ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ “ಕೈ” ಬಲಗೊಳ್ಳುತ್ತಿದೆ. ಮುಂಬರೋ ವಿಧಾನಸಭಾ ಚುನಾವಣೆ ಹೊತ್ತಿಗೆ ತನ್ನ ತೋಳ್ಬಲ ತೋರಿಸಲು ಏನೇನು ಬೇಕೋ ಅದನ್ನೇಲ್ಲ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ ದೇಶಪಾಂಡೆ ಪಡೆ. ಹೀಗಾಗಿನೇ, ಈಗಿಂದಲೇ ಅಂತಹದ್ದೊಂದು ರಣತಂತ್ರ ರೂಪಿಸಿ, ಕಾರ್ಯಕರ್ತರನ್ನು ಉತ್ತೇಜಿಸೋ ಕೆಲಸದಲ್ಲಿ ನಿರತವಾಗಿದೆ ಅದೋಂದು ಟೀಂ..
ಯುವಕರೇ ಟಾರ್ಗೆಟ್..!
ಯಾವಾಗ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಲಿ ಪ್ರಶಾಂತ್ ದೇಶಪಾಂಡೆಯವರೇ ಕಣಕ್ಕಿಳಿಯೋದು ಅಂತಾ ಘೋಷಣೆಯ ಹಂತಕ್ಕೆ ಬಂತೋ, ಅವತ್ತಿನಿಂದಲೇ, ಕ್ಷೇತ್ರದಲ್ಲಿ ಗಟ್ಟಿಗೊಳ್ಳಲು ಬೇಕಾದ ಒಂದಿಷ್ಟು ತಯಾರಿ ಶುರುವಿಟ್ಟುಕೊಂಡಿದ್ದಾರೆ ದೊಡ್ಡ ಸಾಹೇಬ್ರು. ಅದ್ರ ಭಾಗವಾಗಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಡಸಾಲೆಯ ಅತೃಪ್ತ ಆತ್ಮಗಳ ತಲಾಶ್ ಮಾಡಿಸಿ, ಅಂತವರ ಒಂದು ಲಿಸ್ಟ್ ತರಿಸಿಕೊಂಡಿದ್ದಾರೆ. ಅವ್ರನ್ನೇಲ್ಲ ಹೇಗೆ ಪಕ್ಷಕ್ಕೆ ಎಳೆದು ತರೋದು ಅನ್ನೋ ಪಕ್ಕಾ ಪ್ಲಾನ್ ನೊಂದಿಗೇ ಫಿಲ್ಡಿಗಿಳಿದಿದೆ ಕೈ ಪಡೆ. ಈ ಕಾರಣಕ್ಕಾಗಿನೇ ಕಳೆದ ವಾರ ಮುಂಡಗೋಡ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದ ಪ್ರಶಾಂತ್ ದೇಶಪಾಂಡೆ, ಅದ್ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ರೂ ಅಂತವರಿಗೆ ಮುಕ್ತ ಸ್ವಾಗತ ಅಂತಾ ಹೇಳಿ ಹೋಗಿದ್ದಾರೆ.
ಬೂತ್ ಮಟ್ಟದಲ್ಲಿ…!
ಅಂದಹಾಗೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇವತ್ತಿಗೂ ದೇಶಪಾಂಡೆ ಅಂದ್ರೆ ಕಣ್ಮುಚ್ಚಿ ಆರಾಧಿಸೋ ಅಭಿಮಾನಿಗಳಿದ್ದಾರೆ. ಹಳ್ಳಿಗಳಲ್ಲಿ ಇವತ್ತಿಗೂ ಆರ್ವಿ ದೇಶಪಾಂಡೆಯವ್ರು ಬಂದ್ರೆ ಸಾಕು, ಕೆಲಸ ಬಿಟ್ಟು ಅವ್ರು ಬರೋ ಹಾದಿ ಕಾಯೋರು ಇದಾರೆ. ಅದಕ್ಕಾಗೇ, ಅವ್ರ ವರ್ಚಸ್ಸನ್ನೇ ಬಳಸಿಕೊಂಡು ಕ್ಷೇತ್ರದ ಪ್ರತೀ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ರೆಡಿಯಾಗಿದ್ದಾರೆ. ಅದ್ರಂತೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹೊಸ ಹೊಸ ಮುಖಗಳಿಗೆ “ಕೈ” ನೆರಳು ನೀಡುತ್ತಿದೆ.
