ಚೀಪ್ ರೇಟ್ ಚಿನ್ನದ ಗ್ಯಾಂಗ್, ಬಲೆಗೆ ಬಿದ್ದಿದ್ದೇ ರೋಚಕ..! “ಧರ್ಮೆ”ಯ ಅಂಗಳದ ದರೋಡೆ ಕೇಸ್ ನ ಇಂಚಿಂಚೂ ಕತೆಯಿದು..!

ಚೀಪ್ ರೇಟ್ ಚಿನ್ನದ ಹೆಸ್ರಲ್ಲಿ ದರೋಡೆಗಿಳಿದು ಲಕ್ಷ ಲಕ್ಷ ವಂಚಿಸುತ್ತಿದ್ದ ಖತರ್ನಾಕ ಗ್ಯಾಂಗ್ ನ ಹೆಡೆಮುರಿ ಕಟ್ಟುವಲ್ಲಿ ಮುಂಡಗೋಡ ಪೊಲೀಸ್ರು ಬಹುತೇಕ ಯಶಸ್ವಿಯಾಗಿದ್ದಾರೆ. ಪರಿಣಾಮ, ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆದು ಹೋಗಿದ್ದ ರಾಬರಿ ಕೇಸ್ ಒಂದು ಹಂತದಲ್ಲಿ ತಾರ್ಕಿಕ ಅಂತ್ಯದತ್ತ ಬಂದು ನಿಂತಿದೆ. ಕೇಸ್ ನಲ್ಲಿ ಕಂತೆಗಟ್ಟಲೇ ಹಣವನ್ನು ಎಗರಿಸಿ ಪರಾರಿಯಾಗಿದ್ದ ಖದೀಮರನ್ನು ನಮ್ಮ ಹೆಮ್ಮೆಯ ಮುಂಡಗೋಡ ಪೊಲೀಸ್ರು ಎಳೆದು ತಂದಿದ್ದಾರೆ. ಹೀಗಾಗಿ, ಮುಂಡಗೋಡ ಪೋಲಿಸರಿಗೊಂದು ಬಿಗ್ ಸೆಲ್ಯೂಟ್..!

ಪ್ರಕಾಶ್ ದೇವರಾಜು, ಎಸ್ಪಿ

9-ಮೈನೆಸ್-6…!
ಅಂದಹಾಗೆ, ಸಧ್ಯ ಪ್ರಕರಣದಲ್ಲಿ ಬರೋಬ್ಬರಿ 22.50 ಲಕ್ಷ ಹಣವನ್ನು ಅನಾಮತ್ತಾಗಿ ಎಗರಿಸಿ ಪರಾರಿಯಾಗಿದ್ದ 9 ಜನ ದರೋಡೆಕೋರರ ಪೈಕಿ, ಸದ್ಯ 5 ಖದೀಮರನ್ನು ಎಳೆದು ತರಲಾಗಿದೆ. ಜೊತೆಗೆ 6 ನೇ ಆರೋಪಿ ಪೊಲೀಸರ ವಶದಲ್ಲಿದ್ದಾನೆ ಅನ್ನೋ ಮಾಹಿತಿ ಇದೆ. ಅದ್ರೊಂದಿಗೆ 19 ಲಕ್ಷ ಹಣ, ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಅಂದಹಾಗೆ, ಈ ಕೇಸ್ ನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಇನ್ನೂ ಸಿಕ್ಕಿಲ್ಲ. ಅವ್ರು ದಾವಣಗೇರೆಯಲ್ಲೇ ಇದ್ದಾರೆ ಅನ್ನೋ ಮಾಹಿತಿ ಸಿಕ್ಕು ಅಲ್ಲಿವರೆಗೂ ಹೋಗಿದ್ದ ಪೊಲೀಸರು ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ. ಆ ಮೂರು ಜನ ಸಿಕ್ಕಿಬಿದ್ರೆ ಮುಗೀತು, ಈ ಚೀಪ್ ರೇಟ್ ಚಿನ್ನದ” ಅಸಲೀ ದಂಧೆಕೋರರು ಬಹುತೇಕ ಅಂದರ್ ಆದಂತಾಗುತ್ತದೆ. ಸದ್ಯ ಮುಂಡಗೋಡ ಪೊಲೀಸರ ಹುಡುಕಾಟ ಚಾಲ್ತಿಯಲ್ಲಿದೆ.

