ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭಾರತಿ ನಿಂಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ಆಂತರಿಕ ಒಪ್ಪಂದದಂತೆ ಅಧ್ಯಕ್ಷರ ಬದಲಾವಣೆ ಆಗಿದೆ.

ಕೈ ಬಲ..!
ಒಟ್ಟೂ 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಭರ್ಜರಿ ಜಯಗಳಿಸಿ ಬಿಜೆಪಿ ಬೆಂಬಲಿತರಿಗೆ ಭಾರೀ ನಿರಾಸೆ‌ ಮೂಡಿಸಿದ್ದರು. ಆಡಳಿತಾರೂಢ ಬಿಜೆಪಿ ಬೆಂಬಲಿತರು ಕೇವಲ 2 ಸ್ಥಾನಕ್ಕಷ್ಟೇ ತೃಪ್ತಿ ಪಟ್ಟು ಕೈ ಚೆಲ್ಲಿದ್ದರು. ಮೂವರು ಪಕ್ಷೇತರರು ಗೆದ್ದು ಬಂದಿದ್ದರು. ಹೀಗಾಗಿ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಕೈ ಪಡೆಯ ಬೆಂಬಲಿತರಿಗೆ ಅನಾಯಾಸವಾಗಿ ಆಡಳಿತದ ಚುಕ್ಕಾಣಿ ಸಿಕ್ಕಿತ್ತು.

15-15 ತಿಂಗಳು..!
ಅವತ್ತು, ಬಹುತೇಕ ಅವಿರೋಧವಾಗಿಯೇ ನೂತನ ಅಧ್ಯಕ್ಷರನ್ನಾಗಿ ತುಳಸವ್ವ ರಾಣೋಜಿಯವರನ್ನು 15 ತಿಂಗಳುಗಳ ಅವಧಿಗೆ ಆಯ್ಕೆ ಮಾಡಲಾಗಿತ್ತು. ಆ ವೇಳೆ ತೀವ್ರ ಪೈಪೋಟಿ ನಡೆಸಿದ್ದ ಭಾರತಿ ನಿಂಬಾಯಿಯವರಿಗೆ ಮುಂದಿನ ಅವಧಿಗೆ ಅಧ್ಯಕ್ಷೆಯನ್ನಾಗಿಸೋ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ, 15 ತಿಂಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಒಪ್ಪಂದದಂತೆ, ಅವತ್ತೇ ತೀರ್ಮಾನಿಸಲಾಗಿದ್ದ ಭಾರತಿ ನಿಂಬಾಯಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ.

ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಸಮ್ಮುಖದಲ್ಲಿ ಅಧ್ಯಕ್ಷರ ಆಯ್ಕೆ‌ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಾಟೀಲ್ ಮತ್ತು ನಾಗರಾಜ ಹಂಚಿನಮನಿ ಹಾಗೂ ಚಿಗಳ್ಳಿ ಗ್ರಾ.ಪಂ. ಸದಸ್ಯರು ಹಾಜರಿದ್ದರು.

error: Content is protected !!