ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಭಾರೀ ಮನಕಲುಕುವ ಘಟನೆ ನಡೆದಿದೆ. ಹರಿದು ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ 13 ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಷ್ಪಕ್ ಮೊಹ್ಮದ್ ಷರೀಪ್ ಚಪಾತಿ (13) ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಬೇಲಿಯ ಮೇಲೆ ವಿದ್ಯುತ್ ಲೈನ್ ಹರಿದು ಬಿದ್ದಿದೆ. ಇದೇ ವೇಳೆ ಅಷ್ಪಕ್ ಹಾಗೂ ಆತನ ಮತ್ತೊರ್ವ ಸಹೋದರ ಮಹ್ಮದ್ ಜಾಫರ್ ಚಪಾತಿ ಎನ್ನುವ ಬಾಲಕ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಬಾಲಕ ಅಷ್ಪಕ್ ಬೇಲಿಯನ್ನು ಮುಟ್ಟಿದ್ದಾನೆ. ಈ ವೇಳೆ ತಕ್ಷಣವೇ ಆತನಿಗೆ ವಿದ್ಯುತ್ ಪ್ರವಹಿಸಿ ವಿಲ ವಿಲ ಒದ್ದಾಡಿದ್ದಾನೆ. ಅದನ್ನ ಕಂಡು ಅವನ ಜೊತೆಗೆ ಇದ್ದ ಮತ್ತೊಬ್ಬ ಬಾಲಕ ಆತನನ್ನು ಮುಟ್ಟಿದ್ದಾನೆ. ಹೀಗಾಗಿ ಆತನಿಗೂ ವಿದ್ಯುತ್ ಪ್ರವಹಿಸಿದೆ. ಅಷ್ಟೊತ್ತಿಗಾಗಲೇ ಇದನ್ನೇಲ್ಲ ಗಮನಿಸಿದ ಜನ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ, ಮತ್ತೊರ್ವ ಬಾಲಕ ಬಚಾವ್ ಆಗಿದ್ದಾನೆ.
ಅಷ್ಟೊತ್ತಿಗಾಗಲೇ ಅಷ್ಪಕ್ ಎನ್ನುವ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸಂಪೂರ್ಣ ನಿಸ್ತೇಜ ಸ್ಥಿತಿಗೆ ತಲುಪಿದ್ದಾನೆ ಎನ್ನಲಾಗಿದೆ. ತಕ್ಷಣವೇ ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಬಾಲಕ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಬಾಲಕನಿಗೆ ಚಿಕಿತ್ಸೆ ನೀಡಲಾಗ್ತಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.