ಬಸವರಾಜ್ ಮಬನೂರು, ಪಿಎಸ್ಐ

ನೆನಪಿರಲಿ..
ಈ ಪ್ರಕರಣ ನಡೆದ ದಿನವೇ ನಿಮ್ಮ “ಪಬ್ಲಿಕ್ ಫಸ್ಟ್ ನ್ಯೂಸ್” ಚೀಪ್ ರೇಟ್ ಚಿನ್ನ ದಂಧೆಯ ದಗಾಕೋರರ ಬಗ್ಗೆ ಇಂಚಿಂಚೂ ಮಾಹಿತಿ ನೀಡಿತ್ತು. ಉತ್ತರ ಕನ್ನಡದ ಶಿರಸಿ, ಬನವಾಸಿ, ದಾಸನಕೊಪ್ಪ, ಮುಂಡಗೋಡ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರ, ದಾವಣಗೇರೆ ಜಿಲ್ಲೆಯ ಕೆಲ ಭಾಗಗಳು, ಹರಪನಹಳ್ಳಿ ಸೇರಿದಂತೆ ಕೆಲ ಭಾಗದಲ್ಲಿ ಇಂತಹ ಖತರ್ನಾಕ ಗ್ಯಾಂಗ್ ಆಕ್ಟಿವ್ ಆಗಿರೋ ಬಗ್ಗೆ ಅವತ್ತೇ ಇಂಚಿಂಚೂ ಮಾಹಿತಿ ನಿಮ್ಮ ಮುಂದಿಟ್ಟಿತ್ತು. ಬಹುಶಃ ಆ ಆಯಾಮದಲ್ಲೇ ತನಿಖೆಗಿಳಿದ ಮುಂಡಗೋಡ ಪೊಲೀಸ್ರು ಆ ಖತರ್ನಾಕ ಗ್ಯಾಂಗ್ ನ ಹೆಡೆಮುರಿ ಕಟ್ಟಿದ್ದಾರೆ. ನಿಜ, ನಮ್ಮ ಮುಂಡಗೋಡ ಪೊಲೀಸರ ಟ್ರೇಸಿಂಗ್ ಮಿಸ್ಟರಿ ಬಲು ರೋಚಕ…!

ಘಟನೆ ನಡೆದ ದಿನವೇ ಫಿಲ್ಡಿಗೆ..!
ಅವತ್ತು, ಜುಲೈ 16, ಶುಕ್ರವಾರದ ಮಟ ಮಟ ಮದ್ಯಾನ.. ಮಳಗಿ ಧರ್ಮಾ ಜಲಾಶಯದಲ್ಲಿ ಚೀಪ್ ರೇಟ್ ಚಿನ್ನ ಕೊಡ್ತಿನಿ ಅಂತಾ ಅದೊಂದು ಗ್ಯಾಂಗ್, ದೂರದ ಚಿಕ್ಕೋಡಿಯ ಗಿರಾಕಿಯನ್ನ ಕರೆದು ಅನಾಮತ್ತಾಗಿ ಬರೋಬ್ಬರಿ 22.50 ಲಕ್ಷ ಹಣ ಎಗರಿಸಿತ್ತು. ಹೀಗಾಗಿ, ಲಬೋ ಲಬೋ ಅಂತಾ ಹೊಯ್ಕೊಂಡು ಮುಂಡಗೋಡ ಪೊಲೀಸ್ ಠಾಣೆಗೆ ಬಂದಿದ್ದ ಚಿಕ್ಕೊಡಿಯ ಗೌಡಪ್ಪ, ನನ್ನ ಹಣ ದರೋಡೆ ಮಾಡಿದ್ದಾರೆ ಅಂತಾ ಅಲವತ್ತುಕೊಂಡಿದ್ದ. ಘಟನೆಯ ಅಸಲಿ ಸಂಗತಿ ಹೇಳದೇ ಗೋಡಂಬಿ ಬೀಜ ಖರೀದಿಯ ನೆಪ ಹೇಳಿ ನವರಂಗಿ ಆಟವನ್ನೂ ಆಡಿದ್ದ. ಆದ್ರೆ ಮುಂಡಗೋಡ ಪೊಲೀಸರ ಖಡಕ್ ವಾರ್ನಿಂಗ್ ಬಳಿಕ್ ಅಸಲಿ ಕಹಾನಿ ಬಿಚ್ಚಿಟ್ಟಿದ್ದ..

