“ನಾವು ಗುಂಡು ಹೊಡಿಲಿಕ್ಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ಅಯ್ಯೋ ಪ್ರಶಾಂತಣ್ಣ ನಿಮ್ಮಂತವರ ಬಾಯಲ್ಲಿ ಇಂತಹ ಮಾತಾ..? ಚುನಾವಣೆ ಅಂದಮೇಲೆ ಒಂದು ಮಾತು ಹೆಚ್ಚು, ಒಂದು ಮಾತು ಕಡಿಮೆ ಇದ್ದೇ ಇರತ್ತೆ, ಅಷ್ಟಕ್ಕೇ ಗುಂಡಿನ ದಾಳಿಗಳ ಮಾತು ಹೇಳೋದಾ..? ಅಷ್ಟಕ್ಕೂ ಆರ್.ವಿ.ದೇಶಪಾಂಡೆಯವರ ಸುಪುತ್ರರಾಗಿರೋ ನಿಮಗೆ ಇಂತಹ ಮಾತುಗಳು ಸರಿಕಾಣತ್ತಾ..? ಹಾಗಂತ, ನಿಮ್ಮ ಬಾಯಲ್ಲಿ ಆ ನಿಮ್ಮ ಗುಂಡಿನ ಸದ್ದು ಕೇಳಿದವರು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದಾರೆ.
ಅದೇನಂದ್ರು ಪ್ರಶಾಂತಣ್ಣ ಕೇಳಿಬಿಡಿ..!
ನಿಜ, ಇಂತಹದ್ದೊಂದು, “ಗುಂಡಿನ” ಮಾತನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ಬನವಾಸಿ ಸಮೀಪದ ಬಿಸಲಕೊಪ್ಪದಲ್ಲಿ ಭಾವಾವೇಶದಲ್ಲಿ ಆಡಿ ಹೋಗಿದ್ದಾರೆ. ಆದ್ರೆ, ಈ ಮಾತು ಆಡಿ ಹೋದ ಗಳಿಗೆಯಿಂದ ಒಂದಿಷ್ಟು ಚರ್ಚೆಗಳನ್ನೂ ಹುಟ್ಟು ಹಾಕಿದ್ದಾರೆ.
ಅಷ್ಟಕ್ಕೂ ಏನ್ರಿ ನಿಮ್ಮ ಸಂದೇಶ..?
ನಿಜ, ಯಾವುದೇ ಪಕ್ಷವಿರಲಿ ಆ ಪಕ್ಷಗಳಿಗೆ ಕಾರ್ಯಕರ್ತರೇ ಜೀವಾಳ, ಕಾರ್ಯಕರ್ತರ ಸಲುವಾಗಿ ನಾಯಕನೆನಿಸಿಕೊಂಡವನು ಯಾವತ್ತೂ ಬೆನ್ನೆಲುಬಾಗೇ ಇರ್ತಾನೆ, ಇರಬೇಕು ಕೂಡ. ಅದು ಎಲ್ಲಾ ಪಕ್ಷಗಳ ತತ್ವ. ಮೇಲಾಗಿ ಅನಿವಾರ್ಯತೆ. ಆದ್ರೆ, ಅದಕ್ಕೂ ಮಿಗಿಲಾಗಿ ರಾಜಕೀಯ ಜಿದ್ದಾ ಜಿದ್ದು ಅದೇನೇ ಇದ್ರೂ, ಆರೋಗ್ಯಪೂರ್ಣ ಪರಿಸರ ನಿರ್ಮಿಸಿಕೊಳ್ಳೊದು ಪ್ರಬುದ್ಧತೆಯ ಲಕ್ಷಣ. ಹಾಗಂತ, ಪ್ರಚೋದಿಸುವ, ಹೊಡಿ ಬಡಿಯ ಮಾತುಗಳು ಶೋಭೆ ತರ್ತಾವಾ..? ಅಷ್ಟಕ್ಕೂ ನಿಮ್ಮನ್ನು ಬೆಂಬಲಿಸುವ, ನಿಮ್ಮನ್ನೇ ನಾಯಕರೆಂದುಕೊಂಡು ಆರಾಧಿಸುವ ಬೆಂಬಲಿಗರಿಗೆ “ಹೊಡಿ ಬಡಿಯ” ಗುಂಡಿನ ಮಾತುಗಳನ್ನು ಹೇಳಿ ಅದ್ಯಾವ ತತ್ವ ಸಿದ್ದಾಂತಗಳನ್ನು ಹೇರುತ್ತಿದ್ದೀರಿ ಪ್ರಶಾಂತಣ್ಣ..?
ಅಭಿವೃದ್ಧಿ ಕೇಳ್ತಿಲ್ಲ, ನೆಮ್ಮದಿಯಿದ್ರೆ ಸಾಕು..!
