ಮುಂಡಗೋಡ ತಾಲೂಕಿನ ಮಟ್ಕಾ ಪ್ರಿಯರಿಗೆ ಸಂತಸದ ಸುದ್ದಿಯಿದು. ಇನ್ನೇನು ಇವತ್ತಿನಿಂದ ಅಂದ್ರೆ ಸೋಮವಾರದಿಂದ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಭರ್ಜರಿ ಶುಭಾರಂಭ ಮಾಡ್ತಿದೆಯಂತೆ. ಅಷ್ಟಕ್ಕೂ ಮಟ್ಕಾ ದಂಧೆಯ ಮಂತ್ಲಿ ಹಣದ ಕೈ ಬಿಸಿ ಇಲ್ಲದೇ ಈ ಛಳಿಗಾಲ ಸಾಗೋಕೆ ಸಾಧ್ಯವೇ ಇಲ್ಲ ಅಂತಾ ಅವನೊಬ್ಬ ಚಕ್ಕಂಬಕ್ಕಳ ಹಾಕ್ಕೊಂಡು ಡೀಲಿಗೆ ಕುಳಿತಿದ್ದನಂತೆ. ಅವನ ಪರಿಶ್ರಮದ ಫಲವಾಗೇ ಈಗ ಮತ್ತೆ ಮಟ್ಕಾ ಅನ್ನೋದು
ಮನೆ ಮಾತಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ‌ಯಂತೆ. ಹೀಗೆ ಇತ್ಯಾದಿ ಇತ್ಯಾದಿಯಾಗಿ ಇಡೀ ಮುಂಡಗೋಡ ತಾಲೂಕಿನಲ್ಲಿ ಗುಲ್ಲೆದ್ದಿದೆ. ಗುಲ್ಲು ಅನ್ನೋದಕ್ಕಿಂತ ಅಲ್ಲೇ ಕೆಲಸ ಮಾಡೋ ಕೆಲವೊಂದಿಷ್ಟು ಪ್ರಾಮಾಣಿಕ ಬಡಪಾಯಿಗಳು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗಾಡ್ತಿದಾರೆ. ಇದ್ರೊಂದಿಗೆ ನಮ್ಮ ಜಿಲ್ಲೆಯ ನೂತನ, ದಕ್ಷ ಎಸ್ಪಿ ಡಾ. ಸುಮನಾ ಫನ್ನೇಕರ್ ಮೇಡಮ್ಮಿನ ಖಡಕ್ ಆದೇಶವೊಂದನ್ನ ಮುಂಡಗೋಡಿನಲ್ಲಿ ಗಪ್ ಚುಪ್ ಆಗಿ ಸಮಾಧಿ ಮಾಡಲಾಯ್ತಾ..? ಅನ್ನೋ ಪ್ರಶ್ನೆ ಎದ್ದಿದೆ.