ಹಾಗಾದ್ರೆ ಏನದು ಕಹಾನಿ..?
ಹಾಗೆ ಹಣ ಕಳೆದುಕೊಂಡು ಪೊಲೀಸರ ಎದುರು ನವರಂಗಿ ಆಟ ಆಡಿದ್ದವನ ಹೆಸ್ರು, ಶಿವನಗೌಡ.. ಈತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯವನು. ಈತನಿಗೆ ಅದ್ಯಾಕೋ ಏನೋ ರಾತ್ರಿ ಕಳೆದು ಹಗಲು ಬರೋವಷ್ಟರಲ್ಲೇ ಕೋಟ್ಯಾಧಿಪತಿ ಆಗಬೇಕು ಅನ್ನೋ ಹುಚ್ಚು ಆಸೆ ಹುಟ್ಟಿಬಿಟ್ಟಿರತ್ತೆ. ಹೀಗಾಗಿನೇ, ಅವತ್ತು ಬಂದಿದ್ದ ಅದೊಂದು ಪೋನ್ ಕಾಲ್ ನಂಬಿ ಲಕ್ಷ ಲಕ್ಷ ಹಣ ಹೊಂದಿಸಿಕೊಂಡಿದ್ದ. ನಮ್ಮ ಗದ್ದೆಯಲ್ಲಿ ಓರ್ವ ವೃದ್ದನಿಗೆ ನಿಧಿ ಸಿಕ್ಕಿದೆ, ಅದು ಕೇಜಿಗಟ್ಟಲೆ ತೂಗತ್ತೆ. ನಮಗೆ ಅದನ್ನ ಹೇಗೆ, ಎಲ್ಲಿ ಮಾರಾಟ ಮಾಡಬೇಕು ಅಂತಾ ಅರ್ಥ ಆಗ್ತಿಲ್ಲ, ಬಹುಶಃ ಒಂದು ಕೇಜಿಗೆ 15 ಲಕ್ಷ ರೇಟ್ ಇದೆ. ಕುಳಿತು ಮಾತಾಡಿದ್ರೆ ಯೊಗ್ಯವಾದ ಒಂದು ರೇಟ್ ಗೆ ಕೊಡ್ತಿವಿ, ಬೇಕಾದ್ರೆ ನಿಮಗೆ ಆ ತಾಕತ್ತು ಇದ್ರೆ
ಖರೀಧಿಸಿ ಅಂತಾ ಅವನೊಬ್ಬ ಪೋನ್ ಕಾಲ್ ನಲ್ಲೇ ಹೇಳಿದ್ದ. ಆ ಮಾತನ್ನ ನಂಬಿ ಲಕ್ಷ ಲಕ್ಷ ಹಣ ತಂದಿದ್ದ ಈ ಶಿವನಗೌಡ.

ದರೋಡೆಯ 3 ದಿನ ಮುಂಚೆ..!
ಸರಿ, ಹಾಗೆ ಪೋನ್ ಕಾಲ್ ನಲ್ಲಿ ಚೀಪ್ ರೇಟ್ ಚಿನ್ನ ಕೊಡ್ತಿವಿ ಅಂತಾ ಹೇಳಿದ ಕೂಡಲೇ ಹಗಲಲ್ಲೇ ರಾಜ ಸಿಂಹಾಸನಕ್ಕೆ ಏರೋ ಕನಸು ಕಂಡಿದ್ದ ಶಿವನಗೌಡ್ರು, ನೇರವಾಗಿ ಶಿರಸಿಗೆ ಬಂದಿಳಿದಿರ್ತಾರೆ. ಅವತ್ತು ಜುಲೈ 12 ನೇ ತಾರೀಖಿನ ದಿನ ಶಿರಸಿಯ ಅದೊಂದು ಹೊಟೇಲ್ ನಲ್ಲಿ ಶಿವನಗೌಡನಿಗೆ ಡೀಲು ಕುದುರಿಸಲು ವಂಚಕರ ಟೀಂ ರೆಡಿಯಾಗಿರತ್ತೆ. ಅವತ್ತು ಶಿವನಗೌಡ ಎದುರು ಪ್ರತ್ಯಕ್ಷವಾಗಿದ್ದ ಗ್ಯಾಂಗ್ ನ‌ ಲೀಡರ್ ಫಳ ಫಳ ಹೊಳೆಯುವ ಮೂರು ಅಸಲಿ ಚಿನ್ನದ ನಾಣ್ಯಗಳನ್ನು ಶಿವನಗೌಡರ ಕೈಗಿಡತ್ತೆ. ಬೇಕಾದ್ರೆ ನಿಮಗೆ ಬೇಕಾದ ರೀತಿಯಲ್ಲಿ ಪರೀಕ್ಷೆ ಮಾಡಿಕೊಳ್ಳಿ ಅಂತಾರೆ ಖದೀಮರು. ಅಸಲಿ ಚಿನ್ನದ ನಾಣ್ಯಗಳ ಹೊಳಪು ಕಂಡ ಶಿವನಗೌಡ “ಅದೇನೋ ಬಂದು ಬಾಯಿಗೆ ಬಿತ್ತು” ಅನ್ನೋ ಹಾಗೆ ಡೀಲಿಗೆ ಕುಂತು ಬಿಡ್ತಾರೆ.

