ಮುಂಡಗೋಡ: ತಾಲೂಕಿನಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಶೇ. 99.53 ರಷ್ಟು ಮತದಾನವಾಗಿದೆ. ಗುಂಜಾವತಿ ಗ್ರಾಮ ಪಂಚಾಯತಿಯ ಓರ್ವ ಮಹಿಳಾ ಸದಸ್ಯೆ ಮತದಾನ ಮಾಡಿಲ್ಲ. ಈ ಕಾರಣದಿಂದ ಶೇ.100 ರಷ್ಟು ಮತದಾನವಾಗಿಲ್ಲ.
ಬೆಳಗಿನಿಂದಲೂ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರು ಸಂಯಮದಿಂದಲೇ ಬಂದು ಮತದಾನ ಮಾಡಿದ್ರು. ಬಹುತೇಕ ಮದ್ಯಾಹ್ನದಷ್ಟೊತ್ತಿಗೆ ಮತದಾನ ಸಂಪೂರ್ಣತೆಯ ಮಟ್ಟ ತಲುಪಿತ್ತು. ಕೆಲವು ಕಡೆ ಮಾತ್ರ ಒಂದಿಷ್ಟು ತಡವಾಗಿ ಬಂದು ಮತದಾರರು ಮತದಾನ ಮಾಡಿದ್ರು. ತಾಲೂಕಿನಲ್ಲಿ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರುಗಳು ಆಯಾ ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತದಾನಕ್ಕೆ ತೆರಳಿದ್ದು ವಿಶೇಷವಾಗಿತ್ತು.
ಮತಪೆಟ್ಟಿಗೆ ಕಾರವಾರಕ್ಕೆ..!
ಇನ್ನು ಸಂಜೆಯ ವೇಳೆಗೆ ಸಂಪೂರ್ಣಗೊಂಡ ಮತದಾನ ಪ್ರಕ್ರಿಯೆಯನ್ನು ಅಧಿಕಾರಿಗಳು ಯಶಸ್ವಿಯಾಗಿ ಮುಗಿಸಿದ್ರು. ನಂತರ ಮತಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ವಾಹನದಲ್ಲಿ ಕಾರವಾರಕ್ಕೆ ರವಾನಿಸಲಾಗಿದೆ. ಈ ವೇಳೆ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ನೇತೃತ್ವದಲ್ಲಿ ಮತಪೆಟ್ಟಿಗೆಗಳನ್ನು ವಾಹನದಲ್ಲಿ ಭರ್ತಿಮಾಡಿ ಕಾರವಾರಕ್ಕೆ ರವಾನಿಸಲಾಗಿದೆ.