ವಿಶೇಷ ಟೀಂ..!
ನಿಜ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ, ಪಕ್ಷಾಂತರಿಗಳಿಗಾಗೇ ಬಲೆ ಹಾಕಿ ಕಾದು ಕುಳಿತಿರೋ ಕಾಂಗ್ರೆಸ್, ಅದಕ್ಕಾಗೇ ಒಂದು ವ್ಯವಸ್ಥಿತ ಟೀಂ ರಚಿಸಿಕೊಂಡಿದೆ. ಪಕ್ಷಕ್ಕೆ ಬರುವವರ ಪೂರ್ವಾಪರ, ವರ್ಚಸ್ಸು, ಪ್ರಭಾವಗಳ ತುಲನೆ ನಡೆಸಲಾಗತ್ತೆ, ಅವ್ರು ಪಕ್ಷಕ್ಕೆ ಬಂದ್ರೆ ಏನೇಲ್ಲ ಲಾಭ..? ಹೇಗೇಲ್ಲ ಲಾಭ ಅನ್ನೋ ಅಷ್ಟೂ ಸಂಗತಿಗಳ ಸಂಕಲನ, ವ್ಯವಕಲನ ನಡೆಸಲಾಗ್ತಿದೆ. ಆ ನಂತರದಲ್ಲಿ ಆ ಟೀಂ, ಹಾಗೇ ಪಕ್ಷ ಸೇರೋ ವ್ಯಕ್ತಿಯನ್ನ ನೇರವಾಗಿ ಪ್ರಶಾಂತಣ್ಣನ ಎದುರು ಕೂರಿಸಲಾಗತ್ತೆ. ಹಾಗೆ, ಪಕ್ಷಕ್ಕೆ ಬರುವವರ ಜೊತೆ ಮಾತುಕತೆ ನಡೆಸಲು ಶಿರಸಿ ಸಮೀಪದ ಅದೊಂದು ಜಂಗಲ್ ರೆಸಾರ್ಟ್ ಯಾವಾಗ್ಲೂ ಬಾಗಿಲು ತೆರೆದೇ ಕುಳಿತಿದೆ.
ಡಜನ್ನುಗಟ್ಟಲೇ ಕ್ಯೂ..!
ಇದು ಬಿಜೆಪಿ ಪಾಲಿಗೆ ಅದೇಷ್ಟರ ಮಟ್ಟಿಗೆ ಹೊಡೆತ ಕೊಡುತ್ತೊ ಗೊತ್ತಿಲ್ಲ. ಸದ್ಯ ಕಾಂಗ್ರೆಸ್ ಕದ ಬಡೆದು, ಆ ಜಂಗಲ್ ರೆಸಾರ್ಟಿನಲ್ಲಿ ಪ್ರಶಾಂತಣ್ಣನ ಜೊತೆ, ನಾಲ್ಕೈದು ಕಪ್ ಕಾಫಿ, ಟೀ ಹೀರಿ ಬಂದವರು ಡಜನ್ನುಗಟ್ಟಲೇ ನಾಯಕರಿದ್ದಾರೆ ಅನ್ನೋ ಸ್ಪಷ್ಟ ಮಾಹಿತಿ ಇದೆ. ಅದ್ರಲ್ಲೂ, ಬಹುಪಾಲು ಮಂದಿ ಮುಂಡಗೋಡ ತಾಲೂಕಿನವರು ಅನ್ನೋದು ಅಚ್ಚರಿಯ ಸಂಗತಿ. ಬಹುಶಃ ಇದೇಲ್ಲ ಖುದ್ದು ಶಿವರಾಂ ಹೆಬ್ಬಾರ್ ಸಾಹೇಬ್ರಿಗೂ ಸೂಚನೆ ಸಿಕ್ಕಿದೆಯಾ..? ಸೂಚನೆ ಸಿಕ್ಕ ಕಾರಣಕ್ಕಾಗಿಯೇ ಮೊನ್ನೆ ಮುಂಡಗೋಡಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ “ಪಕ್ಷ ಬಿಟ್ಟು ಹೋಗುವವರು ಹೋಗಲಿ” ಅನ್ನೋ ಖಡಕ್ಕಾದ ಮಾತು ಹೇಳಿದ್ರಾ..? ಗೊತ್ತಿಲ್ಲ. ಒಟ್ನಲ್ಲಿ, ಡಜನ್ನುಗಟ್ಟಲೇ ಬಿಜೆಪಿ ಅತೃಪ್ತ ಆತ್ಮಗಳು ಮತ್ತೊಂದು ಗೂಡು ಸೇರಿಕೊಳ್ಳಲು ಜಂಗಲ್ ರೆಸಾರ್ಟ್ ಎದುರು ಕ್ಯೂ ಹಚ್ಚಿವೆಯಂತೆ.