11 ಲಕ್ಷಕ್ಕೆ ಕೇಜಿ..!
ಹಾಗೆ, ಫಳ ಫಳ ಹೊಳಿಯೋ ಚಿನ್ನದ ನಾಣ್ಯಗಳಿಗೆ ಕೇಜಿಗೆ 15 ಲಕ್ಷ ಆಗತ್ತೆ, ನೋಡಿ ಬೇಕಾದ್ರೆ ಹೆಚ್ಚೂ ಕಡಿಮೆ ಮಾಡಿ ಕೊಡ್ತಿವಿ ಅಂತಾ ವ್ಯವಹಾರಕ್ಕೆ ಕುಳಿತ ಗ್ಯಾಂಗ್, ಹಾಗೂ ಹೀಗೂ ಮಾಡಿ ಕೊನೆಗೆ 11 ಲಕ್ಷಕ್ಕೆ ಒಂದು ಕೇಜಿಯ ಲೆಕ್ಕದಲ್ಲಿ ವ್ಯವಹಾರ ಮುಗಿಸಿಕೊಳ್ಳತ್ತೆ. ಅದ್ರ ಜೊತೆ, ಯಾವಾಗ..? ಎಲ್ಲಿ..? ಹಣ ತರೋದು, ಮಾಲು ಎಲ್ಲಿ ಕೊಡೋದು ಅನ್ನೊ ಎಲ್ಲಾ ಸಂಗತಿಗಳನ್ನೂ ಚರ್ಚಿಸಿ ಜುಲೈ 16 ಕ್ಕೆ ಮುಂಡಗೋಡಿಗೆ ಹಣದ ಸಮೇತ ಬನ್ನಿ, ನಾವು ಅಲ್ಲಿಗೇ ಮಾಲು ತಂದು ಕೊಡ್ತಿವಿ ಅನ್ನೋ ತೀರ್ಮಾನ ಆಗತ್ತೆ.

ಸರಿ, ಇಷ್ಟೇಲ್ಲ ಆಯ್ತು, ಹಾಗಾದ್ರೆ ಆ ಶಿವನಗೌಡರ ಫೋನ್ ನಂಬರ್ ಆ ಗ್ಯಾಂಗ್ ನ ಕೈಗೆ ಸಿಕ್ಕಿದ್ದಾದ್ರೂ ಹೇಗೆ ಅಂತಿರಾ..? ನಿಮಗೆ ಗೊತ್ತಿರಲಿ, ಪಂಚಾಯತ್ ರಾಜ್ ಇಲಾಖೆ ರಾಜ್ಯದ ಪ್ರತೀ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಪೋನ್ ನಂಬರ್ ಗಳನ್ನು ಅವರದ್ದೇ ಒಂದು ಸರ್ಕಾರಿ ಆ್ಯಪ್ ನಲ್ಲಿ ದಾಖಲಿಸಿರತ್ತೆ‌. ನಿಮಗೆ, ರಾಜ್ಯದ ಯಾವುದೇ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಫೋನ್ ನಂಬರಗಳು ಬೇಕಾದ್ರೂ ಅದ್ರಲ್ಲಿ ಈಸಿಯಾಗಿ ಸಿಗತ್ತೆ. ಇಲ್ಲೂ ಕೂಡ ವಂಚಕ ಗ್ಯಾಂಗ್ ಅದೇ ಆ್ಯಪ್ ಮೂಲಕ ಶಿವನಗೌಡರ ನಂಬರ್ ತಕ್ಕೊಂಡಿರತ್ತೆ.

