ನಂದಿಕಟ್ಟಾ ಗ್ರಾಮದ ನವನಗರ ಪ್ಲಾಟ್ ನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾಕಂದ್ರೆ, ಇವ್ರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ಮಕ್ಕಳು, ಮರಿಗಳೊಂದಿಗೆ ಕೊಡಹೊತ್ತು ಗದ್ದೆಗಳಲ್ಲಿ ತಿರುಗಾಡುವ ಪರಿಸ್ಥಿತಿ ಇಲ್ಲಿನ ಜನ್ರದ್ದು.. ಹೀಗಾಗಿ, ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ ನಿವಾಸಿಗಳು.

ಏನಿದು ಸಮಸ್ಯೆ..?
ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ್ 2 ರಲ್ಲಿ ಬರೋ ನವನಗರ ಪ್ಲಾಟ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಪ್ರತಿದಿನ ಇಲ್ಲಿ‌ನ ಜನ ಬಹುತೇಕ ಪಕ್ಕದ ಗದ್ದೆಗಳ ಬೋರವೆಲ್ ಗಳಿಗೆ ಕುಡಿಯುವ ನೀರು ತರಲು ತಿರುಗಾಡುವ ಸ್ಥಿತಿ ಇದೆ. ಮಕ್ಕಳು ಮರಿಗಳೊಂದಿಗೆ, ಕೊಡ ಹೊತ್ತು ನೀರು ತರುವ ಭೀಕರತೆ ಇದೆ. ಹೀಗಾಗಿ, ಸದ್ಯ ಮಳೆಗಾಲ ಆಗಿರೋ ಕಾರಣಕ್ಕೆ ಜನ ಗದ್ದೆಗಳಿಗೆ ತೆರಳಿ ನೀರು ತರಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಗದ್ದೆಯ ಮಾಲೀಕರು ನೀರು ಕೊಡದೇ ಇದ್ರೆ ಮುಗೀತು, ಮತ್ತೊಂದು ಗದ್ದೆಯ ಕಡೆಗೆ ತಿರುಗೋದು ಅನಿವಾರ್ಯವಾಗಿದೆ. ಹೀಗಾಗಿ ಮಕ್ಕಳು ಮರಿಗಳೊಂದಿಗೆ ಇಲ್ಲಿನ ಜನ ಗೋಳಾಡುತ್ತಿದ್ದಾರೆ.

ಜಸ್ಟ್ ಬೇಜವಾಬ್ದಾರಿ..!
ಹಾಗೆ ನೋಡಿದ್ರೆ, ಇಲ್ಲಿ ಗ್ರಾಮ ಪಂಚಾಯತಿ ಈ ಭಾಗದ ಜನರ ನೀರಿನ ಭವಣೆ ನೀಗಿಸಲು ಒಂದಿಷ್ಟು ಬೋರ್ವೆಲ್ ಕೊರೆಸಿದೆ. ಆದ್ರೆ ಅದ್ರಲ್ಲಿ ನೀರು ಬರಲಿಲ್ಲವಂತೆ. ಹೀಗಾಗಿ, ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗ್ತಿಲ್ಲ ಅಂತಾರೆ ಇಲ್ಲಿನ ಗ್ರಾಪಂ ಸದಸ್ಯರು. ಆದ್ರೆ, ಅದೊಂದು ಹಳೆಯ ಸಿಹಿನೀರಿನ ಬೋರ್ವೆಲ್ ನಲ್ಲಿ ಭರಪೂರ ನೀರಿದ್ರೂ ಅದಕ್ಕೊಂದು ಮೋಟರ್ ಅಳವಡಿಸಿ ನೀರು ಪೂರೈಸಬೇಕೆನ್ನುವ ಕನಿಷ್ಟ ಯೋಚನೆ ಇವ್ರಿಗೆ ಬಂದೇ ಇಲ್ಲ. ಹಾಗಂತ ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸ್ತಿದಾರೆ.

ನಿರ್ಲಕ್ಷ..!
ಅಂದಹಾಗೆ, ಅದೇ ವಾರ್ಡ್ ನಂಬರ್ 2 ರಲ್ಲಿ ಇರೋ ಸಿಹಿ ನೀರಿನ ಬೋರ್ವೆಲ್ ಗೆ ಮೋಟರ್ ಅಳವಡಿಸಿ ನೀರು ಪೂರೈಸಲು ರೆಡಿಯಾಗಿದ್ರು. ಆದ್ರೆ, ಮತ್ತೇ ಅದೇನಾಯ್ತೋ ಗೊತ್ತಿಲ್ಲ, ಹಾಗೆ ಅಳವಡಿಸಿದ್ದ ಮೊಟರ್ ಏಕಾ ಏಕಿ ಕಿತ್ತುಕೊಂಡು ಹೋಗಿ ಬೇರೆಡೆಗೆ ಅಳವಡಿಸಿದ್ದಾರೆ. ಹೀಗಾಗಿ, ಪ್ಲಾಟ್ ನ ಜನ ಮತ್ತಷ್ಟು ಆಕ್ರೋಶಗೊಳ್ಳುವಂತೆ ಆಗಿದೆ. ಸದ್ಯ ಮಳೆಗಾಲದ ವೇಳೆಯಲ್ಲಿ ರಾತ್ರಿ ಹಗಲು ಕುಡಿಯುವ ನೀರಿಗಾಗಿ ಗದ್ದೆಗಳಿಗೆ ಸುತ್ತುವ ಬವಣೆ ಅಧಿಕಾರಿಗಳ ಕಣ್ಣಿಗೆ ಕಾಣ್ತಿಲ್ವಾ ಅಂತಾ ಪ್ರಶ್ನಿಸುತ್ತಿದ್ದಾರೆ.

ಸಂಜೆವರೆಗೂ ಡೆಡ್ ಲೈನ್..!
ಸಾಕಷ್ಟು ಬಾರಿ ಈ ಸಮಸ್ಯೆಯ ಕುರಿತು ಗ್ರಾಮ ಪಂಚಾಯತಿಗೆ ಮನವಿ ಮಾಡಿಕೊಂಡಿದ್ದಾರಂತೆ. ಆದ್ರೆ, ಗ್ರಾಮ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಅಂತಾ ಆರೋಪಿಸ್ತಿದಾರೆ. ಹೀಗಾಗಿ, ಕುಡಿಯುವ ನೀರಿಗಾಗಿ ಪರಿತಪಿಸ್ತಿರೋ ನಿವಾಸಿಗಳು ಇವತ್ತು ಬೆಳಿಗ್ಗೆ ಜಮಾವಣೆಗೊಂಡಿದ್ರು. ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಮಹಿಳೆಯರು, ಸದಸ್ಯರುಗಳ ವಿರುದ್ಧ ಸಿಡಿದೆದ್ದಿದ್ದಾರೆ. ನಾಳೆ ಸೋಮವಾರ ಸಂಜೆಯೊಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ, ನಾಡಿದ್ದು ಮಂಗಳವಾರ ಬೆಳಿಗ್ಗೆ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕುತ್ತೇವೆ ಅಂತಾ ಎಚ್ಚರಿಸಿದ್ದಾರೆ. 24 ಗಂಟೆಗಳ ಗಡುವು ನೀಡಿದ್ದಾರೆ. ಹೀಗಾಗಿ, ತಕ್ಷಣವೇ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

******************

ಜಾಹೀರಾತು

error: Content is protected !!