ಅವನೊಬ್ಬ..!
ಅಸಲು, ಆತ ಈಗ ಇಡೀ ಠಾಣೆಯಲ್ಲೇ ಕಿಂಗ್ ಆಗಲು ಹೊರಟಿದ್ದಾನಂತೆ, ಅವನ ಇಶಾರೆಯಿಲ್ಲದೇ ಅಲ್ಲಿ ಏನಂದ್ರೆ ಏನೂ ಸಂಭವಿಸಲ್ಲ ಅನ್ನುವಷ್ಟು ಖದರ್ರು ಉಳಿಸಿಕೊಂಡಿದ್ದಾನಂತೆ. ಅದೇನೇ ನಡೆದ್ರೂ ಅವನ ಮೂಲಕವೇ ಆಗಬೇಕು ಅನ್ನುವ ಮಹಾತ್ವಾಕಾಂಕ್ಷೆ ಅವನ ನೆತ್ತಿ ಏರಿದೆ. ಹೀಗಾಗಿ ಆತನ ತಲೆಯ ಮೇಲೆ ಅದೇಲ್ಲಿಂದಲೋ ಎರಡೆರೆಡು ಕೊಂಬುಗಳು ಬಂದು ಆಗಿದೆಯಂತೆ. ಹಾಗಂತ ನಾವು ಹೇಳ್ತಿರೋದಲ್ಲ ಅವನ ಸಹೋದ್ಯೋಗಿಗಳೇ ಹೇಳ್ತಿದಾರೆ‌. ಅಷ್ಟಕ್ಕೂ ಅವನ್ಯಾವ ಸೀಮೆಯ ಅಧಿಕಾರಿಯೂ ಅಲ್ಲ, ಅವನೊಬ್ಬ ದೂರದೂರಿನಿಂದ ಕಳೆದ ಐದು ವರ್ಷದ ಹಿಂದೆ ಬಂದು ಇಲ್ಲೇ ಝಂಡಾ ಊರಿರೋ ಮಹಾನ್ ವೀರ..! “ನಮ್ಮ ಇಲಾಖೆಯ ಮಾನ ಮರ್ಯಾದೆ ಕಳಿತಿದಾನೆ ಸಾರ್” ಅಂತಾ ಬೊಬ್ಬೆ ಹೊಡಿತಿದಾರೆ ಕೆಲವ್ರು‌..

ಹಳೆಯ ಕಿಂಗ್ ಗಳ ಆಟ ಬಂದ್..!
ಹೌದು, ಮುಂಡಗೋಡ ತಾಲೂಕಿನಲ್ಲಿ ಓಸಿ ಅಂದ್ರೆ ಅದೊಂದಿಷ್ಟು ಹುಲಿಗಳ‌ ಹೆಸ್ರು ಇತ್ತು. ಅದೇಲ್ಲ ಗಪ್ ಚುಪ್ ಆಗಿಯೇ ದಶಕಗಳಿಂದ ಮಂತ್ಲಿ ಎಂಬ ಮಹಾಪ್ರಸಾಧ ಹಿಡ್ಕೊಂಡು ಇಡೀ ತಾಲೂಕನ್ನೇ ಆಳುತ್ತಿದ್ದವರು ಅವ್ರು. ನಿಜ ಅಂದ್ರೆ, ಆ ಕಿಂಗ್ ಗಳು ಈಗ ಸಂಪೂರ್ಣ ಸೈಲೆಂಟಾಗಿದ್ದಾರೆ. ಪಾಪ ಅವ್ರಿಗೆ ಮಂತ್ಲಿಯಾಗಿ ಲಕ್ಷ ಲಕ್ಷ ರೊಕ್ಕ ಕೊಡೋದಿರಲಿ, ಬಕಾಸುರ ಬಗಬಂಡಿಗಳಿಗೆ ತಿಂಗಳ ತುಂಬ ಎಣ್ಣೆ ಪಾರ್ಟಿ ಮಾಡೋಕೇ ತಿಣುಕಾಡುವಂತಾಗಿತ್ತು ಅನ್ನೋದು ಅವ್ರೇ ಕೆಲವ್ರ ಮುಂದೆ ನೊಂದು ಅಲವತ್ತುಕೊಂಡಿರೋ ಬಾತ್ಮಿ ಇದೆ. ಆದ್ರೆ ಅದೇಷ್ಟು ಸತ್ಯವೊ ಗೊತ್ತಿಲ್ಲ.

ಖಡಕ್ ಎಸ್ಪಿ ಡಾ.ಸುಮನ್ ಡಿ.ಫನ್ನೇಕರ್

ಹೀಗಾಗಿ, ಈ ಓಸಿಯ ಸಹವಾಸವೇ ಬೇಡ ಅಂತಾ ಅವ್ರೇಲ್ಲ ಈಗ ಸೈಡಿಗೆ ಸರಿದಿದ್ದಾರಂತೆ, ಇನ್ನು ಓಸಿ ಬಂದ್ ಆಗಿರೋ ಕಾರಣಕ್ಕೆ ಕೆಲವರ ತಿಂಗಳ ಲೆಕ್ಕಕ್ಕೆ ಖೋತಾ ಆಗಿದೆ‌. ಹೀಗಾಗಿ, ಹೇಗಾದ್ರೂ ಸರಿ ಮತ್ತೆ ಶುರು ಮಾಡಲೇ ಬೇಕು ಅಂತಾ ಫಿಲ್ಡಿಗೆ ಇಳಿದಿತ್ತಂತೆ ಆತನೇ ರಚಿಸಿಕೊಂಡಿದ್ದ ಅದೊಂದು ಪಡೆ.