ಅವತ್ತು ಜುಲೈ 16
ಶಿರಸಿಯಲ್ಲಿ ಜುಲೈ 12 ರಂದು ನಡೆದಿದ್ದ ಮಾತುಕತೆಯ ಪ್ರಕಾರವಾಗಿ, ಜುಲೈ 16 ರ ಶುಕ್ರವಾರ ಚಿಕ್ಕೊಡಿಯಿಂದ ಶಿವನಗೌಡರು ಭರ್ತಿ 22.50 ಲಕ್ಷ ಹಣದ ಜೊತೆ, ಲಕ್ಷ್ಮೀ ಬಾರಮ್ಮಾ ಅಂತಾ ಭಾಗ್ಯದ ಲಕ್ಷ್ಮೀಯನ್ನು ಚಿನ್ನದ ರೂಪದಲ್ಲಿ ಮನೆಗೆ ಕರೆದುಕೊಂಡು ಹೋಗಲು ಶುಕ್ರವಾರವೇ ಬಂದಿರ್ತಾರೆ. ಅವತ್ತು, ವಂಚಕ ಗ್ಯಾಂಗ್ ಕೂಡ ಮುಂಡಗೋಡಿಗೆ ಬಂದಿರತ್ತೆ. ಶಿವನಗೌಡರಿಗೆ ಗ್ಯಾಂಗ್, ಮೊದಲು ಬಂಕಾಪುರ ರಸ್ತೆಗೆ ಬರಲು ಹೇಳ್ತಾರೆ, ಅಲ್ಲಿಗೆ ಓಡೋಡಿ ಹೋಗ್ತಾರೆ ಶಿವನಗೌಡ. ಅಲ್ಲಿ ಹೋದ ಕೂಡಲೇ ಮತ್ತೆ ಆ ಗ್ಯಾಂಗ್ ನ ಪ್ಲಾನ್ ಬದಲೀ ಆಗತ್ತೆ.. ಬಂಕಾಪುರ ರಸ್ತೆ ಬೇಡ, ಈಗ ಯಲ್ಲಾಪುರ ರಸ್ತೆಗೆ ಬನ್ನಿ ಅಂತಾರೆ. ಸರಿ ಅಂತಾ ಶಿವನಗೌಡ್ರು ಯಲ್ಲಾಪುರ ರಸ್ತೆಗೂ ಹೋಗ್ತಾರೆ. ಆದ್ರೆ ಆ ಗ್ಯಾಂಗ್ ಯಾಕೋ ಇಲ್ಲಿ ಜಾಗ ಸೇಫ್ ಆಗಿಲ್ಲ ಅನ್ನೊ ಕಾರಣ ಹೇಳಿ, ನೀವು ಸೀದಾ ಮಳಗಿ ಡ್ಯಾಂ ಹತ್ರ ಬಂದು ಬಿಡಿ ನಾವು ಅಲ್ಲಿಯೇ ಕಾಯ್ತಾ ಇರ್ತಿವಿ ಅಂತಾ ಹೇಳತ್ತೆ. ಸರಿ ಅಂತಾ ಒಪ್ಪಿಕೊಂಡ ಶಿವನಗೌಡ್ರು ಮಳಗಿ ಧರ್ಮಾ ಜಲಾಶಯದ ಅಂಗಳಕ್ಕೆ ಬಂದು ನಿಂತಿರ್ತಾರೆ. ಆಗಲೇ ನೋಡಿ ಗ್ಯಾಂಗ್ ನ ಅಸಲಿ ಆಟ ಶುರುವಾಗಿದ್ದು. ಅಕ್ಷರಶಃ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಗ್ಯಾಂಗ್ ತಮಗೆ ಹೇಗೆ ಬೇಕೋ ಹಾಗೆ ವಾತಾವರಣ ಕನ್ವರ್ಟ್ ಮಾಡ್ಕೊತಾರೆ.

ಅಸಲಿಯಾಗಿದ್ದು ಒಂದೇ ನಾಣ್ಯ..!
ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ಇನ್ನೇನು ಚೀಪ ರೇಟ್ ಚಿನ್ನ ಕೈ ಬದಲಾಯಿಸತ್ತೆ ಅನ್ನೋ ಹೊತ್ತಲ್ಲಿ, ಶಿವನಗೌಡನ ಕೈಗೆ ಗ್ಯಾಂಗ್ ನಾಣ್ಯ ತುಂಬಿದ ಬ್ಯಾಗ್ ತೋರಿಸತ್ತೆ. ಅದ್ರಲ್ಲಿ ಇದ್ದಿದ್ದ ಒಂದು ಅಸಲಿ ನಾಣ್ಯ ತೋರಿಸತ್ತೆ. ಅದು ಪಕ್ಕಾ ಅಸಲಿ ನಾಣ್ಯ, ಆದ್ರೆ ಬ್ಯಾಗ್ ನಲ್ಲಿರೋ ಚಿನ್ನದ ನಾಣ್ಯಗಳು ಹೇಗಿವೆ ನೋಡೋಣ ಅಂತಾ ಅದ್ರಲ್ಲಿನ ಮತ್ತೊಂದು ನಾಣ್ಯ ತೆಗೆದು ಆಸಿಡ್ ಹಾಕಿ ಚೆಕ್ ಮಾಡಲು ಮುಂದಾಗ್ತಾರೆ ಶಿವನಗೌಡ. ಆಸಿಡ್ ಹಾಕಿದ ಕೂಡಲೇ ಆ ನಾಣ್ಯಗಳು ಅಕ್ಷರಶಃ ನಕಲಿ ಅನ್ನೋದು ಕನ್ಫರ್ಮ್ ಆಗತ್ತೆ. ಅದು ನಕಲಿ ಅಂತಾ ಹೇಳುವಷ್ಟರಲ್ಲೇ ಆ ಗ್ಯಾಂಗ್ ಶಿವನಗೌಡ ಬಳಿಯಿದ್ದ ಲಕ್ಷ‌ ಲಕ್ಷ ಹಣದ ಬ್ಯಾಗ್ ಕಿತ್ತುಕೊಂಡು ಎಸ್ಕೇಪ್ ಆಗತ್ತೆ. ಅಷ್ಟೇ ಖೇಲ್ ಖತಂ..! ಹಣ ಕಳೆದುಕೊಂಡ ಶಿವನಗೌಡ ಬೊಕ್ಕಾ ಬೊರಲಾಗಿ ಮಂಡಿಯೂರಿದ್ದಾರೆ. ನಾನು ಮೋಸ ಹೋದೆ ಅಂತಾ ನೆಲ ಗೆಬರಿ ಅತ್ತಿದ್ದಾರೆ. ನಿಜ ಅಂದ್ರೆ ಆ ಕ್ಷಣದವರೆಗೂ ವಂಚಕರು ಸಣ್ಣದೊಂದು ಅನುಮಾನವೂ ಸುಳಿಯದಂತೆ ನೋಡಿಕೊಂಡಿದ್ದಾರೆ. ಇದಿಷ್ಟು ಅವತ್ತಿನ ಕತೆ.