ಅಷ್ಟಕ್ಕೂ, ಇಡೀ ಯಲ್ಲಾಪುರ ಕ್ಷೇತ್ರದ ಮನೆ ಮನೆಗಳಲ್ಲಿ ಆರ್.ವಿ.ದೇಶಪಾಂಡೆಯವರ ಮೂವತ್ತು ವರ್ಷಗಳ ರಾಜಕೀಯದ ನಿತ್ಯ ಚರ್ಚೆಗಳಿವೆ. ಕಾರವಾರದ ಕಡಲ ತೀರದ ಗೋವಾ ಬಾರ್ಡರಿನಿಂದ ಹಿಡಿದು, ಮುಂಡಗೋಡಿನ ಕಟ್ಟಕಡೆಯ ಗೌಳಿದಡ್ಡಿಗಳ ಗಲ್ಲಿ ಗಲ್ಲಿಗಳಲ್ಲಿ, ಕಾಲಿಗೆ ಕಚ್ಚುವ ಕೆಸರುಗಳಿಗೂ ಗೊತ್ತಿದೆ. ಯಾರ್ಯಾರ ಅಭಿವೃದ್ಧಿ ಎಷ್ಟೇಷ್ಟು ಅಂತಾ.. ಆದರೀಗ ಆ ಮಾತು ಬೇಡ, ಅದರ ಬಗ್ಗೆ ಮತ್ತೊಮ್ಮೆ ವಿಸ್ತಾರವಾಗಿ ದಾಖಲಿಸ್ತೀವಿ.
ರಾಜಕೀಯವಿರಲಿ, ವೈಷಮ್ಯ ಬೇಡ..!
ಚುನಾವಣೆ, ಅಂದಾಗ ರಾಜಕೀಯ ಮೇಲಾಟಗಳು ಸಹಜ. ಆರೋಪ ಪ್ರತ್ಯಾರೋಪಗಳೂ ಸಹಜ, ಆದ್ರೆ, ಅದೇಲ್ಲ ಕೇವಲ ರಾಜಕೀಯದ ಒಂದು ಸ್ಟಾಟರ್ಜಿಯಾಗಿರಬೇಕು ಅಷ್ಟೇ. ಹೀಗೆ, “ಗುಂಡು ಹಾಕೋದೂ ಗೊತ್ತು, ಗುಂಡು ಹಾಕಿಸಿಕೊಳ್ಳೋದು ಗೊತ್ತು” ಅಂದ್ರೆ ಏನ್ರಿ ಅರ್ಥ..? ಕಾರ್ಯಕರ್ತರಿಗೆ ಅದೇ ಪಾಠ ಹೇಳಿ ಕೊಡ್ತಿದಿರಾ..? ಹಾಗಾದ್ರೆ, ಹೊಡಿ ಬಡಿಯ ಸಂಸ್ಕೃತಿಯವರು ಅಂತಾ ಬಿಜೆಪಿ ವಿರುದ್ಧ ಒದರಾಡುವ ನಿಮ್ಮತನ ಇದೇನಾ..?
ಚಪ್ಪಾಳೆಗಾಗಿ ಬೇಡ..!
ಅಷ್ಟಕ್ಕೂ, ಭಾವಾವೇಶದಲ್ಲಿ ಮಾತಾಡಿದಾಗ ಒಂದಿಷ್ಟು ಚಪ್ಪಾಳೆ ಬಂದ್ರೆ ಅದನ್ನೇ ಬೆಂಬಲ ಅಂತಾ ಅಂದುಕೊಳ್ಳೋದು, ಮತ್ತಷ್ಟು ಚೀರಾಡೋದು ಕಾಮನ್ನು. ಹಾಗಾದ್ರೆ, ನೀವೂ ಕೂಡ ಚಪ್ಪಾಳೆಯ ಸದ್ದಿಗೆ “ಗುಂಡಿನ” ಏಟು ಕೊಟ್ರಾ..? ಎಲ್ಲಿಂದ ನಗಬೇಕೋ ಅರ್ಥವೇ ಅಗ್ತಿಲ್ಲ.
ಹಾಗೆ ನೋಡಿದ್ರೆ, ದೇಶಪಾಂಡೆಯವರ ಮೂವತ್ತೂ ವರ್ಷಗಳ ಸುದೀರ್ಘ ಸಂಘರ್ಷದಲ್ಲಿ ಯಾವತ್ತೂ ಇಂತಹ ಮಾತುಗಳೇಕೆ ಅವ್ರ ಬಾಯಲ್ಲಿ ಬರಲಿಲ್ಲ..? ಹಾಗಾದ್ರೆ, ಅವ್ರ ಸುಪುತ್ರನಾಗಿ ಇನ್ನೂ “ಎಳಸು” ಮನಸ್ಥಿತಿಯಲ್ಲೇ ಇರೋರಾ ನೀವು..? ಅರ್ಥೈಸಿಕೊಳ್ಳಿ ಪ್ರಶಾಂತಣ್ಣ..! ಹೊಡಿ ಬಡಿಯ ಮಾತುಗಳನ್ನು, “ಗುಂಡಿನ ಸದ್ದು” ಗಳನ್ನು ಯಲ್ಲಾಪುರ ಕ್ಷೇತ್ರದ ಯಾವೊಬ್ಬ ಮತದಾರ ಒಪ್ಪಿಕೊಳ್ಳಲ್ಲ.!
ಅಷ್ಟಕ್ಕೂ, ನೀವೇ ಹೇಳಿದಂಗೆ, ಇದೇನಾ ನಿಮ್ಮ ಡಬಲ್ ಹುಂಬತನ..? ವಾವ್..!!