ಪ್ರಾಮಾಣಿಕ‌ ಪೊಲೀಸ್ರಿಗೆ ಸೆಲ್ಯೂಟ್..!
ಅಸಲು, ವಯಕ್ತಿಕವಾಗಿ ನನಗಂತೂ ಪೊಲೀಸರ ಮೇಲೆ ಹೃದಯಕ್ಕಂಟಿದ ಶಾಶ್ವತ ಗೌರವ ಇದೆ. ಪೊಲೀಸ್ ಇಲಾಖೆಯಲ್ಲಿ ಅದೇಷ್ಟೋ ಖಡಕ್ ಅಧಿಕಾರಿಗಳು ಇವತ್ತಿಗೂ ನಮ್ಮ ಮುಂದಿದ್ದಾರೆ. ನಮ್ಮ ಮುಂಡಗೋಡಿನಲ್ಲೇ ಹೇಳಬೇಕಂದ್ರೆ ಕ್ರೈಂ ಪಿಎಸ್ ಐ ಆಗಿ ಬಂದಿರೋ ಎನ್.ಡಿ.ಜಕ್ಕಣ್ಣವರ ನಿಜಕ್ಕೂ ಹೃದಯವಂತ ಮನುಷ್ಯ. ಇವ್ರಿಗೆ ನೀವು ರಾತ್ರಿ ಸರಹೊತ್ತಿನಲ್ಲಿ ಕಾಲ್ ಮಾಡಿ ನಮಗೆ ಸಮಸ್ಯೆಯಾಗಿದೆ ಬನ್ನಿ ಸಾರ್, ಅಂತಾ ಹೇಳಿದ್ರೆ ಸಾಕು, ತಕ್ಷಣದಲ್ಲೇ ಹಾಜರಾಗಿ ನಿಮ್ಮ ಮುಂದಿರ್ತಾರೆ. ಅದೇನೇ ಸಮಸ್ಯೆಯಿದ್ರೂ ಕುಳಿತು ಯಾವುದೇ ಬಿಂಕ ಬಿಗುಮಾನಗಳಿಲ್ಲದೇ ಥೇಟು ಜವಾರಿ ಸ್ಟೈಲ್ ನಲ್ಲೇ ಸಮಸ್ಯೆಗಳಿಗೆ ಸಾಂತ್ವನ ನೀಡ್ತಾರೆ.