ಆ ನಂತರ..?
ಇಷ್ಟೇಲ್ಲ ಆದ‌ನಂತರ, ಮುಂಡಗೋಡ ಠಾಣೆಗೆ ಬಂದಿದ್ದ ಶಿವನಗೌಡ, ದೂರು ನೀಡ್ತಾರೆ. ಅಷ್ಟೇ ಶಿರಸಿ ಡಿವೈಎಸ್‌ಪಿ ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ, ಮುಂಡಗೋಡಿನ ಖಡಕ್ ಹಾಗೂ ಚಾಣಾಕ್ಷ ಪಿಎಸ್ ಐ ಬಸವರಾಜ್ ಮಬನೂರು ಈ ಪ್ರಕರಣದ ಅಷ್ಟೂ ಮಗ್ಗಲುಗಳನ್ನ ಬಯಲು ಮಾಡೋಕೆ ಪಣತೊಟ್ಟು ನಿಲ್ತಾರೆ‌. ಅವತ್ತು ಇವ್ರ ಜೊತೆ, ಮುಂಡಗೋಡಿನ ಮತ್ತೋರ್ವ ಕ್ರೈಂ ಪಿಎಸ್ಐ ಜಕ್ಕಣ್ಣವರ, ಜೊತೆಗೆ ಶಿರಸಿ ನಗರ ಠಾಣೆಯ ರಾಜಕುಮಾರ್ ಉಕ್ಕಳ್ಳಿ ಸಹಕಾರಿಯಾಗ್ತಾರೆ. ಹಾಗೇ ಯಲ್ಲಾಪುರ ಠಾಣೆಯಲ್ಲಿ ಕಾರ್ಯ ನಿರ್ವಹಿಸ್ತಿರೋ ಶಫೀ ಶೇಕ್, ಮುಂಡಗೋಡ ಠಾಣೆಯ ವಿನೋದ್, ಮಹೇಶ್, ಬನವಾಸಿ ಠಾಣೆಯ ಪೇದೆಗಳಾದ ಮಂಜು ಮತ್ತು ಶಿವರಾಜ್ ಪೀಲ್ಡಿಗೆ ಇಳಿತಾರೆ.

ಜಠಿಲ ಕೇಸ್…!
ಸರಿ, ಪ್ರಕರಣದ ಅಷ್ಟೂ ಆಯಾಮಗಳನ್ನ ತಾಳೆ ಹಾಕಿ ಕುಳಿತ ಮುಂಡಗೋಡ ಪೊಲೀಸರಿಗೆ ಆ ಗ್ಯಾಂಗ್ ನ ಲಿಂಕ್, ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ಸಮೀಪದ ಹೊಸೂರಿಗೆ ಇದೆ ಅನ್ನೋ ಸಣ್ಣದೊಂದು ಸುಳಿವು ಸಿಗತ್ತೆ ಅಷ್ಟೇ.. ನೇರವಾಗಿ ಬೆನ್ನತ್ತಿದ ತನಿಖಾ ತಂಡ, ಖತರ್ನಾಕ ಗ್ಯಾಂಗ್ ನ ತಳ ಬುಡವನ್ನೇಲ್ಲ ಜಾಲಾಡತ್ತೆ. ದಾವಣಗೆರೆಯಲ್ಲಿ ಸತತ ಮೂರು ದಿನ ಠಿಕಾಣಿ ಹೂಡಿ ಗ್ಯಾಂಗ್ ನ ಚಲನವಲನದ ಸಂಪೂರ್ಣ ಹೆಜ್ಜೆ ಗುರುತುಗಳ ಪತ್ತೆಗೆ ಬಲೆ ಹೆಣಿಯತ್ತೆ.

