಪ್ರಕರಣದ ಖುಲ್ಲಂ ಖುಲ್ಲಾ, ನಿರ್ಭಿಡೆಯ ತನಿಖೆ ಆಗಬೇಕಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಕಣ್ಣೀರಿಗೆ ಅಸಲಿ ಸತ್ಯದ ಅರಿವಾಗಬೇಕಿದೆ. ಹಾಗೇನಾದ್ರೂ ವಿನಾಯಕನ ಸಾವಿನಲ್ಲಿ ಕ್ರೂರ ಮನಸ್ಸುಗಳು ಕೈ ಆಡಿಸಿದ್ದರೆ, ಅಂತವರಿಗೆ ತಕ್ಕ‌ಶಿಕ್ಷೆ ಆಗಲೇಬೇಕಿದೆ. ಅದು ಮುಂಡಗೋಡ ಪೊಲೀಸರ ಹೆಗಲ ಮೇಲಿದೆ. ಅದ್ರ ಜೊತೆ ಪೊಲೀಸರ ಸಂಪೂರ್ಣ ತನಿಖೆಯವರೆಗೂ ಕುಟುಂಬಸ್ಥರು ಸಹಕಾರ ನೀಡಬೇಕಿದೆ. ತಾಳ್ಮೆಯ ಅವಶ್ಯಕತೆಯೂ ಇದೆ. ತನಿಖೆಯಲ್ಲಿ ಯಡವಟ್ಟಾದ್ರೆ ಖಂಡಿತ ಪ್ರಶ್ನಿಸಲು ದಾರಿಗಳೂ ಇದ್ದೇ ಇದೆ. ಅಲ್ವಾ..?

error: Content is protected !!