ಇನ್ನು ಅವರಂತೆಯೇ ನಮ್ಮ ಪಿಎಸ್ಐ ಬಸವರಾಜ್ ಮಬನೂರು ಇಲ್ಲಿನ ಯುವಕರಿಗೆ ಗೆಳೆಯನಂತೆ ನಿಂತು ಸ್ಪಂಧಿಸೋ ರೀತಿ ಇದೇಯಲ್ಲ..? ಅದು ನಿಜಕ್ಕೂ ಅಪ್ಯಾಯಮಾನ.. ಹೀಗಾಗಿನೇ, ಕೊರೋನಾ ಲಾಕ್ ಡೌನ್ ವೇಳೆ ಯಾರಿಗೂ ಗೊತ್ತಿಲ್ಲದೇ ಇದೇ ಬಸವರಾಜ್ ಮಬನೂರು ಸಾಹೇಬ್ರಿಗೆ ರಾತ್ರಿ ಹಗಲೂ ಪೋನ್ ಕರೆಗಳು ಬರ್ತಿದ್ವು. ಅದೇಲ್ಲೆ ನಿರ್ಗತಿಕರಿದ್ರೂ ಅವ್ರ ಬಳಿ ಹೋಗಿ ಸಹಾಯ ಹಸ್ತ ಸಿಗುವಂತೆ ಮಾಡಿದ್ರು ಬಸವರಾಜ್. ಅಂತಹದ್ದೊಂದು ಯುವ ಪಡೆಯನ್ನೇ ನೊಂದವರ ಕಣ್ಣೀರು ಒರೆಸಲು ಅಣಿ‌ಮಾಡಿದ್ರು. ಆದ್ರೆ ಅದೇಲ್ಲ ಒಂದು ಕೈಯಿಂದ ಕೊಟ್ಟಿದ್ದು, ಮತ್ತೊಂದು ಕೈಗೆ ಕಾಣದ ಹಾಗೆ ನೋಡಿಕೊಂಡಿದ್ರು. ಹಾಗಂತ ಇದನ್ನ ಹೇಳ್ತಿರೋದು ನಾನಲ್ಲ.‌ ಬದಲಾಗಿ, ಅವ್ರ ಕಾರ್ಯವನ್ನು ಸ್ವಂತವಾಗಿ ಅನುಭವಿಸಿ ಆಸರೆ ಪಡೆದಂತ ಅದೇಷ್ಟೋ ನಿರ್ಗತಿಕರು ಈ ಕ್ಷಣಕ್ಕೂ ನೆನಪಿಸಿಕೊಳ್ತಾರೆ. ಅದು ಅವರ ದೊಡ್ಡತನ.

ಹಾಗೇನೇ, ಇತ್ತೀಚೆಗಷ್ಟೇ ಮುಂಡಗೋಡ ಠಾಣೆಗೆ ಪಿಐ ಆಗಿ ಬಂದವರು ಸಿದ್ದಪ್ಪ ಸಿಮಾನಿ. ಇವ್ರೂ ಕೂಡ ದಕ್ಷರಾಗಿದ್ದವರು ಅನ್ನೋದು ದಾಂಡೇಲಿ ಠಾಣೆಯಲ್ಲಿ ಪಿಎಸ್ ಐ ಆಗಿದ್ದಾವಾಗಲೇ ಎಲ್ರಿಗೂ ಗೊತ್ತಿದೆ. ಬಹುಶಃ ಹತ್ತು ವರ್ಷವಾಗಿರಬೇಕು ದಾಂಡೇಲಿ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಸಿಮಾನಿ ಸಾಹೇಬ್ರು, ಅವತ್ತು ಅಲ್ಲಿನ ಜನರೊಂದಿಗೆ ಬೆರೆತಿರೋ ಅಷ್ಟೂ ನೆನಪುಗಳನ್ನು ಇವತ್ತಿಗೂ ನೆನಪಿಸಿಕೊಳ್ತಾರೆ ಅಲ್ಲಿನ ಜನ. ಆದ್ರೆ, ಮುಂಡಗೋಡಿಗೆ ಅವ್ರು ಬಂದು ಇದೀಗ ಕೆಲವೇ ತಿಂಗಳಾಗಿದೆ. ಹೀಗಾಗಿ ಸಾಹೇಬ್ರ ಬಗ್ಗೆ ನಮಗಿನ್ನೂ ಏನಂದ್ರೆ ಏನೂ ಗೊತ್ತಿಲ್ಲ. ಗೋತ್ತಾದಾಗ ಹೇಳಿದ್ರಾಯ್ತು.

