ಶಿರಸಿ: ಮನೆಯ ಛಾವಣಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಸುರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು.
ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಯಿತು. ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್.ಎಫ್.ಓ ಮಂಜುನಾಥ ಹೆಬ್ಬಾರ, ಡಿ.ವೈ.ಆರ್.ಎಫ್.ಓ ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಉಪಸ್ಥಿತರಿದ್ದರು.