ಅದೋಂದು ವೀಕ್ನೇಸ್…!
ಪೊಲೀಸರೆಂದ್ರೆ ಸುಮ್ನೇನಾ, ಸತತ ಎರಡು ದಿನಗಳನ ಕಾಲ ಕಣ್ಣಿಗೆ ಎಣ್ಣೆ ಬಿಟ್ಕೊಂಡು ದಾವಣಗೆರೆಯಲ್ಲಿ ತಡಕಾಡಿದ ಪಿಎಸ್ಐ ಬಸವರಾಜ್ ಮಬನೂರು ಹಾಗೂ ಮತ್ತವರ ಟೀಂಗೆ ವಂಚಕರ ಗ್ಯಾಂಗ್ ನ ಸಣ್ಣದೊಂದು ಸುಳಿವೂ ಸಿಕ್ಕಿರಲ್ಲ. ಹೀಗಾಗಿ, ಆ ಕ್ಷಣದಲ್ಲಿ ಗ್ಯಾಂಗ್ ನ ಬಲೆಗೆ ಕೆಡವಲು ಖತರ್ನಾಕ ಐಡಿಯಾ ಮಾಡಲಾಗತ್ತೆ. ಆ ಗ್ಯಾಂಗ್ ಗೆ ಅದೋಂದು ವೀಕ್ನೇಸ್ ಇರತ್ತೆ. ಆ ವೀಕ್ನೇಸ್ ಏನು ಅನ್ನೋದನ್ನ ಅರ್ಥೈಸಿಕೊಂಡ ತನಿಖಾ ಟೀಂ, ಅದನ್ನೇ ಗಾಳವಾಗಿ ಬಳಸಿ ಬಿಡತ್ತೆ.( ಆ ವೀಕ್ನೇಸ್ ಏನು ಅನ್ನೋದನ್ನ ತನಿಖೆಯ ದೃಷ್ಟಿಯಿಂದ ಇಲ್ಲಿ ಹೇಳಲಾಗಿಲ್ಲ)

ನಿಜಕ್ಕೂ ಸವಾಲು..!
ಅಸಲು, ಈ ಪ್ರಕರಣ ಯಾಕೆ ಅಷ್ಟು ಸವಾಲು ಅಂದ್ರೆ, ಇಲ್ಲಿ ಆರೋಪಿಗಳನ್ನಷ್ಟೇ ಹಿಡಿಯುವ ಕೆಲಸವಿಲ್ಲ. ಬದಲಾಗಿ ಆರೋಪಿಗಳ ಜೊತೆ ಎಗರಿಸಿಕೊಂಡು ಹೋಗಿದ್ದ ಕಂತೆ ಕಂತೆ ಹಣದ ಸಮೇತ ಹೆಡೆಮುರಿ ಕಟ್ಟಬೇಕಾಗಿರತ್ತೆ. ಅದಕ್ಕಾಗೇ, ಚಾಣಾಕ್ಷ ಪೊಲೀಸ್ ಟೀಂ ಆ ವೀಕ್ನೇಸ್ ಮೂಲಕ ಗಾಳ ಹಾಕಿ ಸತತ ಎರಡು ದಿನ ಕಾದು ಕುಳಿತು‌ ಮೂರನೇ ದಿನಕ್ಕೇ ಮೊದಲ ಸಕ್ಸೆಸ್ ಪಡೀತಾರೆ. ನಂತರ ಆರನೇ ದಿನಕ್ಕೆ ಆರೋಪಿಗಳನ್ನ ಬಲೆಗೆ ಬೀಳಿಸ್ತಾರೆ.

ವೀಕ್ನೇಸ್ ವಾಸನೆಗೆ ಇಬ್ಬರು ಅಂದರ್..!
ಅವತ್ತು, ಘಟನೆ ನಡೆದು ಆರನೇ ದಿನ ಅಂದ್ರೆ ಜುಲೈ 22 ರ ಹೊತ್ತಿಗೆ ಗ್ಯಾಂಗ್ ನ ಇಬ್ಬರು ಆರೋಪಿಗಳು ಅದೇ ದಾವಣಗೇರೆಯಲ್ಲಿ ಬಲೆಗೆ ಬೀಳ್ತಾರೆ. ಅವತ್ತು ಹಾಗೇ ಬಲೆಗೆ ಬಿದ್ದವರು ವೀರೇಶ್ ಹಾಗೂ ವೆಂಕಟೇಶ್. ಆದ್ರೆ, ಸದ್ಯ ಆ ಇಬ್ಬರೂ ಆರೋಪಿಗಳು ಜಾಮೀನು ಪಡೆದು ಹೊರಗಿದ್ದಾರೆ.