ಆದ್ರೆ, ಇಷ್ಟೇಲ್ಲ ದಕ್ಷರೆನಿಸಿಕೊಂಡವರ ಮದ್ಯೆ ಅವನೊಬ್ಬ ಯಾಕೆ ಹೀಗೆ..? ಅಷ್ಟಕ್ಕೂ ಅವನ ಕೈಗೆ ಅಂತಹ “ಹಿರೇತನ” ಕೊಟ್ಟವರಾದ್ರೂ ಯಾರು..? ಇದೇಲ್ಲ ಈಗ್ಗೆ ಕಳೆದ ಒಂದು ತಿಂಗಳಿಂದ ಓಸಿ ಎಂಬ ರೊಕ್ಕದಾಟವನ್ನು ಮುಂಡಗೋಡಿನಲ್ಲಿ ಪ್ರತಿಷ್ಟಾಪಿಸಲು ಆತ ಮಾಡಿರೋ ಮಹಾನ್ ಸಾಧನೆಗಳನ್ನ ಕಂಡ ಅವನದ್ದೇ ಅಕ್ಕಪಕ್ಕದ ಜನ ಹೊಟ್ಟೆ ಕುದಿಸಿಕೊಂಡಿದ್ದಾರೆ. ಹಾಗೇನೇ ಎಸ್ಪಿ ಮೇಡಮ್ಮಿಗೆ ಸಣ್ಣದೊಂದು ಬಾತ್ಮಿ ಕೂಡ ರವಾನೆಯಾಗಿದೆ. ಅದರ “ಪರಿಣಾಮ” ಕೆಲವೇ ದಿನಗಳಲ್ಲಿ ಧುತ್ತನೇ ಬಂದು ಎರಗೋದು ಗ್ಯಾರಂಟಿ.

ಮಟ್ಕಾ ನಿಗ್ರಹ ತಂಡ ಎಲ್ಲೊಯ್ತು..?
ಅಸಲು, ಉತ್ತರ ಕನ್ನಡ ಜಿಲ್ಲೆಗೆ ದಕ್ಷ ಪ್ರಾಮಾಣಿಕ, ಖಡಕ್ ಅಧಿಕಾರಿಣಿ ಡಾ.ಸುಮನಾ ಫನ್ನೇಕರ್ ಮೇಡಂ ಎಸ್ಪಿಯಾಗಿ ವರ್ಗವಾಗಿ ಬಂದ ಗಳಿಗೆಯೇ ಜಿಲ್ಲೆಯಲ್ಲಿ ಮಟ್ಕಾ ಸೇರಿದಂತೆ ಯಾವೊಂದೂ ಅಡ್ಡ ಕಸುಬುಗಳಿಗೂ ಜಾಗವಿಲ್ಲ ಅಂತಾ ಖಡಕ್ಕಾದ ಕ್ರಮ ಕೈಗೊಂಡಿದ್ರು. ಈ‌ ಕಾರಣಕ್ಕಾಗೇ ಮಟ್ಕಾ ನಿಗ್ರಹಿಸಲು ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ತಂಡಗಳನ್ನ ರಚಿಸಿದ್ರು. ದುರಂತ ಅಂದ್ರೆ ಅಂತಹ ತಂಡ ಮುಂಡಗೋಡಿನಲ್ಲೂ ಇದೆ. ಹಾಗಾದ್ರೆ, ಸದ್ಯ ಮಟ್ಕಾ ಶುಭಾರಂಭ ಮಾಡಿರೋದು ಆ ತಂಡಕ್ಕೆ ಅರಿವಿಗೆ ಬಂದಿಲ್ವಾ..? ಅಥವಾ ಬಂದ್ರೂ ನಮಗ್ಯಾಕೇ ಬೇಕ್ರಿ ಈ ಉಸಾಬರಿ ಅಂತಾ ಬೆಪ್ಪಗೆ ಕುಳಿತು ಬಿಡ್ತಾ..? ಮಾನ್ಯ ಎಸ್ಪಿ ಮೇಡಮ್ಮೇ ಅವ್ರನ್ನ ಕೇಳಬೇಕಿದೆ‌..

ಅಷ್ಟಕ್ಕೂ, ಡೀಲು ಹೇಗೇಲ್ಲ ನಡೀತು ಅನ್ನೋ ಕುತೂಹಲಕರ ಸಂಗತಿಗಳು ರಣರೋಚಕವಾಗಿವೆ. ಅದನ್ನ ಮತ್ತೊಮ್ಮೆ ಹೇಳ್ತಿವಿ.

***********

error: Content is protected !!