ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರೇ ಒಮ್ಮೆಯಾದ್ರೂ ನೀವು ಗ್ರಾಮದಲ್ಲಿರೋ ಬಸವಣ್ಣ ದೇವರ ಹೊಂಡ ಕಣ್ತುಂಬ ನೋಡಿದ್ದೀರಾ..? ಅಧ್ಯಕ್ಷರೇ, ನೀವಾದ್ರೂ ಈ ಹೊಂಡದ ಅವ್ಯವಸ್ಥೆ, ಗಬ್ಬೇದ್ದು ಹೋಗಿರೋ ಪರಿಯನ್ನ ಕಂಡಿದ್ದೀರಾ.. ದಯವಿಟ್ಟು ಒಮ್ಮೆ ಬಂದು ದರ್ಶನ ಮಾಡ್ಕೊಳ್ಳಿ, ಹಾಗಂತ, ಬಸವಣ್ಣ ಹೊಂಡದ ಅಕ್ಕಪಕ್ಕದ ಜನ ಹಿಡಿಶಾಪ ಹಾಕ್ತಿದಾರೆ. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರು ಮಾತ್ರ ಗಪ್ ಚುಪ್ ಆಗಿದ್ದಾರೆ.

ಈಗ ಈ ದೃಷ್ಯದಲ್ಲಿ ನೀವು ನೋಡಿರೋ ಈ ಹೊಂಡ ಒಂದು ಕಾಲದಲ್ಲಿ ಇಡೀ ಊರಿನ ಜನರ ಆರಾಧ್ಯತೆಗೆ ಸಾಕ್ಷಿಯಾಗಿತ್ತು. ಈ ಹೊಂಡದ ನೀರು ಗೃಹಬಳಕೆಗೆ, ಜಾನುವಾರುಗಳಿಗೆ ಜೀವಜಲವಾಗಿತ್ತು. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಬೇಜವಾಬ್ದಾರಿಗೆ ಈ ಹೊಂಡ ಈಗ ಈ ಸ್ಥಿತಿಗೆ ಬಂದು ತಲುಪಿದೆ. ಹೊಂಡದಲ್ಲಿ ಬರಪೂರ ನೀರಿದೆ. ಆದ್ರೂ ಕೂಡ ನೀರಿನ ದರ್ಶನವೇ ಅಗಲ್ಲ. ಯಾಕಂದ್ರೆ, ಇಡೀ ಹೊಂಡದಲ್ಲಿ ಗಿಡಗಂಟಿಗಳು, ಕಸದ ರಾಶಿ ಆವರಿಸಿಕೊಂಡಿದೆ. ಹೀಗಾಗಿ, ಪವಿತ್ರವಾಗಿದ್ದ ಹೊಂಡವೀಗ ಕೊಳಚೆ ಗುಂಡಿಯಂತಾಗಿದೆ.

ರಾತ್ರಿಯಾದ್ರೆ ಭಯ..!
ಇನ್ನು, ಈ ಹೊಂಡದ ಅಂಚಿನಲ್ಲಿ ಅನೇಕ ಕುಟುಂಬಗಳು ವಾಸ ಮಾಡ್ತಿವೆ. ಪುಟ್ಟ, ಪುಟ್ಟ ಮಕ್ಕಳು ಹೊಂಡದ ಅಂಚಿನಲ್ಲೇ ನಿತ್ಯವೂ ಆಟವಾಡ್ತಿವೆ. ಆದ್ರೆ ಏನಾದ್ರೂ ಹೆಚ್ಚು ಕಡಿಮೆ ಆಗಿ ಆಯ ತಪ್ಪಿದ್ರೂ ಹೊಂಡದಲ್ಲಿ ಅನಾಹುತವಾಗೋದು ಗ್ಯಾರಂಟಿ. ಹೀಗಿದ್ರೂ ಇದನ್ನೇಲ್ಲ ಗ್ರಾಮ ಪಂಚಾಯತಿಯವರು ಯಾಕೆ ನೋಡ್ತಿಲ್ಲ..? ಒಂದು ವೇಳೆ ಏನಾದ್ರೂ ಅನಾಹುತವಾದ್ರೆ ಯಾರು ಹೊಣೆ..? ಕನಿಷ್ಟ ಪಕ್ಷ ಹೊಂಡದ ಅಂಚಿಗೆ, ಅಂದ್ರೆ ಮನೆಗಳು ಇರುವ ಕಡೆ ತಡೆಗೋಡೆಯನ್ನಾದ್ರೂ ನಿರ್ಮಿಸಬೇಡವೇ..? ಅನ್ನೋದೇ ಇಲ್ಲಿನವರ ಪ್ರಶ್ನೆ.

ಗಿಡಗಂಟಿಗಳದ್ದೇ ಸಾಮ್ರಾಜ್ಯ..!
ಇನ್ನು ಹೊಂಡದಲ್ಲಿ ನೀರು ಯಾವತ್ತೂ ಕಡಿಮೆಯಾಗಲ್ಲ, ಅದೇಷ್ಟೇ ಬರವಿದ್ರೂ ಈ ಹೊಂಡದಲ್ಲಿ ನೀರು ಮಾತ್ರ ಕಡಿಮೆಯಾಗಲ್ಲ. ಆದ್ರೆ, ಈ ಹೊಂಡದಲ್ಲಿ ಅಂತರಗಂಗೆ, ಗಿಡಗಂಟಿಗಳೇ ಹಾಸುಹೊಕ್ಕಾಗಿದ್ದು ಗ್ರಾಮ ಪಂಚಾಯತಿಯ ದಿವ್ಯ ನಿರ್ಲಕ್ಷಕ್ಕೆ ಕನ್ನಡಿಯಾಗಿದೆ.

ಇನ್ನು, ಈ ಹೊಂಡದಲ್ಲಿ ಈ ಹಿಂದೆ ಜಾನುವಾರುಗಳಿಗೆ ನೀರು ಕುಡಿಯಲು, ಗೃಹ ಉಪಯೋಗಕ್ಕಾಗಿ ಈ ನೀರನ್ನೇ ಬಳಸಲಾಗುತ್ತಿತ್ತು. ಆದ್ರೆ, ಯಾವಾಗ ಈ ಹೊಂಡದ ಪರಿಸ್ಥಿತಿ ಹೀಗಾಗಿದೆಯೋ ಹೊಂಡದ ಬಳಿ ಹೋಗೋಕೆ ಜನ ಹೆದರುತ್ತಿದ್ದಾರೆ. ಹೀಗಾಗಿ, ಆದಷ್ಟು ಬೇಗ ಹೊಂಡದ ಸ್ವಚ್ಚತಾ ಕಾರ್ಯ ಮಾಡಬೇಕಿದೆ.. ಇಲ್ಲಿನ ಗಿಡಗಂಟಿ, ಕಸಕಡ್ಡಿಗಳನ್ನು ತೆರವುಗೊಳಿಸಬೇಕಿದೆ. ಅಲ್ದೇ ಮಕ್ಕಳು ಓಡಾಡುವ ಕಾರಣಕ್ಕೆ ಹೊಂಡದ ಅಂಚಿಗೆ ತಡೆಗೋಡೆ ನಿರ್ಮಿಸಬೇಕಿದೆ. ಹೀಗಾದಾಗ ಮಾತ್ರ ಹೊನ್ನಗುಂದದ ಅಂದಕ್ಕೆ ಮತ್ತಷ್ಟು ಮೆರಗು ಬರಬಹುದು. ಗ್ರಾಮ ಪಂಚಾಯತಿಯವರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ.

error: Content is protected !!