ಯಲ್ಲಾಪುರ ಬಿಜೆಪಿಗೆ ಅದೇನಾಗಿದೆಯೋ ಗೊತ್ತಿಲ್ಲ. ಪಂಚರಾಜ್ಯಗಳ ಚುನಾವಣೆಲಿ ಅಭೂತಪೂರ್ವ ಯಶಸ್ಸು ಪಡೆದ ಸಂಭ್ರಮದ ಮದ್ಯೆಯೂ, ಒಳಗೊಳಗೇ ಯಾರೂ ನಿರೀಕ್ಷಿಸದ ಲೋಕಲ್ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಗಳು ಹಾಗೂ ಒಳಗೊಳಗಿನ ಚಟುವಟಿಕೆಗಳು ಬಲಿಷ್ಟವಾಗುತ್ತ ಹೋದರೆ ಇನ್ನೇನು ಚುನಾವಣೆ ಹೊತ್ತಿಗೇಲ್ಲ ಭರ್ಜರಿ ಬದಲಾವಣೆಗಳು ಆಗಲಿವೆ ಅನ್ನೋದು ಅದೇ ಪಕ್ಷದ ದೊಡ್ಡ ಮಂದಿಯೇ ಹೇಳುತ್ತಿರೋ ಬಹುದೊಡ್ಡ ಮಾತುಗಳು.
ಆ ಆರು ತಿಂಗಳು..!
ನಿಜ ಕಳೆದ ಆರು ತಿಂಗಳಿಂದ ಯಲ್ಲಾಪುರ, ಮುಂಡಗೋಡ ಬಿಜೆಪಿಯಲ್ಲಿ ಅದೊಂದು ಬಣ ಇನ್ನಿಲ್ಲದಂತೆ ಆ್ಯಕ್ಟಿವ್ ಆಗಿದೆಯಂತೆ. ಮೇಲಿಂದ ಮೇಲೆ ಅದೇಲ್ಲೆಲ್ಲೋ ಹೋಗಿ ಗಂಟೆಗಟ್ಟಲೇ ಚರ್ಚೆಗಳಿಗಾಗೇ ಮೀಟಿಂಗು, ಈಟಿಂಗು ಎಲ್ಲಾ ಚಾಲ್ತಿಯಲ್ಲಿವೆಯಂತೆ. ಅದರ ಭಾಗವಾಗೇ ಕಳೆದ ನಾಲ್ಕು ದಿನದ ಹಿಂದೆ ಶಿರಸಿ ಸಮೀಪದ ಆಲೆಮನೆಯಲ್ಲಿ ಭರ್ಜರಿ ಮೀಟಿಂಗು ನಡೆದಾಗಿದೆ. ಅಂದಹಾಗೆ, ಆ ಮೀಟಿಂಗ್ ನಲ್ಲಿ ಬೆಲ್ಲದ ಪಾಕದ ಸವಿಯೊಂದಿಗೆ ಬಿಜೆಪಿಯ ಒಳಮಸಲತ್ತುಗಳ ಖಡಕ್ಕು “ಖಾರ” ಮೇಳೈಸಿ ಚಹಾದ ಜೊತೆ ಚೂಡ್ಹಾ ತಿಂದಂಗೆ ಆಗಿದೆ. ಹಾಗಂತ, ಅದೇ ಸಭೆಯ ಬೆಲ್ಲದ ಪಾಕದಲ್ಲಿ ಮಿಂದೆದ್ದು ಬಂದವರೇ ಹೇಳ್ತಿದಾರೆ.
ಹೆಬ್ಬಾರ್ ವಿರೋಧಿ ಬಣವಾ..?