ಸೆಪ್ಟೆಂಬರ್ 20ರ ನಂತರ..?
ಅಂದಹಾಗೆ, ಇಲ್ಲೊಂದು ಅಚ್ಚರಿ ಅಂಶ ಇದೆ. ಯಾರ್ಯಾರು ಕಾಂಗ್ರೆಸ್ ಸೇರಲು ರೆಡಿಯಾಗಿ, ಈಗಾಗಲೇ ಪ್ರಶಾಂತಣ್ಣನ ಜೊತೆ ಜಂಗಲ್ ರೆಸಾರ್ಟಿನಲ್ಲಿ, ಟೀ ಕುಡಿದೇ ನಶೆ ಏರಿಸಿಕೊಂಡಿದ್ದವರಿಗೇ ಅದೊಂದು ಕಾಮನ್ ಭರವಸೆ ಸಿಕ್ಕಿದೆ. ಸೆಪ್ಟೆಂಬರ್ 20 ರವರೆಗೆ ಕಾಯಿರಿ, ಆನಂತರದಲ್ಲಿ ಅದೇನೋ ಮಹತ್ತರ ಬದಲಾವಣೆ ಆಗೋದಿದೆ. ಅಲ್ಲಿವರೆಗೂ ಈ ನಮ್ಮ “ರೆಸಾರ್ಟ್ ಮೀಟಿಂಗ್” ಯಾರ ಹತ್ರಾನೂ ಬಾಯಿ ಬಿಡಬೇಡಿ ಅನ್ನೋ ಫರ್ಮಾನು ಕೊಟ್ಟು ಕಳಿಸಲಾಗಿದೆಯಂತೆ. ಹೀಗಾಗಿ, ಅವೇಲ್ಲ ಅತೃಪ್ತ ಆತ್ಮಗಳು ಸೆಪ್ಟೆಂಬರ್ ಇಪ್ಪತ್ತು ಅನ್ನೋ ದಿನ ಅದ್ಯಾವಾಗಪ್ಪ ಬರತ್ತೆ ಅಂತಾ ಕಾದು ಕುಳಿತಿದ್ದಾರಂತೆ.
ಅದೇನೇ ಇರಲಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಯ ರಂಗತಾಲೀಮು ಶುರು ಪಡೆದುಕೊಂಡಿದೆ. ಬಹುತೇಕ ಬಿಜೆಪಿ ಬದ್ರಕೋಟೆಯಂತಾಗಿರೋ ಕ್ಷೇತ್ರಕ್ಕೆ “ದೊಡ್ಡವರ” ಪಡೆ ಎಂಟ್ರಿ ಕೊಟ್ಟಾಗಿದೆ. ಸೆಪ್ಟೆಂಬರ್ 20 ಅನ್ನೋ ಮಾತು ಸದ್ಯ ಕುತೂಹಲಕ್ಕೆ ಕಾರಣವಾಗಿದ್ದಂತೂ ಸತ್ಯ.
**************
ಜಾಹೀರಾತುಗಳು