ಈತ ಕುಮಾರ..!
ಅಂದಹಾಗೆ, ಇಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಸ್ಟೋರಿ ಹೇಳಲೇಬೇಕಿದೆ. ಅವತ್ತು ಮೊದಲ ಬಾರಿ ವೀಕ್ನೇಸ್ ವಾಸನೆಗೆ ಬಲಿ ಹಾಕಿ ಹಿಡಿದಿದ್ದ ಇಬ್ಬರು ಆರೋಪಿಗಳು ಬೇಲ್ ಪಡೆಯೋಕೆ ಸಜ್ಜಾಗಿ, ಬೇಲ್ ಪಡೆದುಕೊಳ್ತಾರೆ. ಯಾವಾಗ, ಆರೋಪಿಗಳಾದ ವೀರೇಶ ಹಾಗೂ ವೆಂಕಟೇಶ್ ಗೆ ಬೇಲ್ ಸಿಗತ್ತೋ ಅವಾಗ ಶಿರಸಿಯಿಂದ ಆ ಇಬ್ಬರನ್ನೂ ಕರೆದುಕೊಂಡು ಹೋಗಲು ಪ್ರಕರಣದ ಮತ್ತೋರ್ವ ಆರೋಪಿ ಕುಮಾರ್ ಅನ್ನೋನು ಶಿವಮೊಗ್ಗದಿಂದ ಶಿರಸಿಗೆ ಬೈಕ್ ನಲ್ಲಿ ಬಂದಿರ್ತಾನೆ. ಬೈಕ್ ನಲ್ಲೇ ಇಡೀ ಶಿರಸಿಯನ್ನ ರೌಂಡ್ ಹಾಕುತ್ತಿದ್ದ ಕುಮಾರನ ಬಗ್ಗೆ ಮು‌ಂಡಗೋಡ ಪಿಎಸ್ ಐ ಬಸವರಾಜ್ ಮಬನೂರ ಗೆ ಚಿಕ್ಕದೊಂದು ಸುಳಿವು ಸಿಗತ್ತೆ. ಜೊತೆಗೆ ಶಿವಮೊಗ್ಗ ನೋಂದಣಿ ಸಂಖ್ಯೆ ಹೊಂದಿರೋ ಬೈಕ್ ನಂಬರ್ ಸಿಗತ್ತೆ. ತಕ್ಷಣವೇ ಶಿರಸಿಗೆ ಹೊರಟ ಪಿಎಸ್ಐ ಬಸವರಾಜ್, ಸಿನಿಮಯ ರೀತಿಯಲ್ಲಿ ಆತನನ್ನು ಟ್ರೇಸ್ ಮಾಡ್ತಾರೆ. ಹಾಗೋ ಹೀಗೋ ಆತ ಅವತ್ತೇ ಬಲೆಗೆ ಬೀಳ್ತಾನೆ. ಬೇಲ್ ಮೇಲೆ ಹೊರಗೆ ಬಂದಿದ್ದ ತನ್ನ ಜೊತೆಗಾರರನ್ನು ಕರೆದುಕೊಂಡು ಹೋಗಲು ಬಂದಿದ್ದ ಆರೋಪಿ ಕುಮಾರ್ ತಾನೇ ಪೊಲೀಸರ ಬಲೆಗೆ ಬೀಳ್ತಾನೆ. ಅದ್ರೊಂದಿಗೆ ಕೇಸ್ ನಲ್ಲಿ ಮೂವರು ಅಂದರ್ ಆದಂತಾಗುತ್ತಾರೆ.

ಮತ್ತೆ ಮೂವರು ಆರೆಸ್ಟ್..!
ಆ ನಂತರದಲ್ಲಿ, ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು, ಇನ್ನುಳಿದ ಆರೋಪಿಗಳನ್ನು ಹೆಡೆಮುರಿ ಕಟ್ಟಲು ನಿತ್ಯವೂ ಅಂತಹದ್ದೊಂದು ವ್ಯವಸ್ಥಿತ ಪ್ಲಾನ್ ಮಾಡಿಕೊಂಡೇ ಕಾದು ಕುಳಿತಿರ್ತಾರೆ. ಪರಿಣಾಮ ಮತ್ತೆ ಮೂವರು ಆರೋಪಿಗಳನ್ನ ನಿನ್ನೆ ಹಿಡಿದು ತಂದಿದ್ದಾರೆ. ಈ ಮೂಲಕ ಪ್ರಕರಣದ ಒಂಬತ್ತು ಆರೋಪಿಗಳ ಪೈಕಿ, 6 ಜನ ಬಲೆಗೆ ಬಿದ್ದಂತಾಗಿದೆ. ಇನ್ನೂ ಮೂವರ ಬೇಟೆಗೆ ತಂತ್ರ ರೆಡಿಯಾಗಿದೆ. ಆ ಮೂವರು ಬೀಳೋಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ನಿಜ ಅಂದ್ರೆ ಈ ಕೇಸ್ ನ ಬೆನ್ನತ್ತಿದ್ದ ಪೊಲೀಸರ ಶ್ರಮ ನಿಜಕ್ಕೂ ಶ್ಲಾಘನೀಯ. ಇನ್ಯಾವತ್ತೂ ಆರೋಪಿಗಳು ಮುಂಡಗೋಡಿನ ಕಡೆಗೆ ತಲೆ ಇಟ್ಟೂ ಮಲಗೋಕೆ ಅಂಜಬೇಕು. ಹಾಗೆ ಮಾಡಿದ್ದಾರೆ ಪೊಲೀಸರು.

error: Content is protected !!