ಅಂದಹಾಗೆ, ಕಳೆದ ಆರು ತಿಂಗಳಿಂದ ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಒಳಗೊಳಗಿನ ಬಿಸಿಯಾಟ ತಣ್ಣಗಾಗದಂತೆ ನೋಡಿಕೊಳ್ತಿರೋದು ಪಕ್ಕಾ ಹೆಬ್ಬಾರ್ ಅಂಗಳದಿಂದ ಮೈ ಕೊಡವಿ ಎದ್ದು ಬಂದವರಂತೂ ಅಲ್ಲವೇ ಅಲ್ಲ. ಅಷ್ಟಕ್ಕೂ, ಹಾಗೆ ಶಿವರಾಂ ಹೆಬ್ಬಾರ್ ಸಾಹೇಬ್ರಿಗೆ ಠಕ್ಕರ್ ಕೊಡಲೇ ಬೇಕು ಅಂತಾ ಹಾದಿ ಬೀದಿಯಲ್ಲಿ ನಿಂತು ಒದರಾಡಿ ಅದೇನನ್ನೋ ಗಿಟ್ಟಿಸಿಕೊಳ್ಳಬೇಕು ಅನ್ನೋ ಹುಂಬ ಆಸೆಬುರುಕ ಮಂದಿಯಂತೂ ಇವ್ರು ಅಲ್ಲವೇ ಅಲ್ಲವಂತೆ. ನಿಜ ಅಂದ್ರೆ, ಇಂತಹದ್ದೊಂದು ಸಭೆ ಮಾಡಿ ಅದ್ಯಾರದ್ದೋ ಸಿಟ್ಟು ದವಡೆಗೆ ಮೂಲ ಮಾಡ್ಕೊತಿದಾರೆ ಅನ್ನೋದಾಗಿದ್ರೆ ಅದನ್ನಿಲ್ಲಿ ನಾವು ಹೇಳ್ತಾನೇ ಇರಲಿಲ್ಲ. ಆದ್ರೆ, ಹಾಗೆ ಬೆಲ್ಲದ ಘಮ ಘಮದ ಮದ್ಯೆ ಸಭೆ ನಡೆಸಿದವರು ಪಕ್ಕಾ ಮೂಲ ಬಿಜೆಪಿ ಕುಳಗಳಂತೆ, ಪರಿವಾರದ ಪಡಸಾಲೆಯಲ್ಲಿ ಅರಳಿ ಬಂದ ಹೂವುಗಳಂತೆ. ಕ್ಷೇತ್ರದ ಮಟ್ಟಿಗೆ ಘಟಾನುಘಟಿಗಳಂತೆ. ಹೀಗಾಗಿ, ಕುಚ್ ತೋ ಕುಚ್ ಗಡಬಡ್ ಪಕ್ಕಾ ಅನ್ನುವ ಎಲ್ಲಾ ಲಕ್ಷಣ ಗೋಚರಿಸ್ತಿದೆ.
ಬಿಜೆಪಿಗೆ ಅಭ್ಯರ್ಥಿ ತಲಾಶ್..?
ನಿಜ, ಈ ಮಾತು ಹೇಳಿದ್ರೆ “ಎಲ್ಲಿಂದ ನಗಬೇಕಪ್ಪಾ”.. ? ಅನ್ನೋ ಕಾಮೆನ್ ಪ್ರಶ್ನೆ ನೀವು ಕೇಳೇ ಕೇಳ್ತಿರಿ. ಯಾಕಂದ್ರೆ, ಆಡಳಿತಾರೂಢ ಪಕ್ಷದ ಅದ್ರಲ್ಲೂ ಸಿಎಂ ಜೊತೆ ಕುಚುಕ್ಕೂ ಗೆಳೆತನ ಹೊಂದಿರೋ ಸಚಿವ ಹೆಬ್ಬಾರ್, ಕ್ಷೇತ್ರದಲ್ಲಿ ಬಲಿಷ್ಟವಾಗಿರೋವಾಗ ಬಿಜೆಪಿಗೆ ಬೇರೊಬ್ಬ ಅಭ್ಯರ್ಥಿ ತಲಾಶ್ ನಡೀತಿದೆಯಾ..? ಇದು ನಿಜಕ್ಕೂ ಹುಬ್ಬೇರಿಸುವಂತಹ ಮಾತೇ..! ಆದ್ರೆ, ಪಕ್ಕಾ ಮೂಲಗಳ ಮಾಹಿತಿ ಪ್ರಕಾರ ಅದು ನಿಜವಂತೆ. ಈಗಾಗಲೇ, ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯೊಬ್ಬರ ಪ್ರತಿಷ್ಟಾಪನೆಗೆ ಅದೊಂದು ಬಣ ಹಗಲೂ ರಾತ್ರಿ ಕಾರ್ಯಪ್ರವೃತ್ತವಾಗಿದೆ ಅನ್ನೋದು ಸದ್ಯದ ಲೆಟೇಸ್ಟ್ ಅಪಡೇಟ್…
ಅವರು ಡಾಕ್ಟರ್..?
