ಬೆಂಗಳೂರು ಆತ್ಮಹತ್ಯೆ ಘಟನೆ ಮಾಸುವ ಮುನ್ನವೆ ದಾವಣಗೆರೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿದ್ದಾರೆ.
ದಾವಣಗೆರೆಯ ಭಾರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು ಕೃಷ್ಣಾನಾಯ್ಕ್ (35)ಆತನ ಪತ್ನಿ ಸರಸ್ವತಿ ಬಾಯಿ, ಎಂಟು ವರ್ಷದ ಮಗು ಧ್ರುವ ಮೃತಪಟ್ಟವರು.
ಭಾರತ್ ಕಾಲೋನಿ ಶೇಖರಪ್ಪ ಬಿ ಬ್ಲಾಕ್ ನಲ್ಲಿ ವಾಸವಾಗಿದ್ದ ಕೃಷ್ಣನಾಯ್ಕ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸರಸ್ವತಿ ಬಾಯಿ ಮೂಲವ್ಯಾಧಿಯಿಂದ ಬಳಲುತ್ತಿದ್ದರು. ಕೃಷ್ಣಾನಾಯ್ಕ್ ರಿಗೆ ಸಹ ಆರೋಗ್ಯ ಸಮಸ್ಯೆ ಇತ್ತು, ಕೃಷ್ಣನಾಯ್ಕ್ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು.ಅನಾರೋಗ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಎಂಟು ವರ್ಷ ವಯಸ್ಸಿನ ಧ್ರುವ ಹಾಗೂ ತಾಯಿ ಸರಸ್ವತಿ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿದ್ದಾರೆ.
ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕೃಷ್ಣಾನಾಯ್ಕ್ ಶವ ಪತ್ತೆಯಾಗಿದೆ. ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯ ಕೈಕೊಟ್ಟ ಹಿನ್ನೆಲೆ ಈ ನಿರ್ಧಾರ ಕೈಗೊಂಡ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆರ್ ಎಂ. ಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.