ಅಸಲು, ಯಲ್ಲಾಪುರ ಕ್ಷೇತ್ರದ ಬಿಜೆಪಿ ಪಡಸಾಲೆಯಲ್ಲಿ ಗರಿ ಗರಿಯಾಗಿ ಹೊಸೆದುಕೊಳ್ತಿರೊ ಅಷ್ಟೂ ಮಜಕೂರಗಳ ಹಿಂದೆ ಯಾರೂ ಉಹಿಸದ ಲೆಕ್ಕಾಚಾರವಿದೆ. “ಪರಿವಾರ” ದ ಅಂಗಳದ ತೋಟದಲ್ಲಿ ಅಂತಹದ್ದೊಂದು ಸಮೀಕರಣ ಚಿಗುರೊಡೆದಿದೆ. ಹೀಗಾಗಿನೇ ಯಲ್ಲಾಪುರ ಮೂಲದ ವೈದ್ಯರೊಬ್ಬರಿಗೆ ನೀವೇ ರೆಡಿಯಾಗಿ ಅಂತಾ “ಸಂಘ”ಟನೆ ರೂವಾರಿಗಳು ಹುರಿದುಂಬಿಸ್ತಿದಾರಂತೆ.
ಆ ಡಾಕ್ಟರ್ ಸಾಹೇಬ್ರಿಗೆ “ಅಭ್ಯರ್ಥಿ” ಯಾಗಿಸುವ ತಯಾರಿ ಶುರುವಾಗಿದೆಯಂತೆ. ಆದ್ರೆ, ಇದೇಲ್ಲ ವರ್ಕೌಟ್ ಆಗತ್ತಾ..? ದೇವ್ರಾಣೆ ಯಾರಿಗೂ ಗೊತ್ತಿಲ್ಲ.
ಯಲ್ಲಾಪುರದವರೇ ಹೆಚ್ಚು..!
ನಿಜ ಅಂದ್ರೆ, ಇಂತಹ ಬೆಲ್ಲದರಮನೆಯ ಹಕೀಕತ್ತುಗಳಿಗೆ ತುಪ್ಪ ಹಾಕಿ ಪಾಕ ತಯಾರಿಸುವ ಕೆಲಸದಲ್ಲಿ ಬಹುತೇಕ ಯಲ್ಲಾಪುರದ ಘಟಾನುಘಟಿಗಳೆ ಹೆಚ್ಚು ಸಕ್ರಿಯ ಅನ್ನೋ ಮಾತು ಕೇಳಿ ಬಂದಿದೆ. ಹಾಗಂತ, ಮುಂಡಗೋಡಿನ ಮುನಿಸು ವೀರರು ಇಲ್ಲವೆಂದೇನಿಲ್ಲ. ಮುಂಡಗೋಡಿನಲ್ಲಿ ಬಿಜೆಪಿಗಾಗಿ ರಕ್ತ ಬಸೆದವರ ಹಿಂಡೂ ಕೂಡ ಆ ಸಭೆಯ ಮಜಕೂರಗಳಿಗೆ ಜೈ ಅಂದಿದೆ. ಸಭೆಗೆ ಹೋಗಲು ಆಗದೇ ಮನೆಯಲ್ಲೇ ಕುಳಿತ ಕೆಲವರು, ನಿಮ್ಮ ತೀರ್ಮಾನಗಳಿಗೆ ನಾವೇಲ್ಲ ಬದ್ದ ಅನ್ನೋ ಭರವಸೆಯ ಮಾತು ಕೊಟ್ಟಿದ್ದಾರಂತೆ. ಹೀಗಾಗಿ, ಆ ಸಭೆ ಬಲು ಮಹತ್ವ ಪಡೆದುಕೊಂಡಿದೆ.
ಮಾಜಿ ಶಾಸಕರ ಕತೆಯೇನು..?
ಅಂದಹಾಗೆ, ಕಳೆದ ಚುನಾವಣೆಯಲ್ಲಿ ಟಿಕೆಟ್ ಮಿಸ್ ಆಗಿ ಮೈ ಬಿಸಿ ಏರಿಸಿಕೊಂಡಿದ್ದ ಮಾಜಿ ಶಾಸಕರು, ಅವತ್ತೆ ಬಲು ದೊಡ್ಡ ತೀರ್ಮಾನ ತೆಗೆದುಕೊಂಡಾಗಿತ್ತು. ಇನ್ನೇನು “ಕೈ” ಗೇ ಜೋತು ಬೀಳೋ ಸ್ಪಷ್ಟ ಸೂಚನೆ ಸಿಕ್ಕಾಗ ಇಲ್ಲಿನವರೇ ಕೆಲವ್ರು ಅವ್ರೊಂದಿಗೆ ಒಂದಿಷ್ಟು ಮಾತುಕತೆಯಾಡಿದ್ರು. ಅಧಿಕಾರವಿಲ್ಲದ ಪಕ್ಷಕ್ಕೆ ಹೋಗಿ ಅದೇನು ಕಡಿದು ಗುಡ್ಡೆ ಹಾಕ್ತಿರಾ, ಇಲ್ಲೇ ಇರಿ, ನಿಮಗೂ ಒಂದೊಳ್ಳೆ ಟೈಮ್ ಬರತ್ತೆ. ಇಲ್ಲೇ ಇದ್ರೆ ಅದು, ಇದು ಅಂತಾ ನಿಗಮ ಮಂಡಳಿಯ ಅಧ್ಯಕ್ಷಗಿರಿಯಾದ್ರೂ ಸಿಕ್ಕತ್ತೆ, ಸುಮ್ನಿರಿ ನೀವು ಅಂತಾ ಸಮಾಧಾನ ಮಾಡಿ ಉಳಿಸಿಕೊಂಡಿದ್ರಂತೆ, ಹೀಗಾಗಿ, ಮಾಜಿಗಳು ತಣ್ಣಗಾಗಿದ್ರಂತೆ, ಆ ನಂತರ ಅಧ್ಯಕ್ಷ ಪದವಿ, ಜೊತೆಗೊಂದು ಗೂಟದ ಕಾರು ಕೊಟ್ಟಾಗ, ಉಕ್ಕಿ ಬಂದಿದ್ದ ಸಿಟ್ಟು ತಣ್ಣಗೆ ಅದುಮಿಕೊಂಡು ಕುಳಿತಿದ್ರಂತೆ. ಆದ್ರೆ, ಅಂತಹ ಮಾಜಿಗಳು ಈಗ ಈ ಪರಿವಾರದ ಸಭೆಯಲ್ಲಿ ಸಕ್ರಿಯವಾಗಿದ್ದಾರಾ..? ಗೊತ್ತಿಲ್ಲ. ಒಂದು ವೇಳೆ ಅವ್ರು ಸಕ್ರಿಯವಾಗಿದ್ದಿದ್ದರೆ, “ಡಾಕ್ಟರ್” ಅನ್ನೋ ಹೊಸ ಮುಖಕ್ಕೆ ಯಾಕೆ ಅಭ್ಯರ್ಥಿಯಾಗಿಸುವ ಮಾತು ಚರ್ಚೆಯಾಗ್ತಿತ್ತು..? ಅನ್ನೋ ಸಹಜ ಪ್ರಶ್ನೆ ಏಳುತ್ತಿದೆ.
ಮೂಲ, ವಲಸಿಗ ಕಾದಾಟ..?
ಅಸಲು, ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಕಮಲ ಪಡೆಯಲ್ಲಿ ಮೂಲ, ವಲಸಿಗ ಕುಳಗಳ ಮದ್ಯೆ ಒಳಗೊಳಗಿನ ಕುದಿ ತಣ್ಣಗಾಗುವ ಯಾವ ಸೂಚನೆಗಳೂ ಸದ್ಯಕ್ಕೆ ಸಿಗ್ತಿಲ್ಲ. ಅದ್ರಲ್ಲೂ ಯಲ್ಲಾಪುರದ ಕಟ್ಟಾ ಬಿಜೆಪಿಗಳು ಈಗ ಸಿಡಿದೇಳುವ ಹಂತಕ್ಕೆ ಬಂದಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದನ್ನೇಲ್ಲ ಸೂಕ್ಷ್ಮವಾಗೇ ಗಮನಿಸ್ತಿರೋ “ಕೇಸರಿ” ಪರಿವಾರ, ತನ್ನ ಗರಡಿಯ ಮಂದಿಗೆ ಅಭಯ ನೀಡಿದೆ. ನಾವಿದ್ದೇವೆ ನೀವು ಭಯ ಪಡಬೇಡಿ ಪಕ್ಷದ ಸಂಘಟನೆಗೆ ಒತ್ತು ನೀಡಿ, ಅಂತಾ ಸ್ಪಷ್ಟ ಸಂದೇಶ ನೀಡಿದೆ ಅನ್ನೋ ಮಾತು ಕೇಳಿ ಬಂದಿದೆ. ಹೀಗಾಗಿ, ಸದ್ಯ ಮುಗುಮ್ಮಾಗೇ ಫಿಲ್ಡಿಗಿಳಿದಿರೋ ಆ ಪಡೆ, ಚುನಾವಣೆ ಹೊತ್ತಿಗಾಗಿ ಕಾಯ್ತಿದೆಯಂತೆ.
ಒಟ್ನಲ್ಲಿ, ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಇಡೀ ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ “ಖೋ ಖೋ” ಗೇಮ್ ಅಕ್ಷರಶಃ ಮೈದಾನವನ್ನೇ ಆಕ್ರಮಿಸಿಕೊಳ್ಳೊ ಎಲ್ಲಾ ಸಾಧ್ಯತೆ ಇದೆ.